ತಮಿಳು ಕೈದಿಗಳ ಬಿಡುಗಡೆ ಬೇಡಿಕೆಗೆ ಮರುಜೀವ

7
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು

ತಮಿಳು ಕೈದಿಗಳ ಬಿಡುಗಡೆ ಬೇಡಿಕೆಗೆ ಮರುಜೀವ

Published:
Updated:
Deccan Herald

ಕೊಲಂಬೊ: ಶ್ರೀಲಂಕಾದಲ್ಲಿನ ತಮಿಳು ಕೈದಿಗಳನ್ನು ಬಿಡುಗಡೆ ಮಾಡಬೇಕು ಎಂಬ ತಮಿಳು ಅಲ್ಪಸಂಖ್ಯಾತ ಸಮುದಾಯದ ದೀರ್ಘಾವಧಿ ಬೇಡಿಕೆಗೆ, ಸದ್ಯ ದೇಶದಲ್ಲಿನ ರಾಜಕೀಯ ಬಿಕ್ಕಟ್ಟಿನಿಂದಾಗಿ ಜೀವ ಬಂದಿದೆ.

ಪ್ರಧಾನಿಯಾಗಿದ್ದ ರನಿಲ್ ವಿಕ್ರಮಸಿಂಘೆ ಅವರನ್ನು ಪದಚ್ಯುತಗೊಳಿಸಿ ಮಹಿಂದ ರಾಜಪಕ್ಸೆ ಅವರನ್ನು ಅಧ್ಯಕ್ಷ ಮೈತ್ರಿಪಾಲ ಸಿರಿಸೇನ
ದಿಢೀರನೇ ನೇಮಕ ಮಾಡಿದ ನಂತರ ಉಂಟಾಗಿರುವ ಪರಿಸ್ಥಿತಿ ಇದಕ್ಕೆ ನೆರವಾಗಿದೆ. ರಾಜಪಕ್ಸೆ ಅವರನ್ನು ಬೆಂಬಲಿಸುವಂತೆ ಪ್ರಮುಖ ತಮಿಳು ಪಕ್ಷವಾದ ತಮಿಳ್‌ ನ್ಯಾಷನಲ್‌ ಅಲಯನ್ಸ್‌ (ಟಿಎನ್‌ಎ) ಸಂಸದರ ಮನವೊಲಿಸಲು ಕೈದಿಗಳ ಬಿಡುಗಡೆ ತಂತ್ರ ಅನುಸರಿಸಲಾಗುತ್ತಿದೆ. ಸಂಸತ್ತಿನಲ್ಲಿ ಬಹುಮತ ಸಾಬೀತು ಮಾಡಲು ಮುಂದಾಗಿರುವ ರಾಜಪಕ್ಸೆ ಅವರಿಗೆ ಇದರಿಂದ ನೆರವಾಗಲಿದೆ ಎನ್ನಲಾಗಿದೆ. ರಾಜಪಕ್ಸೆ ಅವರ ಪುತ್ರ ಹಾಗೂ ಶಾಸಕ ನಮಲ್ ಈ ಕುರಿತು ಭಾನುವಾರ ಸುಳಿವು ನೀಡಿದ್ದಾರೆ.

‘ಮೈತ್ರಿಪಾಲ ಸಿರಿಸೇನ ಮತ್ತು ರಾಜಪಕ್ಸೆ ಈ ಸಂಬಂಧ ಶೀಘ್ರದಲ್ಲೇ ತೀರ್ಮಾನ ಕೈಗೊಳ್ಳಲಿದ್ದಾರೆ’ ಎಂದು ನಮಲ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

2009ರಲ್ಲಿ ಶ್ರೀಲಂಕಾ ಆಡಳಿತದ ಜೊತೆಗಿನ ಯುದ್ಧ ಕೊನೆಗೊಂಡ ನಂತರ ಜೈಲುಶಿಕ್ಷೆಗೊಳಗಾದ ಎಲ್‌ಟಿಟಿಇ ಸದಸ್ಯರನ್ನು ರಾಜಕೀಯ ಕೈದಿಗಳು ಎಂದು ಪರಿಗಣಿಸಲು ಸರ್ಕಾರ ನಿರಾಕರಿಸಿದೆ. ಕೆಲವರಿಗೆ ಅಧಿಕೃತವಾಗಿ ಶಿಕ್ಷೆ ವಿಧಿಸದೆ, ಭಯೋತ್ಪಾದನೆ ವಿರೋಧಿ ಕಾನೂನಿನಡಿ ಬಹಳ ಕಾಲದಿಂದಲೂ ಜೈಲಿನಲ್ಲಿ ಇರಿಸಲಾಗಿದೆ ಎಂಬುದು ತಮಿಳು ಸಮುದಾಯದ ಆರೋಪ.

225 ಸದಸ್ಯ ಬಲದ ಶಾಸನಸಭೆಯಲ್ಲಿ ಈವರೆಗೆ ರಾಜಪಕ್ಸೆ 100 ಹಾಗೂ ಪದಚ್ಯುತ ವಿಕ್ರಮಸಿಂಘೆ 103 ಸಂಸದರ ಬೆಂಬಲವನ್ನು ಹೊಂದಿದ್ದಾರೆ. ಟಿಎನ್‌ಎ ಸೇರಿದಂತೆ ಇನ್ನುಳಿದ 22 ಸಂಸದರ ಪೈಕಿ ಬಹುತೇಕರು ರಾಜಪಕ್ಸೆ ಅವರನ್ನು ವಿರೋಧಿಸುವ ಸಾಧ್ಯತೆ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !