ಟ್ಯಾಂಕರ್‌ ಮೂಲಕ ನೀರು ಪೂರೈಕೆ ಕಗ್ಗಂಟು

ಶನಿವಾರ, ಏಪ್ರಿಲ್ 20, 2019
31 °C
ಬಿಬಿಎಂಪಿ ಕರೆದಿದ್ದ ಟೆಂಡರ್‌ನಲ್ಲಿ ಭಾಗವಹಿಸದ ಟ್ಯಾಂಕರ್‌ಗಳ ಮಾಲೀಕರು

ಟ್ಯಾಂಕರ್‌ ಮೂಲಕ ನೀರು ಪೂರೈಕೆ ಕಗ್ಗಂಟು

Published:
Updated:
Prajavani

ಬೆಂಗಳೂರು: ಬೇಸಿಗೆಯಲ್ಲಿ ನೀರಿನ ಸಮಸ್ಯೆ ತೀವ್ರವಾಗಿರುವ ಪ್ರದೇಶಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸುವ ಬಿಬಿಎಂಪಿ ಆಶಯಕ್ಕೆ ಹಿನ್ನಡೆ ಉಂಟಾಗಿದೆ. ನೀರು ಪೂರೈಕೆ ಸಲುವಾಗಿ ಪಾಲಿಕೆ ಕರೆದಿದ್ದ ಟೆಂಡರ್‌ ಪ್ರಕ್ರಿಯೆಯಲ್ಲಿ ನಗರದ ಯಾವೊಬ್ಬ ಟ್ಯಾಂಕರ್‌ ಮಾಲೀಕರೂ ಭಾಗವಹಿಸಿಲ್ಲ.

ಬೇಸಿಗೆ ಆರಂಭವಾಗುತ್ತಿದ್ದಂತೆಯೇ ನಗರದಲ್ಲಿ ಕುಡಿಯುವ ನೀರಿನ ಕೊರತೆ ಕಾಣಿಸಿಕೊಂಡಿತ್ತು. ಮೇಯರ್‌ ಗಂಗಾಂಬಿಕೆ ಅವರು ಬಿಬಿಎಂಪಿ ಹಾಗೂ ಜಲಮಂಡಳಿಯ ಅಧಿಕಾರಿಗಳ ಜೊತೆ ಮಾ 15ರಂದು ತುರ್ತು ಸಮಾಲೋಚನೆ ನಡೆಸಿ ಕುಡಿಯುವ ನೀರಿನ ಅಭಾವ ಇರುವ ಕಡೆ ಟ್ಯಾಂಕರ್‌ನಲ್ಲಿ ನೀರು ಪೂರೈಕೆಗೆ ಕ್ರಮಕೈಗೊಳ್ಳುವಂತೆ ಸೂಚಿಸಿದ್ದರು. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿ ಇದ್ದುದರಿಂದ ಬಿಬಿಎಂಪಿಯು ಚುನಾವಣಾ ಆಯೋಗದ ಅನುಮತಿ ಪಡೆದು ಎಂಟೂ ವಲಯಗಳಿಗೆ ಟ್ಯಾಂಕರ್‌ಗಳಲ್ಲಿ ನೀರು ಪೂರೈಕೆಗೆ ಟೆಂಡರ್‌ ಆಹ್ವಾನಿಸಿತ್ತು. 

ಜಿಪಿಎಸ್‌ ಅಳವಡಿಸಿರುವ ಟ್ಯಾಂಕರ್‌ಗಳ ಮಾಲೀಕರು ಟೆಂಡರ್‌ನಲ್ಲಿ ಭಾಗವಹಿಸಬಹುದು ಎಂದು ಷರತ್ತು ವಿಧಿಸಲಾಗಿತ್ತು. ಟೆಂಡರ್‌ಗೆ ಅರ್ಜಿ ಸಲ್ಲಿಸಲು ಏಪ್ರಿಲ್‌ 5 ಕೊನೆಯ ದಿನವಾಗಿತ್ತು.

‘ಸೋಮವಾರ ಸಂಜೆ 4 ಗಂಟೆಗೆ ಟೆಂಡರ್‌ ಬಿಡ್‌ ತೆರೆಯಲಾಯಿತು. ಯಾವ ಟ್ಯಾಂಕರ್‌ ಮಾಲೀಕರೂ ಅರ್ಜಿ ಸಲ್ಲಿಸಿಲ್ಲ. ಇದಕ್ಕೆ ಕಾರಣ ಏನು ಎಂದು ನನಗೂ ಗೊತ್ತಿಲ್ಲ. ಈ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ’ ಎಂದು ಪಾಲಿಕೆ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಬಿಬಿಎಂಪಿಯ ಹಳೆಯ ವಾರ್ಡ್‌ಗಳಿರುವ ಪ್ರದೇಶಗಳಿಗೆ ಜಲಮಂಡಳಿ ವತಿಯಿಂದ ಕಾವೇರಿ ನೀರನ್ನು ಪೂರೈಸಲಾಗುತ್ತಿದೆ. ಇಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾದರೆ ಜಲಮಂಡಳಿಯಿಂದಲೇ ಉಚಿತವಾಗಿ ನೀರು ಪೂರೈಸಲಾಗುತ್ತದೆ. ಇತರ ಪ್ರದೇಶಗಳಿಂದ ನೀರಿಗಾಗಿ ಬೇಡಿಕೆ ಬಂದರೆ ಜಲಮಂಡಳಿ ಪ್ರತಿ ಟ್ಯಾಂಕರ್ ನೀರಿಗೆ ₹ 240 ಅಥವಾ ಪ್ರತಿ 10 ಸಾವಿರ ಲೀಟರ್‌ ನೀರಿಗೆ ₹ 90 ದರ ವಿಧಿಸುತ್ತದೆ.

ಪಾಲಿಕೆಗೆ ಹೊಸತಾಗಿ ಸೇರ್ಪಡೆಯಾಗಿರುವ 110 ಹಳ್ಳಿಗಳಲ್ಲಿ  29 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸಲು ಜಲಮಂಡಳಿ ಈಗಾಗಲೇ ಮೂಲಸೌಕರ್ಯ ಒದಗಿಸಿದೆ. ಇನ್ನುಳಿದ ಹಳ್ಳಿಗಳಿಗೆ ಬಿಬಿಎಂಪಿ ವತಿಯಿಂದಲೇ ಕುಡಿಯುವ ನೀರು ಪೂರೈಸಬೇಕಿದೆ.

ನೀರಿನ ಕೊರತೆ ಇರುವ ಪ್ರದೇಶಗಳಿಗೆ ಉಚಿತವಾಗಿ ನೀರು ಪೂರೈಸಲು ಪಾಲಿಕೆ ನಿರ್ಧರಿಸಿತ್ತು. ನಗರದಲ್ಲಿ 41 ಕಡೆ ನೆಲಮಟ್ಟದ ಜಲಾಗರಗಳಲ್ಲಿ ಪಾಲಿಕೆಯ ಟ್ಯಾಂಕರ್‌ಗಳಿಗೆ ನೀರು ತುಂಬಿಸಲು ಜಲಮಂಡಳಿ ಒಪ್ಪಿಗೆ ನೀಡಿತ್ತು. ಹಾಗಾಗಿ ಟ್ಯಾಂಕರ್‌ಗಳನ್ನು ಗುತ್ತಿಗೆ ಪಡೆಯಲು ಬಿಬಿಎಂಪಿ ಮುಂದಾಗಿತ್ತು. ಟ್ಯಾಂಕರ್‌ಗಳ ಮಾಲೀಕರೂ ಟೆಂಡರ್‌ನಲ್ಲಿ ಭಾಗವಹಿಸದೇ ಇರುವುದು ಪಾಲಿಕೆ ಪಾಲಿಗೆ ತಲೆನೋವಾಗಿದೆ. ಅಚ್ಚರಿಯೆಂದರೆ 110 ಹಳ್ಳಿಗಳಿಗೆ ಈಗಾಗಲೇ ನೀರು ಪೂರೈಸುತ್ತಿರುವ 267 ಟ್ಯಾಂಕರ್‌ಗಳ ಮಾಲೀಕರೂ ಟೆಂಡರ್‌ನಲ್ಲಿ ಭಾಗವಹಿಸಿಲ್ಲ. 

2019–20ನೇ ಸಾಲಿನ ಬಜೆಟ್‌ನಲ್ಲಿ ಕುಡಿಯುವ ನೀರಿನ ತುರ್ತು ಪೂರೈಕೆ ಸಲುವಾಗಿ ಪಾಲಿಕೆಯು ನಗರದ ಹೃದಯ ಭಾಗದ 135 ವಾರ್ಡ್‌ಗಳಿಗೆ ತಲಾ ₹ 20 ಲಕ್ಷ ಹಾಗೂ ಹೊರವಲಯದ ವಾರ್ಡ್‌ಗಳಿಗೆ ತಲಾ ₹ 40 ಲಕ್ಷ ಅನುದಾನ ಮೀಸಲಿಟ್ಟಿದೆ.  ಹಿಂದಿನ ವರ್ಷಗಳಲ್ಲಿ ಖರ್ಚಾಗದೇ ಉಳಿದ ಅನುದಾನ ಹಾಗೂ 14ನೇ ಹಣಕಾಸು ಆಯೋಗದ ಅನುದಾನಗಳೂ ಲಭ್ಯ ಇವೆ. ಸ್ಥಳೀಯರ ಅವಶ್ಯಕತೆ ತಕ್ಕಂತೆ ಕೊಳವೆಬಾವಿ ಕೊರೆಯಿಸಲು ₹ 50 ಕೋಟಿ ಮೀಸಲಿಡಲಾಗಿದೆ.

ಮಾಹಿತಿ ಕೊರತೆ ಕಾರಣ?
ಟೆಂಡರ್‌ ಪ್ರಕ್ರಿಯೆಯಲ್ಲಿ ಟ್ಯಾಂಕರ್‌ಗಳ ಮಾಲೀಕರು ಭಾಗವಹಿಸದೆ ಇರುವುದಕ್ಕೆ ಮಾಹಿತಿ ಕೊರತೆಯೂ ಕಾರಣ.

‘ಟೆಂಡರ್‌ ಕರೆದ ವಿಚಾರವೇ ನಮಗೆ ಗೊತ್ತಿಲ್ಲ. ಟೆಂಡರ್‌ ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದೂ ನಮಗೆ ತಿಳಿದಿಲ್ಲ’ ಎಂದು ಬನಶಂಕರಿಯ ಚಂದನ್‌ ವಾಟರ್‌ ಸಪ್ಲೈ ಸಂಸ್ಥೆಯ ಮಾಲೀಕರು ತಿಳಿಸಿದರು.

‘ನಮ್ಮ ಮೊಬೈಲ್‌ಗೆ ಕರೆ ಮಾಡಿದವರಿಗೆ ನೀರು ಪೂರೈಸುವುದಕ್ಕೇ ನಮಗೆ ಸಾಧ್ಯವಾಗುತ್ತಿಲ್ಲ. ಬಿಬಿಎಂಪಿಯವರು ನಮ್ಮನ್ನು ಸಂಪರ್ಕಿಸಿಲ್ಲ. ಈ ಬಗ್ಗೆ ಮೊದಲೇ ತಿಳಿಸುತ್ತಿದ್ದರೆ ನಾವೂ ಈ ಬಗ್ಗೆ ಯೋಚಿಸುತ್ತಿದ್ದೆವು’ ಎಂದು ಕಾಮಾಕ್ಷಿಪಾಳ್ಯದ ಪ್ರಕಾಶ್‌ ವಾಟರ್‌ ಸಪ್ಲೈನ ಮಾಲೀಕ ದೇವರಾಜ್‌ ತಿಳಿಸಿದರು.

ದರ ನಿಗದಿಗೂ ಹಿನ್ನಡೆ
ಜನರ ಸಮಸ್ಯೆಯನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಖಾಸಗಿ ಟ್ಯಾಂಕರ್‌ನವರು ಬೇಕಾಬಿಟ್ಟಿ ದರ ವಸೂಲಿ ಮಾಡುವುದಕ್ಕೂ ಕಡಿವಾಣ ಹಾಕಲು ಪಾಲಿಕೆ ಹಾಗೂ ಜಲಮಂಡಳಿ ಮುಂದಾಗಿದ್ದವು.

‘ನೀರಿನ ಮೂಲ, ಅದರ ಸಾಗಣೆಗೆ ತಗಲುವ ವೆಚ್ಚವನ್ನು ಪರಿಗಣಿಸಿ ಹಾಗೂ ಟೆಂಡರ್‌ನಲ್ಲಿ ಭಾಗವಹಿಸುವ ಪೂರೈಕೆದಾರರು ಎಷ್ಟು ದರವನ್ನು ನಮೂದಿಸುತ್ತಾರೆ ಎಂಬುದನ್ನು ನೋಡಿಕೊಂಡು ಮಾರ್ಗಸೂಚಿ ದರವನ್ನು ನಿಗದಿಪಡಿಸಲು ಚಿಂತನೆ ನಡೆಸಿದ್ದೆವು. ಈಗ ನೀರು ಪೂರೈಕೆಗೆ ಟೆಂಡರ್‌ ಪ್ರಕ್ರಿಯೆಯಲ್ಲಿ ಯಾರೂ ಭಾಗವಹಿಸದ ಕಾರಣ ಸದ್ಯಕ್ಕೆ ದರ ನಿಗದಿ ಸಾಧ್ಯವಾಗಿಲ್ಲ. ಈ ಬಗ್ಗೆ ಎಂಜಿನಿಯರ್‌ಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ’ ಎಂದು ಪಾಲಿಕೆ ಆಯುಕ್ತರು ತಿಳಿಸಿದರು.

*
ನಗರದಲ್ಲಿ ನೀರಿನ ಕೊರತೆ ತೀವ್ರವಾಗಿದೆ. ಮತ್ತೆ ಟೆಂಡರ್‌ ಕರೆದು ಮುಂದುವರಿಯಬೇಕೋ ಅಥವಾ ಪರ್ಯಾಯ ಕ್ರಮ ಕೈಗೊಳ್ಳಬೇಕೋ ಎಂದು ಇನ್ನೂ ನಿರ್ಧರಿಸಿಲ್ಲ. ಶೀಘ್ರ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತೇವೆ.
–ಎನ್‌.ಮಂಜುನಾಥ ಪ್ರಸಾದ್‌, ಬಿಬಿಎಂಪಿ ಆಯುಕ್ತ

***
ಇಂದು ನೀರಿನ ಅದಾಲತ್‌
ಬೆಂಗಳೂರು:
ಕಾವೇರಿ ನೀರು ಪೂರೈಕೆ ಮತ್ತು ಒಳಚರಂಡಿ ನಿರ್ವಹಣೆಕುಂದುಕೊರತೆ ನಿವಾರಿಸಲು ಏಪ್ರಿಲ್‌ 9ರಂದು ನೀರಿನ ಅದಾಲತ್‌ ಆಯೋಜಿಸಿದೆ.

ಬೆಳಿಗ್ಗೆ 9.30ರಿಂದ 1ರವರೆಗೆ ನಡೆಯಲಿರುವ ಅದಾಲತ್‌ನಲ್ಲಿ ನೀರಿನ ಬಿಲ್ಲಿಂಗ್‌, ಪೂರೈಕೆ ವ್ಯತ್ಯಯ, ಒಳಚರಂಡಿ ಸಂಪರ್ಕ ಸೇರಿದಂತೆ ಮಂಡಳಿಯ ದೂರುಗಳನ್ನು ಅಧಿಕಾರಿ ಗಳ ಗಮನಕ್ಕೆ ತರಬಹುದು.

ಎಇಇ(ಪಶ್ಚಿಮ–2): ನಾಗರಬಾವಿ, ಅನ್ನಪೂರ್ಣೇಶ್ವರಿ ನಗರ, ಎಸ್‌.ಎಂ.ವಿ.ಬಡಾವಣೆ, ಮೂಡಲಪಾಳ್ಯ.

ಎಇಇ(ಆಗ್ನೆಯ–2): ಜೀವನ್‌ ಬಿಮಾ ನಗರ, ಎಚ್‌ಎಎಲ್‌ 2ನೇ ಹಂತ, ಇಂದಿರಾನಗರ, ಬೈಯಪ್ಪನಹಳ್ಳಿ, ಸದಾನಂದನಗರ.

ಎಇಇ(ನೈರುತ್ಯ–2): ಕತ್ರಿಗುಪ್ಪೆ, ಹೊಸಕೆರೆಹಳ್ಳಿ, ಇಟ್ಟಮಡು ಸೇರಿದಂತೆ ಆಯಾ ಉಪ ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ ಕಚೇರಿಯಲ್ಲಿ ಅದಾಲತ್‌ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !