ಸೀಳು ಅಂಗುಳಕ್ಕೆ ಚಿಕಿತ್ಸೆ

ಭಾನುವಾರ, ಮಾರ್ಚ್ 24, 2019
27 °C

ಸೀಳು ಅಂಗುಳಕ್ಕೆ ಚಿಕಿತ್ಸೆ

Published:
Updated:
Prajavani

ಸೀಳು ತುಟಿ ಹಾಗೂ ಸೀಳು ಅಂಗುಳಕ್ಕೆ ಚಿಕಿತ್ಸೆ ಹಾಗೂ ಪರಿಹಾರ ಆ ಸೀಳಿನ ಆಳವನ್ನು ಅವಲಂಬಿಸಿರುತ್ತದೆ. ಮಗುವಿನ ವಯಸ್ಸು, ಅದರ ಅಗತ್ಯಗಳನ್ನು ಪರಿಶೀಲಿಸಿ, ಇದನ್ನು ನಿರ್ಧರಿಸಲಾಗುತ್ತದೆ. ಅಷ್ಟೇ ಅಲ್ಲ, ಸೀಳಿನಿಂದಾಗಿ ಎದುರಿಸುತ್ತಿರುವ ಇನ್ನಿತರ ಬಾಧೆಗಳು, ತೊಂದರೆಗಳು ಇವನ್ನೆಲ್ಲ ಗಮನಿಸಿ ಚಿಕಿತ್ಸೆಯ ವಿಧಾನವನ್ನು ತೀರ್ಮಾನಿಸಲಾಗುತ್ತದೆ.

ಸೀಳು ತುಟಿಗೆ ಶಸ್ತ್ರಚಿಕಿತ್ಸೆ ಮಾಡಿಸಬೇಕಾಗಿದ್ದರೆ, ಹುಟ್ಟಿದ ಮೊದಲ ಕೆಲವು ತಿಂಗಳುಗಳಲ್ಲಿಯೇ ಮಾಡಿಸಬೇಕಾಗುತ್ತದೆ. ವರ್ಷ ತುಂಬುವುದರಲ್ಲಿ ಮಾಡಿಸಿದರೆ ಇನ್ನೂ ಪರಿಣಾಮಕಾರಿಯಾಗಿರುತ್ತದೆ. ಸೀಳು ಅಂಗುಳವಿದ್ದಲ್ಲಿ ಒಂದೂವರೆ ವರ್ಷದ ಒಳಗೆ ಶಸ್ತ್ರಚಿಕಿತ್ಸೆ ಮಾಡಿದರೆ ಅತಿ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಅದಕ್ಕೂ ಮೊದಲೇ ಆದರೂ ಒಳ್ಳೆಯದೇ. ಬಹುತೇಕ ಮಕ್ಕಳಿಗೆ ವಯಸ್ಸಾದಂತೆ ಬೆಳೆದಂತೆಲ್ಲ ಮತ್ತೆ ಒಂದಷ್ಟು ಶಸ್ತ್ರಚಿಕಿತ್ಸೆಗಳ ಅಗತ್ಯ ಕಾಣಿಸಿಕೊಳ್ಳುತ್ತದೆ. ಇದು ಕೇವಲ ಸುರೂಪ ಚಿಕಿತ್ಸೆಯಲ್ಲ, ಮಗುವಿನ ಸ್ವಾಸ್ಥ್ಯಕ್ಕೆ ಅನುಕೂಲಕರವಾಗುವ ಚಿಕಿತ್ಸೆಯಾಗಿದೆ. ಮುಖ ಅಂದಗಾಣುವುದರೊಂದಿಗೆ ಉಸಿರಾಟ ಸರಾಗವಾಗುತ್ತದೆ. ಕೇಳುವ ಸಾಮರ್ಥ್ಯ ಹೆಚ್ಚುತ್ತದೆ. ಮಾತು ಹಾಗೂ ಭಾಷಾ ಕೌಶಲಗಳು ಬೆಳೆಯುತ್ತವೆ. ಕೆಲವೊಮ್ಮೆ ಸೀಳು ಅಂಗುಳವಿರುವ ಮಕ್ಕಳಿಗೆ ಈ ಶಸ್ತ್ರಚಿಕಿತ್ಸೆಯಲ್ಲದೇ ಪೂರಕ ಚಿಕಿತ್ಸೆಗಳ ಅಗತ್ಯವೂ ಇರುತ್ತದೆ. ದಂತ ವೈದ್ಯರು, ಆರ್ಥೋಡೆಂಟಿಸ್ಟ್‌ಗಳ ಸಹಾಯವೂ ಆಗತ್ಯವಾಗಿರುತ್ತದೆ. ಜೊತೆಗೆ ಸಂವಹನ ಚಿಕಿತ್ಸೆ ಅಥವಾ ಸ್ಪೀಚ್‌ ಥೆರಪಿಯ ಅಗತ್ಯವೂ ಇರುತ್ತದೆ. ಅವುಗಳೆಡೆಗೂ ಗಮನ ಹರಿಸಬೇಕಾಗಿರುವುದು ಅತ್ಯವಶ್ಯ.

ಈ ಥರದ ದೋಷಗಳಿರುವ ಮಕ್ಕಳಿಗೆ ಅವರ ಬಾಲ್ಯದುದ್ದಕ್ಕೂ ವೈದ್ಯಕೀಯ ಸಹಾಯದ ಅಗತ್ಯವಿರುತ್ತದೆ. ಬಿಡಿಬಿಡಿಯಾಗಿ ಈ ಸಹಾಯ ಲಭಿಸಿದರೂ ಪ್ರತಿ ವೈದ್ಯಕೀಯ ಸೇವೆ ಒಂದಕ್ಕೊಂದು ಪೂರಕವಾಗಿರುತ್ತವೆ ಎನ್ನುವುದು ಗಮನಾರ್ಹ.  

ಸಾಮಾನ್ಯವಾಗಿ ಶಸ್ತ್ರಚಿಕಿತ್ಸೆ ಕೈಗೊಳ್ಳುವವರ ತಂಡದಲ್ಲಿ ಎಲ್ಲ ಬಗೆಯ ವೈದ್ಯರೂ ಇರುತ್ತಾರೆ. ಅಗತ್ಯವಿರುವ ವೈದ್ಯಕೀಯ ಸಹಾಯಕ್ಕೆ ಅವರು ಸೂಚಿಸುತ್ತಾರೆ, ಸ್ಪಂದಿಸುತ್ತಾರೆ. ಇದು ಕೇವಲ ಸುರೂಪ ಚಿಕಿತ್ಸೆಯಾಗಿ ಅಲ್ಲ, ಮಗುವಿನ ಸಮಗ್ರ ಬೆಳವಣಿಗೆಯನ್ನು ಗಮನದಲ್ಲಿರಿಸಿಕೊಂಡು ಹೇಳಲಾಗುತ್ತದೆ.

ಸಾಮಾನ್ಯವಾಗಿ ಎಲ್ಲ ಚಿಕಿತ್ಸೆಗಳ ನಂತರ ಸೀಳು ಚಿಕಿತ್ಸೆ, ಅಥವಾ ಅಂಗುಳವಿರುವ ಮಕ್ಕಳು ಸಾಮಾನ್ಯ ಜೀವನ ನಡೆಸಲು ಸಮರ್ಥರಾಗಿರುತ್ತಾರೆ. ಕೆಲ ಮಕ್ಕಳಿಗೆ ಬಾಲ್ಯದಲ್ಲಷ್ಟೇ ಅಲ್ಲ, ಯೌವ್ವನಾವಸ್ಥೆ ಹಾಗೂ ಪ್ರೌಢಾವಸ್ಥೆಯಲ್ಲಿಯೂ ಅವರಿಗೆ ಸಹಾಯ ಬೇಕಾಗುತ್ತದೆ. ಕೆಲ ಮಕ್ಕಳಲ್ಲಿ ಆತ್ಮವಿಶ್ವಾಸದ ಕೊರತೆ ಕಾಣಿಸಬಹುದು. ಅಂಥ ಮಾನಸಿಕ ಸಮಸ್ಯೆಗಳನ್ನು ಪಾಲಕರು, ಸ್ನೇಹಿತರು ಒಡಗೂಡಿ ಸರಿಪಡಿಸಬಹುದು. ಪಾಲಕರಿಗೆ ಸಮಾನ ಮನಸ್ಕ ಪಾಲಕರ ಚರ್ಚೆ ಮತ್ತು ಸಂವಾದ ಈ ನಿಟ್ಟಿನಲ್ಲಿ ಹೆಚ್ಚು ಸಹಾಯ ಮಾಡಬಹುದು. 

ಮಗುವಿನಲ್ಲದ ದೋಷಕ್ಕಾಗಿ ಮಗುವೇ ಪರಿತಪಿಸಬೇಕಾಗಿಲ್ಲ. ಎಲ್ಲ ಒಡಗೂಡಿ ಚಿಕಿತ್ಸೆ ನೀಡಿದರೆ ಅದು ಮಗುವಿನ ಸುರೂಪಕ್ಕಿಂತಲೂ ಸ್ವಾಸ್ಥ್ಯಮಯ ಬದುಕಿಗೆ ಮುನ್ನುಡಿಯಾಗುತ್ತದೆ. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !