ಶುಕ್ರವಾರ, ಮಾರ್ಚ್ 31, 2023
26 °C

ಬಲೂನಿನ ಆಟ ಕಾಟ: ಬೇಹುಗಾರಿಕೆಗೆ ಬಲೂನು ಬಳಸಿದ್ದ ಚೀನಾ– ಒಂದಿಷ್ಟು ಮಾಹಿತಿ

ಶರತ್‌ ಭಟ್‌ ಸೇರಾಜೆ Updated:

ಅಕ್ಷರ ಗಾತ್ರ : | |

ಚೀನಾದವರು ಅಮೆರಿಕಾದ ಮೇಲೆ ಗೂಢಚರ್ಯೆ ಮಾಡುವ ಬಲೂನುಗಳನ್ನು ಹಾರಿಸಿದ್ದಾರಂತೆ – ಎಂಬುದು ಭಾರೀ ಹುಯಿಲನ್ನು ಎಬ್ಬಿಸಿತು. ಏನಿದರ ಕಥೆ? ಬಲೂನುಗಳನ್ನು ಇಂಥ ಕಾರ್ಯಗಳಿಗೂ ಉಪಯೋಗಿಸುತ್ತಾರೆಯೇ ಎಂಬ ಪ್ರಶ್ನೆ ಹಲವರ ಮನಸ್ಸಿನಲ್ಲಿ ಮೂಡಿದ್ದೀತು. ಇದರ ಬಗ್ಗೆ ಒಂದಿಷ್ಟು ತಿಳಿದುಕೊಳ್ಳೋಣವಂತೆ.

ಸೈನ್ಸ್ ಫಿಕ್ಷನ್ ಲೇಖಕ ಜೂಲ್ಸ್ ವರ್ನ್ 1873ರಲ್ಲಿ ಬರೆದ ‘Around the World in 80 Days’ ಎಂಬ ಕಾದಂಬರಿಯನ್ನು ಆಧರಿಸಿ 1956ರಲ್ಲಿ ಅದೇ ಹೆಸರಿನ ಅದ್ದೂರಿಯಾದ ಸಿನೆಮಾವೊಂದು ಬಂದಿತ್ತು. ನಾನು ಹೀಗೆ ಆಗಸದೆತ್ತರಕ್ಕೆ ಹಾರುವ ಬಲೂನನ್ನು ನೋಡಿದ್ದು ಅದರಲ್ಲೇ ಮೊದಲು. ಇಡೀ ಜಗತ್ತನ್ನು ಎಂಬತ್ತು ದಿನಗಳಲ್ಲಿ ಸುತ್ತಿ ಬಿಡಬಹುದು ಎಂದೊಬ್ಬ 1873ರ ಕಾಲದಲ್ಲಿ ಬಾಜಿಕಟ್ಟಿ, ಹಡಗು, ರೈಲುಗಳಲ್ಲಿ ಜಗತ್ತನ್ನು ಸುತ್ತುವ ಕಥೆ ಆದರಲ್ಲಿತ್ತು. ಆಲ್ಪ್ಸ್ ಪರ್ವತದ ಹತ್ತಿರ ಸುರಂಗ ಕುಸಿದು ಮುಂದೆ ಹೋಗಲಾಗದು ಎಂದಾದಾಗ ಆ ಭಾಗದಲ್ಲಿ ಬಲೂನನ್ನು ಏರಿ ಪಯಣಿಸುವಂತೆ ತೋರಿಸಲಾಗಿತ್ತು.

ಅದಾದ ಮೇಲೆ ಮತ್ತೆ ಇಂಥ ಬಲೂನನ್ನು ನಾನು ನೋಡಿದ್ದು ಮತ್ತೊಂದು ಚಲನಚಿತ್ರದಲ್ಲಿಯೇ. ಅದು ‘The Aeronauts’ ಎಂಬ ಚಿತ್ರ. ಜೇಮ್ಸ್ ಗ್ಲೈಶರ್ ಎಂಬ ಹವಾಮಾನ ಶಾಸ್ತ್ರಜ್ಞನ ಕಥೆ ಅದು. ಬಲೂನನ್ನು ಹತ್ತಿ ಮೇಲು ಮೇಲಕ್ಕೇರಿ ತುಂಬ ಎತ್ತರದಲ್ಲಿ ಗಾಳಿಯ ಉಷ್ಣತೆ, ಗಾಳಿಯ ಒತ್ತಡ ಮತ್ತು ಅದರ ವೇಗಗಳನ್ನು ಅಳತೆ ಮಾಡಿದರೆ ಅವುಗಳನ್ನು ಉಪಯೋಗಿಸಿ ಹವಾಮಾನದ ಮುನ್ಸೂಚನೆಯನ್ನು ಕೊಡಬಹುದು ಎಂಬ ಯೋಜನೆಯನ್ನು ಹಾಕಿ, ಅದನ್ನು ಕಾರ್ಯಗತಗೊಳಿಸಲಿಕ್ಕೆ ಸ್ವತಃ ಅವನೇ ಬಲೂನು ಹತ್ತಿ ನೆಗೆವಕ್ಕಿಯಂತೆ ಬಾನಿಗೆ ಏರುವ ಸಾಹಸದ ಚಿತ್ರಣ ಅದರಲ್ಲಿತ್ತು. ಇದು 1862ರಲ್ಲಿ ನಡೆದ ಘಟನೆ. ವಾತಾವರಣದಲ್ಲಿರುವ ಹಲವು ಪದರಗಳ ಪತ್ತೆಯಾದದ್ದು, ವಿಜ್ಞಾನಿಗಳಿಗೆ ಹೊಸವಿಚಾರಗಳು ತಿಳಿದದ್ದು ಅವನ ಆ ಗಗನಯಾತ್ರೆಯಿಂದಲೇ. ಅದಾದ ಮೇಲೆ ಹವಾಮಾನದ ವೀಕ್ಷಣೆಗೆ ಇಂಥ ಬಲೂನುಗಳು ವ್ಯಾಪಕವಾಗಿ ಬಳಕೆಯಾದವು. ಗಮನಿಸಿ, ಚೀನಾದವರು ಹೇಳಿಕೊಂಡದ್ದು ತಮ್ಮದೂ ಇಂಥ ಒಂದು ಹವಾಮಾನ ವೀಕ್ಷಣೆಗೆ ಇರುವ ಬಲೂನು ಎಂದೇ!

ಹೀಲಿಯಂ ಎಂಬ ಅನಿಲ ಗಾಳಿಗಿಂತ ಹಗುರ, ಅದನ್ನು ಇವುಗಳಲ್ಲಿ ತುಂಬಿರುತ್ತಾರೆ, ಹಗುರವಾದ್ದರಿಂದ ಅವು ತೇಲುತ್ತವೆ. ತೇಲುವಿಕೆಯ ಹಿಂದಿರುವ ಭೌತಶಾಸ್ತ್ರದ ತತ್ತ್ವ ಇಷ್ಟೇ. ವಿಶೇಷ ಎಂದರೆ ಬಲೂನನ್ನು ಶತ್ರುಪಾಳಯದ ಮೇಲೆ ನಿಗಾ ಇಡಲಿಕ್ಕೆ ಬಳಸಿದ ಉದಾಹರಣೆಗಳು ಅಷ್ಟು ಹಿಂದಿನ ಕಾಲದಲ್ಲೇ ಸಿಗುತ್ತವೆ. ಫ್ರೆಂಚ್ ಕ್ರಾಂತಿಯಾದ ಮೇಲೆ ಫ್ರೆಂಚರಿಗೂ ಬೇರೆ ಕೆಲವು ದೇಶಗಳಿಗೂ ಯುದ್ಧವಾಗಿತ್ತು. ಆಗ ಫ್ರೆಂಚರು ಶತ್ರುಪಕ್ಷದವರ ಮೇಲೆ ಕಣ್ಗಾವಲು ಮಾಡಲಿಕ್ಕೆ ಬಲೂನುಗಳನ್ನು ಬಳಸಿದ್ದರಂತೆ. ಎತ್ತರದಿಂದ ನೋಡಿದರೆ ಶತ್ರುಗಳ ಚಲನವಲನ ಗೊತ್ತಾಗುತ್ತದೆ ಎಂಬ ಕಾರಣಕ್ಕೇ ಕೋಟೆಗಳನ್ನು ಎತ್ತರದ ಸ್ಥಾನಗಳಲ್ಲಿ ಕಟ್ಟುತ್ತಿದ್ದರಲ್ಲ, ಇದೂ ಹಾಗೆಯೇ. ಬಲೂನು ಎತ್ತರದಿಂದ ವಿಹಂಗಮ ನೋಟವನ್ನು ಕೊಡಬಲ್ಲದು. ಒಂದನೇ ಮತ್ತು ಎರಡನೇ ಮಹಾಯುದ್ಧದಲ್ಲಿಯೂ ಇದೇ ಉದ್ದೇಶಕ್ಕೆ ಇವುಗಳ ಬಳಕೆಯನ್ನು ಮಾಡಲಾಯಿತು. ಯುದ್ಧವಿಮಾನ, ಫೈಟರ್ ಪೈಲಟ್ ಎಲ್ಲ ಇಲ್ಲದೇ ಬೇಹುಗಾರಿಕೆಯ ಕಾರ್ಯವನ್ನು ಸಾಧಿಸಬಹುದಾದರೆ ಯಾಕಾಗಬಾರದು ಎಂಬುದು ಇಲ್ಲಿದ್ದ ಯೋಚನೆ.
ವಿಚಿತ್ರವೆಂದರೆ ಇಂಥ ಹಲವಾರು ಬಲೂನುಗಳಲ್ಲಿ ಬಾಂಬುಗಳನ್ನು ಕಟ್ಟಿ ಅಮೆರಿಕಾದ ಮೇಲೆ ಅವುಗಳನ್ನು ಹಾರಿಬಿಡುವ ತಂತ್ರವನ್ನು ಜಪಾನು ಮಾಡಿತ್ತಂತೆ. ಬಿದ್ದರೆ ಬಾಂಬು, ಹೋದರೆ ಬಲೂನು ಎಂಬ ಯುದ್ಧತಂತ್ರ ಅದಿದ್ದೀತು!

ಇನ್ನು ತೀರಾ ಆಧುನಿಕ ಕಾಲದಲ್ಲಿಯೂ ಅಫಘಾನಿಸ್ತಾನದ ಮೇಲೆ ಯುದ್ಧ ಮಾಡುವ ಅಲ್ಲಿನವರ ಆಕ್ರಮಣ ತಂತ್ರದ ಮೇಲೆ ಕಣ್ಣಿಡಲಿಕ್ಕೆ ಅಮೆರಿಕನ್ನರೂ ಬಲೂನುಗಳನ್ನು ಬಳಸಿದ್ದಿತ್ತು. ಇಷ್ಟೆಲ್ಲಾ ಆಧುನಿಕ ಸಲಕರಣೆಗಳಿರುವಾಗ ಹಳೆಕಾಲದ ಬಲೂನು ಯಾಕೆ ಬೇಕು ಎಂಬುದು ಮೂಡಬಹುದಾದ ಪ್ರಶ್ನೆ. ಅದರ ಪರವಾದ ಕೆಲವು ಕಾರಣಗಳನ್ನು ತಜ್ಞರು ಕೊಡುತ್ತಾರೆ: ವಿಮಾನಗಳಿಗೆ ಹಾಕುವಷ್ಟು ಇಂಧನ ಇದಕ್ಕೆ ಬೇಕಾಗಿಲ್ಲ, ಸೋಲಾರ್ ಪ್ಯಾನೆಲ್ ಹಾಕಿದರೆ ಅದು ಉತ್ಪಾದಿಸುವ ಶಕ್ತಿಯೇ ಇದಕ್ಕೆ ಸಾಕು. ವಿಮಾನಗಳಷ್ಟು ಖರ್ಚೂ ಆಗುವುದಿಲ್ಲ, ಇನ್ನು ಉಪಗ್ರಹಗಳಿಗೆ ಹೋಲಿಸಿದರಂತೂ ಇವುಗಳಿಗಾಗುವ ಖರ್ಚು ಎಷ್ಟೆಷ್ಟೋ ಕಡಮೆ. ಇವುಗಳು ಸುಮಾರು 60,000 ಫೀಟು ಎತ್ತರದಲ್ಲಿ ವಿಹರಿಸುತ್ತವೆ. ಉಪಗ್ರಹಗಳಿಗೆ ಹೋಲಿಸಿದರೆ ಇದು ಭೂಮಿಗೆ ಎಷ್ಟೋ ಹತ್ತಿರ. ಹತ್ತಿರವಿದ್ದಷ್ಟೂ ನೋಟದ ಸ್ಪಷ್ಟತೆ ಹೆಚ್ಚು. ಹೀಗಾಗಿ, ಉಪಗ್ರಹಗಳಿಗೆ ಕಾಣದ ವಿವರಗಳು ಇವುಗಳಿಗೆ ಕಾಣುತ್ತವೆ. ಇದೊಂದು ಮುಖ್ಯವಾದ ಪ್ರಯೋಜನ. ಇನ್ನೊಂದು ಪ್ರಯೋಜನವೆಂದರೆ, ಇವು ನಿಧಾನಕ್ಕೆ ಚಲಿಸುವುದರಿಂದ, ಒಂದೇ ಜಾಗದಲ್ಲಿ ಹೆಚ್ಚು ಕಾಲ ಇದ್ದು, ಆ ಜಾಗವನ್ನು ವಿವರವಾಗಿ ಗಮನಿಸಬಹುದು. ಉಪಗ್ರಹಗಳು ತಿರುಗುತ್ತಲೇ ಇರುವುದರಿಂದ ಅವು ಮತ್ತೆ ಒಂದು ಜಾಗಕ್ಕೆ ಬರಲಿಕ್ಕೆ ಸಮಯ ತೆಗೆದುಕೊಳ್ಳುತ್ತವೆ. ಹೀಗೆ.

ಈ ಇಡೀ ಪ್ರಕರಣದಲ್ಲಿ ಒಂದು ತಾತ್ತ್ವಿಕ ಪ್ರಶ್ನೆಯೂ ಉದ್ಭವಿಸುತ್ತದೆ. ಈಗ, ಒಂದು ಥರ್ಟಿ– ಫಾರ್ಟಿ ಸೈಟು ಇರುವವರು, ಮನೆಯ ಮೂರನೆಯ ಮಾಳಿಗೆಯವರೆಗಿನ ಜಾಗ ತಮ್ಮದು ಎನ್ನಬಹುದು, ಆದರೆ ತಮ್ಮ ಮನೆಯಿಂದ ಅರ್ಧ ಕಿಲೋಮೀಟರು ಮೇಲಿರುವ ಆಕಾಶವನ್ನು ತಮ್ಮದು ಎನ್ನಲಾರರು! ಹಾಗಾದರೆ, ಒಂದು ದೇಶದವರು ತಮ್ಮ ನೆಲಕ್ಕಿಂತ ಎಷ್ಟು ಮೇಲಿನವರೆಗಿನ ಜಾಗವನ್ನು ತಮ್ಮದು ಎಂದು ಹಕ್ಕುಸಾಧನೆ ಮಾಡಲು ಸಾಧ್ಯ? ಅಮೆರಿಕಾದಂಥ ದೇಶಗಳು ಸುಮಾರು ತಮ್ಮ ದೇಶದಲ್ಲಿ 60,000 ಫೀಟಿನಷ್ಟು ಎತ್ತರದವರೆಗೆ ಇರುವ ಜಾಗವನ್ನು ಪರಿವೀಕ್ಷಿಸುತ್ತವೆ; ಅದನ್ನು ತಮ್ಮ ‘airspace’ ಎಂದು ಹೇಳಿಕೊಳ್ಳುತ್ತವೆ, ಅಷ್ಟರವರೆಗೆ ಅನುಮತಿಯಿಲ್ಲದೆ ಪ್ರವೇಶವಿಲ್ಲ. ಹಾಗಾದರೆ ಯಾರಾದರೂ ಚಾಣಾಕ್ಷರು ಅದಕ್ಕಿಂತ ಒಂದು ಹತ್ತು ಸಾವಿರ ಫೀಟಿನಷ್ಟು ಎತ್ತರದಲ್ಲಿ ಬಲೂನು ಹಾರಿಸಿ ಗೂಢಚರ್ಯೆ ಮಾಡಿದರೆ ಅದು ಅಪರಾಧವಾಗುತ್ತದೋ ಇಲ್ಲವೋ?

ಬಾನಿಗೊಂದು ಎಲ್ಲೆ ಎಲ್ಲಿದೆ?!

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು