ಶನಿವಾರ, ಜೂನ್ 19, 2021
22 °C
ವರ್ಷ ಭವಿಷ್ಯ: 6–4–2019 ರಿಂದ 24–3–2020

ಯುಗಾದಿ ವರ್ಷ ಭವಿಷ್ಯ: ಏಪ್ರಿಲ್‌ 2019 ರಿಂದ ಮಾರ್ಚ್‌ 2020

ಡಾ. ಎಸ್., ರಾಮಮೂರ್ತಿ Updated:

ಅಕ್ಷರ ಗಾತ್ರ : | |

ಯುಗಾದಿ ಸಂಕಲನದಲ್ಲಿ ಪ್ರಕಟವಾಗಿರುವ ‘ವರ್ಷ ಭವಿಷ್ಯ’ವನ್ನು ಇಲ್ಲಿ ನೀಡಲಾಗಿದೆ. ಈ ವರ್ಷ ಭವಿಷ್ಯವನ್ನು ಗೋಚಾರ ಗ್ರಹಗಳ ಆಧಾರದ ಮೇಲೆ ಬರೆಯಲಾಗಿದೆ. ಸಮಸ್ಯೆಗಳಿರುವ ರಾಶಿಯವರಿಗೆ ಸುಲಭ ಪರಿಹಾರಗಳನ್ನು ತಿಳಿಸಲಾಗಿದೆ. ಯಾರು ಭಯ–ಭೀತರಾಗಬಾರದೆಂದು ಮನವಿ.

ಮೇಷ

ಅಕ್ಟೋಬರ್ ತಿಂಗಳಿನವರೆಗೆ ಕೆಲಸ ಕಾರ್ಯಗಳಲ್ಲಿ ಹಿನ್ನಡೆ. ಹಣದ ವಿಚಾರದಲ್ಲಿ ಅಲ್ಪ ಸ್ವಲ್ಪ ಒತ್ತಡ. ವಿದ್ಯಾಭ್ಯಾಸದಲ್ಲಿ ಹಿನ್ನಡೆಯಾಗುವ ಸಾಧ್ಯತೆ. ಶುಭ ಕಾರ್ಯಗಳಿಗೆ ವಿಪರೀತ ಶ್ರಮ. ನ್ಯಾಯಾಲಯದ ವ್ಯವಹಾರಗಳು ವಿಳಂಭವಾಗುವುವು. ಬಂಧುಗಳೊಂದಿಗೆ ಅಸಮಾಧಾನ ಉಂಟಾಗಬಹುದು. ಕುಟುಂಬದ ಸದಸ್ಯರಲ್ಲಿ ವಿರೋಧ ಅಭಿಪ್ರಾಯಗಳು ಮೂಡುವ ಸಂಭವ.

ನವಂಬರ್ ತಿಂಗಳಿನಿಂದ ವರ್ಷಾಂತ್ಯದವರೆಗೂ ಅನುಕೂಲ. ಅಭಿವೃದ್ಧಿ, ಯತ್ನ ಕಾರ್ಯ ಸಿದ್ಧಿ. ಶುಭ ಕಾರ್ಯಗಳಲ್ಲಿ ಪ್ರಗತಿ. ಕುಟುಂಬದಲ್ಲಿ ಹೊಂದಾಣಿಕೆ, ಉದ್ಯೋಗ, ವೃತ್ತಿಗಳಲ್ಲಿ ಒತ್ತಡ ನಿವಾರಣೆ, ಗಣ್ಯ ವ್ಯಕ್ತಿಗಳಿಂದ ಸಲಹೆ, ವಿದ್ಯಾಭ್ಯಾಸದಲ್ಲಿ ಯಶಸ್ಸು. ಅವಿವಾಹಿತರಿಗೆ ವಿವಾಹ ಯೋಗ, ನಿರುದ್ಯೋಗಿಗಳಿಗೆ ಉದ್ಯೋಗಪ್ರಾಪ್ತಿ, ವ್ಯಾಪಾರಿಗಳಿಗೆ ಹೆಚ್ಚಿನ ಲಾಭ ಪ್ರಾಪ್ತಿ.

ಪರಿಹಾರ: ಸೋಮವಾರ ಮತ್ತು ಗುರುವಾರ ಅರಳಿ ಮರಕ್ಕೆ ನಮಸ್ಕರಿಸಿ, ಪ್ರಾರ್ಥಿಸಿಕೊಳ್ಳಿ ಅಥವಾ ಪ್ರತಿದಿನ ಗುರು ಅಷ್ಟೋತ್ತರವನ್ನು ಪಠಿಸಿ.

ವೃಷಭ

ಅಕ್ಟೋಬರ್ ತಿಂಗಳಿನವರೆಗೂ ನಿರೀಕ್ಷೆಯಂತೆ ನಡೆಯುವ ಕಾರ್ಯ ಕಲಾಪಗಳು. ವಿರೋಧಿಗಳಿಗೆ ಹಿನ್ನಡೆ. ಶುಭ ಕಾರ್ಯ ಯೋಜನೆಗಳು, ವಿದ್ಯಾರ್ಥಿಗಳಿಗೆ ಮೇಲುಗೈ. ನ್ಯಾಯಾಲಯದ ವ್ಯವಹಾರಗಳು ಸಂತಸ ನೀಡುವುವು. ಗುರುಹಿರಿಯರಿಂದ ಮಾರ್ಗದರ್ಶನ ಲಭಿಸುವುದು. ದೈವೀಕತೆಯಲ್ಲಿ ಆಸಕ್ತಿ ವೃದ್ಧಿಯಾಗುವುದು. ಬರಬೇಕಾದ ಹಣ ಬರುವುದು. ದೀರ್ಘ ಕಾಲದ ತಕರಾರುಗಳು ಬಗೆಹರಿಯುವುದು. ವಿದೇಶಿ ವ್ಯವಹಾರಗಳು ಸುಗಮವಾಗಿ ನಡೆಯುವುದು.

ನವಂಬರ್ ತಿಂಗಳಿನಿಂದ ವರ್ಷಾಂತ್ಯದವೆರೆವಿಗೂ ಆಗಾಗ ಬೇಸರವಾಗುವ ಸಾಧ್ಯತೆ. ಕೆಲಸ ಕಾರ್ಯಗಳಲ್ಲಿ ತಪ್ಪುಗಳಾಗುವ ಸಂಭವ. ವ್ಯಾಪಾರ ವೃತ್ತಿಗಳಲ್ಲಿ ಲಾಭದ ಪ್ರಮಾಣ ಕಡಿಮೆಯಾಗುವುದು. ವಿದ್ಯಾರ್ಥಿಗಳಿಗೆ ಉತ್ಸಾಹ ಕಡಿಮೆಯಾಗುವುದು. ವಾಹನಗಳಿಂದ ಅನಿರೀಕ್ಷಿತ ಖರ್ಚು ಉಂಟಾಗುವುದು. ವಿರೋಧಿಗಳಿಂದ ತೊಂದರೆಯಾಗಬಹುದು. ಆಗಾಗ ಅನಾರೋಗ್ಯವಾಗಿ ಮನೋಬಲದ ಕೊರತೆಯಾಗಬಹುದು.

ಪರಿಹಾರ: ಪ್ರತಿದಿನ ಗುರು ಅಷ್ಟೋತ್ತರ ಪಠಿಸಿ. ಪ್ರತಿ ಶನಿವಾರ ಬನ್ನಿ ಮರಕ್ಕೆ ನಮಸ್ಕರಿಸಿ. ಸಾಧ್ಯವಿದ್ದವರು ಎಳ್ಳೆಣ್ಣೆಯನ್ನು ಶುಕ್ರವಾರದ ದಿನ ಯಾವುದೇ ದೇವಿ ದೇವಾಲಯಕ್ಕೆ ಕೊಡಿ.

ಮಿಥುನ

ಅಕ್ಟೋಬರ್ ತಿಂಗಳಿನವರೆಗೂ ಯಾವುದಾದರೂ ವಿಚಾರದಲ್ಲಿ ಬೇಸರವಾಗಬಹುದು. ನಿರೀಕ್ಷಿಸಿದ ಸಮಯಕ್ಕೆ ಕೆಲಸ ಕಾರ್ಯಗಳು ಮುಗಿಯುವುದಿಲ್ಲ. ಕುಟುಂಬದ ಸದಸ್ಯರಲ್ಲಿ ಹೊಂದಾಣಿಕೆ ಕೊರತೆಯಾಗುವುದು. ಅಧ್ಯಯನದಲ್ಲಿ ಹೆಚ್ಚಿನ ಫಲ ದೊರೆಯದಿರಬಹುದು. ಖರ್ಚು ಹೆಚ್ಚಾಗುವುದು. ಸಮಯಕ್ಕೆ ಸರಿಯಾಗಿ ಊಟ, ಉಪಚಾರಗಳನ್ನು ಸೇವಿಸಲಾಗುವುದಿಲ್ಲ. ಪಾಲುದಾರಿಕೆ ವ್ಯವಹಾರಗಳಲ್ಲಿ ವಾದವಿವಾದ ಸಾಧ್ಯತೆ. ಬಂಧು ಮಿತ್ರರಿಂದ ಸಮಯಕ್ಕೆ ಸರಿಯಾಗಿ ಸಹಕಾರ ದೊರೆಯುವುದಿಲ್ಲ.

ನವೆಂಬರ್ ತಿಂಗಳಿನಿಂದ ವರ್ಷಾಂತ್ಯದವರೆಗೂ ಅನುಕೂಲ, ಶ್ರಮವಿಲ್ಲದೆ ಯತ್ನ ಕಾರ್ಯ ಕೈಗೂಡುವುದು. ಉದ್ಯೋಗ ವೃತ್ತಿಗಳಲ್ಲಿ ಅಧಿಕಾರಿ ವರ್ಗದವರಿಂದ ಪ್ರಶಂಸೆ. ವ್ಯಾಪಾರಿಗಳಿಗೆ ಹೆಚ್ಚಿನ ಲಾಭ. ನ್ಯಾಯಾಲಯದ ವ್ಯವಹಾರಗಳಲ್ಲಿ ಪ್ರಗತಿ. ಬಂಧುಗಳಿಂದ ಸಹಾಯ, ನೂತನ ವಾಹನ ಖರೀದಿ ಯೋಜನೆ. ಅವಿವಾಹಿತರಿಗೆ ವಿವಾಹ ಯೋಗ. ಹಿಂದಿನ ಸಮಸ್ಯೆಗಳಿಗೆ ಸುಲಭ ಪರಿಹಾರಗಳು ದೊರಕುವುದು.

ಪರಿಹಾರ: 1. ಕುಲದೇವರ ದರ್ಶನ ಪಡೆಯುತ್ತಿರಿ, 2. ಇಷ್ಟ ಗುರುಗಳ ದೇವಾಲಯಕ್ಕೆ ವಾರದಲ್ಲಿ ಒಂದು ಸಾರಿ ಹೂವನ್ನು ಕೊಡಿ, 3. ಗುರುವಾರ ಸ್ವಲ್ಪ ಕಡಲೆಕಾಳನ್ನು ದಾನ ಮಾಡಿ.

ಕಟಕ

ವರ್ಷಾದಿಯಿಂದ ಅಕ್ಟೋಬರ್ ತಿಂಗಳಿನವರೆಗೂ ಸಮಾಧಾನ. ತಾಳ್ಮೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳುವಿಕೆ, ಉದ್ಯೋಗ ವೃತ್ತಿಗಳಲ್ಲಿ ಪ್ರಗತಿ. ಹಿರಿಯರೊಂದಿಗೆ ಸಮಾಲೋಚನೆ. ವಾಹನ ಖರೀದಿ, ಗೃಹ ನಿರ್ಮಾಣದ ಯೋಜನೆಗಳು, ವಿರೋಧಿಗಳು ತಟಸ್ಥರಾಗುವರು, ವಿದ್ಯಾರ್ಥಿಗಳಿಗೆ ಅನುಕೂಲ. ನ್ಯಾಯಾಲಯದ ವಿಚಾರದಲ್ಲಿ ಮುನ್ನಡೆ, ಆತ್ಮೀಯರಿಂದ ಸಹಾಯ. ಅಪಾಯಗಳಿಂದ ಪಾರಾಗುವಿಕೆ.

ನವೆಂಬರ್ ತಿಂಗಳಿನಿಂದ ವರ್ಷಾಂತ್ಯದವರೆಗೂ ಆಗಾಗ ಒತ್ತಡ. ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವಿಕೆ, ಕೆಲಸ ಕಾರ್ಯಗಳಲ್ಲಿ ಅಡಚಣೆ. ಆರೋಗ್ಯದಲ್ಲಿ ವ್ಯತ್ಯಯವಾಗುವ ಸಾಧ್ಯತೆ. ಅನಾವಶ್ಯಕ ತಿರುಗಾಟ. ಅಪರಿಚಿತರಿಂದ ತೊಂದರೆ. ಬಂಧು–ಮಿತ್ರರೊಂದಿಗೆ ವಾದ ವಿವಾದ. ಬೇಡವಾದ ವಸ್ತುಗಳ ಖರೀದಿಯಿಂದ ಖರ್ಚು. ವಿದ್ಯಾಭ್ಯಾಸದಲ್ಲಿ  ಆಸಕ್ತಿ. ಕಡಿಮೆಯಾಗುವುದು.

ಪರಿಹಾರ: ಪ್ರತಿದಿನ ಶಿವ/ವಿಷ್ಣು ಅಷ್ಟೋತ್ತರವನ್ನು ಪಠಿಸಿ. ಪ್ರತಿ ಗುರುವಾರ ಇಷ್ಟ ಗುರುಗಳ ದೇವಾಲಯಕ್ಕೆ ಹೂವು ಕೊಡಿ. ಗುರುಹಿರಿಯರಿಗೆ ಸಾಧ್ಯವಾದಾಗ ನಮಸ್ಕರಿಸಿ.

ಸಿಂಹ

ಅಕ್ಟೋಬರ್ ತಿಂಗಳಿನವರೆಗೂ ಕೆಲಸ ಕಾರ್ಯಗಳಲ್ಲಿ ಅಲ್ಪಸ್ವಲ್ಪ ಸಮಸ್ಯೆಗಳಿರುತ್ತದೆ. ವ್ಯಾಪಾರದಲ್ಲಿ ಹೆಚ್ಚಿನ ಲಾಭವಿರುವುದಿಲ್ಲ. ವಿದ್ಯಾರ್ಥಿಗಳಿಗೆ ಏಕಾಗ್ರತೆಯ ಕೊರತೆಯಾಗಿ ಅಂಕಗಳಿಸಲು ಶ್ರಮ ವಹಿಸಬೇಕಾಗುತ್ತದೆ. ಮಕ್ಕಳಿಂದ ಆಗಾಗ ಒತ್ತಡ ಉಂಟಾಗಬಹುದು. ಖರ್ಚು ಹೆಚ್ಚಾಗುವುದು. ವಿಪರೀತ ಶ್ರಮದಿಂದ ನಿದ್ರಾಭಂಗವಾಗುವ ಸಂಭವ.

ನವೆಂಬರ್ ತಿಂಗಳಿನಿಂದ ವರ್ಷಾಂತ್ಯದವರೆಗೂ ಸೌಖ್ಯ. ವೃತ್ತಿ ವ್ಯವಹಾರಗಳಲ್ಲಿ ಸಫಲತೆ. ಲೇವಾದೇವಿಗಳಲ್ಲಿ ನಿರೀಕ್ಷಿತ ಲಾಭ. ನಿವೇಶನ ಖರೀದಿ ಯತ್ನ. ದೀರ್ಘ ಕಾಲದ ಕಾರ್ಯಗಳು ಸಂಪೂರ್ಣವಾಗುವುದು. ಮಕ್ಕಳ ಪ್ರಗತಿ ಕಂಡು ಬರುವುದು, ತಕರಾರುಗಳು ಬಗೆಹರಿಯುವುದು. ಹಣದ ವ್ಯವಹಾರಗಳಲ್ಲಿ ಅಭಿವೃದ್ಧಿಯಾಗುವುದು. ಗುರು ಹಿರಿಯರಿಂದ ಸೂಕ್ತ ಮಾರ್ಗದರ್ಶನ ಲಭಿಸುವುದು.

ಪರಿಹಾರ: ಪ್ರತಿದಿನ ಗಣಪತಿ ಮಂತ್ರವನ್ನು ಪಠಿಸಿ. ಪ್ರತಿ ಬುಧವಾರ ಬನ್ನಿ ವೃಕ್ಷಕ್ಕೆ ನಮಸ್ಕರಿಸಿ. ವಾರದಲ್ಲಿ ಒಂದು ದಿನ ಕುಲದೇವರಿಗೆ ಸ್ವಲ್ಪ ಹೂವನ್ನು ಕೊಡಿ.

ಕನ್ಯಾ

ಅಕ್ಟೋಬರ್‌ ತಿಂಗಳಿನವರೆಗೂ ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ವ್ಯಾಪಾರದಲ್ಲಿ ಅಲ್ಪ ಸ್ವಲ್ಪ ಲಾಭ, ವಿಪರೀತ ಶ್ರಮ, ಕುಟುಂಬ ಸದಸ್ಯರಲ್ಲಿ ಆಗಾಗ ಮನಃಸ್ತಾಪ‍ ಉಂಟಾಗಬಹುದು, ಆಟ ಪಾಠಗಳಲ್ಲಿ ಆಸಕ್ತಿ ಕಡಿಮೆಯಾಗುವುದು. ಅಕಾಲ ಭೋಜನ. ಅನಾವಶ್ಯಕ ತಿರುಗಾಟ. ಮನೋಬಲ ಕಡಿಮೆಯಾಗುವುದು. ಅನಾವಶ್ಯಕ ಖರೀದಿಯಿಂದ ಹಣದ ಮುಗ್ಗಟ್ಟು, ವಿರೋಧಿಗಳು ಸಮಸ್ಯೆ ಉಂಟು ಮಾಡಬಹುದು.

ನವೆಂಬರ್ ತಿಂಗಳಿನಿಂದ ವರ್ಷಾಂತ್ಯದವರೆಗೂ ಸಮಾದಾನ, ಉದ್ಯೋಗದಲ್ಲಿ ಮುನ್ನಡೆ, ವ್ಯಾಪಾರ ವ್ಯವಹಾರದಲ್ಲಿ ಲಾಭ. ಪ್ರಯಾಣ ಹೆಚ್ಚಳ. ಮಿತ್ರರು ಸಹಕಾರ ನೀಡುವರು. ಸಾಧು ಸಂತರ ಭೇಟಿಯಿಂದ ಮನೋಬಲ ಹೆಚ್ಚಾಗುವುದು. ವಿರೋಧಿಗಳು ರಾಜಿಗೆ ಯತ್ನಿಸುವರು. ಅಧ್ಯಯನದಲ್ಲಿ ಆಸಕ್ತಿ ವೃದ್ಧಿಯಾಗುವುದು. ದೈವೀಕತೆಯಲ್ಲಿ ತೊಡಗುವ ಮನಸ್ಸಾಗುವುದು.

ಪರಿಹಾರ: ಪ್ರತಿದಿನ ಗಣಪತಿ ಮಂತ್ರ ‍ಪಠಿಸಿರಿ. ಪ್ರತಿ ಗುರುವಾರ ಗುರುಗಳ ದೇವಾಲಯಕ್ಕೆ ಭೇಟಿ ನೀಡಿ. ಕೆಲಸ ಆರಂಭಿಸುವ ಮುನ್ನ ಕುಲದೇವರ ಸ್ಮರಣೆ ಮಾಡಿಕೊಳ್ಳಿ.

ತುಲಾ

ಅಕ್ಟೋಬರ್ ತಿಂಗಳಿನವರೆಗೂ ಅನುಕೂಲ. ಅಭಿವೃದ್ಧಿ, ಇಷ್ಟಾರ್ಥ ಸಿದ್ದಿ. ಉದ್ಯೋಗ ವೃತ್ತಿಗಳಲ್ಲಿ ಪ್ರಗತಿ, ವ್ಯಾಪಾರದಲ್ಲಿ ಲಾಭ. ಬಂಧುಗಳಿಂದ ಸಹಾಯ, ಗೌರವ ಪ್ರಾಪ್ತಿ. ಗುರುಹಿರಿಯರಿಂದ ಸಲಹೆ, ದೇವತಾ ಕ್ಷೇತ್ರ ದರ್ಶನ. ಶುಭ ಕಾರ್ಯಗಳಲ್ಲಿ ಭಾಗವಹಿಸುವಿಕೆ. ತಕರಾರುಗಳಲ್ಲಿ ನ್ಯಾಯಪ್ರಾಪ್ತಿ. ವಿರೋಧಿಗಳಿಗೆ ಸೋಲು, ವಾಹನ, ನಿವೇಶನ ಖರೀದಿ ಯೋಚನೆ. ಹಿತ ಸುದ್ಧಿಗಳಿಂದ ಮನೋಬಲ ಹೆಚ್ಚಾಗುವುದು.

ನವೆಂಬರ್ ತಿಂಗಳಿನಿಂದ ವರ್ಷಾಂತ್ಯದವರೆಗೂ ಕೆಲಸ ಕಾರ್ಯಗಳು ಮಂದಗತಿಯಲ್ಲಿ ನಡೆಯುವುದು. ಅನಾವಶ್ಯಕ ತಿರುಗಾಟದಿಂದ ಶ್ರಮ, ವ್ಯಾಪಾರದಲ್ಲಿ ಅಲ್ಪ ಸ್ವಲ್ಪ ಲಾಭದ ಕೊರತೆ. ಮಿತ್ರದಿಂದ ಸಣ್ಣಪುಟ್ಟ ಸಮಸ್ಯೆ. ವಾಹನಗಳಿಂದ ಅನಿರೀಕ್ಷಿತ ಖರ್ಚು. ಕುಟುಂಬ ಸದಸ್ಯರಲ್ಲಿ ವಾದ ವಿವಾದಗಳಾಗಬಹುದು. ಆರೋಗ್ಯದಲ್ಲಿ ವ್ಯತ್ಯಯವಾಗುವ ಸಾಧ್ಯತೆ. ಅಧಿಕಾರಿಗಳ ಭೇಟಿಗೆ ವಿಳಂಭವಾಗುವುದು.

ಪರಿಹಾರ: ಪ್ರತಿ ಗುರುವಾರ ಸ್ವಲ್ಪ ಕಡಳೆಕಾಳನ್ನು ದಾನ ಮಾಡಿ. ಪ್ರತಿ ದಿನ ನಿಮ್ಮ ಇಷ್ಟ ಗುರುಗಳ ಮಂತ್ರ ಪಠಿಸಿ, ಪ್ರತಿ ಸೋಮವಾರ ಗುರುಗಳ ದೇವಾಲಯಕ್ಕೆ ಹೂವನ್ನು ಕೊಡಿ.

ವೃಶ್ಚಿಕ

ಅಕ್ಟೋಬರ್ ತಿಂಗಳಿನವರೆಗೂ ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ವ್ಯಾಪಾರದಲ್ಲಿ ನಷ್ಟವಾಗುವ ಸಂಭವ, ವಿಪರೀತ ಖರ್ಚು. ಅಪರಿಚಿತರಿಂದ ತೊಂದರೆ. ಶ್ರಮ ಹೆಚ್ಚಾಗುವುದು. ಉದ್ಯೋಗ ಸ್ಥಳ ಬದಲಾಗುವ ಸಾಧ್ಯತೆ. ವಾಹನಗಳು ದುರಸ್ಥಿಗೆ ಬರಬಹುದು. ಆಗಾಗ ಒತ್ತಡ ಉಂಟು ಮಾಡುವ ಸನ್ನಿವೇಶಗಳು, ಶುಭ ಕಾರ್ಯಗಳಲ್ಲಿ ಅಲ್ಪ ಸ್ವಲ್ಪ ಹಿನ್ನಡೆ. ಅಧ್ಯಯನದಲ್ಲಿ ಆಸಕ್ತಿ ಕಡಿಮೆಯಾಗುವುದು.

ನವೆಂಬರ್ ತಿಂಗಳಿನಿಂದ ವರ್ಷಾಂತ್ಯದವರೆಗೂ ಸಮಾಧಾನ. ನಿರೀಕ್ಷೆಯಂತೆ ಕಾರ್ಯಸಿದ್ಸಿಸಿದ್ಧಿ. ವ್ಯಾಪಾರದಲ್ಲಿ ಹೆಚ್ಚಿನ ಲಾಭದಿಂದ ಉತ್ಸಾಹ ಹಾಗೂ ನೂತನ ವ್ಯಾಪಾರ ಚಿಂತನೆ. ಕುಟುಂಬದಲ್ಲಿ ಹೊಂದಾಣಿಕೆ. ಹಣದ ಸಮಸ್ಯೆ ಬಗೆಹರಿಯುವುದು. ಹಿಂದಿನ ಆಲೋಚನೆಗಳಲ್ಲಿ ಸಫಲತೆ, ವಿರೋಧಿಗಳೊಂದಿಗೆ ರಾಜಿ ಸಂಭವ. ಅಮೂಲ್ಯ ವಸ್ತುಗಳ ಖರೀದಿ ಯೋಚನೆಗಳು. 

ಪರಿಹಾರ: ಹಿರಿಯರಿಗೆ ನಮಸ್ಕರಿಸಿ ಆಶೀರ್ವಾದ ಪಡೆದುಕೊಳ್ಳಿ. ಅರಳಿ ಎಲೆಯನ್ನು ಪೂಜಿಸಿ, ಅರಳಿ ಮರಕ್ಕೆ ನಮಸ್ಕರಿಸಿ, ವಿಷ್ಣು ಅಷ್ಟೋತ್ತರ ನಿತ್ಯವೂ ಪ‍ಠಿಸಿ.

ಧನಸ್ಸು

ಅಕ್ಟೋಬರ್‌ ತಿಂಗಳಿನವರೆಗೂ ಯತ್ನ ಕಾರ್ಯಗಳಲ್ಲಿ ಹಿನ್ನಡೆ. ಅನಾವಶ್ಯಕ ಖರ್ಚು. ಲೇವಾದೇವಿಗಳಲ್ಲಿ ಲಾಭದ ಕೊರತೆ, ಕೋಪ ಉಂಟಾಗುವ ಸನ್ನಿವೇಶಗಳು, ಬಂಧುಗಳಿಂದ ಒತ್ತಡ. ವಾಹನಗಳಿಂದ ಅನಿರೀಕ್ಷಿತ ಖರ್ಚು. ವಿರೋಧಿಗಳೊಂದಿಗೆ ಕಲಹ ಸಂಭವ. ಸಂಘ ಸಂಸ್ಥೆಗಳಿಂದ ದೊರೆಯಬೇಕಾದ ಅನುಕೂಲತೆಗಳಲ್ಲಿ ವಿಳಂಭ. ಆರೋಗ್ಯದಲ್ಲಿ ಸಣ್ಣಪುಟ್ಟ ವ್ಯತ್ಯಯ. 

ನವೆಂಬರ್ ತಿಂಗಳಿನಿಂದ ವರ್ಷಾಂತ್ಯದವರೆಗೂ ಅನುಕೂಲ. ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು. ವೃತ್ತಿ ವ್ಯವಹಾರಗಳಲ್ಲಿ ಮುನ್ನಡೆ, ಕ್ರಯ ವಿಕ್ರಯಗಳಲ್ಲಿ ಲಾಭ. ಖರ್ಚು ನಿಯಂತ್ರಣಕ್ಕೆ ಬರುವುದು. ಗೃಹ ಬದಲವಣೆ ಚಿಂತನೆ, ಉದ್ಯೋಗ ಬದಲಾವಣೆಯಾಗುವ ಸಂಭವ, ಗುರುಹಿರಿಯರ ದರ್ಶನ, ಶುಭ ಕಾರ್ಯಗಳಲ್ಲಿ ಪ್ರಗತಿ. ಅಧ್ಯಯನದಲ್ಲಿ ಮೇಲುಗೈ.

ಪರಿಹಾರ: 1. ಪ್ರತಿದಿನ ಗುರು ಅಷ್ಟೋತ್ತರ ಪಠಿಸಿ, 2. ಅರಳಿ ಮರಕ್ಕೆ ನಮಸ್ಕರಿಸಿ, (ಕನಿಷ್ಠ ವಾರದಲ್ಲಿ ಒಂದು ದಿನ), 3. ಕುಲದೇವರ ದೇವಾಲಯಕ್ಕೆ ಭೇಟಿ ನೀಡಿ.

ಮಕರ

ಅಕ್ಟೋಬರ್‌ ತಿಂಗಳಿನವರೆಗೂ ಸಮಾಧಾನ, ಸೌಖ್ಯ. ಶುಭ ಕಾರ್ಯಗಳು ನಡೆಯುವಿಕೆ. ಉದ್ಯೋಗದಲ್ಲಿ ಮನಃಶಾಂತಿ, ವ್ಯಾಪಾರದಲ್ಲಿ ಸೂಕ್ತ ಲಾಭ. ಮಿತ್ರರಿಂದ ಸಹಾಯ, ಬಂಧುಗಳೊಡನೆ ವಿಶ್ವಾಸ, ವಿದೇಶಿ ವ್ಯವಹಾರಗಳಲ್ಲಿ ಮುನ್ನಡೆ. ದೈವಿಕತೆಯಲ್ಲಿ ಆಸಕ್ತಿ. ವಿದ್ಯಾಭ್ಯಾಸದಲ್ಲಿ ಮೇಲುಗೈ. ಗೌರವ ಪ್ರಶಸ್ತಿಗಳು ಪ್ರಾಪ್ತಿ. ವಿರೋಧಿಗಳು ಹಿಂದೆ ಸರಿಯುವರು.

ನವೆಂಬರ್ ತಿಂಗಳಿನಿಂದ ವರ್ಷಾಂತ್ಯದವರೆಗೂ ಅಧಿಕ ಶ್ರಮ, ಅನಾವಶ್ಯಕ ಖರ್ಚು. ಕೆಲಸ ಕಾರ್ಯಗಳಲ್ಲಿ ಮಂದಗತಿ. ಸಂದೇಶಗಳು ಒತ್ತಡ ಉಂಟು ಮಾಡಬಹುದು. ವ್ಯಾಪಾರದಲ್ಲಿ ಲಾಭ ಇಳಿಕೆಯಾಗುವ ಸಾಧ್ಯತೆ. ಮಕ್ಕಳು ವಿರೋಧವಾಗಿ ನಡೆಯುವರು. ವಾಹನಗಳು ದುರಸ್ಥಿಗೆ ಬರುವ ಸಂಭವ. ಆತ್ಮೀಯರಿಗೂ ಏನಾದರೊಂದು ಸಮಸ್ಯೆ. ಅಧಿಕಾರಿಗಳ ಭೇಟಿಗೆ ಅಡಚಣೆ.

ಪರಿಹಾರ: 1. ಪ್ರತಿದಿನ ದತ್ತಾತ್ರೇಯ ಮಂತ್ರ ಪಠಿಸಿರಿ. 2. ಶನಿವಾರ ದೇವಾಲಯಕ್ಕೆ (ದೀಪಕ್ಕೆ) ಸ್ವಲ್ಪ ಎಣ್ಣೆ ಕೊಡಿ. 3. ಕುಲದೇವರನ್ನು ಪೂಜಿಸಿ.

ಕುಂಭ

ಅಕ್ಟೋಬರ್‌ ತಿಂಗಳಿನವರೆಗೂ ಅನುಕೂಲ, ಅಭಿವೃದ್ಧಿ. ಅಧಿಕಾರಿಗಳಿಂದ ಹೊಗಳಿಕೆ.  ಸುಸೂತ್ರವಾಗಿ ನಡೆಯುವ ಕೆಲಸ ಕಾರ್ಯಗಳು. ವ್ಯಾಪಾರದಲ್ಲಿ ಲಾಭ, ವಿದೇಶಿ ವ್ಯವಹಾರಗಳಲ್ಲಿ ಪ್ರಗತಿ, ದೇವತಾ ಕಾರ್ಯಗಳಲ್ಲಿ ಸಫಲತೆ. ಬಂಧು–ಮಿತ್ರರಿಂದ ಸಹಕಾರ. ನೂತನ ವಾಹನ ಖರೀದಿ ಯೋಗ. ಗೃಹ ನವೀಕರಣ ಯೋಜನೆಗಳು. ನ್ಯಾಯಾಲಯದ ವ್ಯವಹಾರಗಳಲ್ಲಿ ಸಮಾಧಾನ. ಅಧ್ಯಯನದಲ್ಲಿ ಮುನ್ನಡೆ.

ನವೆಂಬರ್ ತಿಂಗಳಿನಿಂದ ವರ್ಷಾಂತ್ಯದವರೆಗೂ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವಿಕೆ. ಮನಃಶಾಂತಿ, ಉದ್ಯೋಗದಲ್ಲಿ ಬಡ್ತಿ ಸಂಭವ. ಅನಾವಶ್ಯಕ ಖರ್ಚು ತಪ್ಪುವುದು. ವ್ಯಾಪಾರದಲ್ಲಿ ಅಧಿಕ ಲಾಭ. ಮಕ್ಕಳಿಂದ ಸಂತೋಷ, ಹಿರಿಯರಿಂದ ಗೌರವ, ವಿರೋಧಿಗಳು ಶರಣಾಗುವ ಸಂಭವ. ದೇವತಾ ಕ್ಷೇತ್ರ ದರ್ಶನ, ವಿದ್ಯಾರ್ಥಿಗಳಿಗೆ ಉತ್ತಮ ಸಮಯ.

ಪರಿಹಾರ: 1. ಪ್ರತಿದಿನ ಗುರು ಮಂತ್ರವನ್ನು ಪಠಿಸಿ, 2. ಕುಲದೇವರ ಪೂಜೆ ಮಾಡಿ

ಮೀನ

ಅಕ್ಟೋಬರ್ ತಿಂಗಳಿನವರೆಗೂ ಆಗಾ‌ಗ ಅಶಾಂತಿ. ಕೆಲಸ ಕಾರ್ಯಗಳಲ್ಲಿ ಮಂದಗತಿ. ಮಿತ್ರರಿಂದ ಅಸಹಾಕರ, ಖರ್ಚು ಅಧಿಕವಾಗುವುದು. ಶ್ರಮ ಹೆಚ್ಚಾಗಿ ನಿದ್ರಾಹೀನತೆಯಾಗುವುದು.  ವ್ಯಾಪಾರದಲ್ಲಿ ಪೈಪೋಟಿಯಿಂದ ಹಿನ್ನಡೆ, ವಿರೋಧಿಗಳಿಂದ ಸಮಸ್ಯೆ ಉಂಟಾಗಬಹುದು. ವಿದ್ಯಾಭ್ಯಾಸದಲ್ಲಿ ಏಕಾಗ್ರತೆಯ ಕೊರತೆ, ವಾಹನಗಳಿಂದ ಸಣ್ಣಪುಟ್ಟ ಸಮಸ್ಯೆ. ಆರೋಗ್ಯದಲ್ಲಿ ವ್ಯತ್ಯಯ ಸಂಭವ.

ನವೆಂಬರ್ ತಿಂಗಳಿನಿಂದ ವರ್ಷಾಂತ್ಯದವರೆಗೂ ಮನಃಶಾಂತಿ. ಗೃಹ ಬದಲಾವಣೆ ಚಿಂತನೆ. ಹಿರಿಯರಿಂದ ಮಾರ್ಗದರ್ಶನ, ಉದ್ಯೋಗ ವೃತ್ತಿಗಳಲ್ಲಿ ಸಹೋದ್ಯೋಗಿಗಳಿಂದ ಸಹಕಾರ, ವ್ಯಾಪಾರದಲ್ಲಿ ಲಾಭ ಪ್ರಾಪ್ತಿ. ಸಾಧುಸಂತರ ದರ್ಶನ. ದೇವತಾ ಕಾರ್ಯಗಳಲ್ಲಿ ಪ್ರಗತಿ. ತಾಳ್ಮೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳುವಿಕೆ. ಆಟಪಾಠಗಳಲ್ಲೂ ಆಸಕ್ತಿ ಹೆಚ್ಚಾಗುವುದು. ಮಕ್ಕಳಿಂದ ಸಹಾಯ.

ಪರಿಹಾರ: 1. ಪ್ರತಿದಿನ ಗುರು ಮಂತ್ರವನ್ನು ಪಠಿಸಿ, 2. ಪ್ರತಿ ಗುರುವಾರ ಗುರು ದೇವಾಲಯಕ್ಕೆ ಸ್ವಲ್ಪ ಹೂವನ್ನು ಕೊಡಿ. 3. ಬನ್ನಿ ಮರಕ್ಕೆ ಶನಿವಾರದ ದಿನ ನಮಸ್ಕರಿಸಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು