ತಗಡಿನ ಕೋಟೆ ಬದಲು ಜೈಲೇ ವಾಸಿ...!

7

ತಗಡಿನ ಕೋಟೆ ಬದಲು ಜೈಲೇ ವಾಸಿ...!

Published:
Updated:

ದಾವಣಗೆರೆ: ನಗರದ ಹೈಸ್ಕೂಲ್‌ ಮೈದಾನದಲ್ಲಿ ಜಿಲ್ಲಾಡಳಿತ ಶನಿವಾರ ತಾತ್ಕಾಲಿಕವಾಗಿ ‘ತಗಡಿನ ಕೋಟೆ’ ನಿರ್ಮಿಸಿ ಪೊಲೀಸ್‌ ಬಿಗಿ ಬಂದೋಬಸ್ತ್‌ನಲ್ಲಿ ಟಿಪ್ಪು ಸುಲ್ತಾನ್‌ ಜಯಂತಿ ಆಚರಿಸಿತು. ಕಾರ್ಯಕ್ರಮದಲ್ಲೇ ಇದಕ್ಕೆ ಟೀಕೆಗಳೂ ವ್ಯಕ್ತವಾದವು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿಧಾನಪರಿಷತ್‌ ಸದಸ್ಯ ಅಬ್ದುಲ್‌ ಜಬ್ಬಾರ್‌, ‘ಸ್ವಾತಂತ್ರ್ಯ ಹೋರಾಟಗಾರನ ಜಯಂತಿಯನ್ನು ಈ ರೀತಿ ಪೊಲೀಸ್‌ ಬಂದೋಬಸ್ತ್‌ನಲ್ಲಿ ಆಚರಿಸುವುದರ ಬದಲು ಯಾವುದಾದರು ಜೈಲಿನಲ್ಲೇ ಆಚರಿಸಬಹುದಿತ್ತು’ ಎಂದು ಅಸಮಾಧಾನ ಹೊರಹಾಕಿದರು.

‘ರಾಜಕೀಯ ಮಾಡುವವರಿಗೆ ಹೆದರಿಕೊಂಡು ಈ ರೀತಿ ಆಚರಿಸುವುದಾದರೆ ಮುಂದಿನ ವರ್ಷದಿಂದ ನಾವು ಯಾರೂ ಕಾರ್ಯಕ್ರಮಕ್ಕೆ ಬರುವುದಿಲ್ಲ. ನಮ್ಮ ನಮ್ಮ ಮನೆಯಲ್ಲೇ ಸಂಭ್ರಮದಿಂದ ಆಚರಿಸುತ್ತೇವೆ’ ಎಂದು ಬೆದರಿಕೆಯನ್ನೂ ಹಾಕಿದರು.

‘ಟಿಪ್ಪು ಜಯಂತಿ ಆಚರಿಸಿ ಎಂದು ನಾವೇನೂ ಕೇಳಿಕೊಂಡಿರಲಿಲ್ಲ. ಆದರೆ, ಸಿದ್ದರಾಮಯ್ಯ ಆಚರಣೆ ಆರಂಭಿಸಿದರು. ಈಗ ಹೆದರಿಕೊಂಡು ಜಯಂತಿ ಆಚರಿಸುವಂತಾಗಿದೆ’ ಎಂದು ಸರ್ಕಾರದ ನಿಲುವನ್ನು ಕಾಂಗ್ರೆಸ್‌ನ ವಿಧಾನ ಪರಿಷತ್‌ ಸದಸ್ಯ ಜಬ್ಬಾರ್‌ ಟೀಕಿಸಿದರು.

ಇದಕ್ಕೂ ಮೊದಲು ಸಣ್ಣ ಕೈಗಾರಿಕೆಗಳ ಸಚಿವ ಎಸ್‌.ಆರ್‌. ಶ್ರೀನಿವಾಸ್‌, ಪರೋಕ್ಷವಾಗಿ ಬಿಜೆಪಿ ನಾಯಕರ ಮೇಲೆ ಹರಿಹಾಯ್ದಿದ್ದರು. ‘ಈ ರೀತಿ ಟಿಪ್ಪು ಜಯಂತಿ ಆಚರಿಸುತ್ತಿರುವುದು ನಾಚಿಕೆಗೇಡಿನ ವಿಷಯ. ಜಯಂತಿ ವಿರೋಧಿಸುವವರು ಮುಸ್ಲಿಮರನ್ನು ದೇಶದಿಂದ ಹೊರ ಹಾಕಲಿ ನೋಡೋಣ’ ಎಂಬ ಸವಾಲನ್ನೂ ಎಸೆದಿದ್ದರು.

ನಾಯಕರ ಭಾಷಣದ ವಿಷಯವು ಟಿಪ್ಪುವಿನ ಸಾಧನೆಗಳಿಂತಲೂ ಹೆಚ್ಚಾಗಿ ಇಂದಿನ ‘ವಿವಾದ’ಗಳ ಸುತ್ತ ಹರಿದಾಡಿದ್ದು ಒಂದು ವಿಚಾರವಾದರೆ, ಜಯಂತಿ ಆಚರಣೆಯನ್ನು ಆರಂಭಿಸಿದ ಕಾಂಗ್ರೆಸ್‌ ಪಕ್ಷದ ವಿರುದ್ಧವೂ ಟೀಕಾಸ್ತ್ರಗಳು ಬಂದದ್ದು ವಿಪರ್ಯಾಸದ ಸಂಗತಿಯಾಗಿತ್ತು.

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !