ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಶೋಧನೆಗೆ ಸಹಕಾರಿ ಸ್ಕಾಲರ್‌

ತಂತ್ರೋಪನಿಷತ್ತು
Last Updated 21 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಮಾಹಿತಿಯ ಲಭ್ಯತೆಗೇನೂ ಕೊರತೆ ಇಲ್ಲ. ಆದರೆ, ಮಾಹಿತಿಯ ಮಹಾಪೂರದಲ್ಲಿ ಬೇಕೆಂದ ನಿಖರ ಮಾಹಿತಿಯನ್ನು ಹೆಕ್ಕುವುದೂ ಒಂದು ಸವಾಲು. ಏಕೆಂದರೆ ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯ ವಿಶ್ವಾಸಾರ್ಹತೆಯ ಬಗ್ಗೆ ಅನೇಕರಿಗೆ ಅನುಮಾನವೇ ಹೆಚ್ಚು.

ಸಂಶೋಧನೆಗಳಲ್ಲಿ ತೊಡಗಿರುವವರು ಅಥವಾ ಒಂದು ವಿಷಯದ ಬಗ್ಗೆ ಖಚಿತ ಮಾಹಿತಿ ಹುಡುಕುವವರು ಈಗಲೂ ಪುಸ್ತಕಗಳ ಮೊರೆ ಹೋಗುವುದು, ಸಂಶೋಧನಾ ಲೇಖನಗಳಿಗಾಗಿ ಗ್ರಂಥಗಳ ಪುಟ ತಿರುವುತ್ತಾ ಕೂರುವುದು ಸಾಮಾನ್ಯ. ಈ ವಿಧಾನದಲ್ಲಿ ಮಾಹಿತಿ ಹುಡುಕುವುದು ಸಾಕಷ್ಟು ಸಮಯ ಬೇಡುವುದು ಮಾತ್ರ ಸುಳ್ಳಲ್ಲ.

ಸಂಶೋಧನಾ ಲೇಖನಗಳನ್ನು ಅಂತರ್ಜಾಲದಲ್ಲೇ ಹುಡುಕಬಹುದು. ಹುಡುಕುವ ವಿಧಾನ ಸರಿಯಾಗಿದ್ದರೆ ಸಂಶೋಧನಾ ಲೇಖನಗಳ ಮೂಲಕ ಬೇಕೆಂದ ಖಚಿತ ಮಾಹಿತಿಯನ್ನು ಪಡೆಯಬಹುದು. ಸಂಶೋಧನಾ ಲೇಖನ ಅಥವಾ ವಿದ್ವತ್‌ ಗ್ರಂಥಗಳ ರೆಫರೆನ್ಸ್‌ ಬೇಕಿದ್ದರೆ ಗೂಗಲ್‌ ಸ್ಕಾಲರ್‌ ಮೂಲಕ ಹುಡುಕುವುದು ಹೆಚ್ಚು ಅನುಕೂಲಕರ. ಇದು ವಿಶ್ವಾಸಾರ್ಹ ಕೂಡ. ಸಂಶೋಧನೆಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದಲೇ ಗೂಗಲ್‌ ಸ್ಕಾಲರ್‌ ಸೇವೆ ಒದಗಿಸುತ್ತಿದೆ.

ಗೂಗಲ್‌ ಸ್ಕಾಲರ್‌ಗಾಗಿ ಬೇರೆ ಹುಡುಕಾಟ ನಡೆಸಬೇಕಿಲ್ಲ. ನಿಮ್ಮ ಬ್ರೌಸರ್‌ನಿಂದ Google Scholar ಎಂದು ಟೈಪಿಸಿ ಎಂಟರ್‌ ಒತ್ತಿದರೆ ಸಾಕು. ನಿಮ್ಮೆದುರು ಸ್ಕಾಲರ್‌ನ ಹುಡುಕಾಟದ ಪುಟ ತೆರೆದುಕೊಳ್ಳುತ್ತದೆ. ಇಲ್ಲಿ ನಿಮಗೆ ಬೇಕಾದ ಮಾಹಿತಿಯನ್ನು ಸುಲಭವಾಗಿ ಹುಡುಕಬಹುದು. ಸಂಶೋಧನೆ ಹಾಗೂ ಉನ್ನತ ಅಧ್ಯಯನ ಕ್ಷೇತ್ರಕ್ಕೆ ಸಂಬಂಧಿಸಿದ ಮಾಹಿತಿ ಮಾತ್ರ ಇಲ್ಲಿ ಲಭ್ಯ. ಅಂದರೆ ನೀವು ಮಾಹಿತಿಯ ಗುಡ್ಡದಲ್ಲಿ ಅಲೆದಾಡುವ ಬದಲು ಸಂಶೋಧನಾ ಕೊಳದಲ್ಲಿ ಮಾಹಿತಿಗಾಗಿ ಗಾಳ ಹಾಕಿರುತ್ತೀರಿ. ರೆಫರೆನ್ಸ್‌ಗೆ ಬೇಕಾದ ಸಂಶೋಧನಾ ಲೇಖನಗಳು/ಗ್ರಂಥಗಳು/ ಜರ್ನಲ್‌ಗಳು ಇಲ್ಲಿ ನಿಮಗೆ ಬೇಗನೆ ಸಿಗುತ್ತವೆ.

ವಿಶ್ವವಿದ್ಯಾಲಯಗಳು ಹಾಗೂ ಸಂಶೋಧನಾ ಸಂಸ್ಥೆಗಳ ಮಾಹಿತಿ ಕೋಶವು ಗೂಗಲ್‌ ಸ್ಕಾಲರ್‌ ಸರ್ಚ್‌ ಎಂಜಿನ್‌ ಮೂಲಕ ಇಲ್ಲಿ ಲಭ್ಯವಾಗಲಿದೆ. ಉದಾಹರಣೆಗೆ, ನಿಮಗೆ ಭಾರತದ ಶಿಕ್ಷಣ ವ್ಯವಸ್ಥೆಗೆ ಸಂಬಂಧಿಸಿದಂತೆ ಮಾಹಿತಿ ಬೇಕಿದ್ದರೆ INDIAN EDUCATION ಎಂದು ಗೂಗಲ್‌ ಸ್ಕಾಲರ್‌ನಲ್ಲಿ ಹುಡುಕಿದರೆ ಇಲ್ಲಿ ಲಭ್ಯವಿರುವ ಉಪಯುಕ್ತ ಗ್ರಂಥ/ ಸಂಶೋಧನಾ ಲೇಖನಗಳ ಪುಟ ತೆರೆದುಕೊಳ್ಳುತ್ತದೆ.

ಗೂಗಲ್‌ ಸ್ಕಾಲರ್‌ನಿಂದ ಮಾಹಿತಿ ಪಡೆಯುವುದು ಮಾತ್ರವಲ್ಲ ಮಾಹಿತಿಯನ್ನು ಸೇರಿಸಲೂಬಹುದು. ಸ್ಕಾಲರ್‌ ಪುಟದಲ್ಲಿ ಕಾಣುವ My Citations ಮೇಲೆ ಕ್ಲಿಕ್ಕಿಸಿ. ನಿಮ್ಮ ಬಗ್ಗೆ ಮಾಹಿತಿ ನೀಡಿ. ಬಳಿಕ ಲೇಖನವನ್ನು ಅಪ್‌ಡೇಟ್‌ ಮಾಡಬಹುದು. ಆದರೆ, ಇಲ್ಲಿ ಲೇಖನ ಸೇರಿಸಲು ನೀವು ವಿಶ್ವವಿದ್ಯಾಲಯ ಅಥವಾ ಸಂಶೋಧನಾ ಸಂಸ್ಥೆಯಲ್ಲಿ ಸಂಶೋಧಕರಾಗಿರಬೇಕಾದ್ದು ಕಡ್ಡಾಯ. ಅಂದಹಾಗೆ ಗೂಗಲ್‌ ಸ್ಕಾಲರ್‌ನಲ್ಲಿ ಸದ್ಯ ಇಂಗ್ಲಿಷ್‌, ಫ್ರೆಂಚ್‌, ಚೈನೀಸ್‌ ಸೇರಿದಂತೆ 12 ಭಾಷೆಗಳಲ್ಲಿ ಮಾತ್ರ ಮಾಹಿತಿ ಲಭ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT