ಟ್ರೋಲ್ ಮಗಾ ಟ್ರೋಲ್

7

ಟ್ರೋಲ್ ಮಗಾ ಟ್ರೋಲ್

Published:
Updated:

ಈ ಸಲ ಕಪ್‌ ನಮ್ದೆ!
ಇದು ಬಹುಶಃ ಈ ಬಾರಿಯ ಐಪಿಎಲ್‌ ಮ್ಯಾಚ್‌ನಲ್ಲಿ ಬೆಂಗಳೂರು ತಂಡದ ಘೋಷ ವಾಕ್ಯವೇನೊ ಎನ್ನುವಷ್ಟರ ಮಟ್ಟಿಗೆ ಸದ್ದು ಮಾಡಿತ್ತು. ಪಡ್ಡೆ ಹುಡುಗರು ತಮಗೆ ಅವಕಾಶ ಸಿಕ್ಕ ಕಡೆ ಎಲ್ಲಾ ಈ ಸಲ ಕಪ್‌ ನಮ್ದೆ!, ಈ ಸಲ ಕಪ್‌ ನಮ್ದೆ! ಅಂತ ಕಮೆಂಟ್‌ ಕುಟ್ಟಿದ್ದರು. ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ಗಳಲ್ಲಿ ಇದು Escp ಎಂದು ರಾರಾಜಿಸುತ್ತಿತ್ತು. ‘ಹೋದಾಗ, ಬಂದಾಗ, ಕುಂತಾಗ, ನಿಂತಾಗ, ಮದುವೆ ಯಾವಾಗ ಅಂತಿದ್ರಲ್ಲ, ಈಗ ಬಂದು ಹಾರೈಸಿ...’ ಎನ್ನುವ ಟ್ರೋಲ್‌ ಮದುವೆ ಯಾವಾಗ ಎಂದು ಕೇಳಿ, ಕೇಳಿ ರೋಸಿ ಹೋದವರ ವಾಟ್ಸ್‌ಆ್ಯಪ್‌ ಸ್ಟೇಟಸ್‌ ಆಗಿತ್ತು!

ಹಾಸ್ಯ ಭಾಷಣಗಾರ ಗಂಗಾವತಿ ಪ್ರಾಣೇಶ ಟಿ.ವಿ ಕಾರ್ಯಕ್ರಮವೊಂದರಲ್ಲಿ ಹೇಳಿದ್ದ ‘ಎತ್ತರದಲ್ಲಿ ಇದ್ದೇನೆಂದು ಬೀಗಬೇಡ, ನಕ್ಷತ್ರಗಳು ಕೆಳಗೆ ಉರುಳುವುದನ್ನು ನಾನು ಕಂಡಿದ್ದೇನೆ’ ಎಂಬ ಸಾಲುಗಳಂತೂ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು. ಇದನ್ನು ಟ್ರೋಲ್‌ಗಳು ಸಖತ್‌ ಆಗಿ ಬಳಸಿಕೊಂಡಿದ್ದವು. ಇಡೀ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ಗಳದ್ದೇ ಹವಾ ಎದ್ದಿತ್ತು. 

ಈ ಹೊತ್ತಿನ ಯುವಕರ ನಾಡಿ ಮಿಡಿತವನ್ನು ಅರಿತುಕೊಂಡು ಟ್ರೋಲ್‌ ಪೇಜ್‌ಗಳು ಅವರ ಮೆಚ್ಚುಗೆಗೆ ಪಾತ್ರವಾಗುತ್ತಿವೆ. ಕೇವಲ ಹಾಸ್ಯಕ್ಕಷ್ಟೆ ಸೀಮಿತವಾಗದೆ ಯುವ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ವೇದಿಕೆ ಕಲ್ಪಿಸುವ, ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿಯೂ ಬಹುಮುಖ್ಯ ಪಾತ್ರ ವಹಿಸುತ್ತಿವೆ. ಯುವಜನರ ಈ ಟ್ರೋಲ್, ವಿಡಿಯೊಗಳನ್ನು ಲೈಕ್‌, ಶೇರ್‌ನ ಮುದ್ರೆಗಳೊಂದಿಗೆ ವೈರಲ್‌ ಎನ್ನುವ ಬುಲೆಟ್‌ ಆಗಾಗ ವೇಗ ಪಡೆದುಕೊಳ್ಳುತ್ತದೆ. ಅಂಥ ಒಂದಷ್ಟು ಪ್ರಮುಖ ಟ್ರೋಲ್‌ ಪೇಜ್‌ಗಳ ವಿವರ ಇಲ್ಲಿದೆ;  

ಉತ್ತರ ಕರ್ನಾಟಕ ಮಿಮ್ಸ್
ಉತ್ತರ ಕರ್ನಾಟಕದ ಜವಾರಿ ಭಾಷೆ, ಆಚಾರ, ವಿಚಾರ, ಆಹಾರ ವಿಷಯಗಳನ್ನೇ ಬಳಸಿಕೊಂಡು ಟ್ರೋಲ್‌ ಮಾಡುವ ಮೂಲಕ ಎಲ್ಲರ ಮನೆ ಮಾತಾಗಿದೆ. ಈ ಪೇಜ್‌ನ ಅಡ್ಮಿನ್‌ ಚಂದ್ರು. ಈ ಪೇಜ್‌ 2017ರಲ್ಲಿ ಪ್ರಾರಂಭವಾಗಿದೆ. ‌ಇಂದು ಈ ತಂಡಕ್ಕೆ ಲಕ್ಷಾಂತರ ಫಾಲೋವರ್ಸ್‌ ಇದ್ದಾರೆ. ಪೇಜ್‌ನ ವಿಡಿಯೊಗಳು ಸಾವಿರಾರು ಶೇರ್ ಕಂಡಿವೆ. ಗ್ರಾಮೀಣ ಭಾಗದ ಪ್ರತಿಭೆಗಳನ್ನು ರಾಜ್ಯದ ಮೂಲೆ ಮೂಲೆ ತಲುಪುವಂತೆ ಮಾಡಿರುವುದು ಈ ಪೇಜ್‌ನ ವಿಶೇಷ.

ಟ್ರೋಲ್‌ ಅಣ್ತಮ್ಮಾಸ್‌ 
ಈ ಸಲ ಕಪ್‌ ನಮ್ದೆ! ಸೃಷ್ಟಿಕರ್ತರು ಯಾರೆಂದು ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ ‘ಅದು ನಮ್ದೇ’ ಎನ್ನುತ್ತಾರೆ ಬೆಂಗಳೂರಿನ ಟ್ರೋಲ್‌ ಅಣ್ತಮ್ಮಾಸ್‌ ತಂಡ. ಕನ್ನಡ ಪದಕೋಶದಲ್ಲಿ ಇಲ್ಲದ ಪದವಾದರೂ, ಕನ್ನಡಿಗರಿಗೆ ಹತ್ತಿರವಾದದ್ದು ‘ಅಣ್ತಮ್ಮಾ’ ಈ ಹೆಸರಿನಿಂದಲೇ ಪ್ರಾರಂಭವಾಗುವ ತಂಡವೂ ಅಷ್ಟೇ ಫೇಮಸ್‌ ಆಗಿದೆ.

ಇದು ಉಳಿದ ತಂಡಗಳಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಇನ್‌ಸ್ಟಾಗ್ರಾಂನಲ್ಲಿ ಹೊಸ ಸೃಜನಶೀಲ ವಿಡಿಯೊಗಳನ್ನು ಸೃಷ್ಟಿಸಿದೆ. ಈ ತಂಡದ  ಜಯಂತ್‌ ಸುಬ್ರಹ್ಮಣ್ಯ, ರೋಹಿತ್‌ ಶೆಟ್ಟಿ, ಶರತ್‌, ಶುಭಶ್ರೀ, ಅವನೀತ್‌, ಸುನೀಲ್‌, ಗಿರೀಶ್‌, ಕುಶಾಲ್‌, ಶೃತಿ, ಶ್ರೇಯಸ್‌ ಮತ್ತು ಚಂದ್ರಮೌಳಿ ಅಡ್ಮಿನ್‌ಗಳಾಗಿದ್ದಾರೆ. Mr. bean ಅವರ ವಿಡಿಯೊಗಳಿಗೆ ಕನ್ನಡದ ಹಾಸ್ಯ ಭರಿತ ಸಂಭಾಷಣೆ ಜೋಡಿಸಿ ನಗೆಯ ಹೊನಲನ್ನೇ ಸೃಷ್ಟಿಸುತ್ತಿದೆ. ಈ ವಿಡಿಯೊಗಳಿಗೆ ಹಿನ್ನೆಲೆ ಧ್ವನಿಯನ್ನು ಈ ತಂಡದ ಅವಿನಿತ್‌ ನೀಡಿದ್ದಾರೆ.

https://www.instagram.com/p/BpUqADkhEKR/?utm_source=ig_share_sheet&igshi...

ಕುಂದಾಪುರ ಟ್ರೋಲ್‌
2016ರಲ್ಲಿ ಪ್ರಾರಂಭವಾದ ಈ ಟ್ರೋಲ್‌ ಪೇಜ್‌ ಒಂದು ಹೆಜ್ಜೆ ಮುಂದುವರೆದು ಫೇಸಬುಕ್‌ನಲ್ಲಿ ಎಫ್‌.ಎಂ ರೇಡಿಯೊ ಆರಂಭಿಸಿದೆ. ಅದಕ್ಕೆ ಕೆ.ಟಿ. ರೇಡಿಯೊ ಎಂದು ನಾಮಕರಣ ಮಾಡಿದ್ದಾರೆ. ‘ಇದುವರೆಗೆ 284 ಎಪಿಸೋಡ್‌ಗಳನ್ನು ಬಿತ್ತರಿಸಿದ್ದೇವೆ’ ಎನ್ನುತ್ತದೆ ತಂಡ. ಅಲ್ಲದೇ ಯೂಟ್ಯೂಬ್‌ನಲ್ಲೂ ತಮ್ಮದೇ ಆದ ಚಾನಲ್‌ ಹೊಂದಿದೆ.

ಹುಬ್ಬಳ್ಳಿ ಲೇ
ಇತ್ತೀಚಿಗೆ ಬಹುತೇಕರ ವಾಟ್ಸ್‌ಆ್ಯಪ್‌ ಸ್ಟೇಟಸ್‌ನಲ್ಲಿ ಹೆಚ್ಚು ಕಂಡದ್ದು ‘ಕಲ್ಲವ್ವ ಕೇಳ್‌ ಮಲ್ಲವ್ವ, ನಿಂಗವ್ವ ಕೇಳ ನೀಲವ್ವ ಮದುವೆ ಒಂದ ಆಗತೈತಿ’ ಮಿಕ್ಸ್‌ ವಿಡಿಯೊ. ರಣವೀರ್‌ ಸಿಂಗ್‌ ನಟನೆಯ ಪದ್ಮಾವತಿ ಸಿನಿಮಾದ ಹಾಡೊಂದಕ್ಕೆ ಜವಾರಿ ಹಾಡನ್ನು ಕಸಿ ಮಾಡಿದವರು ‘ಹುಬ್ಬಳ್ಳಿ ಲೇ’ ಟ್ರೋಲ್‌ ತಂಡ. ಹುಬ್ಬಳ್ಳಿಯ ಬಿ.ಕಾಂ ವಿದ್ಯಾರ್ಥಿಗಳಾದ ಅನುಜ ಪಾಟಕ್‌, ಈಶ್ವರ ದೌಡನಾಯ್ಕರ, ಚೇತನ ಮಾರಂಬಿಡ ಮೂವರು ಸೇರಿ ನಡೆಸುತ್ತಿರುವ ಪೇಜ್‌. ಸದ್ಯ ಇನ್‌ಸ್ಟಾಗ್ರಾಂನಲ್ಲಿ ತನ್ನದೇ ಆದ ಹವಾ ಎಬ್ಬಿಸಿರುವ ಪೇಜ್. ಜೂನ್‌ 2016ರಲ್ಲಿ ರಚಿಸಿದ್ದಾರೆ. ‘ಟ್ರೋಲ್‌ಗಳ ಜೊತೆ ಜೊತೆಗೆ ಯುವಕರಲ್ಲಿ ರಕ್ತದಾನದ ಅರಿವು ಮೂಡಿಸಿದ್ದೇವೆ’ ಎನ್ನುತ್ತಾರೆ ಈ ತಂಡದವರು.

ಉತ್ತರ ಕರ್ನಾಟಕ ಜೀವನ
‘ಬಾಜುಮನಿ ಕಾಕು’ ಅಂತಲೇ ಪ್ರಸಿದ್ಧಿ ಪಡೆದ ಟ್ರೋಲ್‌ನ್ನು ಪರಿಚಯಿಸಿತ್ತು ಈ ತಂಡ. ಉತ್ತರ ಕರ್ನಾಟಕ ಭಾಷಾ ಸೊಗಡಿನಲ್ಲಿ ನಿತ್ಯದ ಘಟನೆಗಳನ್ನು ಹಾಸ್ಯದ ಶೈಲಿಯಲ್ಲಿ ನೀಡುತ್ತಾರೆ. 2012–13ರಲ್ಲಿ ಪೇಜ್‌ ರಚಿಸಿದ್ದಾರೆ. ‘ಸದ್ಯ ಎಲ್ಲರಿಗೂ ಇಷ್ಟವಾದ ಟ್ರೋಲ್‌ ಇದು’ ಎನ್ನುತ್ತಾರೆ ಬೆಳಗಾವಿ ಮೂಲದ ಅಡ್ಮಿನ್‌ ಅರುಣ ದೊಡ್ಡಮನಿ. ಇವರೊಂದಿಗೆ ಸಾಥ್‌ ನೀಡುತ್ತಿರುವವರು ಗೋಕಾಕನ ವಿನೋದ, ವೀರ ಎ.ಜೆ., ಎಸ್‌. ವಿಜಯ, ಸುಮಂತ ಬೆಳವಡಿ, ಶಿವು ವಾಲಿ. ಕಳಸಾ ಬಂಡೂರಿ ಹೋರಾಟದ ಸಮಯದಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಲವಾರು ಟ್ರೋಲ್‌ ಮಾಡಿದ್ದಾರೆ.

ನಿರ್ವಹಣೆ ಅಷ್ಟು ಸುಲಭವಲ್ಲ!
ಟ್ರೋಲ್ ಪೇಜ್‌ ಎಂದರೆ ಹಾಸ್ಯ, ಲಾಸ್ಯ ಎಂದಷ್ಟೇ ಕಾಣಿಸುತ್ತದೆ. ಆದರೆ, ಇದನ್ನು ನಿಭಾಯಿಸುವುದು ಸುಲಭವಲ್ಲ. ಕುಳಿತಲ್ಲಿಯೇ ನಿಭಾಯಿಸುವ ಮಾಧ್ಯಮ ಇದಲ್ಲ. ಹತ್ತಾರು ಬಗೆಯ ವಿಷಯ ವಸ್ತುಗಳನ್ನು ಹುಡುಕಿ ಅಲೆಯಬೇಕು. ಸಿನಿಮಾ ನಟ, ನಟಿ, ರಾಜಕಾರಣಿಗಳ ಬಗ್ಗೆ ಟ್ರೋಲ್‌ ಮಾಡಿದಾಗ ತಂಡದ ಅಡ್ಮಿನ್‌ಗಳಿಗೆ ಬೆದರಿಕೆ ಕರೆಗಳೂ ಬಂದಂತಹ ಉದಾಹರಣೆಗಳಿವೆ. 

ಕೊಡಗಿನ ನೋವಿಗೆ ನೆರವಾದವರು
ಕೊಡಗಿನಲ್ಲಿ ಉಂಟಾದ ಪ್ರಕೃತಿ ವಿಕೋಪದ ಸಮಯದಲ್ಲಿ ಟ್ರೋಲ್‌ ಪೇಜ್‌ಗಳು ತಮ್ಮ ಕೈಲಾದಷ್ಟು ನೆರವು ನೀಡಿವೆ. ಸಾಮಾಜಿಕ ಜಾಲತಾಣಗಳಲ್ಲಿ ಅವರ ಸಹಾಯಾರ್ಥ ಪೋಸ್ಟ್‌ ಮಾಡುವ ಮೂಲಕ ನೆರವು ನೀಡುವವರಿಗೂ ವೇದಿಕೆ ಒದಗಿಸಿದ್ದಾರೆ.

ಪ್ರಚಾರ, ಇವರಿಗೆ
ಎಷ್ಟೇ ಉತ್ಸಾಹವಿದ್ದರೂ ಅದಕ್ಕೆ ಆರ್ಥಿಕ ನೆರವು ಬೇಕೇ ಬೇಕು. ಈ ನಿಟ್ಟಿನಲ್ಲಿ ಟ್ರೋಲ್‌ ಪೇಜ್‌ಗಳ ನಿತ್ಯದ ಖರ್ಚುಗಳನ್ನ ನಿಭಾಯಿಸಲಿಕ್ಕೆ ಪ್ರಚಾರಗಳು ಸಹಕಾರಿಯಾಗಿವೆ. ಹೊಸದಾಗಿ ಬರುವ ಸಿನಿಮಾದ ಚಿತ್ರಗಳನ್ನು ಬಳಸಿಕೊಂಡು ಅದಕ್ಕೆ ಅನುಗುಣವಾಗಿ ಹಾಸ್ಯ ಸಂಭಾಷಣೆಯನ್ನು ಸೃಷ್ಟಿಸುತ್ತವೆ. ಸಿನಿಮಾದ ಟೀಸರ್‌, ಟ್ರೈಲರ್‌ ವಿಡಿಯೊಗಳನ್ನು ಅಟ್ಯಾಚ್‌ ಮಾಡುತ್ತವೆ. ಇದರಿಂದ ಸಿನಿಮಾ ಪ್ರಚಾರವಾಗುತ್ತದೆ. ಟ್ರೋಲ್‌ ಪೇಜ್‌ಗಳಿಗೆ ಆದಾಯ ಬರುತ್ತದೆ.

ಟ್ರೋಲ್‌ ಹೈಕ್ಳು, ಕುಂದಾಪ್ರದ್‌ ಕುಡಿ, ನಮ್ಮ ವಿಜಯಪುರ ಮೇಮಸ್‌, ಟ್ರೋಲ್‌ ಕನ್ನಡಿಗರು, ಟ್ರೋಲ್‌ ಸಂತೆ, ಟ್ರೋಲ್ ಬೆಂಗಳೂರು, ಟ್ರೋಲ್‌ ಹೈದಾ, ಓತ್ಲಾ ನನ್ನ ಮಕ್ಳು, ಕಿರಿಕ್‌ ಅಡ್ಡಾ, ಟ್ರೋಲ್‌ ತೀರ್ಥಹಳ್ಳಿ, ಟ್ರೋಲ್‌ ಗುರೂಜಿ ಇನ್ನೂ ಹಲವಾರು ಟ್ರೋಲ್‌ ಪೇಜ್‌ಗಳು ಸದ್ದು ಮಾಡುತ್ತಿವೆ. 

ಲೈಕ್‌, ಕಮೆಂಟ್‌ಗಳ ತೀರ್ಪುಗಾರರು
ಟ್ರೋಲ್‌ ಪೇಜ್‌ಗಳನ್ನು ಲೈಕ್‌, ಕಮೆಂಟ್‌, ಫಾಲೋವರ್ಸ್‌ಗಳ ಮೇಲೆ ಗುರುತಿಸಲಾಗುತ್ತದೆ. ಯಾವ ಪೇಜ್‌ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿರುತ್ತದೆಯೋ ಅದುವೆ ಸದ್ಯದ ಸರ್ದಾರ ಎನ್ನುತ್ತಾರೆ ಫಾಲೋವರ್ಸ್‌ ಮಹಾಶಯರು.

ಬರಹ ಇಷ್ಟವಾಯಿತೆ?

 • 0

  Happy
 • 2

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !