ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಹಿತ ರಕ್ಷಿಸಲು ಕಾಂಗ್ರೆಸ್‌, ಬಿಜೆಪಿ ವಿಫಲ

ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ ಶಾಸಕ ಎಚ್‌.ಡಿ.ರೇವಣ್ಣ ವಾಗ್ದಾಳಿ
Last Updated 7 ಏಪ್ರಿಲ್ 2018, 8:57 IST
ಅಕ್ಷರ ಗಾತ್ರ

ಅರಸೀಕೆರೆ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರು, ದಲಿತರು, ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಹಿತ ರಕ್ಷಿಸುವಲ್ಲಿ ವಿಫಲವಾಗಿವೆ ಎಂದು ಶಾಸಕ ಎಚ್‌.ಡಿ. ರೇವಣ್ಣ ಶುಕ್ರವಾರ ಇಲ್ಲಿ ವಾಗ್ದಾಳಿ ನಡೆಸಿದರು.

ತಾಲ್ಲೂಕು ಜೆಡಿಎಸ್‌ ಘಟಕ ಆಯೋಜಿಸಿದ್ದ ಪಕ್ಷದ ಕಾರ್ಯಕರ್ತರ ಸಭೆ ಉದ್ಘಾಟಿಸಿದ ಅವರು, ‘ಜನತೆ ಈ ಎರಡೂ ಪಕ್ಷಗಳಿಗೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಅಲ್ಲದೆ ಈ ಚುನಾವಣೆಯಲ್ಲ ಜೆಡಿಎಸ್‌ ಪಕ್ಷ ಅಧಿಕಾರಕ್ಕೆ ಬರುವುದನ್ನು ಯಾರೂ ತಪ್ಪಿಸಲಾಗದು. ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಕೈಗೊಂಡಿದ್ದ ಜನಪರ ಕಾರ್ಯಕ್ರಮಗಳ ಆಧಾರದಲ್ಲಿ ಪಕ್ಷ ಚುನಾವಣೆ ಎದುರಿಸಲಿದೆ’ ಎಂದು ಹೇಳಿದರು.

ದೇಶದಲ್ಲಿ ಶೇಕಡ 80ರಷ್ಟು ರೈತರಿದ್ದಾರೆ. ಯಾವುದೇ ಸರ್ಕಾರಗಳು ರೈತರ ಪರ ಕೆಲಸ ಮಾಡುತ್ತಿಲ್ಲ. ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಸಿಗುತ್ತಿಲ್ಲ. ಸಾಲಬಾಧೆಯಿಂದ ರೈತ ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ ಎಂದು ರೇವಣ್ಣ ಬೇಸರ ವ್ಯಕ್ತಪಡಿಸಿದರು.

’ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಎಚ್‌.ಡಿ.ಕುಮಾರಸ್ವಾಮಿ ತಮ್ಮ ಅಲ್ಪಾವಧಿಯ ಅಧಿಕಾರದ ಅವಧಿಯಲ್ಲಿಯೇ ರೈತರ ಪರವಾಗಿ ಸರ್ಕಾರ ಹೇಗೆ ಕೆಲಸ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ’ ಎಂದು ಹೇಳಿದರು.

ಶಾಸಕ ಕೆ.ಎಂ.ಶಿವಲಿಂಗೇಗೌಡ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಬವಣೆ ತಪ್ಪಿಸಲು ಸತತ ಹೋರಾಟ ಮಾಡಿದ್ದಾರೆ. ಅರಸೀಕೆರೆಗೆ ಹೇಮಾವತಿ ನದಿ ಮೂಲದಿಂದ ನೀರು ಪೂರೈಕೆಯಾಗುತ್ತಿರುವುದೇ ಇದಕ್ಕೆ ಸಾಕ್ಷಿ ಎಂದು ಶ್ಲಾಘಿಸಿದರು.

ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರು, ‘ಎರಡು ಅವಧಿಯಲ್ಲಿ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳೇ ನನ್ನ ಗೆಲುವಿಗೆ ನೆರವಾಗಲಿವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕ್ಷೇತ್ರದ ಪ್ರತಿಯೊಂದು ಗ್ರಾ.ಪಂ. ವ್ಯಾಪ್ತಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಉದ್ಯೋಗ ಖಾತ್ರಿ ಯೋಜನೆಯ ಲಾಭ ಪಡೆದು ಸ್ಥಳೀಯವಾಗಿ ಪ್ರಗತಿಗೆ ಆದ್ಯತೆ ನೀಡಲಾಗಿದೆ ಎಂದು ಪ್ರತಿಪಾದಿಸಿದರು.

ಅಭಿವೃದ್ಧಿ ಕುರಿತಂತೆ ಯಾವುದೇ ವದಂತಿ ಹಾಗೂ ಅಮಿಷಗಳಿಗೆ ಗುರಿಯಾಗದೆ ಪ್ರಜ್ಞಾವಂತಿಕೆಯಿಂದ ಮತದಾನ ತಮ್ಮನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ನಗರಸಭೆ ಅಧ್ಯಕ್ಷ ಎಂ. ಸಮೀವುಲ್ಲಾ , ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ  ರೂಪಾ ಗುರುಮೂರ್ತಿ ಮಾಜಿ ಅಧ್ಯಕ್ಷೆ ಮಂಜುಳಾಬಾಯಿ,     ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಪ್ರೇಮಾ ನಿಂಗಪ್ಪ, ಮಾಜಿ ಉಪಾಧ್ಯಕ್ಷ ಬಂಡೀಗೌಡರ ರಾಜಣ್ಣ, ಹಿಂದುಳಿದ ವರ್ಗದ ಮುಖಂಡ ಗೊಲ್ಲರಹಳ್ಳಿ ಹನುಮಪ್ಪ, ತಾಲ್ಲೂಕು ಜೆಡಿಎಸ್‌ ಅಧ್ಯಕ್ಷ ಬಿಳಿಚೌಡಯ್ಯ ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಲೀಲಾ ಧರ್ಮಶೇಖರ್‌, ಎಸ್‌.ವತ್ಸಲಾ ಶೇಖರಪ್ಪ, ಜೆಡಿಎಸ್ ಕಾರ್ಯದರ್ಶಿ ಸುಬ್ರಮಣ್ಯ ಬಾಬು , ನಗರಸಭೆ ಉಪಾಧ್ಯಕ್ಷ ಪಾರ್ಥಸಾರಧಿ, ಸದಸ್ಯರಾದ ಮೋಹನಕುಮಾರ್‌, ಬಿ.ಎನ್‌. ವಿದ್ಯಾಧರ, ಯೂನಸ್‌ ಫೈರೋಜ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT