ಸೋಮವಾರ, ಅಕ್ಟೋಬರ್ 21, 2019
26 °C
ಸಿರಿಯಾ ಆರೋಪ ನಿರಾಕರಿಸಿದ ಟರ್ಕಿ, ರಾಸ್ ಅಲ್‌ ಐನ್‌ ಪಟ್ಟಣ ವಶ

ಅಮೆರಿಕ ಸೇನೆ ಗುರಿಯಾಗಿಸಿ ದಾಳಿ

Published:
Updated:
Prajavani

ವಾಷಿಂಗ್ಟನ್‌: ‘ಸಿರಿಯಾದ ಉತ್ತರ ಗಡಿಯಲ್ಲಿ ನಿಯೋಜಿಸಲಾಗಿರುವ ತನ್ನ ಸೇನೆಯ ಮೇಲೆ ಟರ್ಕಿ ಸೇನೆ ದಾಳಿ ನಡೆಸಿದೆ’ ಎಂದು ಪೆಂಟಗನ್‌ನ ವಕ್ತಾರರು ಶನಿವಾರ ತಿಳಿಸಿದ್ದಾರೆ.

‘ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಲು ಹಾಗೂ ರಕ್ಷಣಾ ಕ್ರಮ ಕೈಗೊಳ್ಳಲು ಅಮೆರಿಕ ಸೇನೆ ಸಿದ್ಧವಿದೆ’ ಎಂದೂ ಎಚ್ಚರಿಸಿದ್ದಾರೆ.

ಗಡಿ ಭಾಗದ ಕೊಬನಿ ಎಂಬಲ್ಲಿ ತಾನು ಸೇನೆಯನ್ನು ನಿಯೋಜಿಸಿದ್ದ ಸ್ಥಳಕ್ಕೆ ಕೆಲವೇ ಮೀಟರ್‌ಗಳ ಅಂತರದಲ್ಲಿ ಸ್ಫೋಟ ಸಂಭವಿಸಿದೆ ಎಂಬುದನ್ನು ಅಮೆರಿಕ ಸೇನೆ ದೃಢಪಡಿಸಿದೆ.

‘ಆದರೆ, ಈ ಸ್ಫೋಟದಿಂದ ಸೇನೆಗೆ ಯಾವುದೇ ರೀತಿಯ ಧಕ್ಕೆಯಾಗಿಲ್ಲ. ಕೊಬನಿ ಭಾಗದಿಂದ ಕೂಡಲೇ ಸೇನೆ
ಯನ್ನು ವಾಪಸು ಕರೆಸಲಾಗಿದೆ’ ಎಂದು ನೌಕಾಪಡೆ ಕ್ಯಾಪ್ಟನ್‌ ಬ್ರೂಕ್‌ ಡೆವಾಲ್ಟ್‌ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇಸ್ಲಾಮಿಕ್‌ ದೇಶವನ್ನು ಹತ್ತಿಕ್ಕುವ ಯತ್ನದಲ್ಲಿ ಅಮೆರಿಕ ಜೊತೆ ಕೈಜೋಡಿಸಿರುವ ಸಿರಿಯನ್‌ ಡೆಮಾಕ್ರಟಿಕ್‌ ಫೋರ್ಸ್‌ (ಎಸ್‌ಡಿಎಫ್‌) ಅನ್ನು ಗುರಿಯಾಗಿಸಿ ಟರ್ಕಿ ಪ್ರಮುಖವಾಗಿ ದಾಳಿ ನಡೆಸುತ್ತಿದೆ. ಐದು ವರ್ಷಗಳ ಅವಧಿಯಲ್ಲಿ ಎಸ್‌ಡಿಎಫ್‌ನ ಸುಮಾರು 11, 000 ಯೋಧರು ಚಕಮಕಿಯಲ್ಲಿ ಮೃತಪಟ್ಟಿದ್ದಾರೆ.

ಟರ್ಕಿ ನಿರಾಕರಣೆ: ಆದರೆ, ಸಿರಿಯಾ ಗಡಿಯಲ್ಲಿ ಅಮೆರಿಕ ಸೇನೆಯನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂಬ ಹೇಳಿಕೆಯನ್ನು ಟರ್ಕಿ ನಿರಾಕರಿಸಿದೆ.

‘ಅಂಥ ಯಾವುದೇ ದಾಳಿ ನಡೆದಿಲ್ಲ’ ಎಂದು ಟರ್ಕಿ ರಕ್ಷಣಾ ಸಚಿವ ಹುಲುಸಿ ಅಕರ್‌ ಹೇಳಿಕೆ ನೀಡಿದ್ದಾರೆ.

ಪಾಕಿಸ್ತಾನ ಬೆಂಬಲ: ಈ ನಡುವೆ, ಸಿರಿಯಾ ಗಡಿಯಲ್ಲಿ ಕುರ್ದಿಶ್‌ ಪಡೆ ಮೇಲೆ ಟರ್ಕಿ ನಡೆಸಿದ ಕಾರ್ಯಾಚರಣೆಗೆ ಪಾಕಿಸ್ತಾನ ಬೆಂಬಲ ವ್ಯಕ್ತಪಡಿಸಿದೆ.

ಟರ್ಕಿಯಿಂದ ಪಟ್ಟಣ ವಶ: ಈ ನಡುವೆ, ಸಿರಿಯಾ ಗಡಿಯಲ್ಲಿ ಇರುವ ರಾಸ್‌ ಅಲ್‌ ದಿನ್‌ ಪಟ್ಟಣವನ್ನು ತನ್ನ ಸೇನೆಯು ವಶಕ್ಕೆ ತೆಗೆದುಕೊಂಡಿದೆ ಎಂದು ಟರ್ಕಿಯ ರಕ್ಷಣಾ ಸಚಿವಾಲಯ ಪ್ರಕಟಿಸಿದೆ.

ಕಾರ್ಯಾಚರಣೆಯು ಯಶಸ್ವಿಯಾಗಿದ್ದು, ರಾಸ್ ಅಲ್‌ ಐನ್‌ ಪಟ್ಟಣ ಪ್ರದೇಶವನ್ನು ಸೇನೆಯು ಪೂರ್ಣವಾಗಿ ವಶಕ್ಕೆ ಪಡೆದಿದೆ ಎಂದು ತಿಳಿಸಿದೆ.

10 ನಾಗರಿಕರ ಸಾವು ( ಬೈರೂತ್‌ ವರದಿ): ಸಿರಿಯಾ ಗಡಿ ಭಾಗದಲ್ಲಿ ಶನಿವಾರ ಟರ್ಕಿಯ ಆಕ್ರಮಣದ ಭಾಗವಾಗಿ ಅಂಕಾರ ಪಡೆಗಳು ನಡೆಸಿದ ಬಾಂಬ್‌ ದಾಳಿಯಲ್ಲಿ 10 ಮಂದಿ ನಾಗರಿಕರು ಸತ್ತಿದ್ದು, ಮೃತರ ಸಂಖ್ಯೆ 28ಕ್ಕೆ ಏರಿದೆ.

ಟರ್ಕಿಯ ಕಾರ್ಯಾಚರಣೆ ನಾಲ್ಕನೇ ದಿನವೂ ಮುಂದುವರಿದಿದೆ. ವಾಯು ದಾಳಿ ಮೂಲಕ ರಾಸ್‌ ಅಲ್‌ ಐನ್‌ ನಗರದಲ್ಲಿ ನಡೆದ ಬಾಂಬ್‌ ದಾಳಿಯಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ.

Post Comments (+)