ಸೋಮವಾರ, ನವೆಂಬರ್ 18, 2019
28 °C
ಶಿಕ್ಷಕರ ದಿನಾಚರಣೆ: ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ, ನಿವೃತ್ತ ಶಿಕ್ಷಕರು, ಸಿಬ್ಬಂದಿಗೆ ಸನ್ಮಾನ

‘ವರ್ಗಾವಣೆ ಚಿಂತೆ ಬಿಡಿ, ಪ್ರತಿಭೆ ರೂಪಿಸಿ’

Published:
Updated:
Prajavani

ಚಾಮರಾಜನಗರ: ‘ಶಿಕ್ಷಕರು ವರ್ಗಾವಣೆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ, ಗ್ರಾಮೀಣ ಭಾಗದ ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರೆ ತೆಗೆಯಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು’ ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್  ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ 15 ಮಂದಿ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

‘ಶಿಕ್ಷಣ ಈಗ ಬದಲಾಗಿದೆ. ಮಕ್ಕಳಿಗೆ ಶಿಕ್ಷಣ ಕೊಡಬೇಕು ಎಂಬ ಅರಿವು ಹಳ್ಳಿಯವರಿಗೆ ಬಂದಿದೆ. ಜನರಲ್ಲಿ ಇಂಗ್ಲಿಷ್‌ ಮೋಹ ಹೆಚ್ಚಿದೆ. ಬಡವರು ಕೂಡ ಮಕ್ಕಳನ್ನು ಇಂಗ್ಲಿಷ್‌ ಮಾಧ್ಯಮ ಶಾಲೆಗಳಲ್ಲಿ ಓದಿಸಬೇಕು ಎಂದು ಆಸೆ ಹೊಂದಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಮುಚ್ಚುವ ಭೀತಿಯೂ ಎದುರಿಸುತ್ತಿವೆ. ಶಾಲೆಗಳನ್ನು ಉಳಿಸುವಲ್ಲಿ ಶಿಕ್ಷಕರ ಪಾತ್ರ ದೊಡ್ಡದಿದೆ’ ಎಂದು ಹೇಳಿದರು. 

‘ಸರ್ಕಾರಿ ಶಾಲೆಗಳಲ್ಲಿ ಅತ್ಯುತ್ತಮ ಶಿಕ್ಷಕರಿದ್ದಾರೆ. ಆದರೆ, ಕೆಲವರು ಮಾತ್ರ ವರ್ಗಾವಣೆ ಬಗ್ಗೆಯೇ ಹೆಚ್ಚು ತಲೆಕೆಡಿಸಿಕೊಳ್ಳುತ್ತಾರೆ. ಕೆಲವು ಶಿಕ್ಷಕರು ತಮ್ಮ ಬೇಡಿಕೆಗಳನ್ನು ಮಾತ್ರ ಮುಂದಿಡುತ್ತಾರೆಯೇ ವಿನಾ, ಜವಾಬ್ದಾರಿಯನ್ನು ಮರೆಯುತ್ತಿದ್ದಾರೆ. ಇದು ಆಗಬಾರದು’ ಎಂದರು.

‘ಡಾ.ಸರ್ವಪಲ್ಲಿ ರಾಧಾಕೃಷ್ಣನ್‌ ಅವರ ಸ್ಮರಣೆ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು. ಅವರ ತತ್ವ, ಆದರ್ಶಗಳನ್ನು ಯಾವಾಗಲೂ ಪಾಲಿಸಬೇಕು. ಯಾವಾಗಲೂ ಶಿಕ್ಷಕರಿಗೆ ಅವರು ಸ್ಫೂರ್ತಿಯಾಗಬೇಕು’ ಎಂದು ಸಲಹೆ ನೀಡಿದರು. 

ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಮಾತನಾಡಿ, ‘ಸರ್ವಪಲ್ಲಿ ರಾಧಾಕೃಷ್ಣನ್‌ ಅವರು ಶಿಕ್ಷಕರ ಗೌರವ ಹಾಗೂ ಮಹತ್ವವನ್ನು ಸಾರಿದ ಮಹಾಪುರುಷ. ಅವರ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತಿದೆ. ಗುರುವಿಲ್ಲದೆ ಗುರಿ ತಲುಪಲು ಸಾಧ್ಯವಿಲ್ಲ. ಸರ್ಕಾರಿ ಶಾಲೆಗಳಲ್ಲಿ ನುರಿತ ಶಿಕ್ಷಕರನ್ನೇ ಆಯ್ಕೆ ಮಾಡಲಾಗುತ್ತದೆ. ಆದರೆ, ಇಂಗ್ಲಿಷ್‌ ವ್ಯಾಮೋಹದಿಂದ ಜನರು ಮಕ್ಕಳು ಇಂಗ್ಲಿಷ್‌ ಮಾಧ್ಯಮದ ಶಾಲೆಗೆ ಸೇರಿಸುತ್ತಾರೆ’ ಎಂದರು. 

ಪ್ರಶಸ್ತಿ ಪ್ರದಾನ, ಸನ್ಮಾನ: ಕಾರ್ಯಕ್ರಮದಲ್ಲಿ ಜಿಲ್ಲೆಯ ಉತ್ತಮ ಶಿಕ್ಷಕರಾಗಿ ಆಯ್ಕೆಯಾದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ 15 ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು. ಸೇವೆಯಿಂದ ನಿವೃತ್ತರಾದ ಪ್ರಾಥಮಿಕ, ಪ್ರೌಢ ಶಿಕ್ಷಕರು ಹಾಗೂ ಇಲಾಖೆಯ ಸಿಬ್ಬಂದಿಯನ್ನೂ ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. 

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ, ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಸ್‌.ಲತಾಕುಮಾರಿ ಮಾತನಾಡಿದರು. 

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಎಸ್‌.ಕೆ.ಮಹೇಶ್‌, ಸದಸ್ಯ ಕೆರೆಹಳ್ಳಿ ನವೀನ್‌, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಜಿ.ಬಸವಣ್ಣ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದಕುಮಾರ್‌, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕಿ ವಿ.ಆರ್‌.ಶ್ಯಾಮಲ, ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಭಾರ ಉಪನಿರ್ದೇಶಕ ಪಿ.ಮಂಜುನಾಥ್‌ ಮತ್ತಿತರರು ಇದ್ದರು. 

‘ಸರ್ಕಾರಿ ಶಾಲೆಗಳಿಂದ ಮಾತ್ರ ಬದಲಾವಣೆ’

ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ಮಾತನಾಡಿ, ‘ಎಲ್ಲ ಶಿಕ್ಷಕರನ್ನು ಹೋಲಿಸಿದರೆ ಅತ್ಯುತ್ತಮ ಶಿಕ್ಷಕರು ಸರ್ಕಾರಿ ಶಾಲೆಗಳಲ್ಲಿ ಮಾತ್ರ ಕಾಣುತ್ತಾರೆ. ಖಾಸಗಿ ಶಾಲೆಗಳಲ್ಲಿರುವ ಶಿಕ್ಷಕರಿಗೆ ಸರಿಯಾದ ತರಬೇತಿ ಆಗಿರುವುದರಿಂದ ಜ್ಞಾನವೂ ಇರುವುದಿಲ್ಲ. ಪೋಷಕರು ಇಂಗ್ಲಿಷ್‌ನ ವ್ಯಾಮೋಹದಿಂದ, ಮಕ್ಕಳು ಮುಂದೆ ಬರಬೇಕು ಎಂಬ ಉದ್ದೇಶದಿಂದ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುತ್ತಿದ್ದಾರೆ. ಆದರೆ ಸಮಾಜದ ಬದಲಾವಣೆ ಸರ್ಕಾರಿ ಶಾಲೆಗಳಿಂದ ಮಾತ್ರ ಸಾಧ್ಯ’ ಎಂದರು. 

‘ಶಿಕ್ಷಕರು ಮಕ್ಕಳನ್ನು ಯಾವ ರೀತಿ ನೋಡಿಕೊಳ್ಳುತ್ತಾರೋ, ಅದೇ ರೀತಿ ಅವರು ಬೆಳೆಯುತ್ತಾರೆ. ನಮ್ಮ ಜಿಲ್ಲೆ ಇನ್ನಷ್ಟು ಪ್ರಗತಿ ಹೊಂದಬೇಕು. ಒಂದು ಜಿಲ್ಲೆಯ ಅಭಿವೃದ್ಧಿಯನ್ನು ಅಲ್ಲಿರುವ ಶಿಕ್ಷಣ ಹಾಗೂ ಆರೋಗ್ಯ ವ್ಯವಸ್ಥೆಯಿಂದ ಅಳೆಯುತ್ತಾರೆ. ಜಿಲ್ಲೆಯ ಸಾಕ್ಷರತೆ ಪ್ರಮಾಣ ಶೇ 62ರಷ್ಟಿದೆ. ಅದು ಇನ್ನೂ ಹೆಚ್ಚಬೇಕು. ಇದಕ್ಕಾಗಿ ಶಿಕ್ಷಕರು ಬದ್ಧತೆಯಿಂದ ಕೆಲಸ ಮಾಡಬೇಕು’ ಎಂದು ಅವರು ಕರೆ ನೀಡಿದರು. 

ಸಂಸದರ ಮೊದಲ ಸರ್ಕಾರಿ ಕಾರ್ಯಕ್ರಮ

ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಅವರು ಚಾಮರಾಜನಗರ ಲೋಕಸಭಾ ಕ್ಷೇತ್ರದ ಸದಸ್ಯರಾಗಿ ಆಯ್ಕೆಯಾದ ನಂತರ ಭಾಗವಹಿಸಿದ ಮೊದಲ ಸರ್ಕಾರಿ ಕಾರ್ಯಕ್ರಮ ಇದು. ಸ್ಥಳೀಯ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರ ಜೊತೆಗೆ ಮೊದಲ ಬಾರಿ ವೇದಿಕೆ ಹಂಚಿಕೊಂಡರು. ಸ್ವಲ್ಪ ತಡವಾಗಿ ಬಂದರೂ, ಕಾರ್ಯಕ್ರಮ ಮುಗಿಯುವವರೆಗೂ ಇದ್ದರು. 

ಪ್ರತಿಕ್ರಿಯಿಸಿ (+)