ಬುಧವಾರ, ಮಾರ್ಚ್ 29, 2023
25 °C

ನಾಯಿ, ನರಿಗಳು ಊಳಿಟ್ಟರೆ... ಏನಿದರ ಕಾರಣ?

ಅಮೃತೇಶ್ವರಿ ಬಿ. Updated:

ಅಕ್ಷರ ಗಾತ್ರ : | |

Prajavani

ಸಾವಿರಾರು ವರ್ಷಗಳ ಹಿಂದೆ ಮನುಷ್ಯನು ಪ್ರಾಣಿಗಳನ್ನು ತನ್ನ ಅನುಕೂಲಕ್ಕೆ ಬಳಸಿಕೊಳ್ಳುವುದನ್ನು ಕಲಿತ. ಸಾಕುಪ್ರಾಣಿಗಳು ಎಂದಾಗ ನೆನಪಾಗುವ ಮೊದಲ ಪ್ರಾಣಿಯೇ ನಾಯಿ. ಸುಮಾರು 20000ದಿಂದ 30000 ವರ್ಷಗಳ ಹಿಂದೆಯೇ ಮನುಷ್ಯನು ನಾಯಿಗಳನ್ನು ಸಾಕುತ್ತಿದ್ದ ಎನ್ನುವ ಅಂದಾಜಿದೆ. ಹಾಗಾಗಿ ನಾಯಿ ಹಾಗೂ ಮನುಷ್ಯನ ಸಂಬಂಧ ಬಹಳ ಗಾಢವಾದದ್ದು ಎನ್ನಬಹುದು. ನಮ್ಮ ಪೂರ್ವಜರು ಶತಮಾನಗಳಿಂದ ನಾಯಿಗಳೊಂದಿಗೆ ಒಡನಾಡಿದ್ದರಿಂದ ಅವುಗಳ ನಡವಳಿಕೆ ಹಾಗೂ ಚಲನವಲನಗಳಿಗೆ ಕಾರಣ ಹಾಗೂ ಅದರ ಸೂಚನೆಗಳನ್ನು ಅಂದಾಜಿಸಿಯೂ ನೋಡಿದ್ದಾರೆ. ರಾತ್ರಿ ವೇಳೆ ನಾಯಿಗಳು ಊಳಿಡುವುದನ್ನು ನಾವೆಲ್ಲರೂ ಸಾಮಾನ್ಯವಾಗಿ ಕೇಳಿರುತ್ತೇವೆ. ಅದಕ್ಕೆಲ್ಲೊ ದೆವ್ವಭೂತಗಳು ಕಾಣಿಸಿರಬೇಕು ಎನ್ನುವುದು ಒಂದು ಜನಪ್ರಿಯ ಕಲ್ಪನೆ. ಆದರೆ ಕಾಡಿನಲ್ಲಿ ನರಿ–ತೋಳಗಳು ಕೂಡ ಊಳಿಡುತ್ತವೆ. ಈ ನಾಯಿ ಹಾಗೂ ನರಿಗಳೆರಡೂ ‘ಕ್ಯಾನಿಸ್‌ ಲೂಪಸ್‌’ ಎನ್ನುವ ಒಂದೇ ಕುಟುಂಬದ ಪ್ರಾಣಿಗಳು. ಹಾಗಾದರೆ ಇವೆರಡರ ನಡವಳಿಕೆಯಲ್ಲಿ ಸಾಮ್ಯ ಇರಬೇಕಲ್ಲವೇ? ನರಿಗಳು ಊಳಿಟ್ಟಾಗ ನಾಯಿಗಳೂ ಪ್ರತಿಕ್ರಿಯಿಸಬಲ್ಲವೇ?

ಎರಡೂ ಪ್ರಾಣಿಗಳೂ ಊಳಿಡುವುದೂ ಮತ್ತೊಬ್ಬ ಸದಸ್ಯನೊಂದಿಗೆ ಸಂವಹಿಸುವುದಕ್ಕಾಗಿ ಮತ್ತು ತಮ್ಮ ಗಡಿಯನ್ನು ಖಾತರಿಪಡಿಸಿಕೊಂಡು ರಕ್ಷಿಸಿಕೊಳ್ಳುವುದಕ್ಕಾಗಿ ಎನ್ನುವುದು ಈಗ ತಿಳಿದಿರುವ ವಿಷಯ. ಆದರೆ ತನ್ನ ಸಂಬಂಧಿಕರಾದ ನರಿಗಳ ಕೂಗಿಗೆ ನಾಯಿಗಳು ಹೇಗೆ ಪ್ರತಿಕ್ರಿಯಿಸುತ್ತವೆ? ಎಲ್ಲ ನಾಯಿಗಳೂ ಏಕೆ ಊಳಿಡುವುದಿಲ್ಲ ಎನ್ನುವುದು ಸಂಕೀರ್ಣ ಹಾಗೂ ಗೊಂದಲದ ವಿಷಯಗಳಾಗಿದ್ದವು. ಹಿಮಪ್ರದೇಶಗಳಲ್ಲಿ ತೋಳ–ನರಿಗಳಂತೆಯೇ ಇರುವ ಒಂದು ಜಾತಿಯ ನಾಯಿಯನ್ನು ಸರಕುಗಳನ್ನು ಎಳೆದುಕೊಂಡು ಸಾಗಿಸಲು ಬಳಸಿಕೊಳ್ಳುತ್ತಾರೆ. ಅವು ಹೆಚ್ಚು ಊಳಿಡುತ್ತವೆ; ಮೇಲಿಂದ ಮೇಲೆ ಊಳಿಡುತ್ತಲೇ ಇರುತ್ತವೆ. ಅಂದರೆ ಅವು ಊಳಿಡುತ್ತಲೇ ಸಂಭಾಷಿಸುತ್ತವೆ. ಗಂಟೆ, ಸೈರನ್‌ ಅಥವಾ ಸಂಗೀತದ ಸದ್ದಿಗೂ ಕೂಗುತ್ತಲೇ ಪ್ರತಿಕ್ರಿಯಿಸುತ್ತವೆ. ಕೆಲವೊಂದು ನಾಯಿಗಳಂತೂ ಜೀವಮಾನವಿಡೀ ಕೂಗುವುದೇ ಇಲ್ಲ. ‘ಕುಯ್‌ ಕುಯ್‌’ ಎಂದೇ ಮಾತನಾಡಿಕೊಳ್ಳುತ್ತವೆ – ಅವುಗಳಿಗೆ ಕೂಗುವ ಸಾಮರ್ಥ್ಯ ಹಾಗೂ ಅಂಗವಿದ್ದರೂ. ಇದು ಕೂತೂಹಲಕಾರಿ ವಿಷಯ. ಇದೋ ಯೋಟೋಸ್‌ ಲೊರ್ಯಾಂಡ್‌ ವಿಶ್ವವಿದ್ಯಾನಿಲಯದ ನಡವಳಿಕೆ ತಜ್ಞರಾದ ಥಾಮಸ್‌ ಫರಗೋ ಮತ್ತು ಫನ್ನಿ ಲೆಹೋಸ್ಕಿ ಈ ಪ್ರಶ್ನೆಗಳಿಗೆ ಉತ್ತರ ಹುಡುಕಿದ್ದಾರೆ. ಮೊದಲಿಗೆ ಥಾಮಸ್‌ ಹಾಗೂ ಲೆಹೋಸ್ಕಿ ಅವರು ನಾಯಿಗಳು ಊಳಿಡುವುದಕ್ಕೆ ಕಾರಣಗಳ ಏನು ಹಾಗೂ ಅದು ಕೆಲವು ನಿರ್ದಿಷ್ಟ ಜಾತಿಗೆ ಮಾತ್ರ ಸೀಮಿತವೇ ಅಥವಾ ಆನುವಂಶಿಕವಾಗಿ ನರಿಗಳೊಂದಿಗೆ ಏನಾದರೂ ಸಂಬಂಧವಿದೆಯೇ ಎಂದು ತಿಳಿಯಲೆತ್ನಿಸಿದ್ದಾರೆ. ನಾಯಿ ಹಾಗೂ ನರಿಗಳ ಅನುವಂಶಿಕ ಧಾತುಗಳೂ ಸುಮಾರು ಪ್ರತಿಶತ 90ರಷ್ಟು ಒಂದೇ ಆಗಿವೆಯೆಂತೆ. ಅರ್ಥಾತ್‌ ನಾಯಿ–ನರಿಗಳೆರಡೂ ಒಂದೇ ಕುಟುಂಬದ ಪ್ರಾಣಿಗಳಾಗಿವೆ ಎನ್ನುವುದು ಖಚಿತವಾಯಿತು.

ಇನ್ನು ಇವುಗಳು ನಡವಳಿಕೆಯ ಸಾಮ್ಯಗಳನ್ನು ಪರೀಕ್ಷಿಸಲು ಇವರು 68 ಶುದ್ಧ ತಳಿಯ ನಾಯಿಗಳನ್ನು ಪ್ರಯೋಗಾಲಯದಲ್ಲಿಟ್ಟು ನರಿಗಳ ರೆಕಾರ್ಡ್‌ ಮಾಡಿದ ಕೂಗನ್ನು ಕೇಳಿಸಿ ನೋಡಿದ್ದಾರೆ. ತಳಿಯಿಂದ ತಳಿಗೆ ಹೇಗೆ ವ್ಯತ್ಯಾಸವಾಗುತ್ತದೆ ಎಂದು ನೋಡಲು ವಿವಿಧ ತಳಿಗಳ ನಾಯಿಗಳನ್ನೂ ಸೇರಿಸಿಕೊಂಡಿದ್ದಾರೆ. ಫಲಿತಾಂಶಗಳ ಪ್ರಕಾರ ಹಳೆಯ ತಳಿಗಳ ನಾಯಿಗಳು ನರಿಗಳ ಊಳನ್ನು ಕೇಳಿ ಊಳಿಡತೊಡಗಿದವಂತೆ. ಜೊತೆಗೆ ಅವುಗಳ ವರ್ತನೆಯಲ್ಲಿ ಕೊಂಚ ಒತ್ತಡವೂ ಇದ್ದಂತೆ ತೋರಿತಂತೆ. ಎಲ್ಲಿ ತನ್ನ ಗಡಿಯನ್ನು ಮತ್ತೊಂದು ಪ್ರಾಣಿಯು ಪ್ರವೇಶಿಸಿಬಿಟ್ಟಾತು ಎನ್ನುವ ಭಯವೂ ಇದ್ದಿರಬೇಕು. ಆದರೆ ದೂರದ ಸಂಬಂಧಿಗಳೆಂದಿನಿಸುವ ಹೊಸ ತಳಿಯ ನಾಯಿಗಳು ನರಿಗಳ ಕೂಗನ್ನು ಕೇಳಿದಾಗ ತಾವೂ ಊಳಿಡದೇ ಬೊಗಳಲು ಶುರು ಮಾಡಿವೆ. ಹೊಸ ತಳಿಯ ನಾಯಿಗಳಿಗೂ ಕೂಗುವ ಸಾಮರ್ಥ್ಯವಿದ್ದರೂ ಅವು ಕೂಗದಿರುವುದಕ್ಕೆ ಕಾರಣ ಅವು ವಾಸಿಸುವ ವಾತಾವರಣವಿರಬಹುದು ಎನ್ನುತ್ತಾರೆ ಲೆಹೊಸ್ಕಿ.

ನರಿಗಳ ಊಳಿನಲ್ಲಿ ಅವು ಹೇಳಬಯುಸುತ್ತಿದ್ದ ಮಾಹಿತಿಯನ್ನು ಹೊಸತಳಿಯ ನಾಯಿಗಳಿಗಿಂತ ಹಳೆಯ ತಳಿಯ ನಾಯಿಗಳು ಹೆಚ್ಚೆಚ್ಚು ಅರ್ಥಮಾಡಿಕೊಂಡು ಭಾವಿಸಬಲ್ಲವು ಎನ್ನುವುದು ವಿಜ್ಞಾನಿಗಳ ಅಭಿಪ್ರಾಯ. ಪರೀಕ್ಷೆಗೆ ಬಳಸಿದವುಗಳಲ್ಲಿ ವಿವಿಧ ತಳಿ, ವಯಸ್ಸು, ಮತ್ತು ಲಿಂಗದ ನಾಯಿಗಳೂ ಹಾಗೂ ಬಂಜೆತನವಿದ್ದ ನಾಯಿಗಳೂ ಇದ್ದುವು. ಇವುಗಳಲ್ಲಿ ಹೆಚ್ಚಾಗಿ ಐದು ವರ್ಷ ಮೇಲ್ಪಟ್ಟ ನಾಯಿಗಳು ಹೆಚ್ಚಾಗಿ ಪ್ರತಿಕ್ರಿಯಿಸಿವೆ. ಗಂಡುಪ್ರಾಣಿಗಳು ತನ್ನ ಸೀಮೆಯನ್ನು ಕಾಯ್ದುಕೊಳ್ಳುವುದರಲ್ಲಿ ಪ್ರಬಲರಾಗಿರುವುದೂ ಇದಕ್ಕೆ ಕಾರಣವಿರಬಹುದು. ಮತ್ತೊಂದು ಪ್ರಾಣಿ ತನ್ನ ಗಡಿಯನ್ನು ಪ್ರವೇಶಿಸುತ್ತಿದ್ದಂತೆಯೇ ಭಯ ಹಾಗೂ ರಕ್ಷಿಸಿಕೊಳ್ಳುವ ಸಲುವಾಗಿ ಗಂಡುನಾಯಿಗಳು ಒತ್ತಡಕ್ಕೊಳಗಾಗುತ್ತಿರಬಹುದು ಎಂಬುದು ಇವರ ಅಭಿಪ್ರಾಯ. ಗಂಡುನಾಯಿಗಳು ಒತ್ತಡಕ್ಕೊಳಗಾದಾಗ ಹಾರ್ಮೋನಿನಲ್ಲಿ ಬದಲಾವಣೆ ಆಗುತ್ತಿರುವುದನ್ನು ಗಮನಿಸಿದ್ದಾರೆ. ಬಂಜೆತನವಿದ್ದ ಗಂಡು ಹಾಗೂ ಹೆಣ್ಣುನಾಯಿಗಳನ್ನೂ ಪರೀಕ್ಷಿಸಿದ್ದರಿಂದ ಈ ಅಂಶ ಖಚಿತವಾಯಿತು ಎನ್ನುತ್ತಾರೆ, ಥಾಮಸ್‌ ಮತ್ತು ತಂಡದವರು.

ಆದರೆ ತಮಗೆ ಬೇಕಾದ ಗುಣಗಳು ಪ್ರಧಾನವಾಗಿ ಇರಬೇಕೆಂದು ಜೈವಿಕ ತಂತ್ರಜ್ಞಾನ ಹಾಗೂ ತಳಿವಿಜ್ಞಾನದ ಸಹಾಯದಿಂದ ಹೊಸಹೊಸ ತಳಿಯ ನಾಯಿಗಳನ್ನು ಸೃಷ್ಟಿಸಿರುವುದು ಗೊತ್ತೇ ಇದೆ. ಹೀಗೆ ಮನುಷ್ಯ ತನ್ನ ಅನುಕೂಲಕ್ಕೆ ಪಳಗಿಸಿ ಅಥವಾ ಸೃಷ್ಟಿಸಿಕೊಂಡ ತಳಿಯ ನಾಯಿಗಳು ಊಳಿಡುವ ಸಾಮರ್ಥ್ಯವಿದ್ದರೂ ಸಣ್ಣದಾಗಿ ಕುಯ್‌ ಕುಯ್‌ ಎನ್ನುತ್ತಲೋ ಅಥವಾ ಸಿಂಹಗಳಿಗಿಂತಲೂ ಭಯಂಕರವಾಗಿಯೋ ಬೊಗಳುತ್ತವೆ. ತನ್ನ ಸೋದರ ಸಂಬಂಧಿಗಳಾದ ನರಿಗಳು ಕೂಗಿದರೂ ಪಾಪ ಪ್ರತಿಕ್ರಿಯಿಸಲಾರವು ಕೆಲವು ನಾಯಿಗಳು. ಒಂದೇ ಕುಂಟುಂಬದ ಪ್ರಾಣಿಗಳಾದರೂ ಸಾಮಾಜಿಕ ವಾತಾವರಣ ಅವುಗಳನ್ನು ಹೇಗೆ ಬದಲಾಯಿಸಬಿಡಬಹುದು ಎನ್ನುವುದಕ್ಕೆ ಇದು ಸಾಕ್ಷಿ.ಅವುಗಳಿಗೆ ತನ್ನ ಗಡಿಯ ಗೊಡವೆಯೂ ಇರುವುದಿಲ್ಲ. ಇವಕ್ಕೆ ತನ್ನ ಯಾವ ಸಂಬಂಧಿ ತನ್ನನ್ನು ಕರೆಯುತ್ತಿದೆ ಎನ್ನುವುದು ಅರಿವಾಗುವುದೂ ಇಲ್ಲ. ಹಾಗಾದರೆ ನರಿಗಳು ಊಳಿಟ್ಟರೆ ಶುಭಸೂಚನೆ ಮತ್ತು ನಾಯಿಗಳು ಊಳಿಟ್ಟರೆ ಅಶುಭ ಎನ್ನುವುದು ಎಷ್ಟು ಸತ್ಯವೋ ತಿಳಿಯದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು