ಭೂ ವಾತಾವರಣ: ವೈಶಿಷ್ಟ್ಯ, ವಿಸ್ಮಯ

7
ವಿಜ್ಞಾನ ವಿಶೇಷ

ಭೂ ವಾತಾವರಣ: ವೈಶಿಷ್ಟ್ಯ, ವಿಸ್ಮಯ

Published:
Updated:
Deccan Herald

1. ಭೂ ವಾತಾವರಣ- ಅದೆಂಥ ನಿರ್ಮಿತಿ?

ಹೆಸರೇ ಸೂಚಿಸುವಂತೆ ಭೂ ವಾತಾವರಣ ವಾತದಿಂದ ಎಂದರೆ ಗಾಳಿಯಿಂದ ರೂಪುಗೊಂಡಿರುವ ಒಂದು ನಿರ್ಮಿತಿ. ಗುರುತ್ವ ಬಲದಿಂದಾಗಿ ಭೂಮಿಯನ್ನು ಅಪ್ಪಿ ಹಿಡಿದಿರುವ ಈ ನಿರ್ಮಿತಿ ವಾಸ್ತವವಾಗಿ ಧರೆಗೆ ಒಂದು ಭದ್ರ ಕವಚದಂತಿದೆ. ಪ್ರಮುಖವಾಗಿ ನಾನಾ ವಿಧದ ಅನಿಲಗಳಿಂದ ಸಂಯೋಜಿತವಾಗಿರುವ ಈ ಕವಚದ ಅಸ್ತಿತ್ವ, ಬೀಸುವ ಗಾಳಿ ಮತ್ತು ತೇಲುವ ಮೋಡಗಳ ಮೂಲಕ (ಚಿತ್ರ-1) ಪರೋಕ್ಷವಾಗಿಯಷ್ಟೇ ವೇದ್ಯ. ಜೀವ ಪೋಷಕ ಮತ್ತು ಜೀವ ರಕ್ಷಕ ಸಾಮರ್ಥ್ಯಗಳನ್ನೂ ಹೊಂದಿರುವ ಭೂ ವಾತಾವರಣದ ಪರಮ ವೈಶಿಷ್ಟ್ಯ ಏನೆಂದರೆ, ಈವರೆಗೆ ತಿಳಿದಿರುವಂತೆ ಈ ಬಗೆಯ ಸಂಯೋಜನೆಯ ಮತ್ತು ಸಾಮರ್ಥ್ಯಗಳ ವಾಯುಮಂಡಲವನ್ನು ಇಡೀ ವಿಶ್ವದಲ್ಲೇ ಬೇರೆ ಯಾವುದೇ ಒಂದೇ ಒಂದು ಗ್ರಹವಾಗಲೀ, ಉಪಗ್ರಹವಾಗಲೀ ಪಡೆದಿಲ್ಲ !

2. ಭೂ ವಾಯುಮಂಡಲದ ಸಂಯೋಜನೆ ಏನು?

ಬಹು ವಿಶಿಷ್ಟ ಸಂಯೋಜನೆಯನ್ನು ಪಡೆದಿರುವ ಭೂ ವಾಯುಮಂಡಲದಲ್ಲಿರುವ ಗಾಳಿಯ ಒಟ್ಟು ಪ್ರಮಾಣ, ಸಮೀಪ ಐವತ್ತು ಸಾವಿರ ಕೋಟಿ ಕೋಟಿ ಕಿಲೋ ಗ್ರಾಂ! ಈ ಒಟ್ಟು ದ್ರವ್ಯದ ಶೇ 78 ಭಾಗ ಸಾರಜನಕ; ಶೇ 21 ಭಾಗ ಆಮ್ಲಜನಕ; ಆರ್ಗಾನ್ ಅನಿಲದ್ದು ಶೇ 0.93; ನೀರಾವಿಯದು ಶೇ 0.25 ಭಾಗ; ಇಂಗಾಲದ ಡೈ ಆಕ್ಸೈಡ್‌ನ ಭಾಗ ಶೇ 0.04.

ಇವಷ್ಟೇ ಅಲ್ಲದೆ ಅಲ್ಪಾತಿಅಲ್ಪ ಪ್ರಮಾಣಗಳಲ್ಲಿ ಹತ್ತಾರು ಧಾತುಗಳು ಮತ್ತು ಸಂಯುಕ್ತಗಳು ವಾಯುಮಂಡಲದಲ್ಲಿ ಬೆರೆತಿವೆ: ನಿಯಾನ್, ಹೀಲಿಯಂ, ಜಲಜನಕ, ಕ್ಸೀನಾನ್, ಓಜೋನ್, ಕಾರ್ಬನ್ ಮಾನಾಕ್ಸೈಡ್, ಕಾರ್ಬನ್ ಟೆಟ್ರಾಕ್ಲೋರೈಡ್, ಮೀಥೈಲ್ ಕ್ಲೋರೈಡ್, ಗಂಧಕದ ಡೈ ಆಕ್ಸೈಡ್, ಹೈಡ್ರೋಜನ್ ಸಲ್ಫೈಡ್, ಫ್ರಿಯಾನ್, ಫಾರ್ಮಲ್ ಡೀಹೈಡ್... ಇತ್ಯಾದಿ. ಜೊತೆಗೆ ಹೂಗಳ ಪರಾಗ ಕಣಗಳು, ಸೂಕ್ಷ್ಮ ಗಾತ್ರದ ದೂಳಿನ, ಉಪ್ಪಿನ ಮತ್ತು ಬೂದಿಯ ಕಣಗಳು ಮುಂತಾದುವೂ ವಾಯುಮಂಡಲದಲ್ಲಿ ಸೇರಿ ತೇಲುತ್ತಿವೆ!

ಇಲ್ಲೊಂದು ವಿಸ್ಮಯದ ಅಂಶವಿದೆ. ಏನೆಂದರೆ ವಾಯುಮಂಡಲದಲ್ಲಿರುವ ಇಡೀ ಗಾಳಿ ರಾಶಿಯ ಶೇ 90 ಭಾಗ ನೆಲದಿಂದ ಹನ್ನೆರಡು ಕಿಲೋಮೀಟರ್ ಉನ್ನತಿಯ ಒಳಗೇ ದಟ್ಟೈಸಿದೆ!

3. ಭೂ ವಾಯುಮಂಡಲದ ವ್ಯಾಪ್ತಿ ಎಷ್ಟಿದೆ? ವಾತಾವರಣದ ರಚನಾ ಸ್ವರೂಪ ಏನು?

ಭೂ ಗಾತ್ರಕ್ಕೆ ಹೋಲಿಸಿದರೆ ವಾಯುಮಂಡಲ ತುಂಬ ತೆಳ್ಳನೆಯ ಒಂದು ಪದರದಂತಿದೆ ಅಷ್ಟೆ (ಚಿತ್ರ-4ರಲ್ಲಿ ಗಮನಿಸಿ). ವೈಜ್ಞಾನಿಕವಾಗಿ ಪತ್ತೆಮಾಡಿ ನಿರ್ಧರಿಸಲಾಗಿರುವಂತೆ ವಾಯುಮಂಡಲವನ್ನು ಸಮುದ್ರಮಟ್ಟದಿಂದ ಒಂದು ನೂರು ಕಿಲೋ ಮೀಟರ್ ಎತ್ತರದವರೆಗೆ ಮಾತ್ರ - ಕಾರ್ಮನ್ ರೇಖೆಯವರೆಗೆ ಮಾತ್ರ - ಸ್ಪಷ್ಟವಾಗಿ ಗುರುತಿಸಬಹುದು. ಅಲ್ಲಿಂದಾಚೆಗೆ ಹತ್ತು ಸಾವಿರ ಕಿಲೋ ಮೀಟರ್‌ವರೆಗೆ  ವಾತಾವರಣದ್ದು ಕ್ರಮವಾಗಿ ವಿರಳಾತಿವಿರಳ ಅಸ್ತಿತ್ವ.

ವಿಶೇಷ ಏನೆಂದರೆ, ಭೂ ವಾಯುಮಂಡಲದ್ದು ಬಹು ಪದರ ಸ್ವರೂಪ (ಚಿತ್ರ - 2). ಸಾಗರಮಟ್ಟದಿಂದ ಆರಂಭಿಸಿ ಅನುಕ್ರಮವಾಗಿ ಹವಾಗೋಳ (0 ದಿಂದ 12 ಕಿ.ಮೀ), ಸ್ತರ ಗೋಳ (12 ರಿಂದ 50 ಕಿ.ಮೀ), ಮಧ್ಯ ಗೋಳ (50 ರಿಂದ 80 ಕಿ.ಮೀ.), ತಾಪ ಗೋಳ (80 ರಿಂದ 700 ಕಿ.ಮೀ) ಮತ್ತು ಬಹಿರ್ಗೋಳ (700 ರಿಂದ 10,000 ಕಿ.ಮೀ) - ಹೀಗೆ ಐದು ಪ್ರಧಾನ ಪದರಗಳೇ ಅಲ್ಲದೆ ಅಯಾನು ಗೋಳ, ಓಜೋನ್ ಪದರ ಇತ್ಯಾದಿ ಉಪ ಪದರಗಳು ವಾಯುಮಂಡಲದಲ್ಲಿ ಹಲವಾರಿವೆ. ಈ ಪ್ರತಿ ಪದರದಲ್ಲೂ ಇರುವ ಗಾಳಿಯ ಸಂಯೋಜನೆ, ಸಾಂದ್ರತೆ, ಒತ್ತಡ, ಉಷ್ಣತೆ, ಅಲ್ಲಿ ಜರುಗುವ ವಿದ್ಯಮಾನಗಳು ಎಲ್ಲವೂ ವಿಶಿಷ್ಟ ಮತ್ತು ವಿಭಿನ್ನ ಎಂಬುದು ಇಲ್ಲಿ ಗಮನಿಸಬೇಕಾದ ಮಹತ್ವದ ಅಂಶ.

4. ಧರೆಯ ವಾಯುಮಂಡಲ ರೂಪುಗೊಂಡದ್ದು ಹೇಗೆ ?

ವಾಸ್ತವವಾಗಿ ಧರೆಯ ವಾಯುಮಂಡಲ ಅದರ ಸಹಜಾತ ಲಕ್ಷಣವಲ್ಲ! ಪ್ರಸ್ತುತ ಸುಮಾರು 500 ಕೋಟಿ ವರ್ಷ ವಯಸ್ಸಾಗಿರುವ ಭೂಮಿಗೆ ಸದ್ಯದ ಸಂಯೋಜನೆಯ ವಾಯುಮಂಡಲ ಒದಗಿದ್ದು ಈಗ ಕೇವಲ ಐವತ್ತು ಕೋಟಿ ವರ್ಷ ಹಿಂದೆ, ಅಷ್ಟೆ!

ಈಗ್ಗೆ ಸಮೀಪ 500 ಕೋಟಿ ವರ್ಷ ಹಿಂದೆ ಕುದಿಯುತ್ತಿದ್ದ ಚೆಂಡಿನಂತೆ ಮೈದಳೆದ ಭೂಮಿ ನಿಧಾನವಾಗಿ ತಣ್ಣಗಾಗತೊಡಗಿತ್ತು. ಹಾಗಾಗುತ್ತಿದ್ದಾಗ ಆಗಿನ ಭೂಮಿಯ ಒಡಲಿನಿಂದ ಸಾರಜನಕ, ಇಂಗಾಲದ ಡೈ ಆಕ್ಸೈಡ್, ಜಲಜನಕ ಮತ್ತು ಅಲ್ಪ ಪ್ರಮಾಣದಲ್ಲಿ ಆರ್ಗಾನ್ ಅನಿಲ ಹೊರಹೊಮ್ಮುತ್ತ ಭೂಮಿಯನ್ನು ಪರಿವರಿಸಿ ತೆಳ್ಳನೆಯ ಪದರಂತೆ ಸಂಗ್ರಹಗೊಳ್ಳತೊಡಗಿದುವು. ಸುಮಾರು 450 ಕೋಟಿ ವರ್ಷಗಳ ಹಿಂದಿನ ವೇಳೆಗೆ ಆರಂಭಗೊಂಡು ಕ್ರಮೇಣ ತೀವ್ರಗೊಂಡ ಜ್ವಾಲಾಮುಖಿಗಳ ಚಟುವಟಿಕೆಗಳು (ಚಿತ್ರ -3) ಭೂ ಆಂತರ್ಯದಿಂದ ಭಾರೀ ಪ್ರಮಾಣದಲ್ಲಿ ಇಂಗಾಲದ ಡೈ ಆಕ್ಸೈಡ್, ಗಂಧಕದ ಡೈಆಕ್ಸೈಡ್, ಸಾರಜನಕ ಮತ್ತು ನೀರಾವಿಯನ್ನು ಹೊರಹಾಕತೊಡಗಿದ್ದುವು. ಹೀಗೆ ಪೃಥ್ವಿಯನ್ನುಆವರಿಸಿ ನಿಂತ ಮೂಲ ವಾಯುಮಂಡಲದಲ್ಲಿ ಇದ್ದಿದ್ದು ಈ ದ್ರವ್ಯಗಳು ಮಾತ್ರ.

ಇಂಥ ಸಂಯೋಜನೆಯ ಆದಿ ವಾತಾವರಣದಲ್ಲಿದ್ದ ನೀರಾವಿಯ ಮೇಲೆ ಸೂರ್ಯರಶ್ಮಿಯ ಪ್ರಭಾವದಿಂದಾಗಿ ಸಮೀಪ ಮುನ್ನೂರು ಕೋಟಿ ವರ್ಷ ಹಿಂದಿನ ವೇಳೆಗೆ ನಿಧಾನವಾಗಿ, ಅಲ್ಪ ಪ್ರಮಾಣದಲ್ಲಿ ಆಮ್ಲಜನಕ ಬೇರ್ಪಡತೊಡಗಿತ್ತು; ಜೊತೆಗೇ ಆಮ್ಲಜನಕದ್ದೇ ಒಂದು ಸಮಸ್ಥಾನಿಯಾದ ಓಜೋನ್ ಕೂಡ ರೂಪುಗೊಳ್ಳತೊಡಗಿತ್ತು. ಅದೇ ವೇಳೆಗೆ ಮತ್ತೂ ತಣ್ಣಗಾಗಿದ್ದ ಭೂಮಿಯ ವಾಯು ಕವಚದಲ್ಲಿದ್ದ ನೀರಾವಿ ಕಣಗಳು ಒಟ್ಟುಗೂಡಿ ಮೋಡವಾಗಿ ನಿರಂತರ ಮಳೆ ಸುರಿಯತೊಡಗಿತ್ತು. ಆಗಿನ ಭೂ ನೆಲದ ಮೇಲೆ ಮಳೆ ನೀರು ಪ್ರವಹಿಸುತ್ತ, ತಗ್ಗುಗಳಲ್ಲಿ ಸಂಗ್ರಹಗೊಳ್ಳುತ್ತ... ಹಾಗೆ ನದಿಗಳು ಮೈದಳೆದು, ಸರೋವರಗಳು ರೂಪುಗೊಂಡು ಕಡೆಗೆ ಸಾಗರಗಳೂ ಅಸ್ತಿತ್ವಕ್ಕೆ ಬಂದುವು.

ಸಾಗರಗಳು ಮೈದಳೆದ ಮೇಲೆ ಕಡಲಿನಾವಾರದಲ್ಲಿ ಅವತರಿಸಿದ ಸರಳ ಸಸ್ಯಗಳು ದ್ಯುತಿ ಸಂಶ್ಲೇಷಣೆ ನಡೆಸತೊಡಗಿದುವು. ತತ್ಪರಿಣಾಮವಾಗಿ ಅಧಿಕ ಪ್ರಮಾಣದಲ್ಲಿ ಆಮ್ಲಜನಕ ವಾಯುಮಂಡಲಕ್ಕೆ ಬೆರೆಯಿತು. ಇಂತಹ ನಾನಾ ವಿಧ ವಿದ್ಯಮಾನಗಳಿಂದ ವಾಯುಮಂಡಲದ ಸಾಂದ್ರತೆ, ಒಟ್ಟೂ ದ್ರವ್ಯ ರಾಶಿ ಮತ್ತು ಸಂಯೋಜನೆಗಳು ಬದಲಾಗುತ್ತ, ಮಾರ್ಪಡುತ್ತ ಕಡೆಗೆ ಈಗ್ಗೆ ಸುಮಾರು ಐವತ್ತು ಕೋಟಿ ವರ್ಷಗಳ ಹಿಂದಿನ ವೇಳೆಗೆ ಭೂ ವಾತಾವರಣ ಈಗಿರುವ ಸ್ವರೂಪವನ್ನು ಪಡೆಯಿತು.

5. ವಾಯುಮಂಡಲದ ಇಡೀ ಗಾಳಿ ರಾಶಿ ಜಗದಾದ್ಯಂತ ಚಲನಶೀಲವಾಗಿರುವುದು ಹೇಗೆ?

ವಾಯುಮಂಡಲದ ಶೇ 75 ಭಾಗದಷ್ಟು ಗಾಳಿ ಹವಾ ಗೋಳದಲ್ಲೇ ಶೇಖರವಾಗಿದೆ; ಈ ಗಾಳಿ ರಾಶಿ ಬಹು ವಿಧಗಳಲ್ಲಿ ಚಲನಶೀಲವಾಗಿದೆ. ವಾಯುಮಂಡಲದ ಈ ಚಲನಶೀಲತೆಗೆ ಎರಡು ಕಾರಣಗಳಿವೆ. ಮೊದಲಿನದು ‘ಭೂ ಸ್ವಭ್ರಮಣ’. ಭರದಿಂದ ಸುತ್ತುತ್ತಿರುವ ಭೂಮಿಯ ಜೊತೆ ಜೊತೆಗೇ ಅದಕ್ಕೆ ಗುರುತ್ವ ಬಲದಿಂದ ಬಂಧಗೊಂಡಿರುವ ಗಾಳಿ ರಾಶಿಯೂ ತಿರುಗುತ್ತಿದೆ. ಆದರೆ ‘ಕೋರಿಯಾಲಿಸ್’ ಬಲದಿಂದಾಗಿ ಧರೆಯ ಉತ್ತರ ಮತ್ತು ದಕ್ಷಿಣ ಗೋಳಾರ್ಧಗಳಲ್ಲಿ ಈ ಚಲನೆಯ ದಿಕ್ಕು ಮತ್ತು ವೇಗ ಬೇರೆ ಬೇರೆ ಅಕ್ಷಾಂಶಗಳಲ್ಲಿ ಬೇರೆ ಬೇರೆ.

ಎರಡನೆಯ ಕಾರಣ ಭೂ ಮೇಲ್ಮೈನ ಬೇರೆ ಬೇರೆ ಪ್ರದೇಶಗಳನ್ನು ಬೇರೆ ಬೇರೆ ಪ್ರಮಾಣಗಳಲ್ಲಿ ತಲುಪುವ ಸೂರ್ಯರಶ್ಮಿ (ಚಿತ್ರ-5). ಸೂರ್ಯನ ಬಿಸಿಲಿನ ತೀವ್ರತೆ ಭೂಮಿಯ ಸಮಭಾಜಕದ ಬಳಿ ಗರಿಷ್ಠ; ಧ್ರುವಗಳ ಬಳಿ ಕನಿಷ್ಠ. ಸೌರ ತಾಪದ ಈ ವ್ಯತ್ಯಾಸಗಳಿಂದಾಗಿ ಗಾಳಿ ರಾಶಿ ಸಮಭಾಜಕದ ಬಳಿ ಮೇಲೇರುತ್ತದೆ; ತಣಿದು ಧ್ರುವಗಳ ಕಡೆಗೆ ಇಳಿಯುತ್ತದೆ; ಅಲ್ಲಿಂದ ಸಮಭಾಜಕದ ಕಡೆಗೇ ಪ್ರವಹಿಸಿ ಬರುತ್ತದೆ. ಅದೊಂದು ಚಕ್ರೀಯ ವಿದ್ಯಮಾನ.

ಅಧಿಕ ಒತ್ತಡದಿಂದ ಕಡಿಮೆ ಒತ್ತಡದ ಕಡೆಗೆ ಒಡಮೂಡುವ ವಾತ ರಾಶಿಯ ಇಂಥ ಪರಿಚಲನೆಗಳೇ ಗಾಳಿ ಬೀಸಲು, ಮೋಡಗಳು ಮೈದಳೆಯಲು (ಚಿತ್ರ -8), ಮಳೆ ಮೋಡಗಳನ್ನು ಹೊತ್ತ ಮಾರುತಗಳು ಪ್ರವಹಿಸಲು (ಚಿತ್ರ -6), ಮಳೆ ಸುರಿಯಲು (ಚಿತ್ರ - 12), ಸುಂಟರಗಾಳಿ (ಚಿತ್ರ - 9) ಚಂಡಮಾರುತಗಳು ಗಿರ ಗಿರ ಸುತ್ತಲೂ ಮೂಲ ಕಾರಣ.

 6. ಭೂ ವಾಯುಮಂಡಲದಲ್ಲಿ ಮೈದಳೆಯುವ ವಿದ್ಯಮಾನಗಳು ಯಾವುವು?

ಭೂ ವಾಯುಮಂಡಲದಲ್ಲಿ ಹೇರಳ ವಿಧಗಳ ವಿದ್ಯಮಾನಗಳು ಮೈದಳೆಯುತ್ತವೆ: ‘ವರ್ಣಮಯ ಸೂರ್ಯೋದಯ - ಸೂರ್ಯಾಸ್ತ (ಚಿತ್ರ-7), ಮಳೆಬಿಲ್ಲು (ಚಿತ್ರ-13), ಕಾಂತಿ ವರ್ತುಲ (ಚಿತ್ರ-10), ಸೌರಗಂಬ, ಅಣಕು ಸೂರ್ಯ, ಇರಿಡಿಸೆನ್ಸ್, ಕರೋನಾ, ಗ್ಲೋರೀ, ಬಗೆ ಬಗೆಯ ಮೋಡಗಳು, ಬಿರುಗಾಳಿ, ಮಳೆ, ಮಂಜು, ಹಿಮಪಾತ, ಗುಡುಗು, ಸಿಡಿಲು, ದೂಳು ದೆವ್ವ, ಸೈಕ್ಲೋನ್, ಸುಂಟರಗಾಳಿ, ಮಿಂಚು (ಚಿತ್ರ-14), ಧ್ರುವ ಪ್ರಭೆ (ಚಿತ್ರ-11)... ಇತ್ಯಾದಿ. ಹೀಗೆಲ್ಲ ಬೆಳಕಿಗೆ ಸಂಬಂಧಿಸಿದ, ಹವೆಗೆ ಸಂಬಂಧಿಸಿದ ಮತ್ತು ವಿದ್ಯುತ್ತಿಗೆ ಸಂಬಂಧಿಸಿದ ಸೌಮ್ಯ ಮತ್ತು ಉಗ್ರ ವಿದ್ಯಮಾನಗಳದು ಒಂದು ಸುದೀರ್ಘ ಪಟ್ಟಿ.

7. ವಾತಾವರಣದಿಂದ ಭೂಮಿಗೆ, ಭೂಮಿಯ ಜೀವಿ ಸಾಮ್ರಾಜ್ಯಕ್ಕೆ ಒದಗುತ್ತಿರುವ ಅನುಕೂಲಗಳು ಏನೇನು?

ವಾಯುಮಂಡಲದಿಂದ ಧರೆಯ ಜೀವಿ ಸಾಮ್ರಾಜ್ಯಕ್ಕೆ ಒದಗುತ್ತಿರುವ ಪ್ರಯೋಜನಗಳು ಹೇರಳ. ಪ್ರಮುಖವಾಗಿ:

* ಸಕಲ ನೆಲವಾಸಿ ಪ್ರಾಣಿಗಳಿಗೆ ಪ್ರಾಣವಾಯುವಾಗಿರುವ ಆಮ್ಲಜನಕ ಲಭ್ಯವಾಗುತ್ತಿರುವುದೇ ವಾಯುಮಂಡಲದಿಂದ. ಧರೆಯ ಜೀವಧಾರಕ ಬಲದ ಮೂಲ ಆಕರಗಳಲ್ಲೊಂದಾಗಿರುವ ಮಳೆ ಚಕ್ರಕ್ಕೂ ವಾಯುಮಂಡಲವೇ ಆಧಾರ. ವಾತಾವರಣದಲ್ಲಿ ಮಿಂಚುಗಳಿಂದ ಬೇರ್ಪಟ್ಟು, ಮಳೆನೀರಿನಲ್ಲಿ ಬೆರೆತು ನೆಲಕ್ಕೆ ಸೇರುವ ಸಾರಜನಕವೇ ಎಲ್ಲ ಸಸ್ಯಗಳ ಪ್ರಧಾನ ಪೋಷಕಾಂಶ ಕೂಡ.

* ವಿಭಿನ್ನ ಸಾಮರ್ಥ್ಯಗಳನ್ನು ಹೊಂದಿರುವ ವಾತಾವರಣದ ಪದರಗಳು ಸೂರ್ಯನಿಂದ ಭಾರೀ ಪ್ರಮಾಣದಲ್ಲಿ ಹರಿದು ಬರುತ್ತಿರುವ ಎಲ್ಲ ಹಾನಿಕಾರಕ ವಿಕಿರಣಗಳನ್ನು ಭೂ ನೆಲಕ್ಕೆ ತಲುಪದಂತೆ ತಡೆದು ನಿಲ್ಲಿಸುತ್ತಿವೆ. ಜೀವಿಗಳಿಗೆ ಮತ್ತು ಭೂ ವ್ಯವಸ್ಥೆಗಳಿಗೆ ಅತ್ಯವಶ್ಯವಾದ ದೃಗ್ಗೋಚರ ಬೆಳಕು ಮತ್ತು ನಿರಪಾಯಕಾರಿಯಾದ ರೇಡಿಯೊ ಅಲೆಗಳಂಥ ವಿಕಿರಣಗಳು ಮಾತ್ರ ಭೂಮಿಯನ್ನು ಮುಟ್ಟಲು ಬಿಡುತ್ತಿವೆ (ಚಿತ್ರ -2).

* ಪೃಥ್ವಿಯತ್ತ ಹರಿದು ಬರುತ್ತಿರುವ ಸೂರ್ಯನ ತೀಕ್ಷ್ಣ ಬಿಸಿಲನ್ನು ವಾಯುಮಂಡಲ ಹಗಲಲ್ಲಿ ಮೃದುಗೊಳಿಸುತ್ತಿದೆ; ಇರುಳಲ್ಲಿ ನೆಲದ ಬಿಸಿ ಸಂಪೂರ್ಣವಾಗಿ ಅಂತರಿಕ್ಷಕ್ಕೆ ಕಳೆದುಹೋಗದಂತೆ ತಡೆಯುತ್ತಿದೆ. ಹಾಗಾದ್ದರಿಂದಲೇ ರಾತ್ರಿಯಲ್ಲೂ ಭೂ ಪರಿಸರ ಬೆಚ್ಚಗೇ ಉಳಿದಿರುವುದು ಸಾಧ್ಯವಾಗಿದೆ.

* ಅಂತರಿಕ್ಷದಿಂದ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ, ಹಗಲೂ ಇರುಳೂ ಅವಿರತವಾಗಿ ಧರೆಗೆ ಎರಗುತ್ತಿರುವ ಕ್ಷುದ್ರ ಗ್ರಹಗಳೊಡನೆ ಸಂಘರ್ಷಿಸಿ, ಅವುಗಳನ್ನು ಬಿಸಿಗೊಳಿಸಿ, ಉಲ್ಕೆಗಳನ್ನಾಗಿಸಿ, ಬೂದಿಯಾಗಿಸಿ ನೆಲದ ಜೀವ ಜಾಲವನ್ನು ರಕ್ಷಿಸುತ್ತಿರುವ ಅಭೇದ್ಯ ಕವಚವೂ ಕೂಡ ವಾಯುಮಂಡಲವೇ ತಾನೇ?

ಸ್ಪಷ್ಟವಾಗಿಯೇ ಧರೆಯ ಸ್ವಾಸ್ಥ್ಯಕ್ಕೆ, ಜೀವಲೋಕದ ಅಸ್ತಿತ್ವಕ್ಕೆ ವಾಯುಮಂಡಲ ಅತ್ಯವಶ್ಯ ಮತ್ತು ಅನಿವಾರ್ಯ. ಎಂಥ ಅದ್ಭುತ ಅಲ್ಲವೇ?

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !