ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

OnePlus Pad: ಮನಗೆದ್ದ ಒನ್‌ಪ್ಲಸ್‌ನ ‘ಮೊದಲ ಶಿಶು’

Published 13 ಜೂನ್ 2023, 10:20 IST
Last Updated 13 ಜೂನ್ 2023, 10:20 IST
ಅಕ್ಷರ ಗಾತ್ರ

ಪ್ರೀಮಿಯಂ ಸ್ಮಾರ್ಟ್‌ಫೋನ್‌ ವಿಭಾಗದಲ್ಲಿ ಜನಪ್ರಿಯವಾಗಿರುವ ಒನ್‌ಪ್ಲಸ್‌ ಕಂಪನಿಯು ತನ್ನ ಮೊದಲ ಟ್ಯಾಬ್ಲೆಟ್‌ ‘ಒನ್‌ಪ್ಲಸ್‌ ಪ್ಯಾಡ್‌’ (OnePlus Pad) ಈಚೆಗೆಷ್ಟೇ ಬಿಡುಗಡೆ ಮಾಡಿದೆ. ಕಾರ್ಯಾಚರಣಾ ವೇಗ, ಬ್ಯಾಟರಿ ಬಾಳಿಕೆ, ಗುಣಮಟ್ಟದ ದೃಷ್ಟಿಯಿಂದ ಉತ್ತಮವಾಗಿದೆ. ಆದರೆ ಕ್ಯಾಮೆರಾದ ಕ್ಲಾರಿಟಿ ಮಾತ್ರ ತಕ್ಕಮಟ್ಟಿಗೆ ಇದೆ.

ಇದರ ಅಲ್ಯೂಮಿನಿಯಂ ಬಾಡಿಯು ಹ್ಯಾಲೊ ಗ್ರೀನ್ ಬಣ್ಣದಲ್ಲಿದೆ. ಕೇವಲ 552 ಗ್ರಾಂ ತೂಗುವ ಈ ಟ್ಯಾಬ್ ಅನ್ನು ಸುಲಭವಾಗಿ ಒಯ್ಯಬಹುದು. 11.61-ಇಂಚಿನ ಅಮೋಎಲ್‌ಇಡಿ ಡಿಸ್‌ಪ್ಲೇ 144Hz ರಿಫ್ರೆಶ್ ರೇಟ್, 2800x2000 ರೆಸಲ್ಯೂಷನ್ ಹೊಂದಿದೆ. ಮೀಡಿಯಾಟೆಕ್ ಡೈಮೆನ್ಸಿಟಿ 9000 ಚಿಪ್‌ಸೆಟ್‌ನಿಂದ ಈ ಟ್ಯಾಬ್ಲೆಟ್ ಚಾಲಿತವಾಗಿದ್ದು, ವೇಗವಾದ ಮತ್ತು ಪರಿಣಾಮಕಾರಿ ಕಾರ್ಯಕ್ಷಮತೆಯನ್ನು ನೀಡುತ್ತದೆ. 8ಜಿಬಿ ರ್‍ಯಾಮ್‌+128ಜಿಬಿ ಸ್ಟೋರೇಜ್‌ ಹಾಗೂ 12ಜಿಬಿ ರ್‍ಯಾಮ್‌ +256ಜಿಬಿ ಸ್ಟೋರೇಜ್‌ ಆಯ್ಕೆಯಲ್ಲಿ ಈ ಟ್ಯಾಬ್‌ ಲಭ್ಯವಿದೆ. ಈ ಟ್ಯಾಬ್ಲೆಟ್‌ ವೈ-ಫೈ 6ಗೆ (Wi-fi 6) ಮಾತ್ರವೇ ಬೆಂಬಲಿಸುತ್ತದೆ. ಸಿಮ್ ಹಾಕುವ ವ್ಯವಸ್ಥೆ ಇಲ್ಲ. ಆದರೆ, ಸೆಲ್ಯುಲರ್‌ ಡೇಟಾ ಶೇರಿಂಗ್ ಸೌಲಭ್ಯ ಇರುವುದರಿಂದ ಸ್ಮಾರ್ಟ್‌ಫೋನ್‌ನ 5ಜಿ ಡೇಟಾವನ್ನೇ ಬಳಸಬಹುದು. ಆದರೆ, ಟ್ಯಾಬ್‌ ಮತ್ತು ಸ್ಮಾರ್ಟ್‌ಫೋನ್‌ ನಡುವೆ 1 ರಿಂದ 5 ಮೀಟರ್‌ ಅಂತರ ಇದ್ದರೆ ಮಾತ್ರ ಈ ರೀತಿ ಡೇಟಾ ಶೇರಿಂಗ್ ಸಾಧ್ಯವಾಗುತ್ತದೆ.

ಕ್ಯಾಮೆರಾ: 13.1 ಎಂಪಿ ಕ್ಯಾಮೆರಾ ಆಟೊಫೋಕಸ್‌ ಮತ್ತು ಎಲ್‌ಇಡಿ ಫ್ಲ್ಯಾಷ್‌ ಹೊಂದಿದೆ. 4k–30fps ವರೆಗೂ ವಿಡಿಯೊಗಳನ್ನು ರೆಕಾರ್ಡ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಮತ್ತು  ಫ್ರಂಟ್‌ ಕ್ಯಾಮೆರಾ 8ಎಂಪಿ ಅಲ್ಟ್ರಾವೈಡ್‌ ಆಯ್ಕೆ ಹೊಂದಿದ್ದು, 1080ಪಿಕ್ಸಲ್‌ಗಷ್ಟೇ ಸೀಮಿತವಾಗಿದೆ. ಬೆಲೆಯ ದೃಷ್ಟಿಯಿಂದ ನೋಡುವುದಾದರೆ ಈ ಕ್ಯಾಮೆರಾಗಳ ಗುಣಮಟ್ಟ ಕಡಿಮೆ. ಮನೆಯೊಳಗೆ ತೆಗೆದ ಚಿತ್ರದಲ್ಲಿ ಸ್ಪಷ್ಟತೆಯ ಕೊರತೆ ಎದ್ದು ಕಾಣುತ್ತದೆ. ಕ್ಯಾಮೆರಾದ ಗುಣಮಟ್ಟ ಸುಧಾರಿಸಿದರೆ ಇದು ಪರಿಪೂರ್ಣವಾದ ಟ್ಯಾಬ್‌ ಆಗಲಿದೆ. ಫ್ರಂಟ್‌ ಕ್ಯಾಮೆರಾ 8ಎಂಪಿ ಅಲ್ಟ್ರಾವೈಡ್‌ ಆಯ್ಕೆ ಹೊಂದಿದೆ. 

ಆಂಡ್ರಾಯ್ಡ್‌ 13 ಆಧಾರಿತ OxygenOS 13.1 ಒಎಸ್‌ (OS) ಮೂಲಕ ಇದು ಕೆಲಸಮಾಡುತ್ತದೆ. ಸಾಫ್ಟ್‌ವೇರ್ ಮತ್ತು ಯೂಸರ್–ಇಂಟರ್‌ಫೇಸ್(UI) ಚೆನ್ನಾಗಿದೆ. ಫ್ಲೋಟಿಂಗ್ ವಿಂಡೊ, ರಿ–ಸೈಜೆಬಲ್‌ ವಿಂಡೊ ಮತ್ತು ಸ್ಪ್ಲಿಟ್ ಸ್ಕ್ರೀನ್‌ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಟ್ಯಾಬ್ಲೆಟ್ ದೊಡ್ಡದಾದ 9510 ಎಂಎಎಚ್‌ ಬ್ಯಾಟರಿ 67 ವಾಟ್‌ ಸೂಪರ್ ವಿಒಒಸಿ ಚಾರ್ಜಿಂಗ್‌ ಬೆಂಬಲಿಸುತ್ತದೆ. ಬ್ಯಾಟರಿ ಪೂರ್ತಿ ಚಾರ್ಜ್ ಆಗಲು 90 ನಿಮಿಷ ಬೇಕು. ಒಮ್ಮೆ  ಪೂರ್ತಿ ಚಾರ್ಜ್‌ ಮಾಡಿದರೆ 10 ಗಂಟೆ ಬಳಸಬಹುದು. ಸರಾಸರಿ ಬಳಕೆಯನ್ನು ಆಧರಿಸಿ ಬ್ಯಾಟರಿ ಬಾಳಿಕೆ ಅವಧಿ ವ್ಯತ್ಯಾಸ ಆಗುತ್ತದೆ. ಆಡಿಯೊ ಮತ್ತು ವಿಷ್ಯುವಲ್‌ ಗುಣಮಟ್ಟ ಉತ್ತಮಪಡಿಸಲು ಡಾಲ್ಬಿ ವಿಷನ್‌ ಮತ್ತು ಡಾಲ್ಬಿ ಅಟ್ಮೋಸ್‌ ತಂತ್ರಜ್ಞಾನ ಬಳಸಲಾಗಿದೆ. ಡೈಮೆನ್ಸಿಟಿ 9000 ಚಿಪ್‌ಸೆಟ್‌ ಇರುವುದರಿಂದ ಹೆಚ್ಚಿನ ರೆಸಲ್ಯೂಷನ್‌ ಇರುವ ಗೇಮ್‌ಗಳನ್ನು ಆಡುವಾಗ, ವಿಡಿಯೊ ನೋಡುವಾಗ ಯಾವುದೇ ಅಡಚಣೆ ಆಗಲಿಲ್ಲ.

ರಿವ್ಯು ಯುನಿಟ್‌ನಲ್ಲಿ ಒನ್‌ಪ್ಲಸ್‌ ಟ್ಯಾಬ್‌ ಜೊತೆಗೆ ಮ್ಯಾಗ್ನೆಟಿಕ್‌ ಕೀಬೋರ್ಡ್‌ ಮತ್ತು ಒನ್‌ಪ್ಲಸ್ ಸ್ಟೈಲೊ ಪೆನ್‌ ನೀಡಲಾಗಿತ್ತು. ಡ್ರಾಯಿಂಗ್‌, ಸ್ಕೆಚ್‌ ಮಾಡಲು ಸ್ಟೈಲಸ್‌ ಪೆನ್‌ ಹೆಚ್ಚು ಉಪಯುಕ್ತವಾಗಿದೆ. ಬಳಕೆ ಸುಲಭವಾಗಿದ್ದು, ಚಾರ್ಜ್‌ ಮಾಡುವುದೂ ಸರಳವಾಗಿಯೇ ಇದೆ. ಆದರೆ ಟ್ಯಾಬ್‌ ಜೊತೆಗೆ ಕೀಬೋರ್ಡ್‌ ಮತ್ತು ಪೆನ್‌ ಬರುವುದಿಲ್ಲ. ಪ್ರತ್ಯೇಕವಾಗಿ ಖರೀದಿಸಬೇಕು. ಪೆನ್‌ ಬೆಲೆ ₹ 6,999. ಆರಾಮದಾಯಕ ಟೈಪಿಂಗ್ ಅನುಭವ ಪಡೆಯಲು ಮ್ಯಾಗ್ನೆಟಿಕ್‌ ಟೈಪಿಂಗ್‌ ಪ್ಯಾಡ್‌ ಬಳಸಬಹುದು. ಇದರ ಬೆಲೆ ₹7,999 ಇದೆ. ಕೀಬೋರ್ಡ್‌ನಲ್ಲಿ ಇರುವ ಮೂರು ಪಿನ್‌ಗಳಿಗೆ ಟ್ಯಾಬ್‌ ಅನ್ನು ಸಂಪರ್ಕಿಸಿ ಕೀಬೋರ್ಡ್‌ ಬಳಕೆ ಆರಂಭಿಸಬೇಕು. ವಯರ್‌ಲೆಸ್‌ ಆಗಿ ಬ್ಲುಟೂತ್‌ ಮೂಲಕ ಸಂಪರ್ಕಿಸಲು ಆಗುವುದಿಲ್ಲ.

3.5ಎಂಎಂ ಹೆಡ್‌ಫೋನ್‌ ಜಾಕ್‌ ನೀಡಿಲ್ಲ. ಹೀಗಾಗಿ ಬ್ಲುಟೂತ್‌ ನೆಕ್‌ಬ್ಯಾಂಡ್‌/ಇಯರ್‌ ಬಡ್‌ ಬಳಸಬೇಕು. ಟ್ಯಾಬ್‌ ಅನ್‌ಲಾಕ್‌ ಮಾಡಲು ಫಿಂಗರ್‌ಪ್ರಿಂಟ್‌ ಸೆನ್ಸರ್‌ ತರಹದ ಬಯೋಮೆಟ್ರಿಕ್‌ ಆಯ್ಕೆ ಇಲ್ಲ. ಪಿನ್‌ ಅಥವಾ ಫೇಸ್‌ ಅನ್‌ಲಾಕ್‌ ಆಯ್ಕೆ ಬಳಸಿಯೇ ಅನ್‌ಲಾಕ್‌ ಮಾಡಬೇಕು. ಒನ್‌ಪ್ಲಸ್‌ ಪ್ಯಾಡ್ 8GB RAM +128GB ಸ್ಟೋರೇಜ್ ಹೊಂದಿರುವುದಕ್ಕೆ ₹37,999 ಬೆಲೆ ಇದೆ. 12GB+256GBಯದ್ದಕ್ಕೆ ₹39,000 ಕೊಡಬೇಕು. ನಯವಾದ ವಿನ್ಯಾಸ, ಶಕ್ತಿಯುತ ಹಾರ್ಡ್‌ವೇರ್, ಬಳಕೆದಾರ ಸ್ನೇಹಿ ಸಾಫ್ಟ್‌ವೇರ್ ಮತ್ತು ಹೆಚ್ಚುವರಿ ಕಾರ್ಯಚಟುವಟಿಕೆಗಳು ಇರುವುದರಿಂದ ಪ್ರೀಮಿಯಂ ವಿಭಾಗದಲ್ಲಿ ಉತ್ತಮ ಆಯ್ಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT