ಬುಧವಾರ, ಸೆಪ್ಟೆಂಬರ್ 22, 2021
25 °C

ಬುಟ್ಟಿಯೊಂದಿಗೆ ಪೆನ್ ಬಾಟಲ್‌ ಕ್ಲಿಪ್‌...

ಪೃಥ್ವಿರಾಜ್‌ Updated:

ಅಕ್ಷರ ಗಾತ್ರ : | |

Prajavani

ಜೀವನವನ್ನು ಸಲೀಸು ಮಾಡುವಂತಹ ಉಪಕರಣಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಲೇ ಇರುತ್ತವೆ. ಇವುಗಳಲ್ಲಿ ಕೆಲವೊಂದನ್ನು ನೋಡಿದ ಕೂಡಲೇ ‘ಇವು ಭಿನ್ನ’ ಎನಿಸುತ್ತವೆ. ಅಂತಹ ಕೆಲವು ವಿಶೇಷ ವಸ್ತು–ಉಪಕರಣಗಳ ಬಗ್ಗೆ ಮಾಹಿತಿ ಇಲ್ಲಿದೆ.

ಕ್ಯೂ ಬಾಟಲ್‌

ನೀರು ಕುಡಿದ ನಂತರ ಪ್ಲಾಸ್ಟಿಕ್‌ ಬಾಟಲಿಗಳನ್ನು ಎಲ್ಲೆಂದರಲ್ಲಿ ಎಸೆಯುವುದು ಹಲವರಿಗೆ ಗೀಳು. ನೀರು ಖಾಲಿಯಾದ ಬಾಟಲಿ ಹೊರೆ ಎನಿಸಿದಾಗ ಬಿಸಾಡುವುದು ಸಾಮಾನ್ಯ. ಆದರೆ ನೀರು ಕುಡಿದ ನಂತರ ಬಾಟಲಿಯನ್ನು ಚಿಕ್ಕದಾಗಿಸಿ ಕಿಸೆಗೆ ತುರುಕಿಕೊಂಡರೆ ಹೇಗಿರಬಹುದು? ಈ ಯೋಚನೆಯಿಂದಲೇ ತಯಾರಾಗಿದೆ ‘ಕ್ಯೂ’ ಬಾಟಲ್‌. ಕ್ರೀಡಾಪಟುಗಳು, ವಿಹಾರಿಗಳಿಗೆ ಹೇಳಿ ಮಾಡಿಸಿದಂತಿದೆ ಈ ಬಾಟಲ್‌. ನೀರು ಖಾಲಿಯಾದ ನಂತರ ಇದರ ಗಾತ್ರವನ್ನು ಕುಗ್ಗಿಸಿ ಕಿಸೆಗೆ ತುರುಕಿಕೊಳ್ಳುವಷ್ಟು ಚಿಕ್ಕ ಗಾತ್ರದಲ್ಲಿ ಇದನ್ನು ತಯಾರಿಸಲಾಗಿದೆ. ಅಮೇಜಾನ್‌ನಲ್ಲಿ ಖರೀದಿಗೆ ಲಭ್ಯವಿದೆ.

ಆನ್‌ಲೈನ್‌ ಗ್ರಾಹಕರಿಗೆ ‘ಪೋರ್ಚ್‌ಪಾಡ್‌’ ಬುಟ್ಟಿ

ಆನ್‌ಲೈನ್‌ನಲ್ಲಿ ವಸ್ತುಗಳನ್ನೋ ಉಪಕರಣಗಳನ್ನೋ ಖರೀದಿಸುತ್ತೇವೆ; ಆದರೆ ಅವು ಮನೆಗೆ ತಲುಪುವ ವೇಳೆ ನಾವು ಮನೆಯಲ್ಲಿ ಇಲ್ಲದಿದ್ದರೆ ಅಥವಾ ತುರ್ತಾಗಿ ಹೊರಗೆ ಹೋಗಬೇಕಾಗಿ ಬಂದರೆ, ಆ ವಸ್ತುಗಳನ್ನು ಸ್ವೀಕರಿಸುವಂತೆ ಪಕ್ಕದ ಮನೆಯವರಲ್ಲಿ, ಪರಿಚಯಸ್ಥರಲ್ಲಿ ಬೇಡಿಕೊಳ್ಳಬೇಕು. ಎಲ್ಲ ಸಂದರ್ಭಗಳಲ್ಲೂ ಇದು ಸಾಧ್ಯವಾಗದಿರಬಹುದು. ಈ ಸಮಸ್ಯೆಗೆ ಪೋರ್ಚ್‌ಪಾಡ್‌ ಪರಿಹಾರವಾಗಿದೆ. ಇದರಲ್ಲಿ ಅಳವಡಿಸಿರುವ ಬಾರ್‌ಕೋಡ್‌ ಸ್ಕ್ಯಾನರ್‌ ಹಾಗೂ ಸೆನ್ಸರ್‌ಗಳ ನೆರವಿನಿಂದ ವಸ್ತು, ಉಪಕರಣಗಳ ಪಾರ್ಸೆಲ್‌ಗಳ ಬಾರ್‌ಕೋಡ್‌ ಸ್ಕ್ಯಾನ್‌ ಮಾಡಿದರೆ ಈ ಬುಟ್ಟಿ ತೆರೆದುಕೊಳ್ಳುತ್ತದೆ. ವಸ್ತುಗಳನ್ನು ಇಟ್ಟು ಮುಚ್ಚಿದರೆ ಲಾಕ್‌ ಆಗುತ್ತದೆ. ವಸ್ತು ತಲುಪಿರುವ ಬಗ್ಗೆ ಮೊಬೈಲ್‌ ಫೋನ್‌ಗೆ ಸಂದೇಶ ಕೂಡ ರವಾನೆಯಾಗುತ್ತದೆ. ಮನೆಯಲ್ಲಿ ಯಾರೂ ಇಲ್ಲವೆಂದು ಬುಟ್ಟಿ ಸಹಿತ ಯಾರಾದರೂ ಕದ್ದೊಯ್ಯಬಹುದೇನೊ ಎಂಬ ಭಯ ಬೇಡ. ಇದರಲ್ಲಿ ಅಳವಡಿಸಿರುವ ಕ್ಯಾಮೆರಾ ನೆರವಿನಿಂದ ಇದನ್ನು ಯಾರು ಬಳಸುತ್ತಿದ್ದಾರೆ, ಎಲ್ಲಿ ಬಳಸುತ್ತಿದ್ದಾರೆ ಎಂಬುದನ್ನು ಇದಕ್ಕೆಂದೇ ರೂಪಿಸಲಾಗಿರುವ ವಿಶೇಷ ಆ್ಯಪ್ ಮೂಲಕ ನಿಗಾ ಇಡಬಹುದು. ಹೆಚ್ಚಿನ ಮಾಹಿತಿಗೆ: https://www.theporchpod.com

ರೈಲ್‌ ಪೆನ್‌

ಈವರೆಗೆ ಬಗೆ ಬಗೆಯ ವೈಶಿಷ್ಟ್ಯಗಳನ್ನು ಹೊಂದಿರುವ ಪೆನ್‌ಗಳು ಮಾರುಕಟ್ಟೆಗೆ ಬಂದಿವೆ. ಆದರೆ ಟೆಕ್‌ ಎಕ್ಸ್‌ಸರೀಸ್‌ ಕೋ-ಆಕ್ಸಿಸ್‌ ರೇಲ್‌ ಪೆನ್‌ ಉಳಿದ ಪೆನ್‌ಗಳಿಗಿಂತ ಭಿನ್ನ ಎಂದು ನೋಡಿದ ಕೂಡಲೇ ತಿಳಿಯುತ್ತದೆ. ಸಂಪೂರ್ಣ ಲೋಹದಿಂದ ತಯಾರಿಸಿರುವ ಈ ಲೇಖನಿ, ಹೆಚ್ಚಾಗಿ ಬರೆಯುವಂತಹ ವಿದ್ಯಾರ್ಥಿಗಳಿಗೆ, ಲೇಖಕರಿಗೆ ನೆರವಾಗುತ್ತದೆ ಎಂದು ಇದನ್ನು ತಯಾರಿಸಿರುವ ಸಂಸ್ಥೆ ಹೇಳಿಕೊಂಡಿದೆ. ಚಪ್ಟಟೆಯಾಕಾರದಲ್ಲಿರುವ ಈ ಪೆನ್‌ಗೆ ರೀಫಿಲ್‌ ಅಳವಡಿಸುವುದು ಕೂಡ ಸುಲಭ. ಹೆಚ್ಚು ಹೊತ್ತು ಬರೆದರೂ ಬೆರಳುಗಳಿಗೆ ನೋವಾಗದಂತೆ ಇದನ್ನು ತಯಾರಿಸಲಾಗಿದೆ. ಲೋಹದಿಂದ ತಯಾರಾಗಿದ್ದರೂ ಹಗುರವಾಗಿದ್ದು ಸಾಮಾನ್ಯ ಪೆನ್‌ಗಳಂತೆಯೇ ಇದನ್ನೂ ಕಿಸೆಗೆ, ಪುಸ್ತಕಗಳಿಗೆ ಸಿಕ್ಕಿಸಿಕೊಳ್ಳಬಹುದು.

ಉಸಿರಾಡಲು ನೆರವಾಗುವ ಕ್ಲಿಪ್‌

ವ್ಯಾಯಾಮ ಮಾಡುವಾಗ, ಓಡುವಾಗ, ಬೆಟ್ಟ, ಮೆಟ್ಟಿಲುಗಳನ್ನು ಹತ್ತುವಾಗ ದೇಹಕ್ಕೆ ಹೆಚ್ಚು ಆಮ್ಲಜನಕ ಬೇಕಾಗುತ್ತದೆ. ಆದರೆ ಮೂಗಿನ ಹೊಳ್ಳೆಗಳಲ್ಲಿ ಸಮಸ್ಯೆ ಇದ್ದು, ಉಸಿರಾಟ ಕಷ್ಟವಾಗುತ್ತಿದ್ದರೆ ಅಂತಹ ಸಂದರ್ಭಗಳಲ್ಲಿ ಈ ಟರ್ಬೈನ್‌ ಕ್ಲಿಪ್‌ ನೆರವಾಗುತ್ತದೆ. ಮೂಗಿನ ಹೊಳ್ಳೆಗಳಿಗೆ ಸುಲಭವಾಗಿ ಸಿಕ್ಕಿಸಿಕೊಳ್ಳಲು ಸಾಧ್ಯವಾಗುವಂತೆ ಇದನ್ನು ತಯಾರಿಸಲಾಗಿದೆ. ಧರಿಸಿದ ನಂತರ, ಶೇ 38ರಷ್ಟು ಹೆಚ್ಚು ಪ್ರಮಾಣದಲ್ಲಿ ಸರಾಗ ಉಸಿರಾಟಕ್ಕೆ ನೆರವಾಗುತ್ತದೆ ಎಂದು ಇದನ್ನು ತಯಾರಿಸಿರುವ ಸಂಸ್ಥೆ ಹೇಳಿಕೊಂಡಿದೆ. ಕ್ರೀಡಾಪಟುಗಳಿಗೆ, ಫಿಟ್‌ನೆಸ್‌ ಬಯಸುವವರಿಗೆ ಇದು ನೆರವಾಗಬಹುದು. ಹೆಚ್ಚಿನ ಮಾಹಿತಿಗೆ https://www.theturbine.com

ಕ್ರಿಮಿಗಳನ್ನು ಕೊಲ್ಲುವ ಉಪಕರಣ

ಹೆಚ್ಚು ಜನ ಸೇರುವಂಥ ಪ್ರದೇಶಗಳನ್ನು ಸದಾ ಸ್ವಚ್ಛಗೊಳಿಸುತ್ತಿರಬೇಕು. ಆದರೆ ಸ್ವಚ್ಛಗೊಳಿಸಿದ ಪ್ರದೇಶ ಎಷ್ಟರ ಮಟ್ಟಿಗೆ ಸ್ವಚ್ಛವಾಗಿದೆ ಎಂಬುದು ತಿಳಿಯುವುದು ಕಷ್ಟ. ವೈರಸ್‌ಗಳು, ಬ್ಯಾಕ್ಟಿರೀಯಾಗಳು ಉಳಿಯುವ ಸಾಧ್ಯತೆಯೂ ಇರುತ್ತದೆ. ಈ ಸಮಸ್ಯೆಗೆ ಪರಿಹಾರವಾಗಿ ತಯಾರಿಸಲಾಗಿದೆ ಅಡಿಬಾಟ್‌. ಇದು ಸ್ವಯಂಚಾಲಿತ ಉಪಕರಣವಾಗಿದ್ದು, ಶಾಲೆ, ಕಾಲೇಜು, ಆಸ್ಪತ್ರೆ, ಸಭಾಂಗಣಗಳಲ್ಲಿ ಬಳಸಲು ಯೋಗ್ಯವಾಗಿದೆ. ಇದರಲ್ಲಿನ ಸೆನ್ಸರ್‌ಗಳ ಸಹಾಯದಿಂದ ಸುತ್ತಮುತ್ತಲಿರುವ ಕೊಳಕಿರುವ ಪ್ರದೇಶಗಳನ್ನು ಇದೇ ಹುಡುಕಿ ಸ್ವಚ್ಛಗೊಳಿಸುವಂತೆ ಇದನ್ನು ತಯಾರಿಸಲಾಗಿದೆ. ವೈರಸ್‌ಗಳನ್ನು ಕೊಲ್ಲುವುದಕ್ಕೆ ಸ್ವಯಂಚಾಲಿತ ಯುವಿ ಸ್ಯಾನಿಟೈಸಿಂಗ್‌ ವ್ಯವಸ್ಥೆ ಇದರಲ್ಲಿ ಇದೆ. ಹೆಚ್ಚಿನ ಮಾಹಿತಿಗೆ https://www.ubtrobot.com/ products/adibot?ls=en

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು