ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿ ರೂಪಿಸಿದ ‘ಸ್ಮಾರ್ಟ್‌ಸ್ಕೂಲ್‌ ಬ್ಯಾಗ್’

Last Updated 13 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಶಾಲಾ ಮಕ್ಕಳ ಬ್ಯಾಗ್‌ ಭಾರ ಇಳಿಕೆ ಕುರಿತು ಯಾವಾಗಲೂ ಚರ್ಚೆಗಳಾಗುತ್ತವೆ, ಸರ್ಕಾರ ಕಾನೂನು ರೂಪಿಸುತ್ತದೆ. ಆದರೆ ಭಾರ ಮಾತ್ರ ಇಳಿಕೆಯಾಗುವುದಿಲ್ಲ. ಪಠ್ಯ ವಿಷಯ ಮಕ್ಕಳಿಗೆ ಮಾನಸಿಕ ಹೊರೆಯಾದರೆ ಸ್ಕೂಲ್‌ಬ್ಯಾಗ್‌ ಭುಜಕ್ಕೆ ಬೀಳುವ ಭಾರ. ಒಂದೊಂದು ಶಾಲೆಗಳಲ್ಲಿ ಒಂದೊಂದು ರೀತಿ ಪಾಠದ ವಿಧಾನಗಳನ್ನು ಅನುಸರಿ ಸಲಾಗುತ್ತದೆ. ತಮ್ಮ ಮಕ್ಕಳ ಶಾಲಾ ಬ್ಯಾಗ್‌ ಹೊರೆ ಬಗ್ಗೆ ಪೋಷಕರು ಮಾತ್ರ ತಲೆಕೆಡಿಸಿಕೊಳ್ಳುವುದು ಮಾತ್ರ ನಿಲ್ಲುವುದಿಲ್ಲ.

ಮಕ್ಕಳ ಪಾಟಿಚೀಲ ಹೊರೆಯಾಗುವುದಕ್ಕೆ ಪ್ರಮುಖ ಕಾರಣ ಅಗತ್ಯವಿಲ್ಲದ ಪುಸ್ತಕಗಳನ್ನು ಮಕ್ಕಳು ಶಾಲೆಗೆ ಬ್ಯಾಗಿನಲ್ಲಿಟ್ಟುಕೊಳ್ಳುವುದೇ ಆಗಿದೆ ಎಂಬುದು ಒಂದು ವಾದ. ಅಗತ್ಯವಿರುವಷ್ಟು ಪುಸ್ತಕಗಳನ್ನು ಮಾತ್ರವೇ ಬ್ಯಾಗಿನಲ್ಲಿ ಇಟ್ಟುಕೊಳ್ಳುವಂತೆ ಮಾಡುವುದು ಪೋಷಕರ ಕರ್ತವ್ಯವೂ ಹೌದು. ಆದರೆ ಹೆಚ್ಚಿನ ಪೋಷಕರಿಗೆ ಇದಕ್ಕೆ ಸಮಯ ಇರುವುದಿಲ್ಲ. ಕೆಲವರಿಗೆ ಗೊತ್ತೂ ಆಗುವುದಿಲ್ಲ. ಹಾಗಾದರೆ ಶಾಲಾ ಬ್ಯಾಗ್‌ನ ಹೊರೆ ಇಳಿಯುವುದು ಹೇಗೆ? ಈ ಪ್ರಶ್ನೆ ಇಟ್ಟುಕೊಂಡೇ ಬೆಂಗಳೂರಿನ ಎಚ್‌ಎಸ್‌ಆರ್‌ ಬಡಾವಣೆಯ ನ್ಯಾಷನಲ್‌ ಪಬ್ಲಿಕ್‌ ಶಾಲೆಯ ಏಳನೇ ತರಗತಿ ವಿದ್ಯಾರ್ಥಿ ‘ಸ್ಮಾರ್ಟ್‌ ಸ್ಕೂಲ್‌ ಬ್ಯಾಗ್’ ಒಂದನ್ನು ರೂಪಿಸಿದ್ದಾನೆ.

ಏನಿದು ಸ್ಮಾರ್ಟ್ ಸ್ಕೂಲ್‌ ಬ್ಯಾಗ್‌: ಮಕ್ಕಳಿಗೆ ಶಾಲೆಯಲ್ಲಿ ಯಾವ ದಿನ ಯಾವ ಪಾಠಗಳಿವೆ ಎಂಬುದನ್ನು ವೇಳಾಪಟ್ಟಿ ಕೊಟ್ಟಿರುತ್ತಾರೆ. ಅದರಂತೆಯೇ ಮಕ್ಕಳು ಪುಸ್ತಕಗಳನ್ನು ಒಯ್ಯಬೇಕು. ಆಯಾ ದಿನದ  ಪುಸ್ತಕಗಳ ಬಗ್ಗೆ ಮಾಹಿತಿಯನ್ನು ಕ್ರೆಡಿಟ್‌ ಕಾರ್ಡ್‌ ಅಳತೆಯ ಚಿಪ್‌ನಲ್ಲಿ  ಪ್ರೋಗ್ರಾಮಿಂಗ್ ಮೂಲಕ ಫೀಡ್‌ ಮಾಡಲಾಗಿರುತ್ತದೆ.

ಪ್ರತಿಯೊಂದು ನೋಟ್‌ಬುಕ್‌ಗೂ ಒಂದು ಆರ್‌ ಎಫ್‌ಐಡಿ(Radio-Frequency IDentification) ಹಾಕಲಾಗಿರುತ್ತದೆ. ಪುಸ್ತಕವೊದನ್ನು   ಬ್ಯಾಗ್‌ನಲ್ಲಿಟ್ಟರೆ ಅದು ಆ ದಿನಕ್ಕೆ ಅಗತ್ಯವಿದೆಯೇ ಇಲ್ಲವೇ ಎಂಬುದನ್ನು ಸೂಚಿಸುತ್ತದೆ. ಆ ವಿಷಯದ  ಪುಸ್ತಕ ಬೇಕಿದ್ದರೆ ಹಸಿರು ಸಿಗ್ನಲ್‌ ಬರುತ್ತದೆ. ಇಲ್ಲದಿದ್ದರೆ ಕೆಂಪು ಸಿಗ್ನಲ್‌ ಬರುತ್ತದೆ. ಇದರಿಂದ ಯಾವ ಪುಸ್ತಕ ಬೇಕೊ ಅಷ್ಟನ್ನೇ ಇಟ್ಟುಕೊಳ್ಳಲು ಇದು ನೆರವಾಗುತ್ತೆ. ಇದು ಬ್ಯಾಗ್‌ ಹೊರೆ ಇಳಿಕೆ ಮಾಡುತ್ತೆ. 

ಕ್ರೆಡಿಟ್‌ ಕಾರ್ಡ್‌ ಅಳತೆಯ ಚಿಪ್‌ನಲ್ಲಿ ಮೆಮೊರಿ, ಪ್ರೊಸೆಸರ್ ಇಡೀ ಬ್ಯಾಗ್‌ನ ಪ್ರಮುಖ ಕೆಲಸ ಮಾಡುವ ನಿಯಂತ್ರಕ ಗಳು ಅಡಗಿರುತ್ತವೆ.  ಪುಸ್ತಕದ ಆರ್‌ಎಫ್‌ಐಡಿ ಮೊಬೈಲ್‌ ಸಿಮ್‌ಕಾರ್ಡ್‌ ಗಾತ್ರದಲ್ಲಿರುತ್ತದೆ. ಸೆಂಟ್ರಲ್‌ ಪೊಸೆಸರ್‌ ಚಿಪ್‌ ಬ್ಯಾಗ್‌ನಲ್ಲೇ ಇರಬೇಕು. ಇಲ್ಲದಿದ್ದರೆ ಅದು ಕೆಲಸ ಮಾಡುವುದಿಲ್ಲ.

ಮಳೆ, ಚಳಿ ಸೂಚನೆ: ಯಾವ ಪ್ರದೇಶದಲ್ಲಿ ಶಾಲೆ ಇದೆ ಎನ್ನುವುದರ ಆಧಾರದ ಮೇಲೆ ಅಲ್ಲಿನ ಸ್ಥಳೀಯ ತಾಪಮಾನ, ಮಳೆ ಸಾಧ್ಯತೆಯ ಮಾಹಿತಿಯನ್ನೂ ಸ್ಮಾರ್ಟ್‌ ಸ್ಕೂಲ್‌ ಬ್ಯಾಗ್‌ ನೀಡುತ್ತೆ. ಒಂದು ವೇಳೆ ಮಳೆ ಬರುವ ಸಾಧ್ಯತೆ ಇದ್ದರೆ ಒಂದು ವಾಯ್ಸ್ ಮೆಡ್ಯೂಲ್‌ ಇಡಲಾಗಿದೆ. ಅದರಿಂದ ಈ ದಿನ ರೇನ್‌ಕೋಟ್‌ ಇಲ್ಲವೇ ಛತ್ರಿ ಹಿಡಿದುಕೊಂಡು ಹೋದರೆ ಒಳಿತು ಎಂಬ ಸಲಹೆ ನೀಡುತ್ತದೆ ತುಂಬಾ ಚಳಿಯ ವಾತಾವರಣ ಇರುವುದಾದರೆ ಸ್ವೆಟರ್‌ನಂತಹ ಬೆಚ್ಚನೆಯ ಉಡುಪು ಧರಿಸಬೇಕು  ಎಂಬ ಮಾಹಿತಿ ನೀಡುತ್ತದೆ.

ಶಿಕ್ಷಕರ ಪ್ರಶ್ನೆಯೇ ಸ್ಫೂರ್ತಿ: ‘ಯಾಕಪ್ಪ ನಿನ್ನ ಬ್ಯಾಗ್ ಇಷ್ಟೊಂದು ಭಾರವಿದೆ?  ಯಾಕೆ ಇಷ್ಟು ಪುಸ್ತಕ ತಗೊಂಡು ಬರ್ತೀಯಾ? ಎಂದು ಒಮ್ಮೆ ಶಿಕ್ಷಕರು ಆರ್ಯನ್‌ನನ್ನು  ಕೇಳಿದ್ದರು. ಈ ಪ್ರಶ್ನೆಯೇ ಈ ಸ್ಮಾರ್ಟ್‌ ಬ್ಯಾಗ್‌ ರೂಪಿಸಲು ಪ್ರೇರಣೆಯಾಯಿತು ಎನ್ನುತ್ತಾನೆ ಈತ. ‘ಯಾವ ದಿನ ಯಾವ ಪುಸ್ತಕ ತರಬೇಕು ಎಂದು ನೋಡಿಕೊಳ್ಳಲು ಸಮಯ ಇರುವುದಿಲ್ಲ. ಅದಕ್ಕೆ ಎಲ್ಲಾ ಪುಸ್ತಕ ತರ್ತೇನೆ’ ಎಂದು ಈತ ಉತ್ತರಿಸಿದ್ದ. ಆಗ ಹೊಳೆದಿದ್ದೇ ಇದಕ್ಕೊಂದು ಉಪಾಯ ಕಂಡುಕೊಳ್ಳಬೇಕು ಎಂಬುದು.

ಹಲವು ಕಡೆ ಪ್ರದರ್ಶನ: ಆರ್ಯನ್‌ ಈ ಸ್ಮಾರ್ಟ್‌ ಬ್ಯಾಗ್‌ ಅನ್ನು ಹಲವು ಕಡೆಗಳಲ್ಲಿ ಪ್ರದರ್ಶನ ಮಾಡಿದ್ದಾನೆ. ವರ್ಕ್‌ ಬೆಂಚ್‌ ಪ್ರಾಜೆಕ್ಟ್‌ ಬೆಂಗಳೂರು ಹಾಗೂ ದೆಹಲಿ, ಮೇಕರ್‌ ಫೇರ್‌ ದೆಹಲಿ ಮತ್ತು ಬೆಂಗಳೂರಿನಲ್ಲಿ ಪ್ರದರ್ಶನಗೊಂಡಿದೆ.

ಪ್ಯಾನಿಕ್‌ ಬಟನ್‌ ಅಳವಡಿಕೆ: ಈ ಬ್ಯಾಗ್‌ಗೆ ಪ್ಯಾನಿಕ್‌ ಬಟನ್‌ ಅಳವಡಿಸುವ ಆಲೋಚನೆಯೂ ಆರ್ಯನ್‌ಗೆ ಇದೆ. ವಿದ್ಯಾರ್ಥಿಗೆ ತೊಂದರೆಯಾದರೆ, ಏನಾದರೂ ಸಮಸ್ಯೆಯಾದರೆ ಅದನ್ನು ಒತ್ತಿದರೆ ಅವರ ಪೋಷಕರಿಗೆ ಸಂದೇಶ ಹೋಗುತ್ತೆ.

ಕಣ್ಮರೆಯಾಗುತ್ತಿರುವ ಮಕ್ಕಳು
ಮಕ್ಕಳ ವಿರುದ್ಧದ ದೌರ್ಜನ್ಯ ಮತ್ತು ಕಣ್ಮರೆ ಪ್ರಕರಣಗಳು ಇಂದು ಹೆಚ್ಚುತ್ತಲೇ ಇವೆ.  ಸ್ವತಂತ್ರ್ಯ ಸಂಸ್ಥೆಯೊಂದು ನಡೆಸಿರುವ ಅಧ್ಯಯನದ ಪ್ರಕಾರ ಭಾರತದಲ್ಲಿ ಪ್ರತೀ ವರ್ಷ 20 ಸಾವಿರ ಮಕ್ಕಳು ಅಪಹರಣವಾಗುತ್ತಿದೆ. ಕಣ್ಮರೆಯಾದ ಮಕ್ಕಳ ಬಗೆಗಿನ ಆತಂಕ ಪೋಷಕರಿಗೆ ಮಾತ್ರ ಗೊತ್ತು. ಇಂತಹ ಸಂದರ್ಭದಲ್ಲಿ ಸ್ಮಾರ್ಟ್‌ ಸ್ಕೂಲ್‌ಬ್ಯಾಗ್‌ಗಳು ನೆರವಾಗುತ್ತವೆ ಎನ್ನುತ್ತಾರೆ ಶಿಕ್ಷಣ ತಜ್ಞರು.

ಸ್ಮಾರ್ಟ್‌ ಸ್ಕೂಲ್‌ ಬ್ಯಾಗ್‌ ಕುರಿತ ಯೂಟ್ಯೂಬ್‌ ವಿಡಿಯೊ ಸಂಪರ್ಕ: www.youtube.com/watch?v=XBXx_8X6958

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT