ಶನಿವಾರ, ಮೇ 8, 2021
25 °C

ಯುವಕರಿಗೆ ಸಂಘಟಿತ ಹೋರಾಟದ ಗುಣ ಇಲ್ಲ-ಪತ್ರಕರ್ತ ರವೀಶ್ ಕುಮಾರ್

ಸುಕೃತ ಎಸ್‌. Updated:

ಅಕ್ಷರ ಗಾತ್ರ : | |

ಮುಖದಲ್ಲಿ ಮಂದಸ್ಮಿತ, ಕರೀ ಕೋಟು, ಕನ್ನಡಕ, ಕೈಗಡಿಯಾರ, ಬೆರಳತುದಿಗೊಂದು ಪೆನ್ನು ಹಿಡಿದು ಪ್ರತಿರಾತ್ರಿ ‘ಪ್ರೈಮ್‌ಟೈಮ್‌’ ಮೂಲಕ ಒಂಬತ್ತು ಗಂಟೆಗೆ ಟಿ.ವಿ ಪರದೆ ಮೇಲೆ ಬರುವ ರವೀಶ್‌ ಕುಮಾರ್‌, ಅಂದು ನೀಲಿ ಬಣ್ಣದ ಅಂಗಿ ತೊಟ್ಟು, ಜೀನ್ಸ್‌ ಹಾಕಿಕೊಂಡು ಕೈಯಲ್ಲಿ ಮೊಬೈಲ್‌ ಹಿಡಿದು ಅದೇ ಮಂದಸ್ಮಿತದೊಂದಿಗೆ ಎದುರಾದರು.

ಗೌರಿ ಲಂಕೇಶ್‌ ರಾಷ್ಟ್ರೀಯ ಪತ್ರಿಕೋದ್ಯಮ ಪ್ರಶಸ್ತಿ ಸ್ವೀಕರಿಸಲು ಅವರು ಬೆಂಗಳೂರಿಗೆ ಬಂದಿದ್ದರು. ಬೆಳಗ್ಗೆಯೇ ನಾವುಗಳು ಪೆನ್ನು, ಪೇಪರು, ಮೈಕು, ಕ್ಯಾಮೆರಾ ಹಿಡಿದು ಅವರನ್ನು ಮಾತಿಗೆಳೆದೆವು.

ಬೆಳಿಗ್ಗೆಯೇ ಎದ್ದು, ಉಳಿದುಕೊಂಡಿದ್ದ ಹೋಟೆಲ್‌ನ ಸುತ್ತಮುತ್ತ ಒಮ್ಮೆ ಸುತ್ತಾಡಿ, ಇಲ್ಲಿನ ಜನಜೀವನ, ಪತ್ರಿಕೆಗಳ ಓದನ್ನು ಮುಗಿಸಿಬಂದಿದ್ದರು ರವೀಶ್‌. ಕನ್ನಡ ಪತ್ರಿಕೆಯನ್ನೂ ನೋಡಿ, ಎಷ್ಟು ಚಂದದ ಲಿಪಿ ಎಂದು ಸಂತಸ ವ್ಯಕ್ತಪಡಿಸಿದರು.  

ಅದೊಂದು ಅನೌಪಚಾರಿಕ ಸಂವಾದ. ಬೇರೆ ಬೇರೆ ಮಾಧ್ಯಮಗಳಿಂದ ಬಂದಿದ್ದ ನಮ್ಮಗಳ ಪ್ರಶ್ನೆಗಳಿಗೆ ಅವರದ್ದು, ಖಚಿತ, ನೇರ ಮತ್ತು ಸ್ಪಷ್ಟ ಉತ್ತರ. ನಮ್ಮ ಸಂದರ್ಶನ ಪ್ರಾರಂಭವಾಯಿತು.

ದೇಶದ ಇತಿಹಾಸವನ್ನು ತಿರುಚುವ ಅದರೊಂದಿಗೆ ಮರೆಸುವ ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆಯೇ. ನಮ್ಮ ನಾಯಕರು, ನೆಹರು, ಪಟೇಲರ ಕುರಿತು ನಮ್ಮ ನಡುವೆ ಹಲವು ತಪ್ಪು ಇತಿಹಾಸದ ಉಲ್ಲೇಖ ಮಾಡುತ್ತಿದ್ದಾರೆಲ್ಲ ಎಂದು ‘ಪ್ರಜಾವಾಣಿ’ ಕೇಳಿದ ಪ್ರಶ್ನೆಗೆ, ರವೀಶ್‌ ಕೆಲವು ಗಂಭೀರ ವಾಸ್ತವಗಳನ್ನು ನಮ್ಮ ಮುಂದಿಟ್ಟರು.

‘ಜನರ ಜೀವನ ಕ್ರಮ ಬದಲಾಗಿದೆ. ಸುಳ್ಳು ಹೇಳಿದರೂ ಸತ್ಯವನ್ನು ಹುಡುಕುವ ಪ್ರಯತ್ನ ಯಾರೂ ಮಾಡುವುದಿಲ್ಲ ಎನ್ನುವ ಸತ್ಯ ಜನನಾಯಕರಿಗೆ ಗೊತ್ತಾಗಿದೆ.’

‘ಈಗ ನೋಡಿ, ನಮ್ಮದು ಎಷ್ಟು ದೊಡ್ಡ ಇತಿಹಾಸ ಇರುವ ದೇಶ. ಇಲ್ಲಿಯವರೆಗೂ ಎಷ್ಟು ಮಂದಿ ಇತಿಹಾಸಕಾರರನ್ನು ದೇಶ ಕಂಡಿದೆ?. ಇತಿಹಾಸಕಾರರಾದವರು ದೇಶದ ಎಲ್ಲಾ ಆಯಾಮಗಳ ಕುರಿತು ಬರೆಯುಷ್ಟು ಸಂಖ್ಯೆಯಲ್ಲಿರಲಿಲ್ಲ. ಆದರೂ, ಅವರ ತಮ್ಮ ಜೀವಿತದ ಉದ್ದಕ್ಕೂ ಪುಸ್ತಕಗಳನ್ನು ಬರೆದರು.’

‘ಇಂದಿನ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಪೂರ್ತಿ ಹಾಳುಗೆಡವಲಾಗಿದೆ. ಇದು ಕೇವಲ ಇಂದಿನ ಆಡಳಿತ ಪಕ್ಷದಿಂದ ಆದದ್ದು ಅಲ್ಲ. ಎಲ್ಲಾ ಪಕ್ಷಗಳ ಆಡಳಿತದಲ್ಲೂ ಇದು ನಡೆಯುತ್ತಲೇ ಬಂದಿದೆ. ಇತಿಹಾಸದ ಪುಸ್ತಕಗಳು ನಮ್ಮಗಳ ಕೈ ಸೇರುತ್ತಿಲ್ಲ. ನಮ್ಮ ವಿದ್ಯಾರ್ಥಿಗಳು ಎಷ್ಟು ಮಂದಿ ಇತಿಹಾಸವನ್ನು ಒಂದು ವಿಷಯವನ್ನಾಗಿ ಅಧ್ಯಯನ ಮಾಡುತ್ತಿದ್ದಾರೆ ಎಂದು ಪ್ರಶ್ನೆ ಹಾಕಿಕೊಂಡರೆ, ಭಾಳ ಕಡಿಮೆ. ಓದುತ್ತಿರುವವರಿಗೆ ಸರಿಯಾದ ಶಿಕ್ಷಕರಿಲ್ಲ. ಗೈಡ್‌ ನೋಡಿಕೊಂಡು ಇತಿಹಾಸ ವಿಷಯ ಪಾಸಾಗುವ ಮಟ್ಟಕ್ಕೆ ನಾವು ಬಂದಿದ್ದೇವೆ.’

‘ತಪ್ಪು ಇತಿಹಾಸ ಹೇಳಲಾಗುತ್ತಿದೆ ಎಂದು ನಮ್ಮ ಇತಿಹಾಸಕಾರರು ಸಮಾಜ ಮುಂದೆ ಬಂದರು ಎಂದಿಟ್ಟುಕೊಳ್ಳೋಣ. ನಮ್ಮ ವ್ಯಾಟ್ಸಾಪ್‌ ವಿಶ್ವವಿದ್ಯಾಲಯ ಎಷ್ಟು ಮಟ್ಟಿನ ವಿಸ್ತಾರವನ್ನು ಹೊಂದಿದೆ ಮತ್ತು ಶಕ್ತಿಯುತವಾಗಿದೆ ಎಂದರೆ, ಅವರು ಸತ್ಯ ಹೇಳಿದರೂ, ಅದನ್ನು ಕ್ಷಣದಲ್ಲಿ ಸುಳ್ಳಾಗಿಸಿಬಿಡುತ್ತವೆ. ಇದು ಇಂದಿನ ಸ್ಥಿತಿ.’

ದೇಶದಲ್ಲಿ ಎಲ್ಲಾ ವಿಷಯಗಳಲ್ಲೂ ಸುಳ್ಳು ಅಥವಾ ತಪ್ಪು ಮಾಹಿತಿಗಳನ್ನು ನಮ್ಮ ನಾಯಕರೇ ನೀಡುತ್ತಿದ್ದಾರೆ. ಒಬ್ಬ ಮಂತ್ರಿ ಹೇಳುತ್ತಾರೆ, ಉದ್ಯೋಗ ಇದೆ ಆದರೆ, ನಮ್ಮ ಯುವಕರಲ್ಲಿ ಕೌಶಲ ಇಲ್ಲ ಎಂದು. ಆದರೆ, 45 ವರ್ಷಗಳಲ್ಲೇ ಈ ಬಾರಿ ಹೆಚ್ಚು ಉದ್ಯೋಗ ನಷ್ಟವಾಗಿದೆ ಎಂದು ಅಂಕಿ ಅಂಶಗಳು ಹೇಳುತ್ತವೆ. ಆದರೂ, ನಮ್ಮ ಯುವಕರು ಸಂಘಟಿತ ಹೋರಾಟ ಮಾಡುವಲ್ಲಿ ವಿಫಲರಾಗಿದ್ದಾರೆಯೇ ಎನ್ನುವ ಪ್ರಶ್ನೆಗೆ, ‘ಇಂದಿನ ಯುವಕರಲ್ಲಿ ಡೆಮೊಕ್ರಟಿಕ್‌ ಚೈತನ್ಯವೇ ಇಲ್ಲ’ ಎಂದು ಬಹಳ ನೇರವಾಗಿ ಹೇಳಿಬಿಟ್ಟರು.

‘ನನಗೆ ಇಂದಿನ ಯುವಕರನ್ನು ಕಂಡರೆ ಕನಿಕರ ಬರುತ್ತದೆ. ಅವರಿಂದ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಹಾಂಗ್‌ಕಾಂಗ್‌ನಲ್ಲಿ ಯುವ ಜನತೆ ನಡೆಸಿದ ವ್ಯವಸ್ಥಿತ ಮತ್ತು ಸಂಘಟಿತ ಹೋರಾಟವನ್ನು ನಮ್ಮ ದೇಶದಲ್ಲಿ ಊಹಿಸಲೂ ಸಾಧ್ಯವಿಲ್ಲ. ಈಗ ನೋಡಿ, ಪೇಮೆಂಟ್‌ ಸೀಟಿನಲ್ಲಿ ಎಂಜಿನಿಯರಿಂಗ್‌ ಪ್ರವೇಶ ಪಡೆಯುತ್ತಾರೆ. 4 ವರ್ಷ ಓದುತ್ತಾರೆ. ವರದಕ್ಷಿಣೆ ತೆಗೆದುಕೊಂಡು ಮದುವೆ ಆಗುತ್ತಾರೆ. ಇಂಥ ಯುವಕರಿಂದ ನೀವೇನನ್ನಾದರೂ ನಿರೀಕ್ಷಿಸಲು ಸಾಧ್ಯವಾಗುತ್ತದೆಯೇ ಎಂದು ಪ್ರಶ್ನಿಸಿದರು. ಹೆಚ್ಚೆಂದರೆ, ಒಂದು ಸ್ವಂತ ಕಂಪನಿ ತೆರೆಯುತ್ತಾರೆ. ಯಾವುದಾರೂ ಹೆಸರಾಂತ ನಿಯತಕಾಲಿಕೆಯ ಮುಖಪುಟಕ್ಕೆ ಪೋಸು ನೀಡುತ್ತಾರೆ ಅಷ್ಟೆ. ಬೇರೆ ಏನನ್ನೂ ಮಾಡಲಾರರು. 

ಆದರೆ, ಸೂಕ್ಷ್ಮ ಮನಸ್ಸಿನ ಯುವಕರೂ ನಮ್ಮೊಂದಿಗಿದ್ದಾರೆ. ತಮ್ಮ ಮಟ್ಟದಲ್ಲಿ ಪ್ರತಿರೋಧವನ್ನೂ ದಾಖಲಿಸುತ್ತಿದ್ದಾರೆ. ಆದರೆ, ಅವರು ಈ ವಿಶಾಲ ದೇಶಕ್ಕೆ ಹೋಲಿಸಿದರೆ, ಬಹಳ ಕಡಿಮೆ ಸಂಖ್ಯೆಯಲ್ಲಿದ್ದಾರೆ. ದೇಶದುದ್ದಕ್ಕೂ ಚದುರಿ ಹೋಗಿದ್ದಾರೆ. ಸಂಘಟನಾತ್ಮಕವಾಗಿ ಅವರ ಕಾರ್ಯಚಟುವಟಿಕೆ ಇಲ್ಲ. ಕ್ಯಾಂಪಸ್‌ ಪಾಲಿಟಿಕ್ಸ್‌ ಅನ್ನು ಕೂಡ ವ್ಯವಸ್ಥಿತವಾಗಿ ತುಳಿಯಲಾಗುತ್ತಿದೆ. ಇಂಥ ಸುದ್ದಿಗಳಿಗೆ ಪತ್ರಿಕೆಗಳ ಮುಖಪುಟದಲ್ಲಿ ಜಾಗ ದೊರೆಯುವುದೂ ಇಲ್ಲ.’

ದೇಶದ ಮುಂದೆ ಒಂದು ದೊಡ್ಡ ಪ್ರಶ್ನೆ ಇದೆ. ಹಾಗಾದರೆ, ಮೋದಿಗೆ ಪರ್ಯಾಯ ಇಲ್ಲವೇ ಎಂಬುದಾಗಿ. ಈ ಪ್ರಶ್ನೆ ನೆಹರೂ, ಇಂದಿರಾ ಗಾಂಧಿ ಅವರ ನಂತರವೂ ದೇಶದ ಮುಂದೆ ಇದ್ದಿತ್ತು. ಮೋದಿಗೆ ಪರ್ಯಾಯ ಇಲ್ಲವೇ ಎನ್ನುವ ಪ್ರಶ್ನೆಗೆ, ‘ಯಾರೂ ಇಲ್ಲ‍’ ಎನ್ನುವುದು ಅವರ ಉತ್ತರ.

‘ಸ್ವಾತಂತ್ರ್ಯೋತ್ತರದಲ್ಲಿ ದೇಶ ಕಂಡ ಅತ್ಯುತ್ತಮ ವಿರೋಧ ಪಕ್ಷದ ನಾಯಕರು ಹುಟ್ಟಿದ್ದು, ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ. ಅದು ಮಾಧ್ಯಮ ಹೆಚ್ಚು ಚಟುವಟಿಕೆಯಿಂದ ಇದ್ದ ಕಾಲವೂ ಆಗಿತ್ತು. ಅಂದಿನ ಪತ್ರಿಕೆಗೆ, ಜನರ ಸಹಕಾರ ಹಾಗೂ ಸಹಾಯ ಕೂಡ ಹೆಚ್ಚಿತ್ತು. ವಿರೋಧ ಪಕ್ಷಗಳ ನಾಯಕರಿಗೆ ಪತ್ರಿಕೆಯಲ್ಲಿ ಹೆಚ್ಚು ಜಾಗ ಮೀಸಲಿದ್ದಿತ್ತು. ಅವರ ಸಂದೇಶಗಳನ್ನು, ಅವರ ಮಾತುಗಳನ್ನು ಪತ್ರಿಕೆಗಳು ಜನರ ಮುಂದೆ ಇಡುತ್ತಿದ್ದರು.’

‘ಇಂದು ಹಾಗಿಲ್ಲ. ವಿರೋಧ ಪಕ್ಷಗಳಿಗೆ ನಮ್ಮ ಪತ್ರಿಕೆಗಳಲ್ಲಿ, ಟಿ.ವಿಗಳಲ್ಲಿ ಸ್ಥಾನ ಇಲ್ಲ. ಪತ್ರಿಕೋದ್ಯಮಕ್ಕೆ ಜನರ ಸಹಕಾರ, ಸಹಾಯವೂ ಇಲ್ಲ. ವಿರೋಧ ಪಕ್ಷಗಳ ಯಾವ ಮಾತುಗಳೂ ಜನರ ಬಳಿಗೆ ಬರುವುದೇ ಇಲ್ಲ. ಮೋದಿ ಅವರ ಯೋಜನೆ, ನೀತಿಗಳ ವಿರುದ್ಧ ಯಾರಾದರೂ ಪತ್ರ ಬರೆದರೂ ಸಾಕು, ನಮ್ಮ ಇಂಗ್ಲಿಷ್‌ ನಿರೂಪಕರು ಅವರನ್ನು ದೇಶದ ಶತ್ರುವನ್ನಾಗಿ, ವಿರೋಧ ಪಕ್ಷಗಳ ಲಾಭಿ ಮಾಡುತ್ತಿರುವುದಾಗಿ ಬಿಂಬಿಸಿ ಬಿಡುತ್ತವೆ.’

‘ಹಾಗಾದರೆ, ಮೋದಿ ಅವರಿಗೆ ಪರ್ಯಾಯ ಇಲ್ಲವೇ ಎಂದರೆ, ಸದ್ಯಕ್ಕಂತೂ ನಮ್ಮ ಬಳಿ ಯಾರೂ ಇಲ್ಲ ಎಂದೇ ಹೇಳಬೇಕಾಗುತ್ತದೆ. ಒಮ್ಮೆ ಹೇಳಿದ್ದೆ ವಿರೋಧ ಪಕ್ಷಗಳು ತಮ್ಮ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಒಂದಾಗಬೇಕು ಎಂದು. ಆದರೆ, ಗಾಂಧಿವಾದಿಗಳಿರಬಹುದು, ಅಂಬೇಡ್ಕರ್‌ ಅಥವಾ ಕಮ್ಯುನಿಸ್ಟ್‌ ಇರಬಹುದು, ಅವರಿಗೆ ಅವರದ್ದೇ ಆದ ಓದು ಇದೆ. ಅವರು ತಮ್ಮವರನ್ನಷ್ಟೇ ಕೇಂದ್ರೀಕರಿಸಿಕೊಂಡು ಕೆಲಸ ಮಾಡುತ್ತಾರೆ. ಅದರಾಚೆಗೆ ಕೆಲಸ ಮಾಡುತ್ತಿಲ್ಲ.’

‘ಈ ಎಲ್ಲದರ ಜೊತೆಗೆ ವಿರೋಧ ಪಕ್ಷಗಳು ಹೊಸದೇನನ್ನೂ ಹೇಳುವ ಪ್ರಯತ್ನ ಮಾಡುತ್ತಿಲ್ಲ. ತಮ್ಮಗಳನ್ನು ಬಚಾವು ಮಾಡಿಕೊಂಡರೆ ಸಾಕು ಎನ್ನುವ ಸ್ಥಿತಿಗೆ ಅವು ತಲುಪಿವೆ. ಆಡಳಿತ ಪಕ್ಷ, ವಿರೋಧ ಪಕ್ಷಗಳನ್ನು ದೂರುವುದು ಮತ್ತು ಇವರು ಅದಕ್ಕೆ ಉತ್ತರಿಸುವುದು ಇಷ್ಟೇ ಆಗಿ ಹೋಗಿದೆ.‍’

‘ಅತ್ಯಂತ ನೈತಿಕ ಬಲ ಇರುವ ವ್ಯಕ್ತಿ ಮಾತ್ರವೇ ಮೋದಿ ಅವರಿಗೆ ಪರ್ಯಾಯವಾಗಿ ನಿಲ್ಲಲು ಸಾಧ್ಯ. ವಿರೋಧ ಪಕ್ಷದಲ್ಲಿ ಈ ರೀತಿಯ ನೈತಿಕ ಶಕ್ತಿಯುಳ್ಳ ವ್ಯಕ್ತಿಗಳಿಲ್ಲ.‍’

ಹೀಗೆ, ಸಾಗುತ್ತಲೇ ಇದ್ದ ನಮ್ಮ ಮಾತಿನ ಯಾನಕ್ಕೆ ಆಯೋಜಕರು ಸಂಜೆ ನಡೆಯಲಿರುವ ಪ್ರಶಸ್ತಿ ಪ್ರದಾನ ಸಮಾರಂಭ ಕುರಿತು ನೆನಪಿಸಿದ ತರುವಾಯ ಮಾತು ಮುಗಿಸಲೇಬೇಕಾಯಿತು. ಸಂಜೆ ಸಮಾರಂಭಕ್ಕೆ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಜನರನ್ನು ಅದೇ ನೀಲಿ ಅಂಗಿ, ಜೀನ್ಸ್‌, ಅದೇ ಮಂದಸ್ಮಿತದೊಂದಿಗೆ ರವೀಶ್‌ ಕುಮಾರ್‌ ಎದುರುಗೊಂಡರು.

ವಿಶಿಷ್ಟ ಶೈಲಿಯ ನಿರೂಪಣೆಯಿಂದ ಗಮನ ಸೆಳೆಯುತ್ತಿರುವ ರವೀಶ್

ರವೀಶ್‌ ಅವರ ವಿಷಯ ಪ್ರಸ್ತುತಿ, ವಿಷಯ ನಿರೂಪಣೆಯಲ್ಲಿಯೇ ಹಾಸ್ಯ ಮಿಶ್ರಿತ ವ್ಯಂಗ್ಯ ಅಡಗಿರುತ್ತದೆ. ಮಾತಿನ ಆಡಂಬರದ ನಿರೂಪಣಾ ಶೈಲಿಯ ವಿಜೃಂಬಣೆಯೇ ತುಂಬಿಕೊಂಡಿರುವ ಇಂದಿನ ಸುದ್ದಿ ವಾಹಿನಿಗಳ ಆಚೆಗೆ, ಆಡಳಿತಗಾರನನ್ನು ಬಹಳ ಸೌಮ್ಯವಾಗಿ ಆದರೆ, ಅಷ್ಟೇ ಹರಿತವಾಗಿ ವಿಮರ್ಶಿಸುವ ಮಾತಿನ ಶೈಲಿ ಅವರದು.

‘ಎಲ್ಲಾ ಯುದ್ಧಗಳನ್ನು ಗೆಲ್ಲೋದಕ್ಕಾಗಿಯೇ ಮಾಡುವುದಿಲ್ಲ. ಕದನರಂಗದಲ್ಲಿ ಯಾರೋ ಒಬ್ಬರು ಹೋರಾಡಿದರು ಎಂದು ಜಗತ್ತಿಗೆ ಹೇಳಬೇಕಾಗುತ್ತದೆ. ಅದಕ್ಕಾಗಿ ಸಹ ಯುದ್ಧದಲ್ಲಿ ಭಾಗವಹಿಸುವವರಿದ್ದಾರೆ. ಅಂತಹ ಪತ್ರಕರ್ತರ ಪರವಾಗಿ ನಾನು ಈ ಪ್ರಶಸ್ತಿ ಸ್ವೀಕರಿಸುತ್ತಿದ್ದೇನೆ’ ಎಂದು ಮ್ಯಾಗ್ಸೆಸೆ ಪ್ರಶಸ್ತಿಯನ್ನು ಸ್ವೀಕರಿಸುವಾಗ ರವೀಶ್‌ ಹೇಳಿದ ಮಾತು ಅವರ ಪತ್ರಿಕೋದ್ಯಮದ ಬದ್ಧತೆಗೆ ಹಿಡಿದ ಕನ್ನಡಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು