ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರ್ಭಾಶಯಕ್ಕೇ ಕುತ್ತು!

Published 20 ಸೆಪ್ಟೆಂಬರ್ 2023, 0:30 IST
Last Updated 20 ಸೆಪ್ಟೆಂಬರ್ 2023, 0:30 IST
ಅಕ್ಷರ ಗಾತ್ರ

ಕಳೆದ ವಾರ ವೈಜ್ಞಾನಿಕ ಜಗತ್ತಿನಲ್ಲಿ ಎರಡು ಸುದ್ದಿಗಳು ಪ್ರಸಾರವಾದವು. ಮೊದಲನೆಯದು, ತಂದೆ ಎನ್ನುವ ಜೀವದ ಅಸ್ತಿತ್ವವನ್ನೇ ಪ್ರಶ್ನಿಸಿದ ತಂತ್ರಜ್ಞಾನದ ಜನಕ ಅಯಾನ್‌ ವಿಲ್ಮಟ್ಟನ ಸಾವು. ಎರಡನೆಯದು, ತಾಯಿ ಎನ್ನುವ ಜೀವದಾಸರೆಯೇ ಬೇಡ ಎನ್ನುವ ಇನ್ನೊಂದು ತಂತ್ರಜ್ಞಾನ ಸಿದ್ಧವಾಗುತ್ತಿರುವುದರ ಸುಳಿವು.

ಅಯಾನ್‌ ವಿಲ್ಮಟ್‌ 1996ನೇ ಇಸವಿಯಲ್ಲಿ ಡಾಲಿ ಎನ್ನುವ ಮೊತ್ತ ಮೊದಲ ತದ್ರೂಪಿಯನ್ನು ಸೃಷ್ಟಿಸಿದ್ದರು. ತಂದೆಯ ವೀರ್ಯವೇ ಇಲ್ಲದೆ, ಇಬ್ಬರು ತಾಯಂದಿರ ಜೀವಕೋಶಗಳಿಂದ ಹುಟ್ಟಿದ ಜೀವಿ ಇದು. ಹೀಗೆ ತಂದೆಯ ಅಗತ್ಯವೇ ಇಲ್ಲದೆ ಸಂತಾನೋತ್ಪತ್ತಿ ಸಾಧ್ಯ ಎಂದು ತೋರಿಸಿತ್ತು. ಆದರೆ ಅದನ್ನು ಬೆಳೆಸಲು ತಾಯಿಯ ಗರ್ಭದ ಆಸರೆ ಅಗತ್ಯವಿತ್ತು. ಈಗ ತಾಯಿಯ ಈ ಆಸರೆಯೂ ಬೇಡವಂತೆ. ಮಾನವ ಪಿಂಡಗಳನ್ನು ಕೃತಕ ಗರ್ಭಗಳಲ್ಲಿ ಇಟ್ಟು ಬೆಳೆಸುವ ಪ್ರಯೋಗಗಳನ್ನು ಅಮೆರಿಕೆಯ ಕಂಪೆನಿ ಫಿಲಾಡೆಲ್ಫಿಯಾದ ಮಕ್ಕಳ ಆಸ್ಪತ್ರೆ ಆರಂಭಿಸಲಿದೆಯಂತೆ.

ಕೃತಕ ಗರ್ಭಾಶಯದ ಬಗ್ಗೆ ಸಂಶೋಧನೆಗಳು ಕಳೆದ ದಶಕದದಲ್ಲಿ ಬಿರುಸಾಗಿದ್ದುವು. ಆದರೆ ಈ ಎಲ್ಲ ಸಂಶೋಧನೆಗಳೂ ಪ್ರಾಣಿಗಳ ಪಿಂಡಗಳನ್ನು ಬೆಳೆಸಲಷ್ಟೆ ಮೀಸಲಾಗಿದ್ದುವು. ಉದಾಹರಣೆಗೆ, ಫಿಲಾಡೆಲ್ಫಿಯಾ ಮಕ್ಕಳ ಆಸ್ಪತ್ರೆಯ ವಿಜ್ಞಾನಿ ಹಾಗೂ ಇದೀಗ ಮಾನವಪಿಂಡಗಳ ಮೇಲೆ ಪ್ರಯೋಗವನ್ನು ನಡೆಸಲು ಉದ್ಯುಕ್ತವಾಗಿರುವ ವೈದ್ಯ ಆರು ವರ್ಷಗಳ ಹಿಂದೆ ಆಡು, ಕುರಿಗಳ ಪಿಂಡಗಳನ್ನು ಹೀಗೆ ಬೆಳೆಸಲು ಸಾಧ್ಯವೇ ಎಂದು ಪರಿಶೀಲಿಸಿದ್ದ. ಪ್ಲಾಸ್ಟಿಕ್ಕಿನ ಚೀಲವೊಂದರೊಳಗೆ ತಾಯಿಯ ಗರ್ಭಾಶಯದಲ್ಲಿ ಇರುವಂತಹ ದ್ರವವನ್ನೇ ಇರಿಸಿ, ರಕ್ತ ಹಾಗೂ ಆಮ್ಲಜನಕವನ್ನು ಪಂಪು ಮಾಡುತ್ತ ಆಡಿನ ಪಿಂಡವೊಂದನ್ನು ಬೆಳೆಸಲು ಪ್ರಯತ್ನಿಸಲಾಗಿತ್ತು. ಅದು ಸಫಲವೂ ಆಗಿತ್ತು.

ಇದೀಗ ಅದೇ ಪ್ರಯತ್ನವನ್ನು ಮಾನವಪಿಂಡಗಳ ಮೇಲೆ ನಡೆಸಲ ಸಿದ್ಧ ಎನ್ನುವ ಪ್ರಸ್ತಾವವನ್ನು ಫ್ಲೇಕ್‌ ತಂಡ ಎಫ್‌ಡಿಎ ಮುಂದೆ ಇಟ್ಟಿದೆ. ಇದರ ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸಲು ಅಮೆರಿಕೆಯ ‘ಫುಡ್‌ ಅಂಡ್‌ ಡ್ರಗ್‌ ಅಡ್ಮಿನಿಸ್ಟ್ರೇಶನ್‌’ (ಎಫ್‌ಡಿಎ) ರಚಿಸಿರುವ ಸಮಿತಿ ಈ ಪ್ರಸ್ತಾವವನ್ನುಇಂದು ಪರಿಶೀಲಿಸಲಿದೆ. ಈ ಪ್ರಸ್ತಾವ ಒಪ್ಪಿಗೆಯಾದಲ್ಲಿ, ಅವಧಿಗೂ ಮುನ್ನವೇ ಹೆರಿಗೆಯಾಗುವ ಪಿಂಡಗಳನ್ನು ಇಂತಹ ಕೃತಕ ಗರ್ಭಾಶಯದಲ್ಲಿಟ್ಟು, ಅವು ನವಮಾಸಗಳ ಬೆಳೆವಣಿಗೆಯನ್ನು ಪೂರೈಸುವಂತೆ ಮಾಡಬಹುದು ಎನ್ನುವುದು ಇವರ ಉದ್ದೇಶ.

ಸದ್ಯಕ್ಕೆ ಅವಧಿಗೆ ಮುನ್ನವೇ ಹುಟ್ಟುವ ಇಂತಹ ಮಕ್ಕಳನ್ನು ‘ಇಂಕುಬೇಟರು’ ಎನ್ನುವ ಬಿಸಿಪೆಟ್ಟಿಗೆಯಲ್ಲಿ ಇಟ್ಟು ಬೆಳೆಸುವುದುಂಟು. ಬಸಿರಿನ ಏಳು ಅಥವಾ ಎಂಟನೇ ತಿಂಗಳಲ್ಲಿಯೇ ಹುಟ್ಟುವ ಮಕ್ಕಳನ್ನು ಹೀಗೆ ಬೆಳೆಸುವ ಮಕ್ಕಳ ಐಸಿಯು ವಾರ್ಡುಗಳು ಬಹುತೇಕ ಆಸ್ಪತ್ರೆಗಳಲ್ಲಿ ಇವೆ. ಸೋಂಕು ಉಂಟಾದವರು, ಡಯಾಬಿಟೀಸ್‌ ಅಥವಾ ಅತಿ ರಕ್ತದೊತ್ತಡದಿಂದ ನರಳುತ್ತಿರುವ ಇಲ್ಲವೇ ದೇಹದಲ್ಲಿನ ಹಾರ್ಮೋನುಗಳ ವ್ಯತ್ಯಾಸದಿಂದಾಗಿ ಕೆಲವೊಮ್ಮೆ ಬಸುರಿಯರು ನವಮಾಸ ತುಂಬುವ ಮೊದಲೇ ಹೆರುವುದು ಉಂಟು. ವಿಶ್ವಸಂಸ್ಥೆಯ ಪ್ರಕಾರ 2020ನೇ ಇಸವಿಯಲ್ಲಿ ಹೆಚ್ಚು ಕಡಿಮೆ ಒಂಬತ್ತು ಲಕ್ಷ ಮಕ್ಕಳು ಹೀಗೆ ಕಣ್ತೆರೆಯುವ ಮುನ್ನವೇ ಕಣ್ಮುಚ್ಚಿದ್ದುವು. ಅಲ್ಲದೆ ಒಂದೂವರೆ ಕೋಟಿ ಮಕ್ಕಳು ಐಸಿಯು ನೆರವಿನಿಂದ ಹುಟ್ಟಿದ್ದುವು.

ಏಳು ತಿಂಗಳು ಬಸುರಲ್ಲಿ ಕಳೆದ ಮಕ್ಕಳು ಅವಧಿಗೆ ಮುನ್ನವೇ ಹುಟ್ಟಿದರೂ ಬದುಕಿ ಉಳಿಯುವ ಸಾಧ್ಯತೆಗಳು ಹೆಚ್ಚು. ಆದರೆ ಅದಕ್ಕೂ ಮುನ್ನ ಅಂದರೆ ಐದು ಅಥವಾ ಆರು ತಿಂಗಳಲ್ಲಿ ಹುಟ್ಟಿದಂತಹ ಮಕ್ಕಳ ಉಳಿವು ಕಷ್ಟ. ಐಸಿಯೂವಿನಲ್ಲಿಟ್ಟು ಬೆಳೆಸಿದರೂ ಅಸ್ತಮಾ, ಅತಿ ರಕ್ತದೊತ್ತಡ, ಇಲ್ಲವೇ ಮಿದುಳು ಸರಿಯಾಗಿ ಬೆಳೆಯದೆ ಸೆರೆಬ್ರಲ್‌ ಪಾಲ್ಸಿಯಂತಹ ದೋಷಗಳು ಕಾಣಿಸಿಕೊಳ್ಳಬಹುದು. ‘ಸೆರೆಬ್ರಲ್‌ ಪಾಲ್ಸಿ’ ಎಂದರೆ ಕೈ–ಕಾಲುಗಳ ಮೇಲೆ ಹಿಡಿತವಿಲ್ಲದಂತಹ ಬೆಳೆವಣಿಗೆ. ಇದಕ್ಕೆ ಮೂಲಕಾರಣ ಮಿದುಳು ಮತ್ತು ಶ್ವಾಸಕೋಶಗಳು ಕೊನೆಯಲ್ಲಿ ಬೆಳೆದು, ಬಲಿಯುವ ಅಂಗಗಳು. ತಾಯಿಯ ಗರ್ಭದಾಚೆ, ಐಸಿಯೂವಿನಲ್ಲಿ, ಇವು ಪರಿಪೂರ್ಣವಾಗಿ ಬೆಳೆಯದೆ ಇರುವುದರಿಂದ ಈ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಸ್ವೀಡನ್‌ ದೇಶದಲ್ಲಿ ಇಪ್ಪತ್ತೈದು ಲಕ್ಷ ಮಕ್ಕಳ ಅಧ್ಯಯನವೊಂದರಲ್ಲಿ ಹೀಗೆ ಅವಧಿಗೂ ಮುನ್ನ ಹುಟ್ಟಿದ ಮಕ್ಕಳಲ್ಲಿ ಶೇ. 78ರಷ್ಟು ಮಕ್ಕಳಿಗೆ ಒಂದಲ್ಲ ಒಂದು ಶ್ವಾಸಕೋಶ ಹಾಗೂ ನರಮಂಡಲದ ಸಮಸ್ಯೆಗಳು ಇದ್ದುದು ಪತ್ತೆಯಾಗಿದೆ. ಸಾಮಾನ್ಯವಾಗಿ ಹುಟ್ಟುವ ಮಕ್ಕಳಲ್ಲಿ ಕಾಣುವ ಪ್ರಮಾಣದ ಮೂರು ಪಟ್ಟು ಇದು.

ಮಿದುಳು ಮತ್ತು ಶ್ವಾಸಕೋಶಗಳು ಪರಿಪೂರ್ಣವಾಗಿ ಬೆಳೆಯಲು ಬೇಕಾದ ಪರಿಸರವನ್ನು ಹೀಗೆ ತಾಯಿಯ ಗರ್ಭದಾಚೆ ಕಟ್ಟಿಕೊಡಬಹುದೇ ಎನ್ನುವುದು ಫ್ಲೇಕ್‌ ಅವರ ತಂಡದ ಪ್ರಶ್ನೆ. ಇದೇ ಪ್ರಶ್ನೆಯನ್ನು ಸುಮಾರು ಎಪ್ಪತ್ತು ವರ್ಷಗಳಿಂದಲೂ ಕೇಳುತ್ತಲೇ ಬರಲಾಗಿದೆ. ಕೃತಕ ಗರ್ಭವನ್ನು ತಯಾರಿಸುವ ಪ್ರಯತ್ನಗಳೂ ನಡೆದಿವೆ. ಆದರೆ ಅವು ಯಾವುವೂ ಸಫಲವಾಗಿರಲಿಲ್ಲ. ಫ್ಲೇಕ್‌ ತಂಡ ಕೆಲವು ವರ್ಷಗಳ ಹಿಂದೆ ಇದಕ್ಕೊಂದು ಉಪಾಯ ಹೂಡಿತ್ತು. ಗರ್ಭಾಶಯದೊಳಗೆ ಇರುವಂತಹದ್ದೇ ದ್ರವವನ್ನು ಕೃತಕವಾಗಿ ತಯಾರಿಸಿ, ಅದನ್ನು ಮೃದುವಾದೊಂದು ಪಾಲಿಮರ್‌ ಚೀಲದೊಳಗಿಟ್ಟು ಗರ್ಭವನ್ನು ಸೃಷ್ಟಿಸಿತ್ತು. ಇದರೊಳಗೆ ಆಡಿನ ಪಿಂಡವೊಂದನ್ನಿಟ್ಟು, ಅದರ ಹೊಕ್ಕಳಬಳ್ಳಿಗೆ ಹೊರಗಿನಿಂದ ಆಕ್ಸಿಜನ್‌ ಅನ್ನು ಸರಬರಾಜು ಮಾಡುವ ಆಕ್ಜಿನರೇಟರನ್ನು ಜೋಡಿಸಿದ್ದರು. ಹೀಗೆ ಪಿಂಡ ಸಹಜವಾಗಿ ತನ್ನದೇ ಹೃದಯದ ಮೂಲಕ ರಕ್ತವನ್ನು ಪಂಪು ಮಾಡುವಂತೆ ಮಾಡಿದ್ದರಲ್ಲದೆ, ಆಕ್ಸಿಜನ್‌ನ ಸರಬರಾಜು ಕುಂದದಂತೆ ಮಾಡಿದ್ದರು. ಐಸಿಯೂವಿನಲ್ಲಿ ಆಕ್ಸಿಜನ್‌ ನೀಡಿದರೂ, ಶ್ವಾಸಕೋಶ ಇನ್ನೂ ಪೂರ್ಣವಾಗಿ ಬೆಳೆಯದೆ ಇರುವುದರಿಂದ ಅದು ವಿವಿಧ ಅಂಗಗಳನ್ನು ಯುಕ್ತ ಪ್ರಮಾಣದಲ್ಲಿ ತಲುಪುವುದು ಕಡಿಮೆ.

ಆಡಿಗೆಂದು ತಯಾರಿಸಿದ್ದ ಈ ಗರ್ಭಚೀಲದಲ್ಲಿ ಹಲವಾರು ಆಡಿನ ಮರಿಗಳನ್ನು ಕೃತಕವಾಗಿ ಬೆಳೆಸಿದ್ದಾರೆ. ಜಪಾನು, ನೆದರ್‌ಲ್ಯಾಂಡ್‌, ಸ್ಪೇನ್‌, ಆಸ್ಟ್ರೇಲಿಯಾ, ಸಿಂಗಪೂರಿನ ವೈದ್ಯರುಗಳೂ ಇಂತಹ ಕೃತಕ ಗರ್ಭಾಶಯಗಳನ್ನು ತಯಾರಿಸುವಲ್ಲಿ ನಿರತರಾಗಿದ್ದಾರೆ. ಆದರೆ ಫಿಲಾಡೆಲ್ಫಿಯಾದ ಮಕ್ಕಳ ಆಸ್ಪತ್ರೆಯ ‘ಬಯೋಬ್ಯಾಗ್‌’ ಎನ್ನುವ ಈ ಕೃತಕ ಗರ್ಭಾಶಯ ಮಾನವರ ಮೇಲೆ ಪ್ರಯೋಗಿಸಲು ಸಿದ್ಧವಾಗಿದೆ ಎನ್ನುತ್ತದೆ, ‘ನೇಚರ್‌’ ಪತ್ರಿಕೆ. ನಾಳೆ ಐದರಿಂದ ಆರು ತಿಂಗಳ ಬಸಿರು ಕಳೆಯುವಷ್ಟರಲ್ಲಿಯೇ ಆತುರವಾಗಿ ಹುಟ್ಟುವ ಶಿಶುಗಳನ್ನೂ ಹೀಗೇ ತಾಯಿಯ ಗರ್ಭಾಶಯದ ಹೊರಗೆ ಇಟ್ಟು ಬೆಳೆಸಬಹುದು. ಪ್ರತಿವರ್ಷ ಸಾಯುವ ಲಕ್ಷಾಂತರ ಮಕ್ಕಳನ್ನು ಉಳಿಸಬಹುದು ಎನ್ನುವುದು ಫ್ಲೇಕ್‌ ತಂಡದ ಆಶಯ.

ತಂದೆಯ ವೀರ್ಯ, ತಾಯಿಯ ಅಂಡಗಳಿಲ್ಲದೆ ಭ್ರೂಣಗಳನ್ನು ಹುಟ್ಟು ಹಾಕುವುದು ಸ್ಟೆಮ್‌ ಸೆಲ್‌ ತಂತ್ರಜ್ಞಾನದಿಂದ ಸಾಧ್ಯವಾಗಿದೆ. ಭ್ರೂಣಗಳು ಬೆಳೆಯಲು ತಾಯಿಯ ಗರ್ಭಾಶಯದ ಅಗತ್ಯವಿತ್ತು. ಅದನ್ನೂ ಇಲ್ಲವಾಗಿಸಿದಲ್ಲಿ, ಬಹುಶಃ ಗಂಡು-ಹೆಣ್ಣು, ಮದುವೆ, ವಿವಾಹ ಎನ್ನುವುದೆಲ್ಲ ಮರೆಯಾಗಬಹುದೇ? ಆಲ್ಡಸ್‌ ಹಕ್ಸ್ಲಿ ‘ಎ ಬ್ರೇವ್ ನ್ಯೂ ವರ್ಲ್ಡ್‌’ ಕೃತಿಯಲ್ಲಿ ಊಹಿಸಿದ್ದ, ಮಕ್ಕಳನ್ನು ತಯಾರಿಸುವ ಫ್ಯಾಕ್ಟರಿ ಸಿದ್ಧವಾಗಬಹುದೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT