ಚಂದ್ರನ ಮೇಲೊಂದು ಮನೆ ಮಾಡಿ...

7

ಚಂದ್ರನ ಮೇಲೊಂದು ಮನೆ ಮಾಡಿ...

Published:
Updated:

ಭೂಮಿಯ ಮೇಲೆ ಮನೆ ಕಟ್ಟಿ ವಾಸಿಸಿದ್ದಾಯ್ತು. ಇಲ್ಲಿಯ ವಾತಾವರಣವನ್ನು ಮಲಿನಗೊಳಿಸಿದ್ದೂ ಆಯ್ತು. ಈಗ ಗಾಳಿ, ನೀರು, ವಾತಾವರಣವೇ ಇಲ್ಲದ ಚಂದ್ರನ ಮೇಲೆ ಮನೆಯ ಮಾಡುವುದೆಂದರೆ... ಕಷ್ಟವಾದರೂ ಚಂದ್ರನ ಮೇಲೆ ಮನುಷ್ಯ ವಾಸ ಮಾಡಲು ಕೆಲ ಪರೀಕ್ಷೆ ಮತ್ತು ಸ್ವಲ್ಪಕಾಲವಾದರೂ ಅಲ್ಲಿದ್ದು ಅನ್ವೇಷಣೆ ನಡೆಸಲು ಸಿದ್ಧತೆ ನಡೆಯುತ್ತಿದೆ.

ಒಂದು ವೇಳೆ ಚಂದ್ರನ ಮೇಲೆ ನೆಲೆಸಬೇಕು ಎಂದಾದಲ್ಲಿ ಅಲ್ಲಿ ಏನೆಲ್ಲಾ ಮಾಡಬೇಕು ಗೊತ್ತೇ?

ಮೊಟ್ಟಮೊದಲು ಮಾನವ ಚಂದ್ರನ ಮೇಲೆ ಓಡಾಡಲು ಅಲ್ಲಿನ ಸೂರ್ಯನ ಕಿರಣಗಳು ಮತ್ತು ವಿಶ್ವಕಿರಣಗಳಿಂದ ಸಂರಕ್ಷಿಸಿಕೊಳ್ಳಲು ಉಪಾಯ ಹುಡುಕಬೇಕು.

ಚಂದ್ರನ ಮೇಲೆ ಸೂಕ್ಷ್ಮ ನೆಲೆಯೊಂದನ್ನು ಪತ್ತೆ ಹಚ್ಚಿದ ಮೇಲೆ ಸದಾಕಾಲ ಅಲ್ಲಿ ನಡೆಯುವ ಉಲ್ಕಾಪಾತಗಳಿಂದ ರಕ್ಷಿಸುವಂತಹ ವಿಶೇಷ ಮನೆಯೊಂದನ್ನು ನಿರ್ಮಿಸಿಕೊಳ್ಳಬೇಕು. ಆ ಮನೆಯನ್ನು ಕಟ್ಟಲು ಭೂಮಿಯಿಂದಲೇ ಸಾಮಗ್ರಿಗಳನ್ನು ಚಂದ್ರನ ಹತ್ತಿರ ಸಾಗಿಸಬೇಕು. ಸ್ವಾಭಾವಿಕ ಸಂಪನ್ಮೂಲಗಳನ್ನು ಉಪಯೋಗಿಸಿಕೊಂಡು ಮನೆಯನ್ನು ಕಟ್ಟುವುದಾದಲ್ಲಿ ಅದಕ್ಕೆ ಬಹಳ ಕಾಲಾವಾಕಾಶ ಹಿಡಿಸುತ್ತದೆ. ತುಂಬಾ ಹಗುರವಾದ ವಸ್ತುಗಳಿಂದ ಕಡಿಮೆ ಖರ್ಚಿನಲ್ಲಿ, ಅನನುಕೂಲ ವಾತಾವರಣದಲ್ಲಿ ತಡೆದುಕೊಳ್ಳಬಲ್ಲ ಸ್ವಲ್ಪಕಾಲ ವಾಸಿಸಲು ಸಾಧ್ಯವಾಗುವಂತಹ ಮನೆಯನ್ನು ನಿರ್ಮಾಣ ಮಾಡಲು ಸಂಶೋಧನೆಗಳು ನಡೆಯುತ್ತಲೇ ಇವೆ.

ರಾಸಾಯನಿಕಗಳಾದ ನಿಯೋಪ್ರಿನ್ ಮತ್ತು ಕೆವ್ಲಾರ್-49ಗಳಿಂದ ತಯಾರಿಸಿದ ಹಾಗೂ ವಾಯು ತುಂಬಿದ ತಕ್ಷಣ ಊದಿಕೊಳ್ಳುವ ಪೋರ್ಟಬಲ್ ಮನೆಯೊಂದು ಇನ್ನು ಕೆಲವೇ ವರ್ಷಗಳಲ್ಲಿ ತಲೆ ಎತ್ತಲಿದೆ.

ನಮಗೆ ಬೇಕಾ ದಲ್ಲಿ ತಕ್ಷಣವೇ ಕೂಡಿಸಬಲ್ಲ ಕಡಿಮೆ ಸಾಗಾಣಿಕೆ ದರದ, ವಾತಾವರಣದ ವೈಪರೀತ್ಯಗಳನ್ನು ಸಹಿಸಿಕೊಂಡು, ಬಹಳ ದಿನ ಬಾಳಿಕೆ ಬರುವ ಮನೆಯನ್ನು ಅಗತ್ಯಕ್ಕೆ ತಕ್ಕಂತೆ ಹೊಂದಿಸಬಹುದಾಗಿದೆ. ಅದೇ ರೀತಿ ಮನೆಯನ್ನು ರಿಪೇರಿ ಸಹಾ ಮಾಡಬಹುದಾಗಿದೆ. ಮನೆಯ ಒಳ ಮತ್ತು ಹೊರಮೈ ಒತ್ತಡಗಳ ಎರಿಳಿತಗಳನ್ನು ತೆರೆದುಕೊಳ್ಳಬಲ್ಲ ರೀತಿಯಲ್ಲಿ ಕಟ್ಟಬಹುದಾಗಿದೆ. 

ಚಂದ್ರನಲ್ಲಿ ಹೆಚ್ಚಿನ ವಿಕಿರಣ ರಕ್ಷಣೆಗೆ ಅಲ್ಲಿಯೇ ದೊರೆಯುವ ರೆಗೊಲಿತ್ ಶಿಲೆಯಿಂದ ತಯಾರಿಸಿದ ಲೇಪವನ್ನು ಈ ಮನೆಯ ಹೊರಮೈಗೆ ಬಳಿಯಬಹುದಾಗಿದೆ. ಕೊಲರಾಡೋ ವಿಶ್ವವಿದ್ಯಾಲಯದ ಬಾಹ್ಯಾಕಾಶ ಎಂಜಿನಿಯರಿಂಗ್ ಸೌಕರ್ಯಗಳ ಕೇಂದ್ರದಲ್ಲಿ ಮನೆಯನ್ನು ಕಟ್ಟುವ ರೂಪರೇಷೆ ತಯಾರಾಗುತ್ತಿದೆ. ಮನೆಯ ಮೇಲಿನ ಎಲ್ಲಾ ರೀತಿಯ ಪರೀಕ್ಷೆ ನಡೆಯುತ್ತಿದೆ. ಚಂದ್ರನ ಭ್ರಮಣೆ ಮತ್ತು ಪರಿಭ್ರಮಣೆಯ ಅವಧಿ 14 ದಿನ.

ರಾತ್ರಿಯ ಕತ್ತಲನ್ನು ಹೊರದೂಡಲು ಬೆಳಕಿಗಾಗಿ ಅಲ್ಲಿಯೇ ಒಂದು ವಿದ್ಯುತ್ ಸ್ಥಾವರದ ಅವಶ್ಯಕತೆ ಇದೆ. ಈ ಹಂತದಲ್ಲಿ ಗಗನಯಾತ್ರಿಗಳಿಗೆ ಸೂಕ್ತ ವಿಕಿರಣ ಲೇಪನ ಮಾಡಿದ ನೌಕೆಯು ಬೇಕಾಗುತ್ತದೆ. ಅದರಲ್ಲಿ ಗಗನಯಾತ್ರಿಗಳು ಆಶ್ರಯ ಪಡೆಯಬೇಕಾಗುತ್ತದೆ. ಆಮ್ಲಜನಕ, ಮೈ ತಂಪಾಗಿಸಲು ನೀರು, ಆಹಾರ, ಬಾಹ್ಯಾಕಾಶ ಉಡುಪುಗಳು ಅಲ್ಲಿ ಯಾವಾಗಲೂ ಸ್ಟಾಕ್ ಇರಬೇಕಾಗುತ್ತದೆ. ಅವಶ್ಯಕವಾದ ಎಲ್ಲಾ ರೀತಿಯ ಸಂಪನ್ಮೂಲಗಳನ್ನು ಮೊದಲೇ ಸಂಗ್ರಹಿಸಿ ಇಟ್ಟುಕೊಳ್ಳಬೇಕಾಗುತ್ತದೆ.

ಒಟ್ಟಿನಲ್ಲಿ ಎಲ್ಲಾ ರೀತಿಯ ವ್ಯವಸ್ಥೆ ಸರಿಯಾಗಿದ್ದರೆ, ಗಗನಯಾತ್ರಿಗಳು ಸ್ವಲ್ಪ ಕಾಲ ಅಲ್ಲಿಯೇ ತಂಗಿ ಚಂದ್ರನಲ್ಲಿ ನಿಕ್ಷೇಪಗಳನ್ನು ಪತ್ತೆಹಚ್ಚಬಹುದಾಗಿದೆ. ಇದೆಲ್ಲವೂ ಚಂದ್ರನಲ್ಲಿ ಸಾಧ್ಯವಾದರೆ, ಚಂದ್ರನಿಂದ ‘ಸೌರ ವಿದ್ಯುತ್’ ಉತ್ಪಾದಿಸಿ ವರ್ಷದಲ್ಲಿ ಶತಕೋಟಿ ಅಮೆರಿಕನ್ ಡಾಲರ್‌ನಷ್ಟು ಹಣವನ್ನು ಭೂಮಿಯಲ್ಲಿ ಉಳಿಸಲೂ ಯೋಜನೆ ತಯಾರಾಗುತ್ತಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !