ಗುರುವಾರ , ಆಗಸ್ಟ್ 13, 2020
27 °C

ಜ್ಞಾನವೃದ್ಧಿಸುವ ರೋಬೊ

ಎಸ್‌. ಸಂಪತ್‌ Updated:

ಅಕ್ಷರ ಗಾತ್ರ : | |

ಶಾಲಾ ಹೋಮ್‌ ವರ್ಕ್‌ಗಳನ್ನು ಮಾಡುವ, ನೆಲದ ಮೇಲೆ ಬಿದ್ದಿರುವ ಕಸವನ್ನು ತಾನಾಗಿಯೇ ತೆರವುಗೊಳಿಸುವ, ಸಸಿ ಅಥವಾ ಗಿಡದ ಬುಡದಲ್ಲಿ ಇರುವ ತೇವಾಂಶವನ್ನು ಖಚಿತವಾಗಿ ತಿಳಿದು ಎಷ್ಟು ಅಗತ್ಯವಿದೆಯೋ ಅಷ್ಟು ನೀರು ಹಾಯಿಸುವ ರೋಬೊಗಳಿದ್ದರೆ ಹೇಗೆ? ಕೊಠಡಿಯಲ್ಲಿ ಯಾರೂ ಇಲ್ಲದಾಗ ತಾನಾಗಿಯೇ ಲೈಟ್‌ ಆಫ್‌ ಆಗುವ ಹಾಗೂ ಯಾರಾದರೂ ಕೊಠಡಿ ಪ್ರವೇಶಿಸಿದರೆ ಅದಾಗಿಯೇ ಲೈಟ್‌ ಆನ್‌ ಆಗುವ ಸೆನ್ಸರ್‌ಗಳು ಇದ್ದರೆ ಎಷ್ಟು ಚೆನ್ನ?

ಇವು ಎಂಜಿನಿಯರಿಂಗ್‌ ವಿದ್ಯಾರ್ಥಿಗಳ ಯೋಜನೆಗಳಲ್ಲ. ಒಂದರಿಂದ ಐದನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಂದ ಹೊರ ಹೊಮ್ಮಿರುವ ಪರಿಕಲ್ಪನೆಗಳು!

ಅರೆ ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳು ಹೀಗೆಲ್ಲ ಹೇಗೆ ಯೋಚಿಸುತ್ತಾರೆ? ಅವರ ಬುದ್ಧಿ ಇಷ್ಟು ಚುರುಕಾಗಲು ಮತ್ತು ಗ್ರಹಿಕಾ ಸಾಮರ್ಥ್ಯ ವೃದ್ಧಿಸಲು ಕಾರಣವೇನು ಎಂಬ ಪ್ರಶ್ನೆಗಳು ಸಹಜವಾಗಿಯೇ ಕಾಡುತ್ತವೆ. ಅವರಿಗೆ ಇದಕ್ಕೆ ಪ್ರೇರಣೆಯಾಗಿರುವುದು ರೋಬೊಟಿಕ್‌ ತಂತ್ರಜ್ಞಾನ. ಈ ಮೂಲಕ ಸೆನ್ಸರ್‌ ಕಾರ್ಯ ಚಟುವಟಿಕೆಯ ಜ್ಞಾನ ವೃದ್ಧಿಸಿಕೊಂಡಿರುವ ಪುಟಾಣಿಗಳು ಚುರುಕಾಗಿ ಮತ್ತು ವಿಭಿನ್ನವಾಗಿ ಆಲೋಚಿಸುವ ಶಕ್ತಿಯನ್ನು ಬೆಳೆಸಿಕೊಂಡಿದ್ದಾರೆ.

ಮಕ್ಕಳ ಸ್ನೇಹಿ ರೋಬೊಟಿಕ್‌ ಕಿಟ್‌: ರೋಬೊಟಿಕ್‌ ಕಿಟ್‌ಗಳನ್ನು ಸಿದ್ಧಪಡಿಸುವ ಕ್ಷೇತ್ರದಲ್ಲಿ ಮೂರು ವರ್ಷದ ಹಿಂದೆ ನವೋದ್ಯಮವಾಗಿ ಆರಂಭವಾಗಿರುವ ಕ್ಯುಟಿಪಿಐ (QtPi) ಕಂಪನಿ ಸಿದ್ಧಪಡಿಸಿರುವ ‘ಮಕ್ಕಳ ಸ್ನೇಹಿ ರೋಬೊಟಿಕ್‌ ಕಿಟ್‌’ಗಳು ಮಕ್ಕಳ ಕೌಶಲ ಹೆಚ್ಚಿಸಲು ನೆರವಾಗಿವೆ. ಮಕ್ಕಳ ಚಿಂತನಾ ಶಕ್ತಿಗೆ ಅನುಗುಣವಾಗಿ ಹೊಸ ಅವಿಷ್ಕಾರಗಳಿಗೂ ಇದು ಪ್ರೇರಣೆಯಾಗುತ್ತಿದೆ. ಎಲೆಕ್ಟ್ರಾನಿಕ್‌ ಸಿಟಿಯಲ್ಲಿ ಉದ್ಯಮ ಆರಂಭಿಸಿರುವ ಈ ಕಂಪನಿಯು ರೋಬೊಟಿಕ್‌ ಕಿಟ್‌ಗಳ ತಯಾರಿಸುವುದರ ಜತೆಗೆ ಮಕ್ಕಳಿಗೆ ಶಾಲೆಗಳಲ್ಲಿ ರೋಬೊಟಿಕ್‌ ತಂತ್ರಜ್ಞಾನ ಕುರಿತು ತರಗತಿಗಳನ್ನು ತೆಗೆದುಕೊಂಡು, ಮಕ್ಕಳ ಕೌಶಲ ವೃದ್ಧಿಗೂ ನೆರವಾಗುತ್ತಿದೆ.

ಎಸ್‌ಟಿಇಎಂ ಆಧಾರಿತ ಕಲಿಕೆ: ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್‌ ಮತ್ತು ಗಣಿತ ವಿಷಯಗಳನ್ನು ಒಳಗೊಂಡ ಎಸ್‌ಟಿಇಎಂ (STEM) ಆಧಾರಿತ ಕಲಿಕೆಗೆ ಕಂಪನಿ ಒತ್ತು ನೀಡಿ ‘ರೋಬೊಟಿಕ್‌
ಕಿಟ್‌’ಗಳನ್ನು ಸಿದ್ಧಪಡಿಸುತ್ತಿದೆ. ಇದರಲ್ಲಿರುವ ಆರ್ಡುನೊ, ಸೆನ್ಸಾರ್‌, ಬಿಲ್ಡಿಂಗ್‌ ಬ್ಲಾಕ್ಸ್‌, ಮೊಬೈಲ್‌ ಆ್ಯಪ್‌ಗಳನ್ನು ಬಳಸಿಕೊಂಡು ಮಕ್ಕಳು ತಮ್ಮ ಕಲ್ಪನೆಗೆ ತಕ್ಕಂತೆ ಸ್ವಂತ ಮಾದರಿ ಅಥವಾ ಆಟಿಕೆಗಳನ್ನು ಸಿದ್ಧಪಡಿಸಬಹುದು ಎನ್ನುತ್ತಾರೆ ಕಂಪನಿಯ ಮುಖ್ಯ ವಾಣಿಜ್ಯಾಧಿಕಾರಿ ಸಂತೋಷ್‌ ಅವ್ವಣ್ಣನವರ್‌.

ರೋಬೊ ತಂತ್ರಜ್ಞಾನದೊಂದಿಗೆ ಮಕ್ಕಳು ಹೆಚ್ಚು ಆವಿಷ್ಕಾರಗಳನ್ನು ಕೈಗೊಳ್ಳುವಂತೆ ಪ್ರೋತ್ಸಾಹಿಸುವ, ಕುತೂಹಲ ತಣಿಸುವುದಕ್ಕೆ ಪೂರಕವಾದ ಮಾದರಿ ಗಳನ್ನು ಸಿದ್ಧಪಡಿಸುವ, ಮಕ್ಕಳಿಗೆ ಬೇಕಾದ ಡಿಸೈನ್‌, ಎಲೆಕ್ಟ್ರಾನಿಕ್ಸ್‌, ಸಾಫ್ಟ್‌ವೇರ್‌ಗಳನ್ನು ರೂಪಿಸುವ, ಅವುಗಳ ಕಾರ್ಯ ನಿರ್ವಹಣೆಗೆ ಮಾರ್ಗದರ್ಶಿ ಒದಗಿಸುವ ಮೂಲಕ ಮಕ್ಕಳ ಪ್ರತಿಭೆ ಹೆಚ್ಚಿಸುವ ಗುರಿಯನ್ನು ಕಂಪನಿ ಹೊಂದಿದೆ ಎನ್ನುತ್ತಾರೆ ಅವರು.

30ರಿಂದ 35 ಬಗೆಯ ಮಾದರಿ: ಕಂಪನಿಯ ರೋಬೊಟಿಕ್‌ ಕಿಟ್‌ಗಳನ್ನು ಬಳಸಿ 30ರಿಂದ 35 ಮಾದರಿಯ ರೋಬೊಗಳನ್ನು ಸಿದ್ಧಪಡಿಸಬಹುದು. ಉದಾಹರಣೆಗೆ ವಿವಿಧ ರೀತಿಯಲ್ಲಿ ಕಾರ್ಯ ನಿರ್ವಹಿಸುವ ರೋಬೊಗಳು, ಪುಟಾಣಿ ಡೈನಿಂಗ್‌ ಟೇಬಲ್‌, ಡಬ್ಬಿಗಳು, ಪುಟ್ಟ ಮನೆಗಳು ಮತ್ತು ಇಂಟೆಲಿಜೆಂಟ್‌ ಪಾರ್ಕಿಂಗ್‌ ವ್ಯವಸ್ಥೆ, ರೋಬೊಟಿಕ್‌ ಕೈಗಳು, ಟೇಬಲ್‌ ಟೆನಿಸ್‌ ಬಡ್ಡಿ, ಬಬಲ್‌ ಬ್ಲೋವರ್‌ ಸೇರಿದಂತೆ ಹಲವು ರೀತಿಯ ಮಾದರಿಗಳನ್ನು ರೂಪಿಸಬಹುದು. ವಿದ್ಯುತ್‌ ಸಂಪರ್ಕ ಮತ್ತು ಕಾರ್ಯ ನಿರ್ವಹಣಾ ವಿಧಾನ ಕುರಿತು ಸುಲಭವಾಗಿ ಮಕ್ಕಳು ತಿಳಿದುಕೊಳ್ಳಬಹುದು. ಡಿ.ಸಿ ಮೋಟಾರು, ಡೈನಮೊ, ಐಆರ್‌ ಸೆನ್ಸರ್‌ಗಳ ಕುರಿತು ತಿಳಿದುಕೊಂಡು, ಅವುಗಳನ್ನು ರೋಬೊಗಳಲ್ಲಿ ಬಳಸಬಹುದು.

‘ಮಕ್ಕಳ ಕಲ್ಪನಾಶಕ್ತಿಗೆ ಅನುಗುಣವಾಗಿಯೇ ಈ ಕಿಟ್‌ಗಳನ್ನು ಸಿದ್ಧಪಡಿಸಿದ್ದೇವೆ. ಮಕ್ಕಳ ಯೋಚನೆ, ಕಲ್ಪನೆ, ತಿಳುವಳಿಕೆ ಹೆಚ್ಚಾದಂತೆ ಅವರ ಕೌಶಲವೂ ವೃದ್ಧಿಸುತ್ತದೆ. ನಂತರ ಅವರ ಬೇಕು, ಬೇಡಗಳನ್ನು ಗಮನಿಸಿ ಅದಕ್ಕೆ ಪೂರಕವಾದ ಕಿಟ್‌ಗಳನ್ನು ಮಾರುಕಟ್ಟೆಗೆ ತರುತ್ತಿದ್ದೇವೆ. ಅಲ್ಲದೆ ರೋಬೊಟಿಕ್‌ ಕಿಟ್‌ಗಳ ಬಳಕೆ ಕುರಿತು ಇನ್‌ಸ್ಟ್ರಕ್ಟರ್‌ಗೂ ತರಬೇತಿ ನೀಡುತ್ತಿದ್ದೇವೆ. ಮಕ್ಕಳಿಗೆ ತಿಳಿಯುವ ಭಾಷೆಯಲ್ಲಿ ಮಾಹಿತಿ ನೀಡುವ ಸಾಫ್ಟ್‌ವೇರ್‌ಗಳನ್ನೂ ಸಿದ್ಧಪಡಿಸಿದ್ದೇವೆ. ಅದರ ಮೂಲಕ ಮಕ್ಕಳು ಅಥವಾ ಇನ್‌ಸ್ಟ್ರಕ್ಟರ್‌ಗಳು ರೋಬೊಟಿಕ್ ಕಿಟ್‌ಗಳ ಜೋಡನೆ ಕುರಿತು ತಿಳಿದುಕೊಳ್ಳಬಹುದು. ಬಳಿಕ ಅವರೇ ತಮ್ಮ ಯೋಚನಾಶಕ್ತಿಗೆ ಅನುಗುಣವಾಗಿ ಇನ್ನಷ್ಟು ವಿಭಿನ್ನವಾಗಿ ಕಿಟ್‌ಗಳನ್ನು ಜೋಡಿಸಬಹುದು ಎಂದು ಅವರು ಮಾಹಿತಿ ನೀಡುತ್ತಾರೆ.

ಶಾಲೆಗಳಲ್ಲಿ ತರಬೇತಿ: ಕ್ಯುಟಿಪಿಐ ಕಂಪನಿಯು ಬೆಂಗಳೂರಿನ ಬಿಷಪ್‌ ಕಾಟನ್‌ ಬಾಲಕಿಯರ ಶಾಲೆ, ರಾಯನ್‌ ಇಂಟರ್‌ನ್ಯಾಷನಲ್‌ ಸ್ಕೂಲ್‌, ಡೀನ್ಸ್‌ ಅಕಾಡೆಮಿ, ಆಕ್ಟ್ಸ್‌ ಸ್ಕೂಲ್‌ ಸೇರಿದಂತೆ ಕೆಲ ಪ್ರತಿಷ್ಠಿತ ಶಾಲೆಗಳಲ್ಲಿ ರೋಬೊಟಿಕ್‌ ತಂತ್ರಜ್ಞಾನದ ತರಬೇತಿಗೆ ಒಡಂಬಡಿಕೆ ಮಾಡಿಕೊಂಡಿದೆ.

ಕಿಟ್‌ನ ಬೆಲೆ: ‘ಮಾರುಕಟ್ಟೆಯಲ್ಲಿ ಸದ್ಯಕ್ಕೆ ದೊರೆಯುತ್ತಿರುವ ರೋಬೊ ಕಿಟ್‌ಗಳ ಬೆಲೆ ₹40,000 ದಿಂದ ₹ 50,000ದವರೆಗೂ ಇದೆ. ನಮ್ಮ ಕಂಪನಿ ಪರಿಚಯಿಸಿರುವ ರೋಬೊಟಿಕ್‌ ಕಿಟ್‌ಗಳ ಬೆಲೆ ₹12,500’ ಎನ್ನುತ್ತಾರೆ ಅವರು. ಮಾಹಿತಿಗೆ ವೆಬ್‌ಸೈಟ್‌ www.QtPi.in, ಮೊಬೈಲ್‌ ಸಂಖ್ಯೆ: 7022645361/ 7022645961 ಸಂಪರ್ಕಿಸಿ
**
ಕೃಷಿ ವಿ.ವಿ ಜತೆ ಚರ್ಚೆ: 
‘ಗಿಡಗಳಿಗೆ ಹೆಚ್ಚು ನೀರು ಹಾಕುವ ಬದಲಿಗೆ ಅಗತ್ಯವಿರುವಷ್ಟು ನೀರು ಪೂರೈಸಿದರೆ ಸಾಕಲ್ಲವೇ, ಭೂಮಿಯ ತೇವಾಂಶವನ್ನು ಸೆನ್ಸರ್‌ ಮೂಲಕ ತಿಳಿದು ಅಗತ್ಯವಿರುವಷ್ಟು ನೀರು ಪೂರೈಸುವ ರೋಬೊ ಸಿದ್ಧಪಡಿಸಬಹುದಾ? ಎಂದು ಶಾಲೆಯೊಂದರ ಮಗುವೊಂದು ಪ್ರಶ್ನಿಸಿತ್ತು.

ಕೂಡಲೇ ಈ ಕುರಿತು ಕಾರ್ಯೋನ್ಮುಖವಾದ ಕಂಪನಿಯ ಸಿಬ್ಬಂದಿ ಮಾರುಕಟ್ಟೆಯಲ್ಲಿ ಲಭ್ಯ ಸೆನ್ಸರ್‌ ಅನ್ನು ಕಸ್ಟಮೈಸ್‌ ಮಾಡಿ ಮಕ್ಕಳಿಗೆ ಒದಗಿಸಿದರು. ತಜ್ಞರ ಮಾರ್ಗದರ್ಶನದಲ್ಲಿ ಮಕ್ಕಳೇ ಈ ಕುರಿತ ರೋಬೊ ಸಿದ್ಧಪಡಿಸಿದರು. ಇದರಿಂದ ಮಕ್ಕಳೂ ಖುಷಿಯಾದರು. ಆ ನಂತರ ಈ ಕುರಿತ ಪ್ರಾತ್ಯಕ್ಷಿಕೆಯನ್ನು ಕೃಷಿ ವಿಶ್ವವಿದ್ಯಾಲಯದ ತಜ್ಞರ ಗಮನಕ್ಕೂ ತರಲಾಯಿತು. ಅವರೂ ಬೆರಗಾದರು. ಅಲ್ಲದೆ ಇದನ್ನು ಬಳಸಿಕೊಳ್ಳಲು ಉತ್ಸುಕರಾಗಿದ್ದಾರೆ. ಮುಂದಿನ ದಿನಗಳಲ್ಲಿ ಈ ತಂತ್ರಜ್ಞಾನ ಕುರಿತು ಹೆಚ್ಚಿನ ಸಂಶೋಧನೆ ಕೈಗೊಳ್ಳುವ ಅಗತ್ಯವೂ ಇದೆ’ ಎನ್ನುತ್ತಾರೆ ಸಂತೋಷ್‌ ಅವ್ವಣ್ಣನವರ್‌.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು