ನಿಮ್ಮ ಮಕ್ಕಳು ಬಳಸಬಹುದಾದ ಆ್ಯಪ್‌ಗಳ ಬಗ್ಗೆ ನಿಮಗೆಷ್ಟು ಗೊತ್ತು?

7
ಇರಲಿ ಎಚ್ಚರ

ನಿಮ್ಮ ಮಕ್ಕಳು ಬಳಸಬಹುದಾದ ಆ್ಯಪ್‌ಗಳ ಬಗ್ಗೆ ನಿಮಗೆಷ್ಟು ಗೊತ್ತು?

Published:
Updated:

ನಿಮ್ಮ ಮಕ್ಕಳು ಸಾಮಾನ್ಯವಾಗಿ ಯಾವೆಲ್ಲ ಸಾಮಾಜಿಕ ಜಾಲತಾಣಗಳನ್ನು, ಕಿರುತಂತ್ರಾಂಶಗಳನ್ನು (ಆ್ಯಪ್‌) ಬಳಸುತ್ತಾರೆ ಅಥವಾ ಬಳಸಬಹುದು ಎಂಬುದು ನಿಮಗೆ ತಿಳಿದಿದೆಯೇ? ಫೇಸ್‌ಬುಕ್‌, ಟ್ವಿಟರ್, ಇನ್‌ಸ್ಟಾಗ್ರಾಂ...

ಖಂಡಿತಾ ಇಷ್ಟೇ ಅಲ್ಲ. ಸ್ನ್ಯಾಪ್‌ಚಾಟ್, ಮ್ಯೂಸಿಕಲಿ, ಮೆಸೆಂಜರ್, ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಚಾಟ್ (ಸಂದೇಶ ಸಂವಹನ) ಮಾಡುವುದು, ವಿಡಿಯೊ ಹಾಗೂ ಫೋಟೊ ಸಹಿತ ಸಂದೇಶಗಳನ್ನು ಕಳುಹಿಸುವುದು ಸೇರಿದಂತೆ ಹಲವು ಉದ್ದೇಶಗಳಿಗೆ ಇಂದು ಅನೇಕ ವೆಬ್‌ಸೈಟ್‌ಗಳು, ಆ್ಯಪ್‌ಗಳ ಬಳಕೆ ಚಾಲ್ತಿಯಲ್ಲಿದೆ. ಹದಿಹರೆಯದವರು, ಯುವಕ, ಯುವತಿಯರು ಮತ್ತು ಮಕ್ಕಳು ಒಂದಲ್ಲ ಒಂದು ಆ್ಯಪ್‌, ವೆಬ್‌ಸೈಟ್ ಬಳಕೆಯ ಗೀಳು ಹೊಂದಿರುವುದು (ಅಡಿಕ್ಷನ್‌) ಅನೇಕ ಸಮೀಕ್ಷೆಗಳಲ್ಲಿ ಬಯಲಾಗಿದೆ.

ಆ್ಯಪ್‌, ವೆಬ್‌ಸೈಟ್‌ಗಳ ಬಳಕೆಯಿಂದ ಒಳಿತೂ ಇದೆ, ಕೆಡುಕೂ ಇದೆ. ಆದರೆ, ಬಳಸುವವರ ವಿವೇಚನೆಗೆ ಬಿಟ್ಟದ್ದು. ಹೀಗಾಗಿ ಹದಿಹರೆಯದ ಮಕ್ಕಳು ಬಳಸುವ ಆ್ಯಪ್‌ಗಳು, ವೆಬ್‌ಸೈಟ್‌ಗಳ ಬಗ್ಗೆ ಪೋಷಕರಿಗೂ ಮಾಹಿತಿ ಇದ್ದರೆ ಉತ್ತಮ. ಆ್ಯಪ್‌, ವೆಬ್‌ಸೈಟ್‌ಗಳ ಸಂಪೂರ್ಣ ಮಾಹಿತಿ ತಿಳಿದಿರಲೇಬೇಕೆಂದಲ್ಲ. ಸ್ವಲ್ಪ ಮಟ್ಟಿಗಾದರೂ ತಿಳಿದಿದ್ದರೆ ಮಕ್ಕಳ ಮೇಲೆ ನಿಗಾ ಇಡುವುದು ಸುಲಭ.
ಸಾಮಾನ್ಯವಾಗಿ ಪ್ರಸ್ತುತ ದಿನಗಳಲ್ಲಿ ಮಕ್ಕಳು ಬಳಸುವ ಆ್ಯಪ್‌, ವೆಬ್‌ಸೈಟ್‌ಗಳ ಬಗ್ಗೆ ಇಲ್ಲಿದೆ ಮಾಹಿತಿ:

ಸಂದೇಶಗಳನ್ನು ಕಳುಹಿಸುವ ಆ್ಯಪ್‌ಗಳು
ವಾಟ್ಸ್‌ಆ್ಯಪ್‌


ಇದು ಬರಹ ಸಂದೇಶಗಳು, ಧ್ವನಿ ಸಂದೇಶಗಳು, ವಿಡಿಯೊ ಮತ್ತು ಫೋಟೊಗಳನ್ನು ಕಳುಹಿಸಲು ಬಳಸುವ ಆ್ಯಪ್. ಇದರಲ್ಲಿ ಸಂದೇಶಗಳ ಕಳುಹಿಸುವಿಕೆಗೆ ಮಿತಿಯಿಲ್ಲ. ಗ್ರೂಪ್ ರಚಿಸಲೂ ಅವಕಾಶವಿದೆ.
ಪೋಷಕರು ತಿಳಿದಿರಬೇಕಾದದ್ದೇನು?: ಒಮ್ಮೆ ಈ ಆ್ಯಪ್‌ಗೆ ಸೈನ್ ಇನ್ ಆದರೆ, ಕಾಂಟ್ಯಾಕ್ಟ್ ಲಿಸ್ಟ್‌ನಲ್ಲಿರುವ ಎಲ್ಲರೊಂದಿಗೂ ಸಂಪರ್ಕ ಸಾಧ್ಯವಾಗುತ್ತದೆ. ಇದರಲ್ಲಿ ರಚಿಸುವ ಗ್ರೂಪ್‌ಗಳಲ್ಲಿ ನಮ್ಮ ಕಾಂಟ್ಯಾಕ್ಟ್ ಲಿಸ್ಟ್‌ನಲ್ಲಿರದ ವ್ಯಕ್ತಿಗಳೂ ಇರಲು ಅವಕಾಶವಿದೆ. ಇದರಿಂದ ಮಕ್ಕಳು ಅಪರಿಚಿತ ವ್ಯಕ್ತಿಗಳ ಜತೆ ಸಂವಹನ ಸಾಧಿಸುವುದು, ಸ್ನೇಹ ಮಾಡಿಕೊಳ್ಳುವ ಸಾಧ್ಯತೆ ಇದೆ.

ಗ್ರೂಪ್‌ಮಿ


ಇದು ವಾಟ್ಸ್‌ಆ್ಯಪ್‌ನಂತಹ ಇನ್ನೊಂದು ಆ್ಯಪ್. ಉಚಿತವಾಗಿ ನೇರ ಹಾಗೂ ಗ್ರೂಪ್‌ ಸಂದೇಶಗಳನ್ನು ಕಳುಹಿಸಲು ಇದರಲ್ಲಿ ಅವಕಾಶವಿದೆ. ಇದರ ಮೂಲಕ ಫೋಟೊ, ವಿಡಿಯೊ, ಜಿಫ್‌, ಎಮೋಜಿಗಳನ್ನು ಕಳುಹಿಸಬಹುದಾಗಿದೆ.
ಇದು ತಿಳಿದಿರಲಿ: ಈ ಆ್ಯಪ್‌ ವಯಸ್ಕರನ್ನು ಗಮನದಲ್ಲಿಟ್ಟುಕೊಂಡು ಸಿದ್ಧಪಡಿಸಿದ ಜಿಫ್‌, ಎಮೋಜಿಗಳನ್ನು ಒಳಗೊಂಡಿದೆ. ಮದ್ಯಪಾನ, ಲೈಂಗಿಕತೆಗೆ ಸಂಬಂಧಿಸಿದ ಜಿಫ್‌, ಎಮೋಜಿಗಳು ಈ ಆ್ಯಪ್‌ನಲ್ಲಿವೆ. ಮಕ್ಕಳ ಮನಸಿನ ಮೇಲೆ ಇದು ಪರಿಣಾಮ ಬೀರುವ ಸಾಧ್ಯತೆ ಇದೆ.

ಕಿಕ್‌ಮೆಸೆಂಜರ್


ಇದೂ ಸಹ ಶಬ್ದಗಳ ಮಿತಿಯಿಲ್ಲದೆ ಸಂದೇಶ ಕಳುಹಿಸಲು ಅನುವುಮಾಡಿಕೊಡುವ ಆ್ಯಪ್‌. ಕನಿಷ್ಠ ಫೀಚರ್‌ಗಳನ್ನು ಮಾತ್ರ ಬಳಸುವುದಿದ್ದರೆ ಈ ಆ್ಯಪ್‌ ಉಚಿತವಾಗಿ ಲಭ್ಯವಿದೆ.
ನಮಗಿದು ಗೊತ್ತಿರಲಿ: ಅಪರಿಚತ ವ್ಯಕ್ತಿಗಳಿಗೆ ಸಂದೇಶ ಕಳುಹಿಸಲು, ಅವರ ಜತೆ ಸಂವಹನ ನಡೆಸಲು ಈ ಆ್ಯಪ್‌ನಲ್ಲಿ ಅವಕಾಶವಿದೆ. ಅಮೆರಿಕದಂಥ ದೇಶಗಳಲ್ಲಿ ಕೊಲೆಯಂಥ ಅಪರಾಧ ಕೃತ್ಯಗಳನ್ನೆಸಗಲೂ ಈ ಆ್ಯಪ್‌ ಮಾಧ್ಯಮವಾಗಿ ಬಳಕೆಯಾದ ಉದಾಹರಣೆಗಳಿವೆ. ಮಕ್ಕಳ ಅಶ್ಲೀಲ ಚಿತ್ರಗಳಿಗೂ ಈ ಆ್ಯಪ್‌ ಪ್ರಚೋದನೆ ನೀಡುತ್ತಿದೆ ಎಂಬ ಆರೋಪ ಇದೆ. ವಾಣಿಜ್ಯ ಉದ್ದೇಶಕ್ಕೆ ಹೆಚ್ಚಾಗಿ ಬಳಕೆಯಲ್ಲಿದೆ.

ಫೋಟೊ ಮತ್ತು ವಿಡಿಯೊ ಶೇರಿಂಗ್‌ ಆ್ಯಪ್‌ಗಳು ಮತ್ತು ಸೈಟ್‌ಗಳು
ಇನ್‌ಸ್ಟಾಗ್ರಾಂ


ಇದು ಫೋಟೊಗಳನ್ನು ಎಡಿಟ್ ಮಾಡಿ ಪೋಸ್ಟ್‌ ಮಾಡಲು, ವಿಡಿಯೊಗಳನ್ನು ಹಂಚಿಕೊಳ್ಳಲು ಅವಕಾಶ ನೀಡುವ ಸಾಮಾಜಿಕ ಜಾಲತಾಣ. ಫೇಸ್‌ಬುಕ್‌ನಂತೆ ನಮ್ಮ ಸ್ನೇಹಿತರ ವಲಯದಲ್ಲಿರುವವರಿಗೆ ಹಾಗೂ ಇತರರಿಗೂ ಕಾಣುವಂತೆ ಫೋಟೊ, ವಿಡಿಯೊಗಳನ್ನು ಪೋಸ್ಟ್ ಮಾಡಲು ಸಾಧ್ಯವಿದೆ. ಫೋಟೊ, ವಿಡಿಯೊಗಳನ್ನು ಲೈಕ್ ಮಾಡಲು, ಅವುಗಳಿಗೆ ಕಮೆಂಟ್ ಮಾಡಲು ಇದರಲ್ಲಿ ಅವಕಾಶವಿದೆ. ಫೋಟೊಗಳನ್ನು ತಮಾಷೆಯಾಗಿ ಕಾಣುವಂತೆ ಎಡಿಟ್ ಮಾಡಲು, ಕಲಾತ್ಮಕವಾಗಿ ಎಡಿಟ್ ಮಾಡಿ ಪೋಸ್ಟ್ ಮಾಡಲು ಅವಕಾಶವಿದೆ.
ಎಚ್ಚರ ಅಗತ್ಯ: ಹೆಚ್ಚೆಚ್ಚು ಲೈಕ್, ಕಮೆಂಟ್‌ ಬರಬೇಕೆಂಬ ಹಪಾಹಪಿಯಿಂದ ಮಕ್ಕಳು ಹೆಚ್ಚು ಸಮಯ ಈ ಜಾಲತಾಣದಲ್ಲೇ ಕಳೆಯುವ ಸಾಧ್ಯತೆ ಇದೆ. ಖಾಸಗಿ ಫೋಟೊಗಳನ್ನು ಹಂಚಿಕೊಳ್ಳುವ ವೇಳೆ ಪ್ರೈವೆಸಿ (ಖಾಸಗಿತನಕ್ಕೆ ಸಂಬಂದಿಸಿದ್ದು) ಸೆಟ್ಟಿಂಗ್‌ಗಳನ್ನು ಮಾಡಿರುವಂತೆ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ಅವು ಅಪರಿಚಿತರಿಗೆ ದೊರೆತು ದುರ್ಬಳಕೆಯಾಗುವ ಅಪಾಯವಿದೆ.

ಮ್ಯೂಸಿಕಲಿ


ಇದು ವಿಡಿಯೊಕ್ಕೆ ಸಂಬಂಧಿಸಿದ ಜಾಲತಾಣ. ಪ್ರಮುಖ ಹಾಡುಗಳಿಗೆ, ಸಿನಿಮಾ ಸಂಭಾಷಣೆಗಳಿಗೆ ಲಿಪ್‌ಸಿಂಕ್ ಮಾಡಿ ವಿಡಿಯೊ ಹಂಚಿಕೊಳ್ಳಲು ಇದರಲ್ಲಿ ಸಾಧ್ಯವಿದೆ. ವಿಡಿಯೊಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಲು ಅವಕಾಶವಿದೆ.
ಪೋಷಕರಿಗೆ ಗೊತ್ತಿರಲಿ: ಮ್ಯೂಸಿಕಲಿಯಲ್ಲಿ ಪೋಸ್ಟ್ ಮಾಡಿದ ವಿಡಿಯೊಗಳಿಗೆ ಹೆಚ್ಚೆಚ್ಚು ಲೈಕ್ ಬರಬೇಕು, ಫಾಲೋವರ್ಸ್‌ ಇರಬೇಕು ಎಂಬ ಉದ್ದೇಶದಿಂದ ಯುವಕ, ಯುವತಿಯರು ಅಶ್ಲೀಲವಾಗಿ ವಿಡಿಯೊ ಮಾಡಿ ಅಪ್‌ಲೋಡ್ ಮಾಡುವ ಸಾಧ್ಯತೆ ಇದೆ. ಇಂತಹ ಅನೇಕ ವಿಡಿಯೊಗಳು ಮ್ಯೂಸಿಕಲಿಯಲ್ಲಿ ಕಾಣಸಿಗುತ್ತವೆ ಕೂಡ. ಇದರಿಂದ ಅಪಾಯ ಕಟ್ಟಿಟ್ಟ ಬುತ್ತಿ.

ಫೇಸ್‌ಬುಕ್


ಇದು ಸದ್ಯ ಚಾಲ್ತಿಯಲ್ಲಿರುವ ಬಹುಬೇಡಿಕೆಯ ಮತ್ತು ವಿಶ್ವದಾದ್ಯಂತ ಹೆಚ್ಚು ಜನ ಉಪಯೋಗಿಸುತ್ತಿರುವ ಸಾಮಾಜಿಕ ಜಾಲತಾಣ. ಇದರಲ್ಲಿ ಫೋಟೊ, ವಿಡಿಯೊ, ಅಭಿಪ್ರಾಯಗಳನ್ನು ಪ್ರಕಟಿಸಲು, ಹಂಚಿಕೊಳ್ಳಲು ಸಾಧ್ಯವಿದೆ. ಅಲ್ಲದೆ, ಫೇಸ್‌ಬುಕ್‌ನ ಮೆಸೆಂಜರ್ ಆ್ಯಪ್‌ ಮೂಲಕ ಫೋಟೊ, ವಿಡಿಯೊ ಮತ್ತು ಸಂದೇಶಗಳನ್ನು ಹಂಚಿಕೊಳ್ಳಬಹುದು.
ಖಾಸಗಿತನದ ಬಗ್ಗೆ ಗಮನವಿರಲಿ: ಫೇಸ್‌ಬುಕ್‌ನಲ್ಲಿ ಖಾಸಗಿತನಕ್ಕೆ ಸಬಂಧಿಸಿದ ಸೆಟ್ಟಿಂಗ್ ಇದ್ದು ಅದರ ಬಗ್ಗೆ ನಿಮಗೆ ತಿಳಿದಿರಲಿ. ನಮ್ಮ ಸ್ನೇಹಿತರು ಅಥವಾ ಪರಿಚಿತರಿಗೆ ಮಾತ್ರವೇ ನಮ್ಮ ಚಟುವಟಿಕೆಗಳು, ಪೋಸ್ಟ್‌ಗಳು ಕಾಣಿಸುವಂತೆ ಸೆಟ್ಟಿಂಗ್‌ನಲ್ಲಿ ಆಯ್ಕೆ ಮಾಡಿಟ್ಟುಕೊಳ್ಳುವುದು ಒಳ್ಳೆಯದು. ಇಲ್ಲವಾದಲ್ಲಿ ಮಹತ್ವದ ಖಾಸಗಿ ಮಾಹಿತಿ ಸೋರಿಕೆಯಾಗಬಹುದು. ನಿಮ್ಮ ಮಕ್ಕಳು ಮಾಡುವ ಪೋಸ್ಟ್‌ಗಳು (ವಿಡಿಯೊ, ಫೋಟೊ, ಸಂದೇಶ ಇತ್ಯಾದಿ ಯಾವುದೇ ಇರಬಹುದು) ಅಪರಿಚಿತರ ಅವಗಾಹನೆಗೆ ಬಾರದಂತೆ ನೋಡಿಕೊಳ್ಳಿ. ಫೇಸ್‌ಬುಕ್ ಮೂಲಕ ಮಕ್ಕಳು ಅಪರಿಚಿತರ ಜತೆ ಸಂವಹನ ನಡೆಸುವ ಸಾಧ್ಯತೆ ಇದ್ದು, ನಿಗಾ ಇರಲಿ.

ಸ್ನ್ಯಾಪ್‌ಚಾಟ್


ಇದೊಂದು ಸಂದೇಶಗಳನ್ನು ಕಳುಹಿಸಲು ಬಳಸುವ ಆ್ಯಪ್‌. ಇದರ ಮೂಲಕ ವಿಡಿಯೊ, ಫೋಟೊ ಮತ್ತು ಸಂದೇಶಗಳನ್ನು ಕಳುಹಿಸಬಹುದು. ಆದರೆ, ಇದರಲ್ಲಿ ಕಳುಹಿಸಲಾದ ಫೋಟೊ, ವಿಡಿಯೊಗಳು ಅದನ್ನು ಸ್ವೀಕರಿಸಿದ ವ್ಯಕ್ತಿ ನೋಡಿದ ನಂತರ ನಿರ್ದಿಷ್ಟ ಸಮಯದ ಬಳಿಕ ಕಣ್ಮರೆಯಾಗುತ್ತವೆ.
ಈ ಅಂಶಗಳ ಬಗ್ಗೆ ಗಮನವಿರಲಿ: ಸ್ನ್ಯಾಪ್‌ಚಾಟ್‌ನಲ್ಲಿ ಕಳುಹಿಸಿದ ಫೋಟೊ, ವಿಡಿಯೊ ಕಣ್ಮರೆಯಾಗುತ್ತದೆ ಎಂಬುದು ಬಳಕೆದಾರರ ತಿಳಿವಳಿಕೆ. ಆದರೆ, ದತ್ತಾಂಶ ಏನಿದ್ದರೂ ದತ್ತಾಂಶವೇ. ಅದು ನಾಶವಾಗುವುದು ಸಾಧ್ಯವಿಲ್ಲ. ಮಕ್ಕಳು ಈ ಜಾಲತಾಣದ ಮೂಲಕ ಅಶ್ಲೀಲ, ಅನೈತಿಕ ಸಂದೇಶಗಳನ್ನು ಹಂಚಿಕೊಳ್ಳದಂತೆ ಎಚ್ಚರವಹಿಸಿ. ಸಂದೇಶ ಸ್ವೀಕರಿಸಿದ ವ್ಯಕ್ತಿಗೆ ನೋಡಲು ಕೆಲವೇ ಕ್ಷಣಗಳ ಕಾಲ ಅವಕಾಶವಿದ್ದರೂ ಸ್ನ್ಯಾಪ್‌ಚಾಟ್‌ಗೆ ಅದನ್ನು ರಿಕವರಿ ಮಾಡಿಕೊಳ್ಳುವ ಅವಕಾಶವಿದೆ. 2013ರ ಡಿಸೆಂಬರ್‌ನಲ್ಲಿ ಸ್ನ್ಯಾಪ್‌ಚಾಟ್ ಹ್ಯಾಕ್‌ ಆಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಮೈಕ್ರೊಬ್ಲಾಗಿಂಗ್‌ ಆ್ಯಪ್‌ಗಳು ಮತ್ತು ಜಾಲತಾಣಗಳು
ಟಂಬ್ಲರ್


ಇದು ಟ್ವಿಟರ್ ಮತ್ತು ಬ್ಲಾಗ್‌ನ ಅಂಶಗಳನ್ನೊಳಗೊಂಡ ಜಾಲತಾಣ. ಬರಹ, ಫೋಟೊ, ವಿಡಿಯೊ, ಆಡಿಯೊ ಕ್ಲಿಪ್‌ ಸಂದೇಶಗಳನ್ನು ಹಂಚಿಕೊಳ್ಳಲು ಬಳಸಲಾಗುತ್ತಿದೆ. ಈ ಜಾಲತಾಣದಲ್ಲಿ ‘ಟಂಬ್ಲಾಗ್ಸ್’ ಎಂಬ ಚಿಕ್ಕ ಬ್ಲಾಗ್ ಕ್ರಿಯೇಟ್ ಮಾಡಲು ಅವಕಾಶವಿದೆ. ಇದನ್ನು ಆನ್‌ಲೈನ್‌ನಲ್ಲಿ ಯಾರು ಬೇಕಾದರೂ ನೋಡಬಹುದಾಗಿದೆ. ಸ್ನೇಹಿತರ ಜತೆ ಫೋಟೊ, ವಿಡಿಯೊ ಮತ್ತಿತರ ಖಾಸಗಿ ಮಾಹಿತಿ ಹಂಚಿಕೊಳ್ಳಲು ಹದಿಹರೆಯದವರು ಈ ಜಾಲತಾಣ ಬಳಸಿಕೊಳ್ಳುತ್ತಿರುವುದು ಕಂಡುಬಂದಿದೆ.
ಅಶ್ಲೀಲತೆ ಹೆಚ್ಚು: ಈ ಜಾಲತಾಣದಲ್ಲಿ ಅಶ್ಲೀಲ ಫೋಟೊ, ಸಂದೇಶಗಳೇ ಹೆಚ್ಚು ಕಾಣಸಿಗುತ್ತವೆ ಎಂಬ ಆರೋಪ ಇದೆ. ಹಿಂಸೆಗೆ ಪ್ರಚೋದನೆ ನೀಡುವಂತ ಅಶ್ಲೀಲ ಸಂದೇಶಗಳು, ಮಾದಕ ದ್ರವ್ಯ ಸೇವನೆಯಂತಹ ಕೃತ್ಯಗಳಿಗೆ ಪ್ರಚೋದನೆ ನೀಡುವ ಸಂದೇಶಗಳು ಹೆಚ್ಚಾಗಿ ಕಾಣಸಿಗುತ್ತವೆ ಎನ್ನಲಾಗಿದೆ. ಖಾಸಗಿತನ ಕಾಯ್ದುಕೊಳ್ಳಲು ಸೆಟ್ಟಿಂಗ್‌ಗಳು ಇದೆಯಾದರೂ ಮೊದಲಿಗೆ, ಕ್ರಿಯೇಟ್ ಮಾಡಿದ ಪ್ರೊಫೈಲ್‌ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತದೆ. ಟ್ವಿಟರ್‌ನಲ್ಲಿ ರಿ–ಟ್ವೀಟ್ ಮಾಡಿದಂತೆಯೇ ಇದರಲ್ಲಿಯೂ ಸಂದೇಶಗಳನ್ನು ರಿ–ಬ್ಲಾಗ್ ಮಾಡಲು ಸಾಧ್ಯವಿದೆ.

ಟ್ವಿಟರ್


140 ಅಕ್ಷರಗಳ ಮಿತಿಯಲ್ಲಿ ಸಂದೇಶಗಳನ್ನು ಹಂಚಿಕೊಳ್ಳಲು ಇದರಲ್ಲಿ ಅವಕಾಶವಿದೆ. ಇದರ ಮೂಲಕ ಹಂಚಿಕೊಳ್ಳಲಾಗುವ ಸಂದೇಶಗಳನ್ನು ‘ಟ್ವೀಟ್’ ಎಂದು ಕರೆಯಲಾಗುತ್ತಿದೆ. ಸುದ್ದಿಗಳು ಮತ್ತು ಸುದ್ದಿಗಳಿಗೆ ಸಂಬಂಧಿಸಿದ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಹೆಚ್ಚಾಗಿ ಬಳಕೆಯಲ್ಲಿದೆ.
ಪೋಷಕರಿಗೆ ತಿಳಿದಿರಬೇಕಾದ ವಿಷಯ: ಹದಿಹರೆಯದವರೂ ಸಾರ್ವಜನಿಕವಾಗಿ ಟ್ವೀಟ್ ಮಾಡಲು ಟ್ವಿಟರ್‌ನಲ್ಲಿ ಅವಕಾಶವಿದೆ. ಹೆಚ್ಚಿನವರೂ ಟ್ವಿಟರ್‌ನಲ್ಲಿ ಪಬ್ಲಿಕ್ ಅಕೌಂಟ್‌ಗಳನ್ನೇ ಹೊಂದಿರುತ್ತಾರೆ. ನಾವು ಮಾಡಿದ ಟ್ವೀಟ್ ಎಷ್ಟು ಬೇಗ ಹರಡುತ್ತದೆ ಎಂಬ ಬಗ್ಗೆ ಮಕ್ಕಳಲ್ಲಿ ತಿಳಿವಳಿಕೆ ಮೂಡಿಸಬೇಕಾದದ್ದು ಅಗತ್ಯ. ನಾವು ಪೋಸ್ಟ್ ಮಾಡಿದ ಟ್ವೀಟ್ ಅನ್ನು ರಿಮೂವ್ (ತೆರವು) ಮಾಡುವ ಅವಕಾಶ ಇದ್ದರೂ ಅಷ್ಟು ಮಾಡುವುದರ ಒಳಗಾಗಿಯೇ ನಮ್ಮ ಫಾಲೋವರ್‌ಗಳು ಅದನ್ನು ಓದಿರುವ ಅಥವಾ ಸ್ಕ್ರೀನ್‌ಶಾಟ್ ತೆಗೆದಿಡುವ ಸಾಧ್ಯತೆ ಇದೆ. ಹೀಗಾಗಿ ಸಮಾಜದಲ್ಲಿ ಚರ್ಚೆಗೆ ಗ್ರಾಸವಾಗುವಂತಹ ವಿಷಯಗಳ ಬಗ್ಗೆ ಟ್ವೀಟ್ ಮಾಡುವ ಮುನ್ನ ಸಾಕಷ್ಟು ಎಚ್ಚರದಿಂದ ಇರುವಂತೆ ಸೂಚನೆ ನೀಡುವುದು ಒಳ್ಳೆಯದು.

ಲೈವ್–ಸ್ಟ್ರೀಮಿಂಗ್ ವಿಡಿಯೊ ಆ್ಯಪ್‌ಗಳು
ಲೈವ್‌ಲಿ


ಇದು ಲೈವ್ ವಿಡಿಯೊಗಳನ್ನು ಪೋಸ್ಟ್ ಮಾಡಲು ಬಳಸುವ ಆ್ಯಪ್. ಇದು ಮ್ಯೂಸಿಕಲಿ ಜತೆ ಸಹಯೋಗ ಹೊಂದಿದೆ. ಅತಿಯಾಗಿ ಶೇರ್ ಮಾಡುವ ಗೀಳು, ಅಪರಿಚಿತರೊಂದಿಗಿನ ಚಾಟಿಂಗ್ ಮತ್ತಿತರ ಸಮಸ್ಯೆಗಳಿಗೂ ಕಾರಣವಾಗಬಹುದು.
ಪೋಷಕರೇನು ಮಾಡಬೇಕು?: ಖಾಸಗಿತನ, ಸುರಕ್ಷತೆ ಬಗ್ಗೆ ಗಮನಹರಿಸಬೇಕು. ಹದಿಹರೆಯದ ಮಕ್ಕಳು ಬೆಡ್‌ರೂಮ್‌ನಲ್ಲಿದ್ದುಕೊಂಡೋ ಅಥವಾ ಇನ್ಯಾವುದಾದರೂ ಖಾಸಗಿ ವಿಡಿಯೊಗಳನ್ನು ರೆಕಾರ್ಡ್‌ ಮಾಡಿ ಅಪರಿಚಿತರ ಜತೆ ಹಂಚಿಕೊಳ್ಳುವ ಸಂಭವವಿದೆ. ಅಪರಿಚಿತರಿಗೆ ದೂರವಾಣಿ ಸಂಖ್ಯೆ ನೀಡಿ ತೊಂದರೆಗೆ ಸಿಲುಕುವ ಸಾಧ್ಯತೆ ಇದೆ.

ಯೂನೌ


ವಿಡಿಯೊ ಪ್ರಸಾರ ಮಾಡಲು, ಚಾಟ್ ಮಾಡಲು ಮತ್ತು ಲೈವ್ ವಿಡಿಯೊ ನೋಡಲು ಬಳಸುವ ಆ್ಯಪ್ ಯೂನೌ. ವಿಡಿಯೊ ನೋಡುತ್ತಿರುವಾಗ ಕಮೆಂಟ್ ಮಾಡಲು ಅವಕಾಶವಿದೆ. ಹೆಚ್ಚು ವೀಕ್ಷಕರನ್ನು ಹೊಂದುವುದು, ವಿಡಿಯೊ ಟ್ರೆಂಡ್ ಆಗುವಂತೆ ಮಾಡುವುದು, ಅಭಿಮಾನಿಗಳನ್ನು ಹೆಚ್ಚಿಸಿಕೊಳ್ಳುವ ಗೀಳಿಗೆ ಕಾರಣವಾಗುತ್ತದೆ.
ಖಾಸಗಿ ಮಾಹಿತಿ ರಟ್ಟಾಗುವ ಅಪಾಯ: ಜನಪ್ರಿಯತೆ ಹೆಚ್ಚಿಸಿಕೊಳ್ಳಲು, ಅಭಿಮಾನಿಗಳನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಮಕ್ಕಳು ತಪ್ಪು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಲೈವ್ ವಿಡಿಯೊವಾದ್ದರಿಂದ ವೀಕ್ಷಕರು ತಕ್ಷಣಕ್ಕೆ ಕಳುಹಿಸುವ ಕೋರಿಕೆಗಳಿಗೆ ಮುಂದಾಲೋಚಿಸದೆ ಪ್ರತಿಕ್ರಿಯಿಸುವ ಮತ್ತು ಮೊಬೈಲ್ ಸಂಖ್ಯೆ, ಇ–ಮೇಲ್ ವಿಳಾಸ ಇತ್ಯಾದಿ ವೈಯಕ್ತಿಕ ಮಾಹಿತಿಗಳನ್ನು ಹಂಚಿಕೊಳ್ಳುವ ಅಪಾಯವಿದೆ.

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !