‘ಲಿಂಗ ಪರಿವರ್ತಿತರಿಗೆ ಸಾಮಾಜಿಕ ಭದ್ರತೆ ಇಲ್ಲ’

7

‘ಲಿಂಗ ಪರಿವರ್ತಿತರಿಗೆ ಸಾಮಾಜಿಕ ಭದ್ರತೆ ಇಲ್ಲ’

Published:
Updated:
Prajavani

ಬೆಂಗಳೂರು: ‘ಲೈಂಗಿಕ ಅಲ್ಪಸಂಖ್ಯಾತರು ಮತ್ತು ಲಿಂಗ ಪರಿವರ್ತನೆ ಮಾಡಿಸಿಕೊಂಡವರಿಗೆ 2014ರಲ್ಲಿ ಸುಪ್ರೀಂ ಕೋರ್ಟ್ ಆದೇಶದಂತೆ ಯಾವ ರಾಜ್ಯಗಳೂ ಸಾಮಾಜಿಕ ಭದ್ರತೆಯನ್ನು ನೀಡುತ್ತಿಲ್ಲ’ ಎಂದು ಟ್ರಾನ್ಸ್ ರೈಟ್ ನೌ ಕಲೆಕ್ಟಿವ್‌ನ ಸಂಸ್ಥಾಪಕಿ ಗ್ರೇಸ್ ಭಾನು ಬೇಸರ ವ್ಯಕ್ತಪಡಿಸಿದರು.

ಸೆಂಟರ್ ಫಾರ್ ಲಾ ಅಂಡ್ ಪಾಲಿಸಿ ರಿಸರ್ಚ್ ಸಂಸ್ಥೆ ರಚಿಸಿದ ‘ಮೇಕಿಂಗ್ ರೈಟ್ಸ್ ರಿಯಲ್’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಮೀಸಲಾತಿ ನೀಡಿರುವ ನಿರ್ದೇಶನ ಘೋಷಣೆಗೆ ಸೀಮಿತವಾಗಿದೆ. ಈ ಕೂಡಲೇ ಎಲ್ಲ ರಾಜ್ಯಗಳು ಸರ್ಕಾರದ ನೀತಿಯನ್ನು ಅಭಿವೃದ್ಧಿಪಡಿಸಲು ಮುತುವರ್ಜಿ ವಹಿಸಬೇಕು’ ಎಂದು ಹೇಳಿದರು.

‘ಮಹಿಳೆಯರ ಕೋಟಾದಡಿ ತಮಿಳುನಾಡಿನಲ್ಲಿ ಲೈಂಗಿಕ ಅಲ್ಪಸಂಖ್ಯಾತರು ಸರ್ಕಾರಿ ಸೌಲಭ್ಯಗಳನ್ನು‌ ಪಡೆಯುತ್ತಿದ್ದಾರೆ. ಆದರೆ, ಇತರೆ ರಾಜ್ಯಗಳಲ್ಲಿ ಏಕಿಲ್ಲ? ಅಂಬೇಡ್ಕರ್‌ ಪ್ರತಿಪಾದಿಸಿದ ಸಮಾನತೆ ಎಲ್ಲಿ ಹೋಗಿದೆ? ಗುರುತಿನ ಚೀಟಿಗೆ ಅರ್ಜಿ ಹಾಕಿದರೆ ಅದನ್ನು ಮಾಡಿಕೊಡಲು ಕನಿಷ್ಠ ಆರು ತಿಂಗಳು ಕಾಲಾವಕಾಶ ತೆಗೆದುಕೊಳ್ಳುತ್ತಿರುವುದು ಏಕೆ? ಖರೀದಿಸುವ ಪ್ರತಿಯೊಂದು ವಸ್ತುವಿಗೂ ತೆರಿಗೆ ಪಾವತಿಸುವ ನಮಗೆ ಮೀಸಲಾತಿಯಲ್ಲೇಕೆ ತಾರತಮ್ಯ’ ಎಂದು ಪ್ರಶ್ನಿಸಿದರು.

‘ರಾಜ್ಯ ಲಿಂಗಪರಿವರ್ತಿತರ ಕಲ್ಯಾಣ ಮಂಡಳಿಯಲ್ಲಿ ‌ಶೇ 50ರಷ್ಟು ಸದಸ್ಯರು ನಮ್ಮ ಸಮುದಾಯದವರೇ ಇರಬೇಕು. ಅದರಲ್ಲಿ ನಮ್ಮವರು ಇದ್ದರೆ, ನಾವು ಅನುಭವಿಸುತ್ತಿರುವ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಲು ಸಹಾಯವಾಗುತ್ತದೆ. ಸಮಾಜ ನಮ್ಮನ್ನು ಕೆಟ್ಟ ದೃಷ್ಟಿಯಿಂದ ಕಾಣಬಾರದು’ ಎಂದು ಮನವಿ ಮಾಡಿದರು.

ಹಿರಿಯ ವಕೀಲೆ ಜಯ್ನಾ ಕೊಠಾರಿ, ‘ಸಾಮಾನ್ಯ ನಾಗರಿಕರಿಗೆ ನೀಡುವಂತೆ ಲೈಂಗಿಕ ಅಲ್ಪಸಂಖ್ಯಾತರು ಮತ್ತು ಲಿಂಗ ಪರಿವರ್ತನೆ ಮಾಡಿಸಿಕೊಂಡವರಿಗೆ ಸಮಾಜದಲ್ಲಿ ಗೌರವ ನೀಡಬೇಕು. ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಆ ಸಮುದಾಯಕ್ಕೆ ಕಾನೂನು ಬದ್ಧವಾಗಿ ಎಲ್ಲ ಸೌಲಭ್ಯಗ‌ಳನ್ನೂ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !