ಸಾಗರದಾಳಕ್ಕೆ ಇಳಿಯುವ ರೋಬೊ

7

ಸಾಗರದಾಳಕ್ಕೆ ಇಳಿಯುವ ರೋಬೊ

Published:
Updated:

ನೀ ರಿನ ಮೇಲೆ ಸಾಗುವ, ಟೇಕಾಫ್ ಆಗುವ ವಾಟರ್‌ಪ್ರೂಪ್‌ ರೋಬೊಗಳು ಮತ್ತು ಡ್ರೋನ್‌ಗಳು ಈವರೆಗೆ ಬಂದಿದ್ದವು. ಈಗ ಸಾಗರದಾಳದಲ್ಲೂ ಕೆಲಸ ಮಾಡುವ ರೋಬೊಟ್‌ಗಳನ್ನು ವಿಜ್ಞಾನಿಗಳು ಸಂಶೋಧಿಸಿದ್ದಾರೆ.

ಹೈಡ್ರೊ ಕ್ಯಾಮಲ್‌ II- ನೀರಿನಾಳದ ಎಯುವಿ

ಇಸ್ರೇಲ್‌ನ ನುಗೇವ್‌ನ ಬೆನ್ ಗುರಿಯನ್‌ ವಿಶ್ವವಿದ್ಯಾಲಯದ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಸ್ವಯಂಚಾಲಿತ ನೀರಿನಾಳದ ವಾಹನ (ಎಯುವಿ) ಕಂಡುಹಿಡಿದಿದ್ದಾರೆ. ಸ್ವಯಂಚಾಲಿತ ರೋಬೊಟಿಕ್ಸ್‌ ಸಂಶೋಧನಾ ಪ್ರಯೋಗಾಲಯದ ಪ್ರಾಧ್ಯಾಪಕ ಹುಗೊ ಗುಟೆರ್‌ಮನ್‌ ಅವರ ನೇತೃತ್ವದಲ್ಲಿ ಇವರು ಸಂಶೋಧನೆ ಮಾಡಿದ್ದಾರೆ. ಇದನ್ನು ಪರಿಸರ ಸ್ನೇಹಿ ಕೆಲಸ, ಸಂಶೋಧನೆ, ಸೇನೆ, ಭದ್ರತೆ ಮತ್ತು ಇಂಧನ ಹಾಗೂ ಅನಿಲ ನಿಕ್ಷೇಪದ ಶೋಧಕ್ಕೂ ಬಳಸಬಹುದಾಗಿದೆ.

2.35 ಮೀಟರ್ ಉದ್ದದ ಹೈಡ್ರೊ ಕ್ಯಾಮಲ್‌ IIನಲ್ಲಿ ಪಥದರ್ಶಕ (Navigation) ವ್ಯವಸ್ಥೆ ಇದೆ. ಇದರಿಂದ ಇದು ಎಲ್ಲೇ ಹೋದರೂ ಪತ್ತೆಯಾಗುತ್ತದೆ. ಯಾವುದಕ್ಕೂ ಡಿಕ್ಕಿಯಾಗದಂತೆ ತನ್ನನ್ನು ನೋಡಿಕೊಳ್ಳುತ್ತದೆ. ಸ್ವಯಂ ನಿರ್ಣಯ ಮಾಡಿಕೊಳ್ಳುವ ಸಾಮರ್ಥ್ಯ ಇದಕ್ಕಿದೆ.

‘ಹೈಡ್ರೊ ಕ್ಯಾಮಲ್‌ I’ ರೋಬೊವನ್ನು ಇದೇ ತಂಡ ನಾಲ್ಕು ವರ್ಷಗಳ ಹಿಂದೆ ಕಂಡುಹಿಡಿದಿತ್ತು. ಇದು 100 ಮೀಟರ್‌ ನೀರಿನಾಳಕ್ಕೆ ಹೋಗುವ ಶಕ್ತಿಯನ್ನಷ್ಟೇ ಹೊಂದಿತ್ತು. ಇದರಿಂದ ಅಷ್ಟೊಂದು ಸಂತಸಗೊಳ್ಳದ ತಂಡ ಮತ್ತೆ ಒಂದಷ್ಟು ಸಂಶೋಧನೆ ಮಾಡಿ ಇದರ ಸುಧಾರಿತ ‘ಹೈಡ್ರೊ ಕ್ಯಾಮಲ್‌ II’ ತಯಾರು ಮಾಡಿತು. ‘ಹೈಡ್ರೊ ಕ್ಯಾಮಲ್‌ I’ ಗಿಂತ ಇದು ಗಾತ್ರದಲ್ಲಿ ಸಣ್ಣದಾಗಿದ್ದು, ಸುಲಭವಾಗಿ ಚಾಲನೆ ಮಾಡಬಹುದಾಗಿದೆ.

ದೂರದಿಂದಲೇ ನಿಯಂತ್ರಿಸಬಹುದಾದ ಜಲಾಂತರ್ಗಾಮಿಗಳು ಇಂದು ಹಲವು ಬಳಕೆಯಲ್ಲಿವೆ.  ನೀರಿನೊಳಗಿನ ಕೊಳವೆಗಳ ಸ್ಥಿತಿಗತಿ ತಪಾಸಣೆ, ಖನಿಜ ಸಂಪನ್ಮೂಲಗಳ ಹುಡುಕಾಟ, ಸಂವಹನ ಕೇಬಲ್‌ಗಳ ಅಳವಡಿಕೆ ಮುಂತಾದ ಕೆಲಸಗಳಿಗೆ ಇವುಗಳನ್ನು ಬಳಸಲಾಗುತ್ತಿದೆ. ಈಗ ಸಂಶೋಧಿಸಿರುವ ರೇಂಜರ್ ಬೋಟ್ ಮತ್ತು ಹೈಡ್ರೊ ಕ್ಯಾಮಲ್‌ IIಗಳು ನೀರಿನಾಳದ ಮಾನವನ ಕುತೂಹಲಗಳನ್ನು ತಣಿಸುವಲ್ಲಿ ಇನ್ನಷ್ಟು ನೆರವಾಗಲಿವೆ.

ರೇಂಜರ್ ಬೋಟ್

ರೋಬೊಟ್‌ ಜಲಾಂತರ್ಗಾಮಿ ಎಂದು ಕರೆಯಲಾಗುವ ಇವುಗಳನ್ನು ಆಸ್ಟ್ರೇಲಿಯಾದ ಗ್ರೇಟ್ ಬ್ಯಾರಿಯರ್ ರೀಫ್‌ನಲ್ಲಿರುವ ಹವಳದ ದಿಬ್ಬ (ದಂಡೆ)ಗಳನ್ನು ರಕ್ಷಿಸಲು ಬಳಸಲಾಗುತ್ತಿದೆ. ನಕ್ಷತ್ರಮೀನು ಇಲ್ಲಿರುವ ಹವಳವನ್ನು ನಾಶ ಮಾಡುತ್ತಿದ್ದು, ಇದನ್ನು ತಡೆಯಲು ಈ ರೋಬೊ ನೆರವಾಗಿದೆ.

ಕ್ವೀನ್ಸ್‌ಲ್ಯಾಂಡ್‌ನ ತಾಂತ್ರಿಕ ವಿಶ್ವವಿದ್ಯಾಲಯದ ವಿಜ್ಞಾನಿಗಳು ಕಂಡು ಹಿಡಿದಿರುವ ಈ ರೋಬೊ ವಿಶ್ವದ ಮೊದಲ ಸಾಗರದಾಳದ ರೋಬೊ ಎಂಬ ಹೆಸರು ಪಡೆದಿದೆ. ಆಸ್ಟ್ರೇಲಿಯಾದ ಈಶಾನ್ಯ ಕರಾವಳಿಯಲ್ಲಿರುವ ವಿಶ್ವ ಪಾರಂಪರಿಕ ತಾಣ ಗ್ರೇಟ್‌ ಬ್ಯಾರಿಯರ್ ರೀಫ್‌, ಪ್ರವಾಸಿಗರ ತಾಣವೂ ಹೌದು. ಇದು ಸಾಗರದ ಜೀವಿಗಳಿಂದಲೇ ನಾಶವಾಗುವುದನ್ನು ತಡೆಯಲು ಕಂಡುಕೊಂಡಿರುವ ಹೊಸ ವಿಧಾನ ಎಷ್ಟರಮಟ್ಟಿಗೆ ಫಲಕೊಡಲಿದೆ ಎಂಬುದನ್ನು ಕಾದುನೋಡಬೇಕಾಗಿದೆ.

‘ರೇಂಜರ್ ಬೋಟ್‌’ ಎಂಬ ಹೆಸರಿನ ಈ ರೋಬೊವನ್ನು ಅಭಿವೃದ್ಧಿಪಡಿಸಲು ಗೂಗಲ್ ಹಣಕಾಸು ನೆರವು ನೀಡಿದೆ.


ರೇಂಜರ್ ಬೋಟ್​

ಸೂಕ್ಷ್ಮ ಜೀವಿಗಳಾದ ಹವಳಗಳನ್ನು ತಿನ್ನುವ ನಕ್ಷತ್ರ ಮೀನುಗಳನ್ನು ಕಂಡುಹಿಡಿಯುವ ಈ ರೋಬೊ, ಅವುಗಳಿಗೆ ಚುಚ್ಚುಮದ್ದನ್ನು ನೀಡುತ್ತದೆ. ಇದರಿಂದ ಅವುಗಳು ಸತ್ತು ಹೋಗುತ್ತವೆ. ಆದರೆ, ಈ ಚುಚ್ಚುಮದ್ದು ಹವಳಗಳಿಗೆ ಹಾನಿ ಮಾಡುವುದಿಲ್ಲ. ಮಾಲಿನ್ಯ ಮತ್ತು ಇತರ ಚಟುವಟಿಕೆಗಳಿಗೆ ಬ್ಯಾರಿಯರ್‌ ರೀಫ್‌ನಲ್ಲಿ ನಕ್ಷತ್ರ ಮೀನುಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. ಇದು ಇಡೀ ದಿಬ್ಬಕ್ಕೆ ಗಂಭೀರವಾದ ಹಾನಿ ಉಂಟು ಮಾಡುವ ಬೆದರಿಕೆ ಒಡ್ಡಿದೆ. ಈಗ ಇದಕ್ಕೆಲ್ಲ ಸ್ವಲ್ಪಮಟ್ಟಿನ ಪರಿಹಾರ ಸಿಗಬಹುದು ಎಂದು ವಿಜ್ಞಾನಿಗಳು ನಂಬಿದ್ದಾರೆ.

ಹವಾಮಾನ ಬದಲಾವಣೆಯಿಂದ ಸಾಗರದ ನೀರಿನ ಪ್ರಮಾಣ ಏರಿಕೆಯಾಗುತ್ತಿರುವುದರಿಂದ ಜಪಾನ್‌ ಇಲ್ಲವೇ ಇಟಲಿಯಷ್ಟು ವಿಸ್ತೀರ್ಣವಿರುವ ಗ್ರೇಟ್‌ ಬ್ಯಾರಿಯರ ರೀಫ್‌ಗೆ ಹಾನಿಯಾಗುತ್ತಿದೆ.

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !