ಸಿಕ್ಕೀತೆ ಅಗ್ರ 50ರೊಳಗಿನ ಸ್ಥಾನ?

7
ಸ್ವಚ್ಛ ಸರ್ವೇಕ್ಷಣ್‌ ಸರ್ವೆ: ಕೇಂದ್ರದ ಅಧಿಕಾರಿ ಇಂದು ನಗರಕ್ಕೆ

ಸಿಕ್ಕೀತೆ ಅಗ್ರ 50ರೊಳಗಿನ ಸ್ಥಾನ?

Published:
Updated:

ಬೆಂಗಳೂರು: ದೇಶದಲ್ಲಿ ಯಾವ ನಗರದಲ್ಲಿ ಹೆಚ್ಚು ಸ್ವಚ್ಛತೆ ಕಾಪಾಡಿಕೊಳ್ಳಲಾಗಿದೆ ಎಂಬುದನ್ನು ನಿರ್ಧರಿಸುವ ಸ್ವಚ್ಛ ಸರ್ವೇಕ್ಷಣ್‌ ಸರ್ವೆ 2019ಕ್ಕೆ ಕ್ಷಣಗಣನೆ ಆರಂಭವಾಗಿದೆ. 2018ರ ಸರ್ವೆಯಲ್ಲಿ 200ಕ್ಕಿಂತಲೂ ಕೆಳಗಿನ ಶ್ರೇಯಾಂಕ ಪಡೆದ ಬಿಬಿಎಂಪಿ ಈ ಬಾರಿ ಅಗ್ರ 50ರ ಒಳಗಿನ ಶ್ರೇಯಾಂಕ ಪಡೆಯಲು ಕಸರತ್ತು ನಡೆಸಿದೆ.

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ ಎಸ್.ಕೆ.ರಾಮ್‌ ಅವರು ನಗರಕ್ಕೆ ಮಂಗಳವಾರ ಭೇಟಿ ನೀಡಲಿದ್ದು, ಸ್ವಚ್ಛತೆ ಕಾಪಾಡಲು ಬಿಬಿಎಂಪಿ ಕೈಗೊಂಡಿರುವ ಕ್ರಮಗಳನ್ನು ಪರಿಶೀಲನೆ ನಡೆಸಲಿದ್ದಾರೆ.

‘2016ರ ಸರ್ವೆಯಲ್ಲಿ ನಮ್ಮ ನಗರ ಅಗ್ರ 50ರೊಳಗೆ ಸ್ಥಾನ ಪಡೆದಿತ್ತು. ಬಳಿಕದ ಎರಡು ವರ್ಷಗಳಲ್ಲಿ ಶ್ರೇಯಾಂಕ ಕುಸಿದಿತ್ತು. ವರ್ಷದಿಂದ ವರ್ಷಕ್ಕೆ ಹೆಚ್ಚು ನಗರಗಳು ಈ ಸರ್ವೆ ವ್ಯಾಪ್ತಿಗೆ ಸೇರ್ಪಡೆಯಾಗುತ್ತಿದ್ದು, ಪೈಪೋಟಿ ಹೆಚ್ಚುತ್ತಿದೆ. ಈ ನಡುವೆಯೂ ಶ್ರೇಯಾಂಕವನ್ನು ಉತ್ತಮಪಡಿಸಿಕೊಳ್ಳಬೇಕಾದ ಸವಾಲು ನಮ್ಮ ಮುಂದಿದೆ. ನಾವು ಈ ಬಾರಿ ಅಗ್ರ 50ರೊಳಗಿನ ಸ್ಥಾನ ಪಡೆಯುವ ಗುರಿ ಇಟ್ಟುಕೊಂಡು ಪೂರ್ವತಯಾರಿ ನಡೆಸಿದ್ದೇವೆ’ ಎಂದು ಪಾಲಿಕೆಯ ಕಸ ನಿರ್ವಹಣೆ ಹೊಣೆ ಹೊತ್ತಿರುವ ಹೆಚ್ಚುವರಿ ಆಯುಕ್ತ ರಂದೀಪ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

ಈ ಬಾರಿಯ ಸರ್ವೆಯಲ್ಲಿ ಒಟ್ಟು 5000 ಅಂಕಗಳ ಮಾನದಂಡ ರೂಪಿಸಲಾಗಿದ್ದು, ಅದರಲ್ಲಿ ಸ್ವಯಂ ಪ್ರಮಾಣೀಕರಣ ಪ್ರಕ್ರಿಯೆಗೆ, ನೇರ ಪರಿಶೀಲನೆಗೆ, ಸೇವಾ ಸುಧಾರಣೆಗೆ ಹಾಗೂ ಸಾರ್ವಜನಿಕರ ಪ್ರತಿಕ್ರಿಯೆಗೆ ತಲಾ 1250 ಅಂಕ ನಿಗದಿಪಡಿಸಲಾಗಿದೆ. 1 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ಹಾಗೂ 1 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ತಲಾ ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ.

ಸೇವಾ ಸುಧಾರಣೆ ವಿಭಾಗದ 1250 ಅಂಕಗಳಲ್ಲಿ ಕಸ ಸಂಗ್ರಹ ಮತ್ತು ಸಾಗಣೆಗೆ 338 ಅಂಕ ನಿಗದಿಯಾಗಿದೆ. ಶೇ 95ಕ್ಕೂ ಹೆಚ್ಚು ವಾರ್ಡ್‌ಗಳಲ್ಲಿ ಮನೆ ಮನೆಯಿಂದ ಕಸ ಸಂಗ್ರಹ ಮಾಡಿದರೆ 45 ಅಂಕ ಸಿಗಲಿದೆ. ಮೂಲದಲ್ಲೇ ಹಸಿ ಮತ್ತು ಒಣ ಕಸ ವಿಂಗಡಣೆ ಮಾಡುವ ಪ್ರಕ್ರಿಯೆ ಶೇ 95ಕ್ಕೂ ಹೆಚ್ಚು ವಾರ್ಡ್‌ಗಳಲ್ಲಿ ಜಾರಿಯಲ್ಲಿದ್ದರೆ 65 ಅಂಕ ಸಿಗಲಿದೆ. ಕಸ ಸಂಸ್ಕರಣೆ ಮತ್ತು ವಿಲೇವಾರಿಗೆ 375 ಅಂಕ ಸಿಗಲಿದೆ. ಈ ವಿಭಾಗಗಳಲ್ಲಿ ಹೆಚ್ಚು ಅಂಕ ಪಡೆಯುವ ಗುರಿಯನ್ನು ಪಾಲಿಕೆ ಹೊಂದಿದೆ.

‘ಖುದ್ದು ಪರಿಶೀಲನೆಗಾಗಿ ನಗರಕ್ಕೆ ಭೇಟಿ ನೀಡುವ ಕೇಂದ್ರದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಲಿದ್ದಾರೆ. ಅವರು ಎಲ್ಲಿಗೆ ಹೋಗುತ್ತಾರೆ ಎಂಬ ಬಗ್ಗೆ ನಮಗೂ ಮಾಹಿತಿ ಇರುವುದಿಲ್ಲ. ನಾವು ನೀಡಿರುವ ದಾಖಲೆಗಳು ಹಾಗೂ ಸ್ಥಳ ಪರಿಶೀಲನೆ ವೇಳೆ ಕಂಡುಬಂದ ಅಂಶಗಳಿಗೂ ತಾಳೆಯಾಗದಿದ್ದರೆ ನಮ್ಮಿಂದ ವಿವರಣೆ ಪಡೆಯುತ್ತಾರೆ’ ಎಂದು ರಂದೀಪ್‌ ಮಾಹಿತಿ ನೀಡಿದರು.  

ಹೆಚ್ಚಿನ ಅಂಕ ತರುವುದೇ ಒಡಿಎಫ್‌?

ನಗರದ 198 ವಾರ್ಡ್‌ಗಳೂ ‘ಬಯಲು ಬಹಿರ್ದೆಸೆ ಮುಕ್ತವಾಗಿವೆ’ (ಒಡಿಎಫ್‌) ಎಂದು ಸ್ವಯಂ ಘೋಷಿಸಿಕೊಳ್ಳುವ ಪ್ರಕ್ರಿಯೆಯನ್ನು ಬಿಬಿಎಂಪಿ ಇತ್ತೀಚೆಗಷ್ಟೇ ಪೂರ್ಣಗೊಳಿಸಿವೆ.

ವಾರ್ಡ್‌ನ ಪ್ರತಿ ಮನೆಗೂ ಶೌಚಾಲಯ ಸಂಪರ್ಕ ಕಲ್ಪಿಸುವುದು, ವೈಯಕ್ತಿಕ ಶೌಚಾಲಯ ನಿರ್ಮಿಸಲು ಸ್ಥಳಾವಕಾಶ ಇಲ್ಲದ ಕಡೆಗಳಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸುವುದು, ಇವು ಬೆಳಿಗ್ಗೆ 4ರಿಂದ ರಾತ್ರಿ 10 ಗಂಟೆವರೆಗೆ ಸಾರ್ವಜನಿಕರ ಬಳಕೆಗೆ ಲಭ್ಯವಿರುವಂತೆ ನೋಡಿಕೊಳ್ಳುವುದು ಹಾಗೂ ಇವುಗಳಿಗೆ ನೀರಿನ ಸಂಪರ್ಕ ಹಾಗೂ ಒಳಚರಂಡಿಯೊಂದಿಗೆ ಸಂಪರ್ಕ ಕಲ್ಪಿಸುವ ಅಂಶಗಳನ್ನು ಆಧರಿಸಿ ವಾರ್ಡ್‌ಗಳಿಗೆ ಒಡಿಎಫ್‌ ಶ್ರೇಯ ನೀಡಲಾಗುತ್ತದೆ. ಬಯಲು ಬಹಿರ್ದೆಸೆ ಮುಕ್ತವಾಗಿರುವ ನಗರ 250 ಅಂಕ ಪಡೆಯಲು ಅವಕಾಶ ಇದೆ.

 

ಪ್ಲಾಗ್‌ರನ್‌–ಗಿನ್ನೆಸ್‌ ದಾಖಲೆಗೂ ಅಂಕ?
ನವೀನ ತಂತ್ರ ಅಳವಡಿಸಿಕೊಳ್ಳುವುದಕ್ಕೂ ಈ ಬಾರಿ ಪ್ರತಿ ವಿಭಾಗದಲ್ಲೂ ಶೇ 5ರಷ್ಟು ಅಂಕ ನಿಗದಿಪಡಿಸಲಾಗಿದೆ. ಗಾಂಧಿ ಜಯಂತಿಯಂದು ಪ್ಲಾಗ್‌ ರನ್‌ ಏರ್ಪಡಿಸುವ ಮೂಲಕ ಒಂದೇ ದಿನ 33 ಟನ್‌ ಪ್ಲಾಸ್ಟಿಕ್‌ ಬಾಟಲಿ ಸಂಗ್ರಹಿಸುವ ಮೂಲಕ ಗಿನ್ನೆಸ್‌ ವಿಶ್ವದಾಖಲೆ ನಿರ್ಮಿಸಿದ್ದನ್ನು ಕೂಡಾ ಪಾಲಿಕೆ ನವೀನ ತಂತ್ರಗಳ ವಿಭಾಗದಲ್ಲಿ ತೋರಿಸಿದೆ.

‘ಸಾರ್ವಜನಿಕ ಸ್ಥಳಗಳಲ್ಲಿ ಕಸ ರಾಶಿ ಹಾಕುವುದನ್ನು ತಡೆಯುವ ಸಲುವಾಗಿ ರಂಗೋಲಿ ಅಭಿಯಾನ ಹಮ್ಮಿಕೊಂಡಿದ್ದು, ಪ್ಲಾಗ್‌ರನ್‌, ಎಚ್ಎಸ್‌ಆರ್‌ ಬಡಾವಣೆಯಲ್ಲಿ ಕಸ ವಿಲೇವಾರಿ ಕುರಿತ ಕಲಿಕಾ ಕೇಂದ್ರ ಆರಂಭಿಸಿರುವುದು, ಪೌರಕಾರ್ಮಿಕರ ಖಾತೆಗೆ ನೇರವಾಗಿ ವೇತನ ಪಾವತಿ ಆರಂಭಿಸಿದ್ದು, ಸಾವಯವ ಸಂತೆಗಳನ್ನು ಹಮ್ಮಿಕೊಳ್ಳುತ್ತಿರುವುದಕ್ಕೆ ಒಂದಷ್ಟು ಅಂಕಗಳು ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದೇವೆ’ ಎಂದು ರಂದೀಪ್‌ ತಿಳಿಸಿದರು.

‘3 ತಿಂಗಳಲ್ಲಿ ₹20 ಲಕ್ಷ ದಂಡ’

‘ಸಾರ್ವಜನಿಕ ಪ್ರದೇಶದಲ್ಲಿ ಕಸ ಹಾಕಿದವರಿಗೆ ದಂಡ ವಿಧಿಸಿದ್ದಕ್ಕೂ ಸರ್ವೆಯಲ್ಲಿ ಅಂಕ ಇದೆ. ಮೂರು ತಿಂಗಳಲ್ಲಿ ಒಟ್ಟು ₹ 20 ಲಕ್ಷ ದಂಡ ವಿಧಿಸಲಾಗಿದೆ. ಇದರಿಂದಲೂ ಒಂದಷ್ಟು ಅಂಕ ಹೆಚ್ಚು ಸಿಗಬಹುದು ಎಂಬ ನಿರೀಕ್ಷೆ ಇದೆ’ ಎಂದು ರಂದೀಪ್‌ ತಿಳಿಸಿದರು.

 

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !