ಸುಳ್ಳು ಸುದ್ದಿಗಳ ಜನ್ಮ ಜಾಲಾಡುವ ಜಾಲತಾಣಗಳು

7

ಸುಳ್ಳು ಸುದ್ದಿಗಳ ಜನ್ಮ ಜಾಲಾಡುವ ಜಾಲತಾಣಗಳು

Published:
Updated:

ಪಾಕಿಸ್ತಾನದಲ್ಲಿ ಹಿಂದೂಗಳ ಮೇಲೆ ದಾಳಿ, ಬಾಂಗ್ಲಾದೇಶದಲ್ಲಿ ಭಾರತದ ನಕಲಿ ಕರೆನ್ಸಿ ಮುದ್ರಣ, ಮಕ್ಕಳ ಕಳ್ಳರ ವದಂತಿ… ಇಂತಹ ಸುದ್ದಿಗಳು ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌ ಮತ್ತು ವಾಟ್ಸ್‌ಆ್ಯಪ್‌ಗಳಲ್ಲಿ ನಿತ್ಯ ಕಾಣಿಸಿಕೊಳ್ಳುತ್ತಿರುತ್ತವೆ. ಇದರ ಸತ್ಯಾಸತ್ಯತೆ ಅರಿಯದೇ ಕುರುಡಾಗಿ ಹಂಚಿಕೊಳ್ಳುವವರೇ ಅಧಿಕ. ಈ ಜಾಲತಾಣಗಳು ಇಂತಹ ಸುದ್ದಿಗಳ ಸತ್ಯಾಂಶವನ್ನು ಹೊರಗೆಳೆಯುವ ಪ್ರಯತ್ನ ಮಾಡುತ್ತಿವೆ.

ಮುಂಬೈನಲ್ಲಿ ಕೆಲಸ ಮಾಡುತ್ತಿರುವ ಕಂಪ್ಯೂಟರ್ ಎಂಜಿನಿಯರ್ ಪಂಕಜ್ ಜೈನ್ ಅವರ ವಾಟ್ಸ್‌ಆ್ಯಪ್‌ ಸಂಖ್ಯೆಗೆ ನಿತ್ಯ ಹಲವು ಫಾರ್ವರ್ಡ್‌ ಸಂದೇಶಗಳು, ವಿಡಿಯೊಗಳು ಬರುತ್ತಿದ್ದವು. ಅವುಗಳಲ್ಲಿ ಕೆಲವು ‘ಸತ್ಯಕ್ಕೆ ದೂರವಾಗಿವೆ’ ಎಂಬ ಅನುಮಾನ ಅವರಿಗೆ ಕಾಡುತ್ತಿತ್ತು.

‘ಜನ ಗಣ ಮನ’ ರಾಷ್ಟ್ರಗೀತೆಯನ್ನು ವಿಶ್ವದ ಅತ್ಯುತ್ತಮ ರಾಷ್ಟ್ರಗೀತೆಯಾಗಿ ವಿಶ್ವಸಂಸ್ಥೆ ಘೋಷಿಸಿದೆ ಎಂಬ ಸಂದೇಶವೊಂದು ಅವರ ಕಣ್ಣಿಗೆ ಬಿದ್ದಿತ್ತು. ಇದನ್ನು ಅವರ ಗ್ರೂಪ್‌ನಲ್ಲಿದ್ದ ಹಲವರು ನಿಜವೆಂದು ನಂಬಿ ಚರ್ಚಿಸುತ್ತಿದ್ದರು. ಈ ಸುದ್ದಿಯೇ, ಅವರಲ್ಲಿ ವಾಸ್ತವ ಹುಡುಕುವ ಪ್ರಯತ್ನಕ್ಕೆ ಪ್ರೇರೇಪಿಸಿತು.

‘ಯಾವುದೇ ವಿಷಯವಾಗಲಿ, ಷೇರ್ ಮಾಡುವ ಮುನ್ನ ಕೆಲವು ನಿಮಿಷ ಯೋಚಿಸಿದರೆ ಅದರ ಸತ್ಯಾಸತ್ಯತೆ ತಿಳಿಯುತ್ತದೆ’ ಎಂದು ಹೇಳುವ ಅವರು, ನಕಲಿ ಸುದ್ದಿಗಳ ಜನ್ಮ ಜಾಲಾಡಲು ಮುಂಬೈನಲ್ಲಿ smhoaxslayer.com ಎಂಬ ಜಾಲತಾಣವನ್ನು ಆರಂಭಿಸಿದ್ದಾರೆ.

ಸುದ್ದಿಯ ಸತ್ಯಾಸತ್ಯತೆ ನಿರ್ಧರಿಸುವುದಕ್ಕಾಗಿ, ಅವರು ಗೂಗಲ್ ನೆರವು ಪಡೆದುಕೊಳ್ಳುತ್ತಾರೆ. ಚಿತ್ರದ ಮೂಲಕ ಸುದ್ದಿ ಹರಡಿದ್ದರೆ, ಅಂತಹ ಚಿತ್ರವನ್ನು ಗೂಗಲ್ ರಿವರ್ಸ್ ಇಮೇಜ್ ಮೂಲಕ ಸರ್ಚ್ ಮಾಡಿ, ಆ ಚಿತ್ರ ಹಿಂದೆ ಯಾವಾಗಾದರೂ ಬಳಸಲಾಗಿತ್ತೆ, ಎಂಬುದನ್ನು ಪತ್ತೆ ಮಾಡುತ್ತಾರೆ. ಜತೆಗೆ ಕೆಲವು ಕೀ ವರ್ಡ್ಸ್‌ಗಳನ್ನು ಬಳಸಿ ವಾಸ್ತವವನ್ನು ತಿಳಿಸಿ ಹೇಳುವ ಪ್ರಯತ್ನ ಮಾಡುತ್ತಿದ್ದಾರೆ.

ಭಾಷೆ ನೋಡಿ ಹೇಳಬಹುದು
ಸಾಮಾಜಿಕ ಜಾಲತಾಣಗಳಲ್ಲಿ ಸತ್ಯಕ್ಕೆ ದೂರವಾದ ಸುದ್ದಿಗಳು, ಚಿತ್ರಗಳು, ವಿಡಿಯೊಗಳ ಹಾವಳಿ ಹೆಚ್ಚಾಗುತ್ತಿರುವುದನ್ನು ಗಮನಿಸಿದ ಸಾಫ್ಟ್‌ವೇರ್ ಎಂಜಿನಿಯರ್ ಪ್ರತೀಕ್ ಸಿನ್ಹಾ ಅವರು, ಅವುಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಸ್ನೇಹಿತರೊಂದಿಗೆ ಸೇರಿ altnews.in ಎಂಬ ಜಾಲತಾಣವನ್ನು ಆರಂಭಿಸಿದರು.

‘2016-17ರ ಕೇಂದ್ರ ಬಜೆಟ್‌ನ ಭಾಗವಾಗಿ ಭಾರತ- ಪಾಕಿಸ್ತಾನದ ಗಡಿಯಲ್ಲಿ ಫ್ಲಡ್‌ಲೈಟ್‌ಗಳನ್ನು ಅಳವಡಿಸಲಾಗಿದೆ ಎಂಬ ಸಂದೇಶವೊಂದು ಕಣ್ಣಿಗೆ ಬಿತ್ತು. ನೋಡಿದರೆ ಅದು ನಮ್ಮ ದೇಶದ ಗಡಿಯಂತೆ ಕಾಣಲಿಲ್ಲ. ಅಂತರ್ಜಾಲದಲ್ಲಿ ಹುಡುಕಿದಾಗ, ಅದು ಸ್ಪೇನ್-ಮೊರಾಕೊ ದೇಶಗಳ ಗಡಿಯ ಚಿತ್ರ ಎಂಬುದು ತಿಳಿಯಿತು’ ಎನ್ನುತ್ತಾರೆ ಪ್ರತೀಕ್.

‘ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಸುಳ್ಳು ಸುದ್ದಿಗಳ ಬರವಣಿಗೆ ಶೈಲಿ, ಹಿಂಸೆಗೆ ಪ್ರಚೋದನೆ ನೀಡುವಂತೆ ಇರುತ್ತದೆ. ದ್ವೇಷ ಸೃಷ್ಟಿಸುವಂತೆ ಕಾಣುತ್ತದೆ. ಅದರ ಬರವಣಿಗೆಯಿಂದಲೇ ಸುದ್ದಿಯ ಸತ್ಯಾಸತ್ಯತೆ ತಿಳಿಯಬಹುದು’ ಎನ್ನುತ್ತಾರೆ ಅವರು.

ಪೊಲೀಸರ ನೆರವು

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ, ದ್ವೇಷ ಬಿತ್ತುತ್ತಿರುವ ಹೊಸ ವಿಡಿಯೊಗಳ ಮೇಲೆ ದೃಷ್ಟಿ ನೆಟ್ಟು, ಅವುಗಳ ಸತ್ಯಾಸತ್ಯತೆಯನ್ನು ತಿಳಿಸುವ ಪ್ರಯತ್ನವನ್ನು ಪರ್ತಕರ್ತರಾದ ಗೋವಿಂದರಾಜ್ ಮತ್ತು ಜೆನ್ಸಿ ಜಾಕಬ್ ಮಾಡುತ್ತಿದ್ದಾರೆ. ಇದಕ್ಕಾಗಿ ಅವರು boomlive.com ಎಂಬ ಜಾಲತಾಣವನ್ನು ಆರಂಭಿಸಿ, ಸುಳ್ಳು ಸುದ್ದಿಗಳ ಸತ್ಯಾಂಶವನ್ನು ಪ್ರಕಟಿಸುತ್ತಿದ್ದಾರೆ.

ಪ್ಲಾಸ್ಟಿಕ್ ಹೂಕೋಸು, ಪ್ಲಾಸ್ಟಿಕ್ ಅಕ್ಕಿಯ ಕುರಿತ ಸುದ್ದಿಗಳು ಹರಡಿದಾಗ, ಅವು ಸತ್ಯಕ್ಕೆ ದೂರವಾದವು ಎಂದು ಅವರು ಆಧಾರಗಳೊಂದಿಗೆ ನಿರೂಪಿಸಿದರು. ನಿರ್ದಿಷ್ಟ ಪ್ರದೇಶದಲ್ಲಿ ಇಂತಹ ಘಟನೆ ನಡೆದಿದೆ ಎಂಬ ಮಾಹಿತಿ ಸಿಕ್ಕರೆ ಕೂಡಲೇ, ಆ ಪ್ರದೇಶದ ಪೊಲೀಸರಿಂದ ವಾಸ್ತವ ಏನೆಂದು ಮಾಹಿತಿ ಪಡೆದು ತಮ್ಮ ಜಾಲತಾಣದಲ್ಲಿ ಪ್ರಕಟಿಸುತ್ತಾರೆ.

ಸಾಮಾನ್ಯರಿಗಾಗಿ

ರೋದಿಸುತ್ತಾ ಕುಳಿತಿರುವ ವ್ಯಕ್ತಿಯ ವಿಡಿಯೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಒಲಿಯತ್ ಕಣ್ಣಿಗೆ ಬಿತ್ತು.

‘ಈ ವ್ಯಕ್ತಿಯ ಮಗಳು ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಇದ್ದಾಳೆ. ಚಿಕಿತ್ಸೆಗೆ ಹಣ ಹೊಂದಿಸಲಾಗಿಲ್ಲ. ದಯವಿಟ್ಟು ಸಹಾಯ ಮಾಡಿ’ ಎಂದು ಆ ವಿಡಿಯೊ ಮೂಲಕ ಕೇಳಿಕೊಳ್ಳಲಾಗಿತ್ತು. ಇದನ್ನು ಗಮನಿಸಿದ ಕರುಣಾ ಹೃದಯಿಗಳು, ಹಣದ ನೆರವು ನೀಡುವುದಾಗಿ ಹೇಳಿದರು.

ಆದರೆ ವಾಸ್ತವವೇನೆಂದರೆ ಅವರ ಮಗು ತೀರಿಕೊಂಡಿತ್ತು. ಮಗಳ ಸಾವಿನ ನೋವು ಸಹಿಸಲಾಗದೇ ಅವರು ಖಿನ್ನತೆಗೆ ಒಳಗಾಗಿದ್ದರು. ಇಂತಹ ಸಮಸ್ಯೆಗಳಿಂದ ಬಳಲುತ್ತಿರುವವರ ಸಂಖ್ಯೆ ಅಧಿಕ. ಇಂತಹ ಸುದ್ದಿಗಳನ್ನು ನೋಡಿದ ಕೂಡಲೇ, ಯಾವುದು ನಿಜ, ಯಾವುದು ಸುಳ್ಳು ಎಂದು ತಿಳಿಸುವ check4spam.com ಜಾಲತಾಣವನ್ನು ಒಲಿಯತ್ ಆರಂಭಿಸಿದರು.

ಯಾವುದಾದರೂ ಸುದ್ದಿಯನ್ನು ಹಂಚಿಕೊಳ್ಳುವ ಮುನ್ನ ಒಮ್ಮೆ ಗೂಗಲ್ ನಲ್ಲಿ ಹುಡುಕುವ ಪ್ರಯತ್ನ ಮಾಡಿ ಎಂದು ಅವರು ಮನವಿ ಮಾಡುತ್ತಾರೆ.

ಫೇಕೊಪೀಡಿಯಾ
ಜಿಎಸ್‌ಟಿಯಲ್ಲಿ ಇರದ ಹೊಸ ವಿಷಯಗಳನ್ನು ತುರುಕಿ, ಫೇಸ್‌ಬುಕ್, ವಾಟ್ಸ್‌ಆ್ಯಪ್‌ಗಳಲ್ಲಿ ಹಂಚಿಕೊಳ್ಳುವುದು, ಕರಾವಳಿ ಪ್ರದೇಶಗಳಲ್ಲಿ ತುಫಾನ್ ಬರಲಿದೆ ಎಂದು ಸುಳ್ಳು ಸುದ್ದಿ ಹರಡುವುದು. ಇಂತಹ ಸುದ್ದಿಗಳಿಗೆ ಕಡಿವಾಣ ಹಾಕಬೇಕು ಎಂದು ಹೈದರಾಬಾದ್‌ನ ಸಾಫ್ಟ್‌ವೇರ್ ಉದ್ಯೋಗಿ ಅಶ್ವಿನ್ ಪಣತೊಟ್ಟಿದ್ದಾರೆ. ಇದಕ್ಕಾಗಿ ಅವರು, fakopedia.com ಎಂಬ ಜಾಲತಾಣವನ್ನು ಆರಂಭಿಸಲು ಮುಂದಾಗಿದ್ದಾರೆ.

ರಾಜಕೀಯ ನಾಯಕರು, ಸಿನಿಮಾ ತಾರೆಯರಂತಹ ಗಣ್ಯವ್ಯಕ್ತಿಗಳಷ್ಟೇ ಅಲ್ಲದೇ, ಸಾಮಾನ್ಯರಿಗೆ ಸಂಬಂಧಿಸಿದ ಸುದ್ದಿಗಳ ಬಗ್ಗೆಯೂ ಅವರು ಬೆಳಕು ಚೆಲ್ಲಲು ಪ್ರಯತ್ನಿಸುತ್ತಿದ್ದಾರೆ. ದೇಶದಾದ್ಯಂತ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸುಳ್ಳು ಸುದ್ದಿಗಳ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಜಾಲತಾಣವನ್ನು ಶೀಘ್ರವೇ ಪುರ್ಣ ಪ್ರಮಾಣದಲ್ಲಿ ಬಳಕೆಗೆ ತರಲು ಯೋಜನೆ ರೂಪಿಸುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !