ಪಂಚಾಯಿತಿ ಎದುರು ಕಾರ್ಮಿಕರ ಕಣ್ಣೀರು

7
ಆರು ತಿಂಗಳಿನಿಂದ ವೇತನ ನೀಡದ ಅಲೀಪುರ ಪಂಚಾಯಿತಿ ಅಧಿಕಾರಿಗಳು

ಪಂಚಾಯಿತಿ ಎದುರು ಕಾರ್ಮಿಕರ ಕಣ್ಣೀರು

Published:
Updated:
Deccan Herald

ಗೌರಿಬಿದನೂರು: 6 ತಿಂಗಳಿನಿಂದ ವೇತನ ನೀಡಿಲ್ಲ ಎಂದು ತಾಲ್ಲೂಕಿನ ಅಲೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಛತೆ ಕೆಲಸ ಮಾಡುತ್ತಿರುವ ಮಹಿಳೆಯರು ಆರೋಪಿಸಿ ಪಂಚಾಯಿತಿ ಮುಂದೆ ಕುಳಿತು ಬುಧವಾರ ಕಣ್ಣೀರಿಟ್ಟರು.

ಪುಲಗಾನಹಳ್ಳಿ ಮತ್ತು ಅಲೀಪುರ ಗ್ರಾಮದಲ್ಲಿ ನಿತ್ಯ ಕಸ ಗುಡಿಸಲು ಹಾಗೂ ಚರಂಡಿಗಳನ್ನು ಸ್ವಚ್ಛಗೊಳಿಸುವ ಉದ್ದೇಶದಿಂದ ಒಂದೂವರೆ ದಶಕದ ಹಿಂದೆ ಸೋಮಶೆಟ್ಟಹಳ್ಳಿಯ ನಿವಾಸಿಗಳಾದ ಸಾಕಮ್ಮ, ಲಕ್ಷ್ಮಿದೇವಮ್ಮ ಮತ್ತು ಸಣ್ಣಮ್ಮ ಅವರನ್ನು ದಿನಗೂಲಿಯ ಮೇರೆಗೆ ಕೆಲಸಕ್ಕೆ ನೇಮಕ ಮಾಡಿಕೊಳ್ಳಲಾಗಿದೆ.

ಕನಿಷ್ಠ ವೇತನದ ಆಧಾರದ ಮೇಲೆ ಪಂಚಾಯಿತಿದ ವೇತನ ನೀಡಲಾಗುತ್ತಿದೆ. ಆದರೆ 6 ತಿಂಗಳಿನಿಂದ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಮತ್ತು ಅಧ್ಯಕ್ಷರು ವೇತನ ನೀಡಿಲ್ಲ.

ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಆರ್.ಎನ್.ಸಿದ್ದರಾಮಯ್ಯ ‘ಕೆಲವೇ ತಿಂಗಳುಗಳ ಹಿಂದೆ ನಾನು ಅಧಿಕಾರ ವಹಿಸಿಕೊಂಡಿದ್ದೇನೆ. ಅದಕ್ಕೂ ಮುನ್ನ ಇದ್ದ ಅಧಿಕಾರಿ ಮತ್ತು ಅಧ್ಯಕ್ಷರು ಯಾವ ರೀತಿಯಲ್ಲಿ ವೇತನ ನೀಡುತ್ತಿದ್ದರು ಎಂಬುದು ತಿಳಿದಿಲ್ಲ. ಕಚೇರಿಯ ಯಾವುದೇ ದಾಖಲೆಗಳಲ್ಲಿ ಇವರ ಹೆಸರು ಇಲ್ಲ’ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಸರಸ್ವತಮ್ಮ ಅಶ್ವತ್ಥನಾರಾಯಣಗೌಡ ‘ಪಂಚಾಯಿತಿಯಲ್ಲಿ ಸ್ವಚ್ಛತಾ ಕಾರ್ಯಕ್ಕಾಗಿ ದಿನಗೂಲಿ ನೌಕರರನ್ನು ನೇಮಕ ಮಾಡಿಕೊಳ್ಳುವ ನಿಯಮ ಇಲ್ಲ. ಆದರೆ ದಶಕಗಳಿಂದ ಇವರಿಂದ ಸ್ವಚ್ಛಚತಾ ಕೆಲಸ ಮಾಡಿಸಿಕೊಳ್ಳುತ್ತಿರುವ ಬಗ್ಗೆ ತಿಳಿದುಬಂದಿದೆ. ಕೂಡಲೇ ಅಧಿಕಾರಿಗಳನ್ನು ಸಂಪರ್ಕಿಸಿ ಸಮಸ್ಯೆಯ ಪರಿಹಾರಕ್ಕೆ ಕ್ರಮಕೈಗೊಳ್ಳುತ್ತೇವೆ’ ಎಂದು ಹೇಳಿದರು. 

 ಪಂಚಾಯಿತಿ ಅಧಿಕಾರಿಗಳು ಒಂದೆರಡು ದಿನದಲ್ಲಿ ವೇತನ ನೀಡದೆ ಇದ್ದಲ್ಲಿ ಮಕ್ಕಳ ಸಮೇತವಾಗಿ ಪಂಚಾಯಿತಿ ಕಚೇರಿಯ ಮುಂದೆ ಬಂದು ವಿಷ ಸೇವಿಸುತ್ತವೆ ಎಂದು ಮಹಿಳೆಯರು ಎಚ್ಚರಿಕೆ ನೀಡಿದರು.

‘ವೇತನ ನೀಡದ ಕಾರಣ ಬದುಕು ಕಷ್ಟವಾಗಿದೆ’ ಎನ್ನುವರು ಲಕ್ಷ್ಮಿದೇವಮ್ಮ.

ಅಂಗಲಾಚಿದರೂ ವೇತನವಿಲ್ಲ

‘ಮನೆಯಲ್ಲಿನ ಮಕ್ಕಳು ಆಸ್ಪತ್ರೆ ಸೇರಿದ್ದಾರೆ ಅವರ ಚಿಕಿತ್ಸೆಗಾಗಿ ಹಣದ ಅವಶ್ಯಕತೆ ಇದೆ. ನಿತ್ಯ ಪಂಚಾಯಿತಿಗೆ ಬಂದು ಅಂಗಲಾಚಿದರೂ ಅಧಿಕಾರಿಗಳು ವೇತನ ನೀಡುತ್ತಿಲ್ಲ. ರಸ್ತೆಯಲ್ಲಿ ಕಸ ಗುಡಿಸಿ, ಬರಿಗೈಯಲ್ಲಿ ಚರಂಡಿಗಳನ್ನು ಸ್ವಚ್ಛಗೊಳಿಸಿದ್ದೇವೆ’ ಎಂದು ಗೋಳು ತೋಡಿಕೊಳ್ಳುವರು ಸಣ್ಣಮ್ಮ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !