ಭಾನುವಾರ, ಜನವರಿ 17, 2021
19 °C

ಈ ಟ್ರ್ಯಾಕ್ಟರ್‌ಗೆ ಡ್ರೈವರ್ ಬೇಕಿಲ್ಲ!

ಪೃಥ್ವಿರಾಜ್ Updated:

ಅಕ್ಷರ ಗಾತ್ರ : | |

‌ಅಂತರ್ಜಾಲ, ಕಂಪ್ಯೂಟರ್, ಸ್ಮಾರ್ಟ್‌ಫೋನ್‌. ನಮ್ಮ ಜೀವನದ ವೈಖರಿಯನ್ನೇ ಬದಲಾಯಿಸಿದ ಸಾಧನಗಳಿವು. ಸುಗಮ ಜೀವನಕ್ಕಾಗಿ ಹೊಸ ಯಂತ್ರೋಪಕರಣಗಳು, ಸಾಧನಗಳನ್ನು ತಯಾರಿಸು
ತ್ತಿದ್ದರೂ ಎನೋ ಅತೃಪ್ತಿ ಕಾಡುತ್ತಲೇ ಇದೆ. ಹೀಗಾಗಿ ನಮ್ಮ ಕೆಲಸಗಳನ್ನು ಮತ್ತಷ್ಟು ಸುಲಭವಾಗಿಸುವಂತಹ ಯಂತ್ರಗಳ ಬಗ್ಗೆ ಸಂಶೋಧಕರು ಯೋಚಿಸುತ್ತಿದ್ದಾರೆ. ಆ ಆಲೋಚನೆಯಲ್ಲಿ ಹೊಳೆದದ್ದೇ ‘ಡ್ರೈವರ್ ಲೆಸ್’ ಎಂಬ ಪರಿಕಲ್ಪನೆ. 

ವಿದೇಶಿ ಸಂಸ್ಥೆಗಳಷ್ಟೇ ಅಲ್ಲ ದೇಶೀ ಸಂಸ್ಥೆಗಳೂ ಇವುಗಳ ತಯಾರಿಗೆ ಟೊಂಕ ಕಟ್ಟಿವೆ. ಈಗಾಗಲೇ ಕೆಲವು ಸಂಸ್ಥೆಗಳು ಒಂದು ರೂಪವನ್ನೂ ಕೊಟ್ಟಿವೆ. ಎಲ್ಲ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಕೆಲವೇ ವರ್ಷಗಳಲ್ಲಿ ಇವು ಹೊಲದಲ್ಲಿ ದುಡಿಯಲು ಸಿದ್ಧವಾಗಲಿವೆ.

ಆಗಲೇ ಹೊಳೆದಿತ್ತು…

ಚಾಲಕ ರಹಿತ ಟ್ರ್ಯಾಕ್ಟರ್ ಎಂಬ ಆಲೋಚನೆ ಇಂದಿನದ್ದಲ್ಲ. 1940ರಲ್ಲಿ ಫ್ರ್ಯಾಂಕ್ ಆ್ಯಂಡ್ರೂ ಎಂಬ ವ್ಯಕ್ತಿ ತನ್ನ ಬಳಿಯಿದ್ದ ಪರಿಕರಗಳನ್ನೇ ಬಳಸಿ ಚಿಕ್ಕ ಟ್ರ್ಯಾಕ್ಟರ್ ತಯಾರಿಸಿ ರಿಮೋಟ್ ಸಹಾಯದೊಂದಿಗೆ ಚಲಾಯಿಸಲು ಸಾಧ್ಯವಾಗುವಂತೆ ಪ್ರಯತ್ನಿಸಿದ. ಆದರೆ ಪ್ರಯತ್ನ ವಿಫಲವಾಯಿತು. ಅವರ ಆಲೋಚನೆ ಮೂಲೆಗೆ ಸರಿಯಿತು. ಕೆಲವು ವರ್ಷಗಳಿಂದ ವಾಹನ ಉದ್ಯಮ ಕ್ಷೇತ್ರದಲ್ಲಿ ಚಾಲಕ ರಹಿತ ವಾಹನಗಳ ಪರಿಕಲ್ಪನೆ ಗರಿಗೆದರಿರುವುದರಿಂದ, ಚಾಲಕ ರಹಿತ ಟ್ರ್ಯಾಕ್ಟರ್ ಆಲೋಚನೆಗೆ ಗರಿ ಬಂತು. ಇದಕ್ಕೆ ಶಕ್ತಿ ನೀಡಲು ಕೃಷಿ-ತಂತ್ರಜ್ಞಾನ ಸಂಸ್ಥೆಗಳೂ ಆಸಕ್ತಿ ತೋರಿಸುತ್ತಿವೆ.

ವ್ಯವಸಾಯ ಎಂದರೆ ಮಳೆಯೊಂದಿಗಿನ ಜೂಜು ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿರುವಾಗ ಕೃಷಿ ಸಾಧ್ಯವಾದಷ್ಟು ಸರಳವಾಗಬೇಕು. ಈ ನಿಟ್ಟಿನಲ್ಲಿ ಇನ್ನಷ್ಟು ಸಂಶೋಧನೆಗಳು ಆಗಬೇಕಿದೆ. ರೈತರಿಗೆ ನೆರವಾಗುವಂತಹ ವಾಹನಗಳು, ಸಾಧನಗಳು ಹೆಚ್ಚಿನ ಸಂಖ್ಯೆಯಲ್ಲಿ ಬಳಕೆಗೆ ಬರಬೇಕಿದೆ. 

ಎತ್ತು ಮತ್ತು ನೇಗಿಲಿನ ಸಹಾಯದಿಂದ ನೆಲ ಉಳುವ ಕಷ್ಟ ರೈತರಿಗೇ ಗೊತ್ತು. ಬಿಸಿಲ ಝಳಕ್ಕೆ ಮೈಯೊಡ್ಡಿ ಕೆಲಸ ಮಾಡುವ ಅವರ ಆರೋಗ್ಯ ಎಷ್ಟರ ಮಟ್ಟಿಗೆ ಹದಗೆಡಿರಬಹುದು? ಇಂತಹ ಸಮಸ್ಯೆಗಳಿಗೆ ಪರಿಹಾರವಾಗಿ ಟ್ರ್ಯಾಕ್ಟರ್ ಬಳಕೆಗೆ ಬಂತು. ಆದರೆ ಇದಕ್ಕೆ ಚಾಲಕ ಇರಲೇಬೇಕು. ಸಮಯ ಕೂಡ ಮೀಸಲಿಡಬೇಕು. ಹೀಗಾಗಿ ಚಾಲಕರಹಿತ ಟ್ರ್ಯಾಕ್ಟರ್‌ನ ಅಗತ್ಯ ಹೆಚ್ಚಾಗುತ್ತಿದೆ. ತಂತ್ರಜ್ಞಾನದ ನೆರವಿನಿಂದ ಕೆಲಸ ಮಾಡುವ ಈ ಟ್ರ್ಯಾಕ್ಟರ್‌ಗೆ ಜಿಪಿಎಸ್ ನಕ್ಷೆಗಳೇ ದಾರಿ ತೋರಿಸುತ್ತವೆ.

2011ರಲ್ಲಿ ಅಮೆರಿಕದ ಅಟಾನಮಸ್ ಟ್ರ್ಯಾಕ್ಟರ್ ಕಾರ್ಪೊರೇಷನ್ ಎಂಬ ಸಂಸ್ಥೆ, ಟ್ರ್ಯಾಕ್ಟರ್‌ಗಳಲ್ಲಿ ಆಟೊಮೇಷನ್ ತಂತ್ರಜ್ಞಾನ ಅಳವಡಿಸಲು ಸಂಶೋಧನೆಗಳನ್ನು ಆರಂಭಿಸಿತು. 2013ರಲ್ಲಿ ಇಂಗ್ಲೆಂಡ್‌ನ ಹಾರ್ಬರ್ ಆ್ಯಡಮ್ಸ್ ವಿಶ್ವವಿದ್ಯಾಲಯದ ಸಂಶೋಧಕರು ಯೋಜನೆಯೊಂದರ ಭಾಗವಾಗಿ ಅಟಾನಮಸ್ ಟ್ರ್ಯಾಕ್ಟರ್ ತಯಾರಿಸಿದ್ದರು. ಇದು ರೋಬೊ ಮಾದರಿಯ ವಾಹನವಾಗಿತ್ತು. ಇದನ್ನು ಕಂಪ್ಯೂಟರ್ ನೆರವಿನಿಂದ ಸುಲಭವಾಗಿ ನಿಯಂತ್ರಿಸಬಹುದಾಗಿತ್ತು. ಇದರ ಪ್ರಾಯೋಗಿಕ ಬಳಕೆ ಯಶಸ್ವಿಯಾದ್ದರಿಂದ ಹಲವು ಸಂಶೋಧಕರಿಗೆ ಪ್ರೇರಣೆಯಾಯಿತು. ದೇಶದ ಕೆಲವು ವಾಹನ ತಯಾರಿಕಾ ಸಂಸ್ಥೆಗಳಿಗೂ ಇದು ಸ್ಫೂರ್ತಿ ತುಂಬಿದೆ.

ಈ ವಿಶೇಷ ಟ್ರ್ಯಾಕ್ಟರ್ ಬಳಕೆಗೆ ಬಂದರೆ, ಹೊಲದಲ್ಲಿನ ಸಣ್ಣ-ಪುಟ್ಟ ಕಲ್ಲುಗಳನ್ನು ತೆಗೆದು ಹಾಕುವ, ಹೊಲದ ಸರಹದ್ದು ಗುರುತಿಸುವ, ನೆಲ ಅಗೆಯುವ, ಉಳುವ, ಬೆಳೆ ಕಟಾವು ಮಾಡುವ ಕೆಲಸಗಳು ಮಾನವ ಪ್ರಮೇಯವಿಲ್ಲದೇ ನಡೆಯುತ್ತವೆ.

ಸ್ವದೇಶಿ ಆವಿಷ್ಕಾರಗಳು

ಚಾಲಕ ರಹಿತ ಟ್ರ್ಯಾಕ್ಟರ್ ಎಂಬ ಆಲೋಚನೆ ನಮ್ಮ ದೇಶದಲ್ಲಿ ಗರಿ ಗೆದರುವಂತೆ ಮಾಡಿದ್ದು ಮಹೀಂದ್ರಾ ಆ್ಯಂಡ್ ಮಹೀಂದ್ರಾ ಸಂಸ್ಥೆ. ಕಳೆದ ವರ್ಷವೇ ಈ ಸಂಸ್ಥೆ, ಜಿಪಿಎಸ್ ನೆರವಿನಿಂದ ಟ್ರ್ಯಾಕ್ಟರ್‌ ಚಲಾಯಿಸುವಲ್ಲಿ ಯಶಸ್ವಿಯಾಗಿದೆ. ಪೂರ್ಣ ಪ್ರಮಾಣದಲ್ಲಿ ಬಳಕೆಗೆ ಬರಬೇಕೆಂದರೆ ಇನ್ನೂ ಕೆಲವು ಬದಲಾವಣೆಗಳು ಆಗಬೇಕಿದೆ. ಇದರ ಜತೆಗೆ ರೈತರಲ್ಲೂ ಜಿಪಿಎಸ್ ತಂತ್ರಜ್ಞಾನದ ಕುರಿತು ಜಾಗೃತಿ ಮೂಡಿಸಬೇಕಿದೆ.

ಮಹೀಂದ್ರಾ ಸಂಸ್ಥೆಗೆ ಪೈಪೋಟಿ ನೀಡುವಂತೆ ಎಸ್ಮಾರ್ಕ್ ಲಿಮಿಟೆಡ್ ಸಂಸ್ಥೆ ಕೂಡ ಚಾಲಕ ರಹಿತಿ ಟ್ರ್ಯಾಕ್ಟರ್ ತಯಾರಿಸಲು ಮುಂದಡಿ ಇಟ್ಟಿದೆ. ಈ ಯೋಜನೆಯ ಸಾಕಾರಕ್ಕಾಗಿ ಮೈಕ್ರೊಸಾಫ್ಟ್, ಬಾಷ್ ನಂತಹ ಸಂಸ್ಥೆಗಳ ಜತೆಗೆ ಕೈ ಜೋಡಿಸಿದೆ. ಸ್ಮಾರ್ಟ್‌ಫೋನ್‌ನೊಂದಿಗೆ ಜೋಡಿಸಲು ಕೆಲವು ಆಟೊಮೊಬೈಲ್ ಸಂಸ್ಥೆಗಳೂ ಮುಂದೆ ಬರುತ್ತಿವೆ.

ಸಮೀಕ್ಷೆಯೊಂದರ ಪ್ರಕಾರ 2025ಕ್ಕೆ ವಿಶ್ವದಾದ್ಯಂತ ಸುಮಾರು 2 ಕೋಟಿ ಚಾಲಕ ರಹಿತ ವಾಹನಗಳು ಬಳಕೆಗೆ ಬರಲಿವೆ. ಅದರಲ್ಲಿ ಶೇ 10ರಷ್ಟು ಟ್ರ್ಯಾಕ್ಟರ್‌ಗಳೇ ಆಗಿರಲಿವೆ.

ಮೊದಲ ಇ- ಟ್ರ್ಯಾಕ್ಟರ್

ಮುಂಬೈನ ಆಟೊ ಎನ್‌ಎಕ್ಸ್‌ಟಿ ಆಟೊಮೇಷನ್ ಸಂಸ್ಥೆ ಕೂಡ ಇ-ಟ್ರ್ಯಾಕ್ಟರ್ ತಯಾರಿಸಿತು. ಇದು ವಿದ್ಯುತ್ ಚಾಲಿತ ವಾಹನ. ಈಗಾಗಲೇ ಮುಂಬೈ ಸುತ್ತಮುತ್ತಲಿನ ರೈತರು ಇದರ ಲಾಭ ಪಡೆಯುತ್ತಿದ್ದಾರೆ. ಇದರ ನೆರವಿನಿಂದ ಕೇವಲ ₹350ಗಳಲ್ಲಿ ಎಕರೆ ಹೊಲವನ್ನು ಊಳಬಹುದು. ಒಮ್ಮೆ ಚಾರ್ಜ್ ಮಾಡಿದರೆ ಸುಮಾರು 150 ಕಿ.ಮೀವರೆಗೆ ಸಂಚರಿಸುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು