ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Epson EcoTank L6490: ಬಹು ಆಯ್ಕೆಯ ಉತ್ತಮ ಪ್ರಿಂಟರ್

Published 27 ಏಪ್ರಿಲ್ 2023, 12:41 IST
Last Updated 27 ಏಪ್ರಿಲ್ 2023, 12:41 IST
ಅಕ್ಷರ ಗಾತ್ರ

ಎಪ್ಸನ್‌ ಕಂಪನಿಯು ಪ್ರಿಂಟರ್‌ ಉದ್ಯಮದಲ್ಲಿ ತನ್ನದೇ ಆದ ಖ್ಯಾತಿ ಹೊಂದಿದೆ. ವಾಣಿಜ್ಯ ಉದ್ದೇಶದ ಪ್ರಿಂಟರ್‌ಗಳಲ್ಲಿ ಇಂಕ್‌ ಟ್ಯಾಂಕ್‌ ತಂತ್ರಜ್ಞಾನ ಪರಿಚಯಿಸಿದ ಮೊದಲ ಬ್ರ್ಯಾಂಡ್‌ ಇದಾಗಿದೆ. ತನ್ನ ಪ್ರತಿ ಮಾದರಿಯಲ್ಲಿಯೂ ಗುಣಮಟ್ಟ ಮತ್ತು ಬಳಕೆದಾರರ ಅವಶ್ಯಕತೆಗಳಿಗೆ ಅನುಗುಣವಾಗಿ ಹಲವು ಸುಧಾರಣೆಗಳನ್ನು ಮಾಡುತ್ತಲೇ ಬರುತ್ತಿದೆ. ಕಂಪನಿಯು ಈಚೆಗೆ ಬಿಡುಗಡೆ ಮಾಡಿರುವ ‘ಎಪ್ಸನ್‌ ಇಕೊಟ್ಯಾಂಕ್‌ ಎಲ್‌6490 ಎ4 ಇಂಕ್‌ ಟ್ಯಾಂಕ್‌ ಪ್ರಿಂಟರ್‌’ (Epson EcoTank L6490 A4 Ink Tank Printer) ಹಲವು ಆಯಾಮಗಳಲ್ಲಿ ವಾಣಿಜ್ಯ ಉದ್ದೇಶದ ಬಳಕೆಗೆ ಸೂಕ್ತವಾಗಿದೆ.

ಮೊದಲಿಗೆ, ಇದರಲ್ಲಿರುವ ಆಯ್ಕೆಗಳು, ಬಳಸಿರುವ ತಂತ್ರಜ್ಞಾನ, ಕಾರ್ಯಸಾಮರ್ಥ್ಯದ ಬಗ್ಗೆ ಕಂಪನಿ ಹೇಳಿರುವುದನ್ನು ಗಮನಿಸೋಣ. ಈ ಮಾದರಿಯು ಡ್ಯುಪ್ಲೆಕ್ಸ್‌ ಪ್ರಿಂಟ್‌, ಪ್ರಿಂಟ್‌, ಕಾಪಿ, ಸ್ಕ್ಯಾನ್‌ ವಿತ್‌ ಎಡಿಎಫ್‌, ಫ್ಯಾಕ್ಸ್‌ ಆಯ್ಕೆಗಳನ್ನು ಹೊಂದಿದೆ. ಇದರ ಗರಿಷ್ಠ ಪ್ರಿಂಟಿಂಗ್ ರೆಸಲ್ಯೂಷನ್‌ 4800X1200 ಡಿಪಿಐ. ವಿಂಡೋಸ್‌ ಎಕ್ಸ್‌ಪಿ/ಎಕ್ಸ್‌ಪಿ ಪ್ರೊಫೆಷನಲ್‌/ವಿಸ್ಟಾ/7/8/81/10 ಹಾಗೂ ಮ್ಯಾಕ್‌ ಒಎಸ್‌X 10.6.8 ಮತ್ತು ನಂತರದ ಆವೃತ್ತಿಗಳಿಗೆ ಈ ಪ್ರಿಂಟರ್‌ ಬೆಂಬಲಿಸುತ್ತದೆ.

2.4 ಇಂಚು ಕಲರ್‌ ಎಲ್‌ಸಿಡಿ ಟಚ್‌ ಸ್ಕ್ರೀನ್‌ ಜೊತೆಗೆ ಪವರ್‌, ಹೋಮ್‌ ಮತ್ತು ಹೆಲ್ಪ್‌ ಬಟನ್‌ಗಳಿವೆ. ಟಚ್‌ ಅನುಭವವು ಅಷ್ಟೇನೂ ಚೆನ್ನಾಗಿಲ್ಲ. ಸ್ಮಾರ್ಟ್‌ಫೋನ್‌ಗೆ ಹೋಲಿಸಿದರಂತೂ ಟಚ್‌ ಅನುಭವ ತೀರಾ ಕಳಪೆ ಆಗಿದೆ. ಸ್ಮಾರ್ಟ್‌ಫೋನ್‌, ಟ್ಯಾಬ್ಲೆಟ್‌ ಅಥವಾ ಲ್ಯಾಪ್‌ಟಾಪ್‌ ಮೂಲಕ ಪ್ರಿಂಟ್ ಕೊಡಬಹುದು. ವೈಫೈ ಅಥವಾ ಎಥರ್ನೆಟ್‌ ವ್ಯವಸ್ಥೆಯ ಮೂಲಕ ಪ್ರಿಂಟರ್‌ನೊಂದಿಗೆ ಸಂಪರ್ಕ ಸಾಧಿಸಬಹುದು. ಗರಿಷ್ಠ 8 ಸಾಧನಗಳನ್ನು ವೈಫೈ ಡೈರೆಕ್ಟ್‌ ಮೂಲಕ ಪ್ರಿಂಟರ್‌ನೊಂದಿಗೆ ಸಂಪರ್ಕಿಸಬಹುದಾಗಿದೆ. ಕಾರ್ಪೊರೇಟ್ ಆಫೀಸ್ ಬಳಕೆಗೆ ಈ ಆಯ್ಕೆ ಬಹು ಉಪಯುಕ್ತ. ಇಂಟರ್‌ನೆಟ್‌ ಸಂಪರ್ಕದ ಮೂಲಕ ರಿಮೋಟ್‌ ಪ್ರಿಂಟ್‌ ಡ್ರೈವರ್‌ ಬಳಸಿ ಎಲ್ಲಿಂದ ಬೇಕಿದ್ದರೂ ಪ್ರಿಂಟ್‌ ಮಾಡಬಹುದು. ಅದೇ ರೀತಿ, ಸ್ಕ್ಯಾನ್‌ ಮಾಡಿದ ಇಮೇಜ್‌ಗಳನ್ನು ಕ್ಲೌಡ್‌ ಸ್ಟೋರೇಜ್‌ಗೆ ಕಳುಹಿಸಬಹುದು. ಲೀಗಲ್‌, ಲೆಟರ್‌, ಎ4, 16ಕೆ, ಬಿ5, ಎ5,ಬಿ6, ಎ6 ಗಾತ್ರದ ಪೇಪರ್‌ಗಳನ್ನು ಬಳಸಬಹುದು.

ಮೊಬೈಲ್‌ ಮತ್ತು ಕ್ಲೌಡ್‌ ಪ್ರಿಂಟಿಂಗ್‌: ಫೋಟೊ ಮತ್ತು ಡಾಕ್ಯುಮೆಂಟ್‌ಗಳನ್ನು ಸುಲಭವಾಗಿ ಪ್ರಿಂಟ್‌ ಮಾಡಲು ಮೊಬೈಲ್‌ ಮತ್ತು ಕ್ಲೌಡ್‌ ಪ್ರಿಂಟಿಂಗ್‌ ಆಯ್ಕೆಗಳು ಇದರಲ್ಲಿವೆ. ಎಪ್ಸನ್‌ ಕನೆಕ್ಟ್‌ ಮೂಲಕ Epson iPrint, Email Print, Remote Print Driver, Scan to Cloud, Apple AirPrint, Mopria Print Service, Epson Smart Panel... ಪ್ರಮುಖ ಆಯ್ಕೆಗಳಾಗಿವೆ.

ಈ ಪ್ರಿಂಟರ್‌ನಲ್ಲಿ ಮೊನೊ ಮತ್ತು ಕಲರ್‌ ಪ್ರಿಂಟ್‌ ಆಯ್ಕೆಗಳಿವೆ. ಫ್ರಂಟ್‌ ಕ್ಯಾಸೆಟ್‌ನಲ್ಲಿ (ಪೇಪರ್‌ ಹಾಕುವ ಟ್ರೇ) 250 ಪೇಜ್‌ ಹಿಡಿಯುತ್ತದೆ. ರಿಯರ್‌ ಪೇಪರ್‌ ಫೀಡರ್ ಇದ್ದು, ಫೊಟೊ ಶೀಟ್‌ ಇಡಲು ಬಳಸಬಹುದು. ಆಟೊಮೆಟಿಕ್‌ ಡಾಕ್ಯುಮೆಂಟ್ ಫೀಡರ್ (ಎಡಿಎಫ್) ಹಲವು ದಾಖಲೆಪತ್ರಗಳನ್ನು ಒಮ್ಮೆಲೆ ಕಾಪಿ/ಸ್ಕ್ಯಾನ್‌ ಮಾಡಲು ನೆರವಾಗುತ್ತದೆ. ಡ್ಯುಪ್ಲೆಕ್ಸ್ ಪ್ರಿಂಟಿಂಗ್ (ಎ4ಗೆ ಮಾತ್ರ) ಆಯ್ಕೆ ಇದೆ.

ಡ್ಯೂರಾ ಬ್ರೈಟ್‌ ಪಿಗ್ಮೆಂಟ್‌ ಇಂಕ್‌ ಮತ್ತು ವಾಟರ್‌ಪ್ರೂಫ್‌ ತಂತ್ರಜ್ಞಾನವನ್ನು ಈ ಪ್ರಿಂಟರ್‌ನಲ್ಲಿ ಬಳಸಲಾಗಿದೆ. ಹೀಟ್‌ಫ್ರೀ ಪ್ರಿಸೆಷನ್‌ ಕೋರ್ ತಂತ್ರಜ್ಞಾನ ಬಳಸಿರುವುದರಿಂದ ಕಡಿಮೆ ವಿದ್ಯುತ್‌ ಬಳಸುತ್ತದೆ. ಡ್ರಾಫ್ಟ್‌, ಸ್ಟ್ಯಾಂಡರ್ಡ್‌ ಮತ್ತು ಹೈ ಸ್ಪೀಡ್‌ ಹೀಗೆ ಮೂರು ರೀತಿಯ ಪ್ರಿಂಟಿಂಗ್ ಆಯ್ಕೆಗಳಿವೆ. ಹೈ ಕ್ವಾಲಿಟಿ ಮೋಡ್‌ನಲ್ಲಿ ಅಕ್ಷರದ ಶಾರ್ಪ್‌ನೆಸ್‌ ಉತ್ತಮವಾಗಿದೆ. ಕಾಂಟ್ಯಾಕ್ಟ್‌ ಇಮೇಜ್ ಸೆನ್ಸರ್‌ (ಸಿಐಎಸ್‌) ಮತ್ತು ಎಲ್‌ಇಡಿ ಲೈಟ್‌ ಇರುವುದರಿಂದ ಸ್ಕ್ಯಾನ್‌ ಅಯ್ಕೆ ಚೆನ್ನಾಗಿ ಕೆಲಸ ಮಾಡುತ್ತದೆ. ಸ್ಕ್ಯಾನಿಂಗ್‌ ರೆಸಲ್ಯೂಷನ್‌ 1200X2400ಡಿಪಿಐ ಇದೆ.

Epson EcoTank L6490 A4 Ink Tank Printer
Epson EcoTank L6490 A4 Ink Tank Printer

ಲೇಸರ್‌ ಪ್ರಿಂಟರ್‌ಗೆ ಹೋಲಿಸಿದರೆ ಇಂಕ್‌ ಟ್ಯಾಂಕ್‌ ಪ್ರಿಂಟರ್‌ ಕಡಿಮೆ ಬೆಲೆಗೆ ಪ್ರಿಂಟ್‌ ತೆಗೆಯಬಹುದು. ಕಲರ್‌ ಪ್ರಿಂಟೌಟ್‌ ಒಂದಕ್ಕೆ 48 ಪೈಸೆ, ಬ್ಲಾಕ್‌ ಆ್ಯಂಡ್ ವೈಟ್‌ ಪ್ರಿಂಟೌಟ್‌ಗೆ 12 ಪೈಸೆ ಖರ್ಚು ಬೀಳುತ್ತದೆ. ಇದಕ್ಕೆ ಇಂಕ್‌ ಭರ್ತಿ ಮಾಡುವುದು ಬಹಳ ಸುಲಭ. 70ಎಂಎಲ್‌ ಬ್ಲಾಕ್‌ ಇಂಕ್‌ ಬಾಟಲ್‌ ಮೂಲಕ 6 ಸಾವಿರ ಪೇಜ್‌ ಪ್ರಿಂಟ್ ಮಾಡಬಹುದು. 127ಎಂಎಲ್‌ ಬ್ಲಾಕ್‌ ಇಂಕ್‌ ಬಟಲ್‌ನಲ್ಲಿ 7,500 ಪೇಜ್‌ ಪ್ರಿಂಟ್‌ ಮಾಡಬಹುದು. ಸಯಾನ್‌, ಮೆಜಂತಾ ಮತ್ತು ಯೆಲ್ಲೊ ಇಂಕ್‌ ಬಾಟಲ್‌ ಒಳಗೊಂಡು ಒಟ್ಟು 6 ಸಾವಿರ ಪೇಜ್‌ ಪ್ರಿಂಟ್‌ ಮಾಡಬಹುದು. ಬ್ಲಾಕ್‌ ಇಂಕ್ ಬಾಟಲ್‌ ಬೆಲೆ ₹309 ಮತ್ತು ಕಲರ್‌ ಇಂಕ್‌ ಒಂದರ ಬೆಲೆ ₹449 ಇದೆ.

ಡ್ರಾಫ್ಟ್‌ ಪ್ರಿಂಟಿಂಗ್‌ ಆಯ್ಕೆಯಲ್ಲಿ ಪ್ರತಿ ಒಂದು ನಿಮಿಷಕ್ಕೆ 37 ಪುಟ ಹಾಗೂ ಸ್ಟ್ಯಾಂಡರ್ಡ್‌ ಪ್ರಿಂಟ್‌‌ ಆಯ್ಕೆಯಲ್ಲಿ ಪ್ರತಿ ಒಂದು ನಿಮಿಷಕ್ಕೆ 23 ಪುಟ ಪ್ರಿಂಟ್‌ ಆಗುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಇದನ್ನು ಪರೀಕ್ಷಿಸಿದಾಗ, ಸ್ಟ್ಯಾಂಡರ್ಡ್‌ ಪ್ರಿಂಟ್‌ ಆಯ್ಕೆಯಲ್ಲಿ 3 ನಿಮಿಷಕ್ಕೆ ಹಾಳೆಯ ಎರಡೂ ಕಡೆಯಲ್ಲಿ ಒಟ್ಟಾರೆ 75 ಪುಟ (ಬ್ಲಾಕ್ ಆ್ಯಂಡ್ ವೈಟ್) ಪ್ರಿಂಟ್ ಆಗಿದೆ. ಅಂದರೆ ಪ್ರತಿ ಒಂದು ನಿಮಿಷಕ್ಕೆ  ಸರಾಸರಿ 25 ಪುಟ (ಹಾಳೆಯ ಎರಡೂ ಕಡೆಗಳಲ್ಲಿ) ಪ್ರಿಂಟ್‌ ಆದಂತಾಗಿದೆ. ಹಾಳೆಯ ಒಂದೇ ಕಡೆ ಪ್ರಿಂಟ್‌ ಆಗಲು ಕಡಿಮೆ ಸಮಯ ಸಾಲುವುದರಿಂದ ಕಂಪನಿ ಹೇಳಿಕೊಂಡಿರುವುದಕ್ಕಿಂತಲೂ ಹೆಚ್ಚೇ ಹಾಳೆ ಪ್ರಿಂಟ್ ಆಗಲಿದೆ. ಒಟ್ಟಾರೆಯಾಗಿ ಕಡಿಮೆ ಖರ್ಚು, ಗುಣಮಟ್ಟದ ಪ್ರಿಂಟಿಂಗ್‌, ಪ್ರಿಂಟಿಂಗ್‌ ವೇಗ, ಇಂಕ್‌ ರಿ ಫಿಲ್ಲಿಂಗ್‌ ನಿರ್ವಹಣೆ, ಎಡಿಎಫ್‌ ಮತ್ತು ಡುಪ್ಲೆಕ್ಸ್‌ ಪ್ರಿಂಟಿಂಗ್ ಆಯ್ಕೆ... ಹೀಗೆ ಎಲ್ಲಾ ದೃಷ್ಟಿಯಿಂದಲೂ ಹಣಕ್ಕೆ ತಕ್ಕ ಮೌಲ್ಯ ತಂದುಕೊಡಲಿದೆ. ಬೆಲೆ ₹33,999 ಇದೆ.

ವೈಶಿಷ್ಟ್ಯಗಳು

* ಪ್ರಿಂಟ್‌, ಸ್ಕ್ಯಾನ್‌, ಕಾಪಿ, ಫ್ಯಾಕ್ಸ್‌ ವಿತ್ ಎಡಿಎಫ್‌

* ಆಟೊ ಡ್ಯುಪ್ಲೆಕ್ಸ್ ಪ್ರಿಂಟಿಂಗ್‌

* ವೈಫೈ & ವೈಫೈ ಡೈರೆಕ್ಟ್‌

* ಎಪ್ಸನ್‌ ಹೀಟ್ ಫ್ರೀ ತಂತ್ರಜ್ಞಾನ

* ವಾರಂಟಿ: 1 ವರ್ಷ ಅಥವಾ 1 ಲಕ್ಷ ಪೇಜ್‌ (ಯಾವುದು ಮೊದಲೊ ಅದರಂತೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT