ಸೋಮವಾರ, ಆಗಸ್ಟ್ 3, 2020
23 °C
ಈಗಾಗಲೇ ಶೇ 70ರಷ್ಟು ಪಠ್ಯಪುಸ್ತಕ ಪೂರೈಕೆ, 25ರ ನಂತರ ವಿತರಿಸಲು ಶಿಕ್ಷಣ ಇಲಾಖೆ ಚಿಂತನೆ

ಶಾಲೆ ಆರಂಭಕ್ಕೂ ಮುನ್ನ ಕೈಸೇರಲಿವೆ ಪಠ್ಯಪುಸ್ತಕ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಈ ಸಾಲಿನ ಶೈಕ್ಷಣಿಕ ವರ್ಷ ಆರಂಭಕ್ಕೂ ಮುನ್ನ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಬಹುತೇಕ ಎಲ್ಲ ವಿಷಯಗಳ ಪಠ್ಯಪುಸ್ತಕಗಳು ಲಭ್ಯವಾಗಲಿವೆ. 

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪಠ್ಯಪುಸ್ತಕಗಳ ಪೂರೈಕೆಗೆ ಕ್ರಮ ಕೈಗೊಂಡಿದ್ದು, ಜಿಲ್ಲೆಗೆ ಶೇ 70ರಷ್ಟು ಪುಸ್ತಕಗಳು ಈಗಾಗಲೇ ಬಂದಿವೆ. ಇನ್ನು 10 ದಿನಗಳಲ್ಲಿ ಉಳಿದ ಪುಸ್ತಕಗಳೂ ಬರಲಿವೆ. ಇದೇ 25ರ ನಂತರ ಮಕ್ಕಳಿಗೆ ಪಠ್ಯಪುಸ್ತಕಗಳನ್ನು ವಿತರಿಸಲು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ. 29ರಿಂದ ಶಾಲೆಗಳು ಆರಂಭಗೊಳ್ಳಲಿವೆ.

1ರಿಂದ 10ನೇ ತರಗತಿವರೆಗಿನ ಸರ್ಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳಿಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಉಚಿತವಾಗಿ ಪಠ್ಯಪುಸ್ತಕಗಳನ್ನು ವಿತರಿಸುತ್ತಿದೆ. ರಾಜ್ಯ ಪಠ್ಯಕ್ರಮ ಅನುಸರಿಸುವ ಖಾಸಗಿ ಶಾಲೆಗಳು ಹಣ ಪಾವತಿ ಪಠ್ಯಪುಸ್ತಕಗಳಿಗೆ ಬೇಡಿಕೆ ಇಟ್ಟರೆ, ಅವುಗಳಿಗೂ ಇಲಾಖೆಯೇ ಪೂರೈಸುತ್ತದೆ. 

ಅನುಕೂಲ: ಸಾಮಾನ್ಯವಾಗಿ ಪ್ರತಿ ವರ್ಷ ಮಕ್ಕಳ ಕೈಗೆ ಪಠ್ಯಪುಸ್ತಕಗಳು ಸಿಗುವಾಗ ತಡವಾಗುತ್ತದೆ. ಕಳೆದ ವರ್ಷ ಶೇ 50ರಷ್ಟು ಪುಸ್ತಕಗಳು ಮಾತ್ರ ಶಾಲೆ ಆರಂಭವಾಗುವ ಸಂದರ್ಭದಲ್ಲಿ ಮಕ್ಕಳ ಕೈ ಸೇರಿದ್ದವು. ಕೆಲವು ವಿಷಯಗಳ ಪಠ್ಯಪುಸ್ತಕಗಳನ್ನು ಪೂರೈಕೆ ಮಾಡುವುದರಲ್ಲಿ ವಿಳಂಬವಾಗಿತ್ತು‌. ಈ ಸಲ, ಬಹುತೇಕ ಎಲ್ಲ ಪಠ್ಯಪುಸ್ತಕಗಳು ಜೂನ್‌ ಆರಂಭದಲ್ಲೇ ಲಭ್ಯವಾಗುವುದರಿಂದ ಮಕ್ಕಳಿಗೆ ಅನುಕೂಲವಾಗಲಿದೆ.

‘ಈಗಾಗಲೇ ಎಲ್ಲ ವಿಷಯಗಳ ಶೇ 70ರಿಂದ 75ರಷ್ಟು ಪುಸ್ತಕಗಳು ಜಿಲ್ಲೆಗೆ ಬಂದಿವೆ. ಇನ್ನು ಒಂದು ವಾರದಲ್ಲಿ ಉಳಿದ ಪುಸ್ತಕಗಳು ಬರಲಿವೆ. ಶೇ 90ರಷ್ಟು ಪುಸ್ತಕಗಳು ಬಂದ ನಂತರ ಮಕ್ಕಳಿಗೆ ವಿತರಣೆ ಮಾಡುತ್ತೇವೆ’ ಎಂದು ಚಾಮರಾಜನಗರ ಕ್ಷೇತ್ರ ಶಿಕ್ಷಣಾಧಿಕಾರಿ ಲಕ್ಷ್ಮಿಪತಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಳೆದ ವರ್ಷ ಶಾಲೆ ಆರಂಭವಾಗುವ ಹೊತ್ತಿಗೆ ಶೇ 50ರಷ್ಟು ಪುಸ್ತಕಗಳು ಮಾತ್ರ ಬಂದಿದ್ದವು. ಪಠ್ಯ ಪರಿಷ್ಕರಣೆ ಆದ ವಿಷಯಗಳ ಪಠ್ಯಪುಸ್ತಕಗಳು ಬರುವುದು ತಡವಾಗಿತ್ತು. ಈ ವರ್ಷ ಅಂತಹ ಪರಿಸ್ಥಿತಿ ಎದುರಾಗದು’ ಎಂದು ಅವರು ಹೇಳಿದರು.

ಸಮವಸ್ತ್ರ ವಿತರಣೆ ವಿಳಂಬ 

ಈ ವರ್ಷವೂ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣೆಯಲ್ಲಿ ವಿಳಂಬವಾಗಲಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸಮವಸ್ತ್ರಗಳ ಪೂರೈಕೆಗೆ ಟೆಂಡರ್ ಕರೆದಿದೆ.

‘ಸಮವಸ್ತ್ರ ವಿತರಣೆ ಬಗ್ಗೆ ರಾಜ್ಯಮಟ್ಟದಲ್ಲಿ ನಿರ್ಧಾರ ಕೈಗೊಳ್ಳಬೇಕಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಮಂಜುಳ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.  

‘ಸಮವಸ್ತ್ರ ವಿತರಣೆಗೆ ಟೆಂಡರ್‌ ಪ್ರಕ್ರಿಯೆ ನಡೆದಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸಮವಸ್ತ್ರ ಬರುವುದು ಸ್ವಲ್ಪ ವಿಳಂಬವಾಗಬಹುದು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಲಕ್ಷ್ಮಿಪತಿ ಹೇಳಿದರು.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಸರ್ಕಾರಿ ಶಾಲಾಮಕ್ಕಳಿಗೆ ವಾರ್ಷಿಕವಾಗಿ ಎರಡು ಜೊತೆ ಸಮವಸ್ತ್ರವನ್ನು ಉಚಿತವಾಗಿ ನೀಡುತ್ತಿದೆ. ಕಳೆದ ವರ್ಷ ರಾಜ್ಯದಾದ್ಯಂತ ಸಮವಸ್ತ್ರ ವಿತರಣೆ ವಿಳಂಬವಾಗಿತ್ತು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು