ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕ ಭಾರ ಹೊತ್ತು ಹಾರುವ ಹೊಸ ತಲೆಮಾರಿನ ರಾಕೆಟ್ ಅಭಿವೃದ್ಧಿಗೆ ಇಸ್ರೊ ಸಿದ್ಧತೆ

Published 20 ಜುಲೈ 2023, 7:35 IST
Last Updated 20 ಜುಲೈ 2023, 7:35 IST
ಅಕ್ಷರ ಗಾತ್ರ

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಸದ್ಯ ಚಂದ್ರಯಾನ–3ರ ಯೋಜನೆ ಸಾಕಾರದತ್ತ ತನ್ನ ಚಿತ್ತ ನೆಟ್ಟಿದೆ. ಆದರೆ 2030ರಲ್ಲಿ ಅಧಿಕ ತೂಕ ಹೊತ್ತು ಸಾಗಬಲ್ಲ ರಾಕೆಟ್ ಉಡ್ಡಯನದತ್ತ ವಿಜ್ಞಾನಿಗಳು ಸಂಶೋಧನೆ ಆರಂಭಿಸಿದ್ದಾರೆ.

ಮುಂದಿನ ತಲೆಮಾರಿನ ಉಡ್ಡಯನ ವಾಹನ (ಎನ್‌ಜಿಎಲ್‌ವಿ)ಗಳು ಭಾರತದ ಬಾಹ್ಯಾಕಾಶ ಕ್ಷೇತ್ರ ದಾಪುಗಾಲಿಡಲು ಕಾರಣವಾಗಲಿದೆ ಎಂದೇ ಹೇಳಲಾಗುತ್ತಿದೆ.

ಭೂಸ್ಥಿರ ಕಕ್ಷೆಗೆ 10 ಟನ್ ಹಾಗೂ ಭೂಮಿಯ ಕೆಳ ಹಂತದ ಕಕ್ಷೆಗೆ 20 ಟನ್‌ನಷ್ಟು ಪೇಲೋಡ್‌ ಹೊತ್ತು ಸಾಗಬಲ್ಲ ರಾಕೆಟ್ ಇದಾಗಲಿದೆ. ಇದರಿಂದಾಗಿ ಪ್ರತಿ ಕೆ.ಜಿ.ಗೆ ₹2.5ಲಕ್ಷದಷ್ಟು ಉಳಿತಾಯವಾಗಲಿದೆ ಎಂದು ಅಂದಾಜು ಮಾಡಲಾಗಿದೆ. 

ಸ್ಪೇಸ್‌ ಎಕ್ಸ್‌ ಫಾಲ್ಕನ್‌ 9 ಉಡ್ಡಯನ ವಾಹನವು ಈವರೆಗಿನ ಅತಿ ತೂಕ ಹೊತ್ತೊಯ್ಯಬಲ್ಲ ರಾಕೇಟ್ ಆಗಿದೆ. ಇದು 9 ಟನ್‌ ಹೊತ್ತು ಕಕ್ಷೆಗೆ ಹಾರಬಲ್ಲ ಸಾಮರ್ಥ್ಯ ಹೊಂದಿದೆ. ಆದರೆ ಇದನ್ನೂ ಮೀರಿಸುವ ರಾಕೇಟ್ ಅಭಿವೃದ್ಧಿಗೆ ಇಸ್ರೊ ಮುಂದಾಗಿದೆ. ಅದಕ್ಕಾಗಿ ಭಾರತದಲ್ಲಿರುವ ಇತರ ಖಾಸಗಿ ಕಂಪನಿಗಳಿಗೆ ಅಗತ್ಯ ಬಿಡಿಭಾಗಗಳನ್ನು ಪೂರೈಸುವಂತೆಯೂ ಕೇಳಿದೆ.

ಒಂದೊಮ್ಮೆ ಮುಂದಿನ ತಲೆಮಾರಿನ ಉಡ್ಡಯನ ವಾಹನ ಸಿದ್ಧಗೊಂಡಲ್ಲಿ ಅದು ಸದ್ಯ ಇರುವ ಪೋಲಾರ್ ಉಪಗ್ರಹ ಉಡ್ಡಯನ ವಾಹನ (ಪಿಎಸ್‌ಎಲ್‌ವಿ) ಅನ್ನು ಬದಲಿಸಲಿದೆ. ವೆಚ್ಚ ತಗ್ಗಿಸಲು ಅಗ್ಗದ ಇಂಧನ ಬಳಕೆಗೆ ಇಸ್ರೊ ಒತ್ತು ನೀಡಿದೆ. ಹೀಗಾಗಿ ಸೆಮಿ ಕ್ರಯೋಜೆನಿಕ್ ಪ್ರೊಪಲ್ಶನ್‌ (ರಿಫೈನ್ಡ್‌ ಸೀಮೆಎಣ್ಣೆಯ ಜತೆಗೆ ದ್ರವರೂಪದ ಆಮ್ಲಜನಕ) ಅನ್ನು ಬಳಸಲು ಚಿಂತನೆ ನಡೆಸಿದೆ. ಇದನ್ನು ನಿಗದಿತ ಹಂತಕ್ಕೆ ಏರಲು ಅಗತ್ಯವಿರುವ ಒತ್ತಡ ನಿರ್ಮಾಣಕ್ಕೆ ಈ ಇಂಧನ ಅಗತ್ಯ. ಸದ್ಯ ಅಭಿವೃದ್ಧಿ ಹಂತದಲ್ಲಿರುವ ಎನ್‌ಜಿಎಲ್‌ವಿ 2030ರಲ್ಲಿ ಬಳಕೆಗೆ ಲಭ್ಯವಾಗುವ ಸಾಧ್ಯತೆ ಇದೆ.

‘ಈ ಹೊಸ ತಲೆಮಾರಿನ ರಾಕೆಟ್ ಅನ್ನು ಮರುಬಳಕೆ ಮಾಡಲು ಅನುಕೂಲವಾಗುವಂತೆ ಅಭಿವೃದ್ಧಿಪಡಿಸಲಾಗುತ್ತಿದೆ. ಆದರೆ ಅದು ಇನ್ನೂ ವಿನ್ಯಾಸ ಅಭಿವೃದ್ಧಿಯ ಹಂತದಲ್ಲಿದೆ. ಇಸ್ರೊದ ಹಲವು ವಿಭಾಗಗಳು ಈ ಕಾರ್ಯದಲ್ಲಿ ತೊಡಗಿವೆ. ಕಾರ್ಯಕ್ಷಮತೆ ವೃದ್ಧಿ ಹಾಗೂ ಹಣ ಉಳಿತಾಯ ಎರಡನ್ನೂ ದೃಷ್ಟಿಯಲ್ಲಿಟ್ಟುಕೊಂಡು ಇದನ್ನು ಅಭಿವೃದ್ಧಿಪಡಿಸಲಾಗುತ್ತಿದೆ’ ಎಂದು ಇಸ್ರೊ ಅಧ್ಯಕ್ಷ ಎಸ್. ಸೋಮನಾಥ್ ಇತ್ತೀಚೆಗೆ ಮಾಧ್ಯಮಗಳಿಗೆ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT