ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಪಿಎಸ್ ಬಳಸಿ ವಿಸ್ತೀರ್ಣ ಅಳೆಯಿರಿ

Last Updated 1 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಜಿಪಿಎಸ್ ಬಳಸಿ ವಿಸ್ತೀರ್ಣ ಅಳೆಯಿರಿ
ನಿಮ್ಮ ಮೊಬೈಲ್‌ನಲ್ಲಿ ಜಿಪಿಎಸ್ ಇರುವುದು ತಿಳಿದಿದೆ ತಾನೆ? ಅದರ ಮೂಲಕ ನೀವು ನಕ್ಷೆಗಳನ್ನು ಬಳಸುತ್ತೀರಿ, ಎಲ್ಲಿಗೆ ಹೋಗಬೇಕೋ ಅಲ್ಲಿಗೆ ಹೋಗಲೂ ಅದರ ಸಹಾಯ ಪಡೆಯುತ್ತೀರಿ. ಜಿಪಿಎಸ್ ಎಂದರೆ ಗ್ಲೋಬಲ್ ಪೊಸಿಶನಿಂಗ್ ಸಿಸ್ಟಮ್ ಎಂದು. ಉಪಗ್ರಹಗಳನ್ನು ಬಳಸಿ ನಿಮ್ಮ ಫೋನ್ ಇರುವ ಸ್ಥಳವನ್ನು ಅದು ನಿಖರವಾಗಿ ತೋರಿಸುತ್ತದೆ. ಇದನ್ನೇ ಬಳಸಿ ನೀವು ಹೋಗಬೇಕಾದ ಸ್ಥಳಕ್ಕೆ ಎಷ್ಟು ದೂರ ಇದೆ ಎಂದೂ ಅದು ಲೆಕ್ಕ ಹಾಕಿ ಹೇಳುತ್ತಿದೆ. ಇದೇ ತತ್ತ್ವವನ್ನು ಬಳಸಿ ಯಾವುದಾದರೂ ಸ್ಥಳದ ವಿಸ್ತೀರ್ಣವನ್ನೂ ಅಳೆಯಬಹುದು. ಅಂತಹ ಒಂದು ಕಿರುತಂತ್ರಾಂಶ (ಆ್ಯಪ್) ನಿಮಗೆ ಬೇಕಿದ್ದರೆ ಗೂಗಲ್ ಪ್ಲೇ ಸ್ಟೋರಿನಲ್ಲಿ GPS Fields Area Measure ಎಂದು ಹುಡುಕಿ ಅಥವಾ bit.ly/gadgetloka268 ಜಾಲತಾಣಕ್ಕೆ ಭೇಟಿ ನೀಡಿ. ನಿಮಗೆ ಅಳತೆ ಮಾಡಬೇಕಾದ ಸ್ಥಳದ ನಕ್ಷೆಯನ್ನು ಬಳಸಿ ಅಥವಾ ಜಿಪಿಎಸ್ ಬಳಸಿ ವಿಸ್ತೀರ್ಣ ಲೆಕ್ಕ ಹಾಕಿ ಹೇಳುತ್ತದೆ. ನಿಮ್ಮ ಆಸ್ತಿಯ ವಿಸ್ತೀರ್ಣವನ್ನೂ ಅಳೆಯಬಹುದು!

ಗ್ಯಾಜೆಟ್‌ ತರ್ಲೆ
ಒಂದು ಅತ್ಯಾಧುನಿಕ ಟೂತ್‌ಬ್ರಶ್ ಬಂದಿದೆ. ಇದು ವಿಶೇಷವಾಗಿ ಏನೇನೂ ಕೆಲಸ ಮಾಡದೆ ಬೊಜ್ಜು ಬೆಳೆಯುತ್ತಿರುವವರಿಗೆ ಸ್ವಲ್ಪವಾದರೂ ವ್ಯಾಯಾಮವಾಗಲಿ ಎಂಬ ಉದ್ದೇಶದಿಂದ ತಯಾರಾದುದು. ಇದರ ವೈಶಿಷ್ಟ್ಯ ಏನೆಂದರೆ, ಈ ಟೂತ್‌ಬ್ರಶ್ ಅನ್ನು ಒಂದು ಸ್ಟ್ಯಾಂಡ್‌ಗೆ ಜೋಡಿಸಿಡಲಾಗಿದೆ. ಅಲ್ಲಿಂದ ಬ್ರಶ್ ಅನ್ನು ತೆಗೆಯಲು ಆಗುವುದಿಲ್ಲ. ಹಲ್ಲುಜ್ಜುವವರು ತಾವೇ ತಮ್ಮ ಬಾಯಿಯನ್ನು ತೆರೆದು ಹಲ್ಲುಗಳನ್ನು ಆ ಬ್ರಶ್‌ಗೆ ಉಜ್ಜಬೇಕು. ಎಲ್ಲ ಹಲ್ಲುಗಳೂ ಸ್ವಚ್ಛವಾಗಬೇಕಾದರೆ ಮುಖವನ್ನು ಆ ಕಡೆ ಈ ಕಡೆ ತಿರುಗಿಸಬೇಕು. ಆಗ ಸ್ವಲ್ಪವಾದರೂ ವ್ಯಾಯಾಮವಾಗುತ್ತದೆ!

ಗ್ಯಾಜೆಟ್‌ ಸಲಹೆ
ಗೋವಿಂದರಾಜು ಅವರ ಪ್ರಶ್ನೆ: ನೀವು ಯಾಕೆ ವಿಂಡೋಸ್ ಫೋನ್ ಬಗ್ಗೆ ವಿಮರ್ಶೆ ನೀಡುತ್ತಿಲ್ಲ?

ಉ: ಹಲವು ವಿಂಡೋಸ್ ಫೋನ್‌ಗಳ, ಅಂದರೆ ಲುಮಿಯಾ ಫೋನ್‌ಗಳ ವಿಮರ್ಶೆಯನ್ನು ಈ ಅಂಕಣದಲ್ಲಿ ನೀಡಲಾಗಿತ್ತು. ಮೈಕ್ರೋಸಾಫ್ಟ್‌ ಕಂಪೆನಿಯೇ ವಿಂಡೋಸ್ ಫೋನ್ ತಯಾರಿಸುವುದನ್ನು ನಿಲ್ಲಿಸಿದೆ. ಆದುದರಿಂದ ಇತ್ತೀಚೆಗೆ ಯಾವುದೇ ಹೊಸ ವಿಂಡೋಸ್ ಫೋನ್ ಮಾರುಕಟ್ಟೆಗೆ ಬರುತ್ತಿಲ್ಲ. ಮೈಕ್ರೋ ಸಾಫ್ಟ್‌ನವರು ವಿಂಡೋಸ್ ಫೋನ್ ಬದಲಿಗೆ ಸರ್ಫೇಸ್ ಫೋನ್ ತರುವುದಾಗಿ ಹೇಳಿ ವರ್ಷವೇ ಆಗುತ್ತಾ ಬಂತು. ಅದು ಇನ್ನೂ ತಯಾರಾಗಿಲ್ಲ. ಅಂತೂ ಮೈಕ್ರೋಸಾಫ್ಟ್‌ ಕಂಪೆನಿ ಮೂರ್ಖತನ ಮಾಡಿ ಭಾರತದಲ್ಲಿ ಜನಪ್ರಿಯವಾಗುತ್ತಿದ್ದ ಫೋನ್ ಅನ್ನು ಕೊಂದುಹಾಕಿತು.

ಗ್ಯಾಜೆಟ್‌ ಸುದ್ದಿ:

ಬುದ್ಧಿವಂತ ಪರ್ಸ್
ನಿಮ್ಮ ಫೋನ್ ಸ್ಮಾರ್ಟ್, ನಿಮ್ಮ ವಾಚ್ ಸ್ಮಾರ್ಟ್, ಇನ್ನೂ ಏನೇನೆಲ್ಲಾ ಸ್ಮಾರ್ಟ್ ಆಗಿರುವಾಗ ನಿಮ್ಮ ಕೈಚೀಲ ಅಥವಾ ವಾಲೆಟ್ ಅಥವಾ ಪರ್ಸ್ ಕೂಡ ಸ್ಮಾರ್ಟ್ ಆಗಬೇಕಲ್ಲವಾ? ಹೌದು. ಈಗ ಅಂಥ ವಾಲೆಟ್ ಬಂದಿದೆ (ಗಂಡಸರು ಬಳಸುವ ಹಣದ ಕೈಚೀಲ, ನಮ್ಮಲ್ಲಿ ಜನಸಾಮಾನ್ಯರು ಬಳಸುವ ಪದ ಪರ್ಸ್). ಇದರ ವಿಶೇಷವೆಂದರೆ, ಜಿಪಿಎಸ್ ಮತ್ತು ಬ್ಲೂಟೂತ್ ಅಳವಡಿಕೆ. ಇದು ನಿಮ್ಮ ಫೋನಿನ ಜೊತೆ ನಿರಂತರ ಸಂಪರ್ಕದಲ್ಲಿರುತ್ತದೆ. ಪರ್ಸ್ ಕಳೆದುಹೋದರೆ ಇದು ನಿಮ್ಮ ಫೋನಿನ ಮೂಲಕ ಎಚ್ಚರಿಸುತ್ತದೆ ಮಾತ್ರವಲ್ಲ ಪರ್ಸ್ ಎಲ್ಲಿದೆ ಎಂಬುದನ್ನು ಜಿಪಿಎಸ್ ಬಳಸಿ ಫೋನಿನಲ್ಲಿ ತೋರಿಸುತ್ತದೆ. ಇದು ಇನ್ನೂ ಭಾರತಕ್ಕೆ ಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT