ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳ ಭ್ರಮಾಯಾನ...!

Last Updated 8 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಕೆಂಪು ಗ್ರಹ ಮಂಗಳನ ಅಂಗಳದಲ್ಲಿ ಕಾಲಿಡುವ ಮಾನವನ ಮಹತ್ವಾಕಾಂಕ್ಷೆಗೆ ಈಗ ಮತ್ತೆ ರೆಕ್ಕೆ-ಪುಕ್ಕ ಬಂದಿದೆ!

ಮಂಗಳ ಗ್ರಹಕ್ಕೆ ಮಾನವನನ್ನು ಕಳುಹಿಸುವುದು ಅಲ್ಲಿ ಮಹಾನ್ವೇಷಣೆ ನಡೆಸುವುದು ಹಲವು ವರ್ಷಗಳಿಂದ ಜಗತ್ತಿನ ಖಗೋಳ ವಿಜ್ಞಾನಿಗಳಲ್ಲಿ ಮನೆಮಾಡಿರುವ ಮಹದಾಸೆ. ಅದಕ್ಕಾಗಿ ಹಲವು ಪ್ರಯೋಗಗಳು ನಡೆಯುತ್ತಲೇ ಇದೆ. ಕಳೆದ ಒಂದೂವರೆ ವರ್ಷಗಳ ಹಿಂದೆ ರಷ್ಯದಲ್ಲಿ ಒಂದು ವಿಶಿಷ್ಟ ಪ್ರಯೋಗ ಆರಂಭವಾಯಿತು.

ಮಂಗಳಗ್ರಹದ ಪ್ರಯಾಣವನ್ನು ಅನುಕರಿಸುವ, ಮಂಗಳನಿಂದ ವಾಪಸ್ ಭೂಮಿಗೆ ಮರಳುವ ಮುನ್ನ ಕೈಗೊಳ್ಳಬೇಕಾದ  ಅಂತರಿಕ್ಷ ನಡಿಗೆಯನ್ನೂ ಅನುಕರಿಸುವ ಪ್ರಯೋಗ ಅದು. ಒಂದು ರೀತಿಯಲ್ಲಿ ಮಂಗಳ ಗ್ರಹಕ್ಕೆ ಕೈಗೊಂಡ `ಭ್ರಮಾಯಾನ~.

ಒಟ್ಟು ಆರು ಸಾಹಸಿಗಳು ಭಾಗವಹಿಸಿದ್ದ ಈ ಪ್ರಯೋಗ ಯಶಸ್ವಿಯಾಗಿದ್ದು, ಮಂಗಳನಲ್ಲಿಗೆ ಮಾನವನನ್ನು ಕಳುಹಿಸುವ ಯೋಜನೆಯ ಒಂದು ಮೆಟ್ಟಿಲನ್ನು ಏರಿದಂತಾಗಿದೆ.

`ಮಂಗಳಯಾನ~ ಸುದೀರ್ಘವಾದ ಯೋಜನೆ. ಭೂಮಿಯಿಂದ ತೆರಳಿ ಮಂಗಳನನ್ನು ಸ್ಪರ್ಶಿಸಿ ಮತ್ತೆ ಭೂಮಿಗೆ ಮರಳಲು ಹಲವು ತಿಂಗಳುಗಳೇ ಬೇಕು. ಈ ಅವಧಿಯಲ್ಲೆಲ್ಲಾ ಗಗನಯಾತ್ರಿಗಳು ಗಗನನೌಕೆ/ಅಂತರಿಕ್ಷದಲ್ಲಿ ಕಾಲ ಕಳೆಯಬೇಕಾಗುತ್ತದೆ.

ಈ ಸಮಯದಲ್ಲಿ ಗಗನಯಾತ್ರಿಗಳು ಎದುರಿಸುವ ಸವಾಲು, ದೈಹಿಕವಾಗಿ ಮತ್ತು ಮಾನಸಿಕವಾಗಿ ಅವರಲ್ಲಿ ಆಗುವ ಬದಲಾವಣೆಗಳನ್ನು ಗುರುತಿಸುವುದು ಮತ್ತು ಅಧ್ಯಯನ ನಡೆಸುವುದು ಈ ಪ್ರಯೋಗದ ಉದ್ದೇಶ.

ಪ್ರಯೋಗದಿಂದ ದೊರೆತ ಮಾಹಿತಿಗಳು ಭವಿಷ್ಯದ ಮಂಗಳಯಾನ ರೂಪುರೇಷೆ ಸಿದ್ಧಪಡಿಸಲು ನೆರವಿಗೆ ಬರಲಿದೆ ಎಂಬ ವಿಶ್ವಾಸ ವಿಜ್ಞಾನಿಗಳದು. ಸುಮಾರು 1.5 ಕೋಟಿ ಡಾಲರ್ ವೆಚ್ಚದ ಈ ಪ್ರಯೋಗವನ್ನು ಯುರೋಪ್ ಬಾಹ್ಯಾಕಾಶ ಸಂಸ್ಥೆ (ಇಎಸ್‌ಎ) ಹಾಗೂ ರಷ್ಯದ ಜೈವಿಕ ಸಮಸ್ಯೆಗಳ ಅಧ್ಯಯನ ಸಂಸ್ಥೆ ಜಂಟಿಯಾಗಿ ನಡೆಸಿದ್ದವು.
ಪ್ರಯೋಗ ಹೇಗೆ?

ಗಗನನೌಕೆಯನ್ನೇ ಹೋಲುವ ಕೃತಕವಾದ ಕೋಶವನ್ನು (ಕ್ಯಾಪ್ಸುಲ್) ಈ ಪ್ರಯೋಗಕ್ಕಾಗಿ ಮಾಸ್ಕೊದಲ್ಲಿರುವ ರಷ್ಯ ಜೈವಿಕ ಸಮಸ್ಯೆಗಳ ಅಧ್ಯಯನ ಸಂಸ್ಥೆಯ ಆವರಣದಲ್ಲಿ ಸ್ಥಾಪಿಸಲಾಗಿತ್ತು. ಇದರ ಹೆಸರು `ಮಂಗಳ 500~ (ಮಾರ್ಸ್‌ 500).

ಈ ಕೋಶದ ಒಳಾಂಗಣದ ಕಾರ್ಯ ನಿರ್ವಹಣೆ ಗಗನನೌಕೆಯ ಕಾರ್ಯನಿರ್ವಹಣೆಯನ್ನೇ ಅನುಕರಿಸುತ್ತಿತ್ತು. 2010ರ ಜೂನ್ 3ರಂದು ಅಂತರರಾಷ್ಟ್ರೀಯ ತಂಡದ ಆರು ಮಂದಿ ಸಾಧಕರು `ಮಂಗಳ-500~ ಪ್ರವೇಶಿದ್ದರು. ಅಲ್ಲಿಂದ ಸತತ 520 ದಿನಗಳನ್ನು ಅದರ ಒಳಗಡೆ ಕಳೆದಿದ್ದರು. ಮೊನ್ನೆ ಶುಕ್ರವಾರ (ನ.4) ಈ ಸಾಹಸಿಗಳು ಮತ್ತೆ ಹೊರ ಜಗತ್ತಿಗೆ ಬಂದಿದ್ದಾರೆ.

520 ದಿನಗಳಲ್ಲಿ ಮಾಡಿದ್ದೇನು?
ನಿರಂತರ ಅಧ್ಯಯನ. ಈ ಅವಧಿಯಲ್ಲಿ ಈ ಆರು ಸಾಧಕರು 100 ಅಧಿಕ ಪರೀಕ್ಷೆಗಳನ್ನು ಕೋಶದ ಒಳಗಡೆ ನಡೆಸಿದ್ದಾರೆ. ಮಂಗಳ ಅಂಗಳದಲ್ಲಿ ನಡೆಸಬೇಕಾದ ಅಂತರಿಕ್ಷ ನಡಿಗೆಯನ್ನೂ ಅನುಕರಿಸಿದ್ದಾರೆ.ಸಂಕ್ಷಿಪ್ತ ಖಾಸಗಿ ಸಮಯವನ್ನು (ಶೌಚಕ್ಕೆ ಹೋಗುವ ಸಂದರ್ಭ) ಹೊರತು ಪಡಿಸಿದರೆ ಪ್ರತಿ ನಿಮಿಷವು ಅವರು ಹೊರಜಗತ್ತಿನೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು.

ಹೊರಗಡೆ ಜಗತ್ತಿನ ಖಗೋಳ ಶಾಸ್ತ್ರಜ್ಞರು 24 ಗಂಟೆಯೂ ಅವರ ಮೇಲೆ ನಿಗಾ ಇಟ್ಟಿದ್ದರು. ಅವರ ಆರೋಗ್ಯದ ಮೇಲೆ ಗಮನ ನೀಡಲು ಸಾಹಸಿಗಳ ರಕ್ತ ಮತ್ತು ಮೂತ್ರ ಮಾದರಿಗಳನ್ನು ಪ್ರತಿ ದಿನ ಸಂಗ್ರಹಿಸಲಾಗುತ್ತಿತ್ತು.ಅಂತರಿಕ್ಷದಲ್ಲಿ ಗುರುತ್ವಾರ್ಷಣೆ ಶಕ್ತಿ ಕಡಿಮೆ ಇರುವುದರಿಂದ ಗಗನಯಾತ್ರಿಗಳು ತೂಕ ಕಳೆದುಕೊಳ್ಳುತ್ತಾರೆ. ಆದರೆ, ಈ  `ಭ್ರಮಾಯಾನ~ ಪ್ರಯೋಗದಲ್ಲಿ ಈ ಪರೀಕ್ಷೆಯನ್ನು ನಡೆಸಲು ಸಾಧ್ಯವಾಗಿಲ್ಲ.

ಬೇಕು ಇನ್ನೂ ಸಾಕಷ್ಟು ಸಮಯ..

ಜರ್ಮನಿಯ ಅಂತರಿಕ್ಷ ವೈದ್ಯಶಾಸ್ತ್ರ ಸಂಸ್ಥೆಯ ನಿರ್ದೇಶಕ ರೂಪರ್ಟ್ ಗೆರ್ಜರ್ ಪ್ರಕಾರ, ಮಂಗಳ ಗ್ರಹಕ್ಕೆ  ಮಾನವನನ್ನು ಕಳುಹಿಸುವ ತಂತ್ರಜ್ಞಾನ ಅಭಿವೃದ್ಧಿಗೆ ಇನ್ನೂ ಎರಡು ದಶಕಗಳ ಕಾಲಾವಕಾಶ ಬೇಕು.
 
`ಮಂಗಳಯಾನ ಕೈಗೊಳ್ಳುವ ಗಗನಯಾತ್ರಿಯ ಮುಂದೆ ಇರುವ ಬಹು ದೊಡ್ಡ ಬೆದರಿಕೆ ಎಂದರೆ ವಿಕಿರಣಗಳು.  ಅವುಗಳಿಂದಾಗಿ ಕ್ಯಾನ್ಸರ್ ಬರುವ ಸಾಧ್ಯತೆಯೇ ಹೆಚ್ಚು. ಅಲ್ಲದೇ ಇವುಗಳು ನರಗಳಿಗೆ ಹಾನಿಯುಂಟು ಮಾಡಬಲ್ಲವು.  ಮನುಷ್ಯನ ಜೀರ್ಣಾಂಗ ವ್ಯವಸ್ಥೆಗೂ ಧಕ್ಕೆ ತರಬಲ್ಲದು~ ಎಂದು ಗರ್ಜರ್ ಅಭಿಪ್ರಾಯ ಪಟ್ಟಿದ್ದಾರೆ.

ಈಗ ನಡೆದಿರುವ `ಭ್ರಮಾಯಾನ~ ಯೋಜನೆ ಪೂರ್ಣಗೊಂಡದ್ದು ಒಂದೂವರೆ ವರ್ಷ  ಅವಧಿಯಲ್ಲಿ. ಆದರೆ ನಿಜವಾದ ಮಂಗಳಯಾನ ಯೋಜನೆ ಪೂರ್ಣಗೊಳ್ಳಲು ಮೂರು ವರ್ಷ ಬೇಕು ಎಂದೂ ರೂಪರ್ಟ್ ಗರ್ಜರ್ ಹೇಳಿದ್ದಾರೆ.

ಆರು ಸಾಹಸಿಗಳು 

`ಭ್ರಮಾಯಾನ~ ಯೋಜನೆಯಲ್ಲಿ ಪಾಲ್ಗೊಂಡ ಒಟ್ಟು ಆರು ಸಾಹಸಿಗಳಲ್ಲಿ ಅಲೆಕ್ಸಿ ಸಿತ್ಯೊವ್, ತಂಡದ ವೈದ್ಯ ಸುಖ್‌ರೊಬ್ ಕ್ಯಾಮಲೊವ್ ಮತ್ತು ಅಲೆಕ್ಸಾಂಡರ್ ಕ್ಯಾಮಲೊವ್ ರಷ್ಯದವರು. 

ಇತರ ಮೂವರಲ್ಲಿ ಒಬ್ಬರು ಇಟಲಿಯ ಯುವ ಎಂಜಿನಿಯರ್ 27 ವರ್ಷದ ಡೀಗೊ ಉರ್ಬಿನ. ಮತ್ತೊಬ್ಬರು ಚೀನಾದ ಸಾಹಸಿ 26 ವರ್ಷದ ವಾಂಗ್ ಯೂ. ಆರನೇಯವರು ಫ್ರಾನ್ಸ್‌ನ ಎಂಜಿನಿಯರ್ 31 ವರ್ಷದ ರೊಮೈನ್ ಚಾರ್ಲ್ಸ್. 

  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT