ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಞಾನ: ಪ್ರೇಯಸಿಗಾಗಿ ನಿದ್ರೆಬಿಟ್ಟ ಗಂಡು!

Published 30 ಜನವರಿ 2024, 23:30 IST
Last Updated 30 ಜನವರಿ 2024, 23:30 IST
ಅಕ್ಷರ ಗಾತ್ರ

‘ನಿನಗಾಗಿ ಪ್ರಾಣವನ್ನಾದರೂ ತೆರುವೆ’ ಎಂದು ಎಷ್ಟು ಪ್ರಿಯತಮರು ತಮ್ಮ ಪ್ರೇಯಸಿಗೆ ಮಾತು ಕೊಟ್ಟಿಲ್ಲ! ಆದರೆ ಅವರೆಲ್ಲರನ್ನೂ ಮೀರಿಸುವ ಒಂದು ಪ್ರಾಣಿ ಇದೆ. ಆಸ್ಟ್ರೇಲಿಯಾದಲ್ಲಿ ವಾಸಿಸುವ ಇಲಿಯಂತಹ ಒಂದು ಪ್ರಾಣಿಯ ಗಂಡು ಪ್ರೇಯಸಿಗಾಗಿ ನಿದ್ರೆಯನ್ನೂ ಬಿಡುತ್ತದಂತೆ. ಪ್ರಾಣವನ್ನೂ ತೆರುತ್ತದಂತೆ. ಹೀಗೆಂದು ಕರೆಂಟ್ ಬಯಾಲಜಿ ಪತ್ರಿಕೆಯಲ್ಲಿ ಆಸ್ಟ್ರೇಲಿಯಾದ ಲಾ ತ್ರೋಬೆ ವಿಶ್ವವಿದ್ಯಾನಿಲಯದ ಪ್ರಾಣಿವಿಜ್ಞಾನಿ ಎರಿಕಾ ಜೈದ್ ವರದಿ ಮಾಡಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಕಾಂಗರೂ ವಿಶೇಷ ಎಂದು ಗೊತ್ತಷ್ಟೆ. ಕಾಂಗರೂವಿನಂತೆಯೇ ಕಾಲಕ್ಕೆ ಮುನ್ನವೇ ಮರಿಗಳನ್ನು ಹೆತ್ತು, ಚೀಲದಲ್ಲಿ ಸಾಕುವ ಹಲವು ಪ್ರಾಣಿಗಳಿವೆ. ಅವುಗಳಲ್ಲಿ ‘ಆಂಟಿಕೈನಸ್’ ಎನ್ನುವ ಒಂದು ಪುಟ್ಟ ಇಲಿಯಂತಹ ಪ್ರಾಣಿ ಇದೆ. ಇದು ವರ್ಷಕ್ಕೊಮ್ಮೆ ಮಾತ್ರ ಮರಿ ಹಾಕುತ್ತದೆ. ಆಂಟಿಕೈನಸ್ಸಿನ ಗಂಡುಗಳು ಬೆದೆಯ ಕಾಲದಲ್ಲಿ ಎಷ್ಟು ಹೆಣ್ಣುಗಳು ಸಾಧ್ಯವೋ ಅಷ್ಟೂ ಹೆಣ್ಣುಗಳ ಜೊತೆಗೆ ಕೂಡುತ್ತವೆ; ಥೇಟ್ ನಾಯಿಗಳ ಹಾಗೆ. ಆದರೆ ಈ ಉನ್ಮಾದದಲ್ಲಿ ಅವು ನಿದ್ರೆಯನ್ನೂ ಮರೆಯುತ್ತವಂತೆ. ಅಷ್ಟೇ ಅಲ್ಲ. ಒಮ್ಮೆ ಹೀಗೆ ಹೆಣ್ಣುಗಳ ಜೊತೆಗೆ ಕೂಡುತ್ತದಂತೆ. ಹಾಗಂತ ಅನಂತರ ಅದು ಸನ್ಯಾಸಿಯಾಗುವುದಿಲ್ಲ. ಸತ್ತೇ ಹೋಗುತ್ತದೆ ಎನ್ನುತ್ತಾರೆ, ಎರಿಕಾ ಜೈಬ್.

ಪ್ರಾಣಿಗಳಲ್ಲಿ ನಿದ್ರೆ ಕೆಡುವ ಅಭ್ಯಾಸ ಹೊಸತೇನಲ್ಲ. ಉದಾಹರಣೆಗೆ, ನಿದ್ರೆ ಮಾಡುವಾಗ ಸೊಂಡಿಲನ್ನು ಸುತ್ತಿಕೊಂಡು ಮಲಗಿದರೆ ಶತ್ರುಗಳಿಗೆ ಗೊತ್ತಾಗಿ ಬಿಡುತ್ತದೆ ಎಂದು ಆಫ್ರಿಕನ್ ಆನೆಗಳ ಮುಂದಾಳು ಹೆಣ್ಣು, ದಿನಕ್ಕೆ ಎರಡು ಗಂಟೆ ಮಾತ್ರ ನಿದ್ರೆ ಮಾಡುತ್ತದಂತೆ. ಇದನ್ನೂ ಮೀರಿಸುತ್ತವೆ ಉತ್ತರ ಅಮೆರಿಕದ ಸಮುದ್ರನಾಯಿಗಳು ಅಥವಾ ಸೀಲ್ಗಳು. ‘ಎಲಿಫೆಂಟ್ ಸೀಲ್’ ಎನ್ನುವ ಆನೆಯಂತಹದೇ ದೊಡ್ಡ ಪ್ರಾಣಿ, ನೀರಿನೊಳಗೆ ಮುಳುಗಿ ನಿದ್ರಿಸುತ್ತದೆ. ಏಳೆಂಟು ತಿಂಗಳವರೆಗೆ ದಿನಕ್ಕೆ ಕೇವಲ ಎರಡೇ ಗಂಟೆಗಳ ಕಾಲ ಇವು ನಿದ್ರೆ ಮಾಡುತ್ತವಂತೆ. ‘ಫ್ರಿಗೇಟು’ ಎಂಬ ಸಾಗರದ ಹಕ್ಕಿಗಳು ವಲಸೆ ಹೋಗುವಾಗ ಆಕಾಶದಲ್ಲಿ ಹಾರುವಾಗಲೇ ನಿದ್ರಿಸುತ್ತವೆ, ದಿನಕ್ಕೆ ಮುಕ್ಕಾಲು ಗಂಟೆಯಷ್ಟು ಮಾತ್ರ. ಇದು ತಮ್ಮ ರಕ್ಷಣೆಗೆ ಅಥವಾ ಅವಶ್ಯಕತೆಯಿಂದ ಎನ್ನಬಹುದು. ಆದರೆ ಆಂಟಿಕೈನಸ್ ಇಲಿಯ ಕಥೆ ವಿಚಿತ್ರ. ಈ ಗಂಡು ನಿದ್ರೆಗೆಡುವುದು ಕೇವಲ ಹೆಣ್ಣಿಗಾಗಿ, ಹೆಣ್ಣಿಗಾಗಿ ಮಾತ್ರ ಎನ್ನುತ್ತಾರೆ, ಜೈದಿ.

ಆಂಟಿಕೈನಸಿನ ಕಥೆ ಬಯಲಾಗಿದ್ದು ಕೂಡ ವಿಚಿತ್ರವೇ. ಈ ಹಿಂದೆ ಹಕ್ಕಿಗಳಲ್ಲಿ ನಡೆದ ಅಧ್ಯಯನಗಳು ಉತ್ತರಧ್ರುವದ ಕಡಲ ತೀರದಲ್ಲಿ ವಾಸಿಸುವ ಕೆಲವು ಹಕ್ಕಿಗಳು ಬೆದೆ ಬಂದ ದಿನಗಳಲ್ಲಿ ದಿನದ ಬಹುತೇಕ ಕಾಲ ಚುರುಕಾಗಿರುತ್ತವೆ. ವರ್ಷಕ್ಕೊಮ್ಮೆ ಕೇವಲ ಮೂರು ವಾರಗಳಲ್ಲಿ, ಬೆದೆ ಬಂದಾಗ, ಬಿಸಿಲು ಇದ್ದಾಗ ಮಾತ್ರ ಸಂತಾನೋತ್ಪತ್ತಿ ಮಾಡುವುದು ಸಾಧ್ಯವಾಗಿದ್ದರಿಂದ ಹೀಗೆ ಚುರುಕಾಗಿರುವುದು ಲಾಭಕರ ಎನ್ನುತ್ತಾರೆ ವಿಜ್ಞಾನಿಗಳು. ನಿದ್ರೆಗೆಟ್ಟ ಹಕ್ಕಿಗಳು ಹೆಚ್ಚು ಮರಿ ಹಾಕುವುದನ್ನೂ ಗಮನಿಸಲಾಗಿತ್ತು. ಇದು ಕೇವಲ ಹಕ್ಕಿಗಳಲ್ಲಿ ಮಾತ್ರವೋ ಅಥವಾ ಬೇರೆ ಪ್ರಾಣಿಗಳಲ್ಲಿಯೂ ಹೀಗೆ ಸಂತಾನಕ್ಕಾಗಿ ನಿದ್ರೆಗೆಡುವ ಅಭ್ಯಾಸ ಇದೆಯೋ ಎನ್ನುವ ಕುತೂಹಲದಿಂದ ಎರಿಕಾ ಜೈಬ್ ಆಂಟಿಕೈನಸ್ ಇಲಿಯನ್ನು ಅಧ್ಯಯನ ಮಾಡಿದ್ದಾರೆ.

ಆಂಟಿಕೈನಸನ್ನು ಜೈದಿ ಆಯ್ದುಕೊಳ್ಳುವುದಕ್ಕೆ ಕಾರಣವಿತ್ತು. ಈ ಪ್ರಾಣಿ ಇಡೀ ಜೀವಮಾನದಲ್ಲಿ ಒಮ್ಮೆ ಮಾತ್ರ ಹೆಣ್ಣಿನ ಜೊತೆಗೆ ಬೆರೆಯುತ್ತದೆ. ‘ಬಿಟ್ಟರೆ ಕೆಟ್ಟ’ ಎನ್ನುವ ಅವಕಾಶ ಇದು. ಇದನ್ನು ಸದುಪಯೋಗ ಪಡಿಸಿಕೊಳ್ಳಲು ಗಂಡು-ಹೆಣ್ಣುಗಳು ನಿದ್ರೆ ಕೆಡುತ್ತಿರಬಹುದೇ ಎನ್ನುವ ತರ್ಕ – ಕುತರ್ಕ ಎಂದರೂ ಸರಿಯೇ – ಜೈಬ್ರವರದಾಗಿತ್ತು. ಹೀಗೆ ಬದುಕಿನಲ್ಲಿ ಒಮ್ಮೆ ಮಾತ್ರ ಸಂಗಾತಿಯನ್ನು ಕೂಡುವ ಅಭ್ಯಾಸ ಮಳೆ ಬಿದ್ದ ನಂತರ ಹಾರಾಡುವ ಕೀಟಗಳಲ್ಲಿ, ಕೆಲವು ಮೀನುಗಳಲ್ಲಿ, ಜೇಡಗಳಲ್ಲಿ ಕಾಣಬರುತ್ತದೆ. ಆದರೆ ಇಲಿಗಳಂತಹ ಸ್ತನಿಗಳಲ್ಲಿ ಅಲ್ಲ. ಅಂತಹ ಒಂದೇ ಒಂದು ಪ್ರಾಣಿ ಈ ‘ಆಂಟಿಕೈನಸ್’.

ಆಂಟಿಕೈನಸ್ ಹೆಣ್ಣು ವಸಂತಕಾಲದಲ್ಲಿ ಒಂದೇ ಒಂದು ಮರಿ ಹಾಕುತ್ತದೆ. ಮುಂದಿನ ವರ್ಷ ಮರಿ ಮಾಡುವುದಕ್ಕೂ ಬದುಕಿ ಉಳಿಯುತ್ತದೆ. ಆದರೆ ಗಂಡುಗಳು ಹಾಗಲ್ಲ. ಏನೋ ಬೇನೆ ಬಂದ ಹಾಗೆ ಎಲ್ಲ ಗಂಡುಗಳೂ ಬೆದೆಯ ಕಾಲ ಮುಗಿದ ನಂತರ ಒಂದೂ ಉಳಿಯದಂತೆ ಸಾವನ್ನಪ್ಪುತ್ತವೆ. ಉಳಿಯುವುದು, ಪ್ರೇಯಸಿ ಸಿಗದಿದ್ದ ಗಂಡುಗಳು ಮಾತ್ರ. ಹೀಗಾಗಿ ಒಂದು ಹೆಣ್ಣಿಗಾಗಿ ಎಲ್ಲ ಗಂಡುಗಳೂ ಹಾತೊರೆಯುವುದೂ ಹೊಡೆದಾಡುವುದೂ ಸಾಮಾನ್ಯ. ಇಂತಹ ಬದುಕಿನಲ್ಲಿ ನಿದ್ರೆಗೆ ಅವಕಾಶ ಎಲ್ಲಿ? ಆದ್ದರಿಂದ ಈ ಪ್ರಾಣಿಗಳು ಕೂಡ ಬಹುಶಃ ನಿದ್ರೆ ಕಡಿಮೆ ಮಾಡುತ್ತಿರಬೇಕು ಎಂಬುದು ಜೈದಿ ಅವರ ಊಹೆಯಾಗಿತ್ತು.

ಇದು ಸರಿಯೋ ತಪ್ಪೋ ತಿಳಿಯಲು ಅವರು ಗಂಡು ಮತ್ತು ಹೆಣ್ಣು ಅಂಟಿಕೈನಸ್ಸುಗಳನ್ನು ಸೆರೆಯಲ್ಲಿಟ್ಟು ಹಾಗೂ ನೇರವಾಗಿ ಅವು ಇದ್ದ ನೆಲೆಯಲ್ಲಿಯೇ ಆಧ್ಯಯನ ಮಾಡಿದರು. ಸೆರೆಯಲ್ಲಿಟ್ಟ ಗಂಡು ಮತ್ತು ಹೆಣ್ಣುಗಳ ಚಟುವಟಿಕೆಯನ್ನು ಇಪ್ಪತ್ತನಾಲ್ಕು ಗಂಟೆಯೂ ದಾಖಲಿಸಿದರು. ಬೆದೆಯ ಕಾಲ ಬರುವುದಕ್ಕೂ ಮುನ್ನ, ಗಂಡು ಹಾಗೂ ಹೆಣ್ಣುಗಳ ಚಟುವಟಿಕೆಯಲ್ಲಿ ಹೆಚ್ಚಿನ ವ್ಯತ್ಯಾಸ ಇರಲಿಲ್ಲ. ಆದರೆ ಬೆದೆಯ ಕಾಲದಲ್ಲಿ ಗಂಡುಗಳು ಸಾಮಾನ್ಯಕ್ಕಿಂತಲೂ ಹೆಚ್ಚು ಚಟುವಟಿಕೆ ತೋರಿದುವು. ಕೆಲವು ಗಂಡುಗಳಂತೂ, ಸಾಮಾನ್ಯಕ್ಕಿಂತ ಒಂದೂವರೆ ಪಟ್ಟು ದೀರ್ಘಾವಧಿಗೆ ಚಟುವಟಿಕೆಯಿಂದ ಇದ್ದವು. ಚಟುವಟಿಕೆ ಹೆಚ್ಚಾಗಿ ನಿದ್ರೆ ಕಡಿಮೆ ಮಾಡಿದುವೋ ಎನ್ನುವುದನ್ನೂ ಇವರು ಪರಿಶೀಲಿಸಿದ್ದಾರೆ. ಗಂಡುಗಳ ಮಿದುಳಿಗೆ ಸೆನ್ಸರುಗಳನ್ನು ಹಚ್ಚಿ, ಅವುಗಳ ಮಿದುಳಿನ ಚಟುವಟಿಕೆಯನ್ನು ದಾಖಲಿಸಿದ್ದಾರೆ. ಬೆದೆಯ ಕಾಲದಲ್ಲಿ ಗಾಢ ನಿದ್ರೆಯನ್ನು ಸೂಚಿಸುವ ಮೆದುಳಿನ ಚಟುವಟಿಕೆಗಳು ಕೂಡ ಕಡಿಮೆ ಆಗಿದ್ದುವು.

ಈ ರೀತಿಯ ಫಲಿತಾಂಶಗಳು ಆಂಟಿಕೈನಸ್ ಕುಲದ ಎರಡೂ ಪ್ರಭೇದದ ಜೀವಿಗಳಲ್ಲಿ ಕಂಡು ಬಂದಿವೆ. ಇವುಗಳಲ್ಲಿ ಒಂದು ಬಲು ನಿಧಾನವಾಗಿ ಚಲಿಸುವ ದಪ್ಪನೆಯ ಪ್ರಾಣಿ. ಮತ್ತೊಂದು ಚುರುಕಾದ ಇಲಿ. ಹಾಗಿದ್ದರೂ, ಎರಡೂ ಪ್ರಭೇದಗಳ ಗಂಡುಗಳಲ್ಲಿ ಒಂದೇ ತೆರನ ನಿದ್ರಾಹೀನತೆ ಕಂಡು ಬಂದಿದೆ ಎನ್ನುತ್ತಾರೆ, ಜೈದಿ. ನಿದ್ರೆಗೆಟ್ಟಾಗ ದೇಹದಲ್ಲಿ ಸಂಗ್ರಹವಾಗಿ ಆಕ್ಸಾಲಿಕ್ ಆಮ್ಲದ ಪ್ರಮಾಣವೂ ಗಂಡುಗಳಲ್ಲಿ ಹೆಚ್ಚಿರುತ್ತದೆಯಂತೆ. ನಿಧಾನಗತಿಯ ಇಲಿಯಲ್ಲಿಯೂ ಕೂಡ. ಹೀಗೆ ಎಲ್ಲ ಅಂಶಗಳೂ, ಈ ಗಂಡುಗಳು ತಮಗೆ ದೊರೆತ ಒಂದೇ ಅವಕಾಶವನ್ನು ಹೆಚ್ಚೆಚ್ಚು ಬಳಸಿಕೊಳ್ಳಲು ನಿದ್ರೆಗೆಡುತ್ತಿವೆ ಎನ್ನುವುದು ಜೈದಿ ತಂಡದ ತರ್ಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT