ಸಾಂಪ್ರದಾಯಿಕ ದೃಷ್ಟಿಯಲ್ಲಿ ಚಂದ್ರಗ್ರಹಣ

7
grahana-suryanarayana bhatta

ಸಾಂಪ್ರದಾಯಿಕ ದೃಷ್ಟಿಯಲ್ಲಿ ಚಂದ್ರಗ್ರಹಣ

Published:
Updated:

ಆರ್ಷ ಸಾಹಿತ್ಯದಲ್ಲಿ ಎಲ್ಲ ವಿಷಯಗಳನ್ನೂ ನೇರವಾಗಿಯೇ ನಿರೂಪಿಸುವ ಬದಲು ಪರೋಕ್ಷವಾಗಿ ಹೇಳುವ ರೂಢಿಯುಂಟು. ಈ ಮಾತಿಗೆ ಗ್ರಹಣವೂ ಹೊರತಾಗಿಲ್ಲ. ಸೂರ್ಯ, ಚಂದ್ರ ಮತ್ತು ಭೂಮಿ, ಆಕಾಶದಲ್ಲಿ ಒಂದಕ್ಕೊಂದು ಅಡ್ಡ ಬಂದಾಗ ಗ್ರಹಣವಾಗುತ್ತದೆ ಎನ್ನುವುದು ಆರ್ಯಭಟ(3.37)ನಿಗೆ ತಿಳಿದಂತೆ ಉಳಿದವರಿಗೂ ತಿಳಿದಿತ್ತು. ಆದರೆ ಅವರು ರಾಹು-ಕೇತುಗಳ ಕತೆಯ ಮೂಲಕ ಗ್ರಹಣವನ್ನು ಸರ್ವಜನಗ್ರಾಹ್ಯವಾಗುವಂತೆ ವಿವರಿಸುತ್ತಾರೆ. ಈ ಕಾರಣದಿಂದಲೇ ವರಾಹ ಮಿಹಿರರು ಸಂಹಿತೆ(5.1)ಯಲ್ಲಿ ಅದು ಕೆಲವರ ಮತ ಎನ್ನುತ್ತಾರೆ.

ಸೂರ್ಯ ಚಂದ್ರರು ಪ್ರಚುರ ಪ್ರಕಾಶವಿರುವ ಆಕಾಶ ಕಾಯಗಳಾದರೆ, ರಾಹು ಮತ್ತು ಕೇತು ಅವುಗಳಿಗೆ ವಿರುದ್ಧವಾಗಿವೆ ಎಂದರೆ ತಮೋ(ಕತ್ತಲೆ)ಗ್ರಹಗಳಾಗಿವೆ. ಸಾಮಾನ್ಯವಾಗಿ ಬೆಳಕು ಬೀರುವ ಸೂರ್ಯ-ಚಂದ್ರರು ಪರ್ವ ದಿನಗಳಲ್ಲಿ ಕೆಲವೊಮ್ಮೆ ಹಾಗಿರುವುದಿಲ್ಲ. ಇದನ್ನು ವಿವರಿಸುವುದಕ್ಕಾಗಿ ಪುರಾಣಗಳಲ್ಲಿ ಕತೆಯೊಂದನ್ನು ವರ್ಣಿಸಲಾಗಿದೆ. ಅದರ ಪ್ರಕಾರ ಮೋಹಿನಿಯು ಮೋಸದಿಂದ ದೇವತೆಗಳಿಗೆ ಮಾತ್ರ ಅಮೃತ ಪ್ರಾಶನ ಮಾಡಿಸುತ್ತಿರುವಾಗ, ಮಾರುವೇಷದಿಂದ ಅವರೊಡನೆ ಕುಳಿತು ಅಸುರನೊಬ್ಬನು ಅಮೃತವನ್ನು ಕುಡಿಯುತ್ತಾನೆ. ಇದನ್ನು ಅವನ ಬದಿಯಲ್ಲಿ ಕುಳಿತಿದ್ದ ಸೂರ್ಯ-ಚಂದ್ರರು ತಿಳಿಸುತ್ತಾರೆ. ಕೂಡಲೆ ಆಗಿಹೋದ ಅಚಾತುರ್ಯವನ್ನು ತಿಳಿದ ಮಹಾವಿಷ್ಣು ಸುದರ್ಶನ ಚಕ್ರದಿಂದ ಆ ಅಸುರನ ರುಂಡ-ಮುಂಡಗಳನ್ನು ಬೇರೆಯಾಗಿ ತುಂಡರಿಸುತ್ತಾನೆ. ಆದರೆ ಅಮೃತದ ಪ್ರಭಾವದಿಂದ ಅವನಿಗೆ ಸಾವು ಬರುವುದಿಲ್ಲ. ತಲೆಯ ಆಕಾರದ ರಾಹು, ಮುಂಡದ ರೂಪದ ಕೇತು ಇಂದಿಗೂ ಸೂರ್ಯ-ಚಂದ್ರರನ್ನು ಕಬಳಿಸಲು ಪ್ರಯತ್ನಿಸುತ್ತಾರೆ. ಅದನ್ನೇ ಗ್ರಹಣವೆನ್ನಲಾಗಿದೆ.

ಆಕಾಶದಲ್ಲಿ ಕಾಣುವ ಈ ಕೌತುಕ ಭೂಮಂಡಲದ ಮೇಲೆ ಪರಿಣಾಮವನ್ನು ಬೀರುತ್ತದೆ. ಪರ್ವ ದಿನಗಳಲ್ಲಿ ಸಮುದ್ರದಲ್ಲಿ ಭರತ-ಇಳಿತ ಕಾಣಬರುವಂತೆ, ಗ್ರಹಣದ ಪರಿಣಾಮ ಭೂಮಿಯ ಮೇಲೆ ಆಗುತ್ತದೆ. ಆದರೆ ಅದು ನಕಾರಾತ್ಮಕವಾಗಿಯೇ ಇರುವುದೆಂದೇನಿಲ್ಲ. ಸಕಾರಾತ್ಮಕವಾದ ಫಲಗಳೂ ಸಂಭವಿಸುತ್ತವೆ. ಉದಾಹರಣೆಗಾಗಿ, ಆಷಾಢ ಮಾಸದಲ್ಲಿ ಗ್ರಹಣ ಬಂದರೆ ಜಲಾಶಯ ಗಾಂಧಾರ ಕಾಶ್ಮೀರ ಪುಲಿಂದ ಚೀನ ಮುಂತಾದ ದೇಶಗಳಿಗೆ ಅಶುಭವೆನ್ನಲಾಗಿದೆ. ಸ್ವಾಭಾವಿಕವಾಗಿಯೇ ಉಳಿದ ಪ್ರದೇಶಗಳಿಗೆ ಶುಭವಾಗುತ್ತದೆ.

ವೈಯಕ್ತಿಕವಾಗಿಯೂ ಶುಭಾಶುಭ ಫಲಗಳನ್ನು ಗ್ರಹಣದಿಂದ ನಿಶ್ಚಯಿಸುತ್ತಾರೆ. ಸಾಮಾನ್ಯವಾಗಿ ಯಾವ ನಕ್ಷತ್ರದಲ್ಲಿ ಯಾವ ರಾಶಿಯಲ್ಲಿ ಗ್ರಹಣ ಸಂಭವಿಸುತ್ತದೆಯೋ ಆ ನಕ್ಷತ್ರ – ರಾಶಿಗಳವರಿಗೆ ಅಶುಭವುಂಟಾಗುತ್ತದೆ ಎನ್ನುತ್ತಾರೆ. ಅದೇನೂ ನಿಯತವಲ್ಲ. ಸಕಲ ಗ್ರಹಬಲ ನೀನೆ ಸರಸಿಜಾಕ್ಷ ಎನ್ನುವಂತೆ ಪರಮಾತ್ಮನ ಅನುಗ್ರಹದಿಂದ ಎಲ್ಲರಿಗೂ ಒಳ್ಳೆಯದೇ ಆಗುತ್ತದೆ.

ಬರಹ ಇಷ್ಟವಾಯಿತೆ?

 • 28

  Happy
 • 4

  Amused
 • 1

  Sad
 • 3

  Frustrated
 • 4

  Angry

Comments:

0 comments

Write the first review for this !