ಒಂದು ಸಾಧನ ಎರಡು ಕೆಲಸ

7

ಒಂದು ಸಾಧನ ಎರಡು ಕೆಲಸ

ಯು.ಬಿ. ಪವನಜ
Published:
Updated:
Deccan Herald

ಸ್ಮಾ ರ್ಟ್ರೋನ್ ಕಂಪನಿ ಹೈದರಾಬಾದ್ ಮೂಲದ ಒಂದು ಅಪ್ಪಟ ಭಾರತೀಯ ಕಂಪನಿ. ಕ್ರಿಕೆಟ್ ಪ್ರಿಯರ ಆರಾಧ್ಯ ದೈವ ಸಚಿನ್ ತೆಂಡೂಲ್ಕರ್ ಈ ಕಂಪನಿಯ ಒಬ್ಬ ಪ್ರಮುಖ ಹೂಡಿಕೆದಾರ. ಇದರ ಕೆಲವು ಉತ್ಪನ್ನಗಳನ್ನು ಈ ಅಂಕಣದಲ್ಲಿ ವಿಮರ್ಶಿಸಲಾಗಿತ್ತು. ಈ ಸಲ ವಿಮರ್ಶೆ ಮಾಡುತ್ತಿರುವುದು ಸ್ಮಾರ್ಟ್ರೋನ್ ಕಂಪನಿಯವರು ತಯಾರಿಸಿರುವ, ಲ್ಯಾಪ್‌ಟಾಪ್ ಆಗಿಯೂ ಟ್ಯಾಬ್ಲೆಟ್ ಆಗಿಯೂ ಕೆಲಸ ಮಾಡಬಲ್ಲ, ಅಂದರೆ ಪರಿವರ್ತಿಸಬಲ್ಲ 2 ಇನ್ 1 ಟಿ.ಬುಕ್ ಫ್ಲೆಕ್ಸ್ (Smartron 2-in-1 t.Book Flex) ಅನ್ನು.

ಇದು ಈಗಾಗಲೇ ತಿಳಿಸಿದಂತೆ ಒಂದು 2-ಇನ್-1. ಅಂದರೆ ಇದನ್ನು ಲ್ಯಾಪ್‌ಟಾಪ್ ಮಾದರಿಯಲ್ಲಿ ಅಥವಾ ಟ್ಯಾಬ್ಲೆಟ್ ಮಾದರಿಯಲ್ಲಿ ಬಳಸಬಹುದು. ಇದರ ರಚನೆ ಮತ್ತು ವಿನ್ಯಾಸ ಅತ್ಯುತ್ತಮವಾಗಿದ್ದು ಮೊದಲ ನೋಟದಲ್ಲೇ ಮನಸೆಳೆಯುವಂತಿದೆ. ಕೀಲಿಮಣೆಗೆ ಟ್ಯಾಬ್ಲೆಟ್ ಗಣಕವನ್ನು ಜೋಡಿಸಿ ಅದನ್ನು ಲ್ಯಾಪ್‌ಟಾಪ್ ಮಾದರಿಯಲ್ಲಿ ಬಳಸಬಹುದು. ಕೀಲಿಮಣೆಯಲ್ಲಿ ಸ್ಪರ್ಶಸಂವೇದಿ ಪ್ಯಾಡ್ ಕೂಡ ಇದೆ. ಕೆಲಸ ಮುಗಿದಾಗ ಲ್ಯಾಪ್‌ಟಾಪ್ ಮಾದರಿಯಲ್ಲಿ ಮಡಚಬಹುದು. ಹೀಗೆ ಮಡಚಿದಾಗ ಸುಂದರವಾಗಿ ಕಂಡುಬರುತ್ತದೆ. ಕೀಲಿಮಣೆಯನ್ನು ಟ್ಯಾಬ್ಲೆಟ್ ಭಾಗಕ್ಕೆ ಜೋಡಿಸುವಲ್ಲಿ ಅಯಸ್ಕಾಂತವಿದೆ. ಟ್ಯಾಬ್ಲೆಟ್ ಭಾಗದ ಹಿಂಭಾಗದಲ್ಲಿ ಹೊರಕ್ಕೆ ತೆಗೆದು ಟ್ಯಾಬ್ಲೆಟ್‌ಗೆ ಬೆಂಬಲವಾಗಿ ನಿಲ್ಲಿಸಲು ಒಂದು ಸ್ಟ್ಯಾಂಡ್ ಇದೆ. ಅದನ್ನು ಸ್ವಲ್ಪ ಎಳೆದು ನಿಲ್ಲಿಸಿದಾಗ ಇದು ನೋಡಲು ಲ್ಯಾಪ್‌ಟಾಪ್‌ನಂತೆ ಕಾಣಿಸುತ್ತದೆ. ಎಲ್ಲವನ್ನೂ ಮಡಚಬಹುದು. ಟ್ಯಾಬ್ಲೆಟ್ ಇರಲಿ, ಮಡಚಿದಾಗ ಇರಲಿ, ಕೈಯಲ್ಲಿ ಹಿಡಿದುಕೊಳ್ಳುವ ಅನುಭವ ತುಂಬ ಚೆನ್ನಾಗಿದೆ.

ಇದರ ಕೀಲಿಮಣೆಯಲ್ಲಿ ಬ್ಲೂಟೂತ್ ಸೌಲಭ್ಯವಿದೆ. ಅಂದರೆ ಕೀಲಿಮಣೆಯನ್ನು ಅದರ ಟ್ಯಾಬ್ಲೆಟ್ ದೇಹಕ್ಕೆ ಅಯಸ್ಕಾಂತದ ಮೂಲಕ ಹಾಗೂ ಅದರಲ್ಲಿರುವ ವಿದ್ಯುತ್ ಸಂಪರ್ಕಗಳ ಮೂಲಕವೇ ಜೋಡಿಸಬೇಕಾಗಿಲ್ಲ. ಬ್ಲೂಟೂತ್ ವಿಧಾನದಲ್ಲಿ ಜೋಡಿಸಿದಾಗ ಕೀಲಿಮಣೆಯನ್ನು ಸ್ವಲ್ಪ ದೂರ ಇಟ್ಟುಕೊಳ್ಳಬಹುದು. ಈ ಕೀಲಿಮಣೆ ತುಂಬ ನಾಜೂಕಾಗಿದೆ. ತುಂಬ ಟೈಪ್ ಮಾಡಬೇಕಿದ್ದರೆ ಒಂದು ಪ್ರತ್ಯೇಕ ಕೀಲಿಮಣೆ ಜೋಡಿಸಿಕೊಂಡರೆ ಉತ್ತಮ.

ನನಗೆ ವಿಮರ್ಶೆಗೆ ಬಂದ ಮಾದರಿಯ ಜೊತೆ ಒಂದು ಆಕ್ಟಿವ್ ಸ್ಟೈಲಸ್ ಪೆನ್ ನೀಡಿದ್ದಾರೆ. ಇದನ್ನು ಬಳಸಿ ಪರದೆಯ ಮೇಲೆ ಬರೆಯುವುದು, ಚಿತ್ರ ಬಿಡಿಸುವುದು, ಮಾಡಬಹುದು. ಆದರೆ ಇದನ್ನು ಪ್ರತ್ಯೇಕವಾಗಿ ಕೊಳ್ಳಬೇಕು.

ಇದರಲ್ಲಿ ಬಳಕೆಯಾಗಿರುವುದು ಇಂಟೆಲ್ ಐ5, 64 ಬಿಟ್‌ನ ಪ್ರೋಸೆಸರ್ (ಐ3 ಬಳಸಿರುವ ಇನ್ನೊಂದು ಸ್ವಲ್ಪ ಕಡಿಮೆ ಬೆಲೆಯ ಮಾದರಿಯೂ ಇದೆ). 4 ಗಿಗಾಬೈಟ್ ಪ್ರಾಥಮಿಕ ಮೆಮೊರಿ ಇದೆ. ಅಂತೆಯೇ ಬಳಕೆಯ ವೇಗ ತಕ್ಕಮಟ್ಟಿಗೆ ಉತ್ತಮವಾಗಿದೆ. ಸ್ಪರ್ಶಪರದೆಯ ಸಂವೇದನೆ ಚೆನ್ನಾಗಿದೆ. ಎಲ್ಲ ನಮೂನೆಯ ವಿಡಿಯೊ ವೀಕ್ಷಣೆ, ಕಡಿಮೆ ಶಕ್ತಿಯನ್ನು ಬೇಡುವ ಆಟಗಳನ್ನು ಆಡುವ ಅನುಭವ ಎಲ್ಲ ಚೆನ್ನಾಗಿವೆ. ಇದರಲ್ಲಿ ಇರುವುದು 128 ಗಿಗಾಬೈಟ್ ಸಂಗ್ರಹ ಶಕ್ತಿಯ ಎಸ್‌ಎಸ್‌ಡಿ. ಅಧಿಕ ಸಂಗ್ರಹ ಮೆಮೊರಿಗೆ ಮೈಕ್ರೊಎಸ್‌ಡಿ ಕಾರ್ಡ್ ಹಾಕಿಕೊಳ್ಳಬಹುದು ಮಾತ್ರವಲ್ಲ ಯುಎಸ್‌ಬಿ ಮೂಲಕ ಹಾರ್ಡ್‌ಡಿಸ್ಕ್ ಕೂಡ ಜೋಡಿಸಿ ಬಳಸಬಹುದು. ಲೇಖನ ತಯಾರಿ, ಮೈಕ್ರೋಸಾಫ್ಟ್ ಆಫೀಸ್ ತಂತ್ರಾಂಶ ಬಳಕೆ, ಇಮೇಲ್‌, ಜಾಲತಾಣ ವೀಕ್ಷಣೆ, ವಿಡಿಯೊ ವೀಕ್ಷಣೆ –ಇಂತಹ ಕೆಲಸಗಳಿಗೆ ಇದು ಧಾರಾಳ ಸಾಕು. ಕಡಿಮೆ ಶಕ್ತಿಯನ್ನು ಬೇಡುವ ಪ್ರೋಗ್ರಾಮಿಂಗ್‌, ಗ್ರಾಫಿಕ್ಸ್ ಕೆಲಸಗಳಿಗೂ ಸಾಕು. ಅಧಿಕ ಗ್ರಾಫಿಕ್ಸ್ ಶಕ್ತಿಯನ್ನು ಬೇಡುವ ಆಟಗಳನ್ನು ಆಡಲು ಕಷ್ಟ. ಅಂತೆಯೇ ವಿಡಿಯೊ ಎಡಿಟ್ ಮಾಡಲೂ ಇದರ ಶಕ್ತಿ ಸ್ವಲ್ಪ ಕಡಿಮೆ ಅನ್ನಿಸುತ್ತದೆ.

ಹೈಡೆಫಿನಿಶನ್ ಮಾತ್ರವಲ್ಲ 4k ವಿಡಿಯೊಗಳನ್ನೂ ವೀಕ್ಷಿಸಬಹುದು. ಇದರ ಆಡಿಯೊ ಎಂಜಿನ್ ಚೆನ್ನಾಗಿದೆ. ಉತ್ತಮ ಗುಣಮಟ್ಟದ ಇಯರ್‌ಫೋನ್ ಜೋಡಿಸಿ ಆಲಿಸಿದಾಗ ಧ್ವನಿಯ ಗುಣಮಟ್ಟ ಉತ್ತಮವಾಗಿಯೇ ಇತ್ತು. ಅಂದರೆ ಉತ್ತಮ ಸಂಗೀತ ಆಲಿಸುವುದು ಅಥವಾ ಸಿನಿಮಾ ವೀಕ್ಷಣೆ ನಿಮ್ಮ ಪ್ರಮುಖ ಅಗತ್ಯಗಳಲ್ಲಿ ಒಂದಾಗಿದ್ದಲ್ಲಿ ಇದನ್ನು ಖಂಡಿತ ಕೊಳ್ಳಬಹುದು. ಪರದೆಯಲ್ಲಿ ಚಿತ್ರಗಳ ಪುನರುತ್ಪತ್ತಿ ತುಂಬ ಚೆನ್ನಾಗಿದೆ.

ಇದರ ಬ್ಯಾಟರಿ ಶಕ್ತಿಶಾಲಿಯಾಗಿದೆ. ಸುಮಾರು 7 ರಿಂದ 9 ಗಂಟೆ ಬಾಳಿಕೆ ಬರುತ್ತದೆ. ಬ್ಯಾಟರಿ ಚಾರ್ಜ್ ಮಾಡಲು ಪ್ರತ್ಯೇಕ ಚಾರ್ಜರ್ ನೀಡಿದ್ದಾರೆ. ಅದನ್ನು ಯುಎಸ್‌ಬಿ-ಸಿ ಕಿಂಡಿ ಮೂಲಕ ಜೋಡಿಸಬೇಕು.

ಇದರಲ್ಲಿ ವಿಜಿಎ ಅಥವಾ ಎಚ್‌ಡಿಎಂಐ ಕಿಂಡಿಗಳಿಲ್ಲ. ಬದಲಿಗೆ ಯುಎಸ್‌ಬಿ-ಸಿ ಥಂಡರ್‌ಬೋಲ್ಟ್‌ ಕಿಂಡಿ ನೀಡಿದ್ದಾರೆ. ಎಂಎಚ್‌ಎಲ್ ಕೇಬಲ್ ಮೂಲಕ ಎಚ್‌ಡಿಎಂಐ ಸೌಲಭ್ಯವಿರುವ ಪ್ರೊಜೆಕ್ಟರ್ ಅಥವಾ ಟಿ.ವಿ.ಗೆ ಜೋಡಿಸಬಹುದು.

ಒಟ್ಟಿನಲ್ಲಿ ಹೇಳುವುದಾದರೆ ನಿಮಗೆ ತೆಳ್ಳನೆಯ, ಹಗುರವಾದ, ಒಂದು ಮಟ್ಟಿಗೆ ಶಕ್ತಿಶಾಲಿಯಾದ, ಸ್ಪರ್ಶಪರದೆಯುಳ್ಳ, 2-ಇನ್-1 ಬೇಕಿದ್ದರೆ ಇದನ್ನು ಕೊಳ್ಳಬಹುದು. 

**

ವಾರದ ಆ್ಯಪ್‌ (app): ಬ್ರಿಲಿಯಂಟ್
ಮೆದುಳಿಗೆ ಕೆಲಸ ಕೊಟ್ಟಷ್ಟೂ ಅದು ಹರಿತವಾಗುತ್ತದೆ. ಅದಕ್ಕಾಗಿ ಸಮಸ್ಯೆಗಳನ್ನು ಪರಿಹಾರ ಮಾಡುವುದು, ಚದುರಂಗ ಆಡುವುದು, ಇತ್ಯಾದಿ ಕೆಲಸ ಮಾಡುತ್ತಿದ್ದರೆ ಉತ್ತಮ. ಸಮಸ್ಯೆಗಳ ಪರಿಹಾರಕ್ಕೆ ಹಲವು ಕಿರುತಂತ್ರಾಂಶಗಳಿವೆ. ನೀವು ವಿಜ್ಞಾನ ಮತ್ತು ಗಣಿತದ ವಿದ್ಯಾರ್ಥಿ ಅಥವಾ ಆಸಕ್ತರಾಗಿದ್ದರಂತೂ ನಿಮ್ಮ ಆಯ್ಕೆಯ ಅವಕಾಶಗಳು ಜಾಸ್ತಿಯಾಗುತ್ತವೆ. ವಿಜ್ಞಾನ, ಗಣಿತ, ತರ್ಕ, ಅಲ್ಗೋರಿತಂ, ಗಣಕ ವಿಜ್ಞಾನ, ಇತ್ಯಾದಿ ವಿಷಯಗಳಲ್ಲಿ ಸಮಸ್ಯೆಗಳ ಪರಿಹಾರ ಮಾಡುವ ಮೂಲಕ ನಿಮ್ಮ ಬುದ್ಧಿಶಕ್ತಿಯನ್ನು ಹೆಚ್ಚಸಲು ಸಹಾಯ ಮಾಡುವ ಒಂದು ಕಿರುತಂತ್ರಾಂಶ ನಿಮಗೆ ಬೇಕೇ? ಹೌದಾದಲ್ಲಿ ಗೂಗಲ್‌ ಪ್ಲೇ ಸ್ಟೋರಿಗೆ ಭೇಟಿ ನೀಡಿ Brilliant ಎಂದು ಹುಡುಕಿ ಅಥವಾ http://bit.ly/gadgetloka341 ಜಾಲತಾಣಕ್ಕೆ ಭೇಟಿ ನೀಡಿ. ಇದರಲ್ಲಿ ಕೆಲವು ಪ್ರಾಥಮಿಕ ಹಂತಗಳು ಮಾತ್ರ ಉಚಿತ. ಹೆಚ್ಚಿನ ಹಂತಗಳಿಗೆ ಹಣ ನೀಡಬೇಕು. ಇದೊಂದು ಉತ್ತಮ ಕಿರುತಂತ್ರಾಂಶ.

ಗ್ಯಾಜೆಟ್ ಪದ: Wifi = ವೈಫೈ
ಒಂದು ಸೀಮಿತ ಪ್ರದೇಶದಲ್ಲಿರುವ ಕಂಪ್ಯೂಟರ್‌, ಲ್ಯಾಪ್‌ಟಾಪ್, ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್ ಇತ್ಯಾದಿಗಳು ನಿಸ್ತಂತು (wireless) ವಿಧಾನದ ಮೂಲಕ ಒಂದಕ್ಕೊಂದು ಅಥವಾ ಅಂರ್ತಜಾಲಕ್ಕೆ ಸಂಪರ್ಕಹೊಂದುವ ಒಂದು ಶಿಷ್ಟತೆ.

ಗ್ಯಾಜೆಟ್ ತರ್ಲೆ: ಹುಡುಗಿಯರು 
ಮೊದಲು- ಬ್ರಿಗೇಡ್ ಎಂಜಿ‌ರೋಡ್‌ಗೆ ಹೋಗುವಾಗ ಹಾಕಿಕೊಳ್ಳಲು ಎಂದು ಸ್ಪೆಷಲ್ ಡ್ರೆಸ್ ತೆಗೆದುಕೊಳ್ಳುತ್ತಿದ್ದರು.
ಆಮೇಲೆ – ಮಾಲ್‌ಗಳಿಗೆ ಹೋಗುವಾಗ ಹಾಕಿಕೊಳ್ಳಲು ಎಂದು ಪ್ರತ್ಯೇಕ ಡ್ರೆಸ್ ತೆಗೆದುಕೊಳ್ಳಲು ಪ್ರಾರಂಭಿಸಿದರು. 
ಈಗ - ಇನ್‌‌ಸ್ಟಾಗ್ರಾಮ್‌ನಲ್ಲಿ ಫೋಟೊ ಅಪ್ಲೋಡ್ ಮಾಡಲೆಂದೇ ಪ್ರತ್ಯೇಕ‌‌ ಡ್ರೆಸ್ ತೆಗೆದುಕೊಳ್ಳುತ್ತಿದ್ದಾರೆ.
(ಫೇಸ್‌ಬುಕ್‌ನಿಂದ ಕದ್ದದ್ದು)

ಗ್ಯಾಜೆಟ್ ಸಲಹೆ
ಚೈತನ್ಯ ಭಗತ್ ಅವರ ಪ್ರಶ್ನೆ:
ನನ್ನಲ್ಲಿ ವಿಸಿಡಿ ಇದೆ. ಅದನ್ನು ಡಿವಿಡಿಗೆ ಪರಿವರ್ತಿಸುವುದು ಹೇಗೆ?
ಉ: www.videolan.org ಜಾಲತಾಣದಲ್ಲಿ ಲಭ್ಯವಿರುವ VLC PLayer ನಲ್ಲಿರುವ Convert/Save ಎಂಬ ಆಯ್ಕೆಯನ್ನು ಬಳಸಿ. 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !