ಹೊಸ ರೂಪದಲ್ಲಿ ಶ್ರೀವೇಣುಗೋಪಾಲನ ದರ್ಶನಕಾವೇರಿ ತೀರದಲ್ಲಿ‘ವೇಣು’ವಾದನ!

7

ಹೊಸ ರೂಪದಲ್ಲಿ ಶ್ರೀವೇಣುಗೋಪಾಲನ ದರ್ಶನಕಾವೇರಿ ತೀರದಲ್ಲಿ‘ವೇಣು’ವಾದನ!

Published:
Updated:

ಪಾಂಡವಪುರ ದಾಟುತ್ತಿದ್ದಂತೆ ಕಬ್ಬು, ಭತ್ತದ ಗದ್ದೆಗಳು, ತುಂಬಿ ಹರಿಯುವ ನಾಲೆಗಳು ಹಸಿರುದುಂಬಿ ಸ್ವಾಗತ ಕೋರುತ್ತವೆ. ಹರವು, ಕಟ್ಟೇರಿ, ಹೊಸಕನ್ನಂಬಾಡಿ ಮುಟ್ಟುತ್ತಿದ್ದಂತೆ ಜಲರಾಶಿ ಕಣ್ಣಿಗೆ ಕಟ್ಟುತ್ತದೆ. ಅದೆಲ್ಲೋ ಒಂದು ಕಡೆ, ದೂರದಲ್ಲಿ ನೀರು ಮತ್ತು ಆಗಸ ಒಂದಾಗಿ ಜುಗಲ್‌ಬಂದಿ ಹಾಡುತ್ತಿರುವಂತೆ ಭಾಸವಾಗುತ್ತದೆ.

ಮುಂಜಾನೆ–ಸಂಜೆ ಸೂರ್ಯ, ರಾತ್ರಿ ಚಂದ್ರನ ನೃತ್ಯದ ಸೊಬಗು ಮನಸ್ಸಿಗೆ ಮುದ ನೀಡುತ್ತದೆ. ಮೂರು ಕಡೆ ನೀರು, ಒಂದು ಕಡೆ ನೆಲ, ನಾವು ಬರಲೆಂದೇ ದೇವರು ಒಂದೆಡೆ ನೆಲ ಸೃಷ್ಟಿಸಿದ್ದಾನೆ. ಜಲರಾಶಿಯ ವಿಶಾಲ, ಕೆಳಗಿಳಿದು ಬಂದಿರುವ ಬಾನಿನ ನಡುವೆ ಶಾಂತಿಯ ತೋಟ ತಲೆ ಎತ್ತಿದೆ. ಅಲ್ಲಿ ಶ್ರೀ ವೇಣುಗೋಪಾಲ ಕೊಳಲು ನುಡಿಸುತ್ತಾನೆ. ವೇಣುವಾದನ ಮನದ ಭಾವನೆಗಳನ್ನು ಹೂವಿನಂತೆ ಅರಳಿಸಿ ಆನಂದ ತುಂಬುತ್ತದೆ.

ಅದು ಕಾವೇರಿ ಹಿನ್ನೀರ ತೀರದಲ್ಲಿ ಅರಳಿ ನಿಂತಿರುವ ಶ್ರೀ ವೇಣುಗೋಪಾಲಸ್ವಾಮಿ ದೇವಾಲಯ. ಮೊದಲು ಕೆಆರ್‌ಎಸ್‌ ಜಲಾಶಯದಲ್ಲಿ ನೀರು ಇಲ್ಲದಿದ್ದಾಗ ಜಲಾಶಯದ ನಡುವೆ ಕಾಣಿಸಿಕೊಳ್ಳುತ್ತಿದ್ದ ವೇಣುಗೋಪಾಲಸ್ವಾಮಿ ದೇವಾಲಯ ಈಗ ಹೊಸ ರೂಪ ಪಡೆದಿದೆ. ಹಿನ್ನೀರು ಎಂದಾಗ ಬರೀ ನೀರಷ್ಟೇ ಕಾಣುತ್ತಿತ್ತು. ಆದರೆ ಈಗ ಹಿನ್ನೀರ ತೀರ ಪ್ರವಾಸಿ ತಾಣವಾಗಿ ರೂಪಗೊಂಡಿದೆ. ಶಾಂತ ಸಾಗರದಲ್ಲಿ ಮೀಯಲು ದೇವರೇ ಸೃಷ್ಟಿಸಿದ ಸೌಂದರ್ಯದಂತಿದೆ. ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

ಮುಳುಗಿದ್ದ ದೇವಾಲಯಕ್ಕೆ ರೂಪ

13ನೇ ಶತಮಾನದಲ್ಲಿ ಹೊಯ್ಸಳ ಅರಸರು ಹೊಸಕನ್ನಂಬಾಡಿ ಗ್ರಾಮದಲ್ಲಿ ಈ ದೇವಾಲಯ ನಿರ್ಮಿಸಿದ್ದರು. 1930ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಕಾವೇರಿ ನದಿಗೆ ಕೆಆರ್‌ಎಸ್‌ ಜಲಾಶಯ ನಿರ್ಮಾಣ ಮಾಡಿದಾಗ ದೇವಾಲಯದೊಂದಿಗೆ ಗ್ರಾಮವೂ ಮುಳುಗಿತು. ಗ್ರಾಮಸ್ಥರನ್ನು ಹೊಸ ಕನ್ನಂಬಾಡಿ ಗ್ರಾಮಕ್ಕೆ ಸ್ಥಳಾಂತರಿಸಲಾಯತು. ಆದರೆ ಐತಿಹಾಸಿಕ ದೇವಾಲಯ ನದಿಯಲ್ಲೇ ಮುಳುಗಿತು. 2001ರಲ್ಲಿ ಎಸ್‌.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯ ಭೀಕರ ಬರಕ್ಕೆ ಸಾಕ್ಷಿಯಾಗಿತ್ತು. ಜಲಾಶಯದಲ್ಲಿ ನೀರು ಖಾಲಿಯಾಗಿ ವೇಣುಗೋಪಾಲ ಸ್ವಾಮಿ ಹೊರಜಗತ್ತಿಗೆ ದರ್ಶನ ನೀಡಿದ. ‘ಚಂದ್ರಚಕೋರಿ’ ಚಲನಚಿತ್ರದ ದೃಶ್ಯಗಳಲ್ಲಿ ಮುಳುಗಿದ್ದ ದೇವಾಲಯವನ್ನು ಕಣ್ಣು ತುಂಬಿಕೊಳ್ಳಬಹುದು.

ಶ್ರೀಹರಿ ಖೋಡೆ ಫೌಂಡೇಷನ್‌ ದೇವಾಲಯವನ್ನು ಹಿನೀರ ತಟಕ್ಕೆ ಸ್ಥಳಾಂತರಿಸಿ ಜೀರ್ಣೋದ್ಧಾರಗೊಳಿಸಲು ಮುಂದೆ ಬಂದಾಗ ಕರ್ನಾಟಕ ರಾಜ್ಯ ಸರ್ಕಾರ ಒಪ್ಪಿಗೆ ನೀಡಿತು. ಹೊಯ್ಸಳ ವಿನ್ಯಾಸಕ್ಕೆ ಧಕ್ಕೆಯಾಗದಂತೆ ಹೊಸ ದೇವಾಲಯ ನಿರ್ಮಿಸುವಂತೆ ಸರ್ಕಾರ ಷರತ್ತು ವಿಧಿಸಿತ್ತು. ಅದರಂತೆ ಉದ್ಯಮಿ ಶ್ರೀಹರಿ ಖೋಡೆ ಅವರ ನೇತೃತ್ವದಲ್ಲಿ 2003ರಲ್ಲಿ ಸ್ಥಳಾಂತರ ಪ್ರಕ್ರಿಯೆ ಆರಂಭವಾಯಿತು.

ಪ್ರತಿಯೊಂದು ಕಲ್ಲಿಗೂ ಸಂಖ್ಯೆ ನೀಡಿ, 16 ಸಾವಿರ ಛಾಯಾಚಿತ್ರ ತೆಗೆದು ತದ್ರೂಪ ದೇವಾಲಯ ನಿರ್ಮಾಣ ಕಾರ್ಯ ಆರಂಭಿಸಲಾಯಿತು. ಹಿನ್ನೀರ ತಟದ ಜಾಗ ಖರೀದಿಸಿ 5 ಎಕರೆಯಲ್ಲಿ ದೇವಾಲಯ ಸೇರಿ ಒಟ್ಟು 35 ಎಕರೆ ಜಾಗದಲ್ಲಿ ಪ್ರವಾಸಿ ತಾಣ ತಲೆ ಎತ್ತಿತು.


ದೇವಾಲಯದ ಮುಂಭಾಗದಲ್ಲಿ ಇರುವ ಹಂಪಿ ಕಲ್ಲಿನ ರಥದ ತದ್ರೂಪ

ದೇವಾಲಯ ಕಾಮಗಾರಿ 2011ರಲ್ಲಿ ಪೂರ್ಣಗೊಂಡರೂ ಅದಕ್ಕೆ ಹೊಸ ರೂಪ ನೀಡಲು 2017ರವರೆಗೂ ಸಮಯ ಹಿಡಿಯಿತು. 2017, ಡಿಸೆಂಬರ್‌ 6ರಂದು ವೇಣುಗೋಪಾಲ ಸ್ವಾಮಿ ಮೂರ್ತಿ ಪ್ರತಿಷ್ಠಾಪಿಸಲಾಯಿತು. ದೇವಾಲಯಕ್ಕೆ ಮೂರು ಪ್ರಾಂಗಣವಿದೆ. ನಡುವೆ ಮುಖ್ಯ ಮಂದಿರದಲ್ಲಿ ವೇಣುಗೋಪಾಲ ಸ್ವಾಮಿ ದರ್ಶನ ನೀಡುತ್ತಾನೆ. ಮುಖ್ಯ ಪ್ರಾಂಗಣದ ಸುತ್ತಲೂ ಅಷ್ಟಲಕ್ಷ್ಮಿಯರು, ಸಪ್ತ ನದಿಗಳು, ಸಪ್ತ ಋಷಿ, ನವಗ್ರಹ, ದಶಾವತಾರ, ಗಣೇಶ, ಶಿವ– ಪಾರ್ವತಿ, ಆಂಜನೇಯನ ವಿಗ್ರಹ ಸೇರಿ 46 ವಿಗ್ರಹಗಳಿವೆ. ದೇವಾಲಯದ ಸುತ್ತಲೂ ಅಷ್ಟ ಮಂಟಪಗಳಿವೆ. ಮುಂಭಾಗದಲ್ಲಿರುವ ಹಂಪಿಯ ಕಲ್ಲಿನ ರಥದ ಮಾದರಿ ಆಕರ್ಷಕವಾಗಿದೆ.

ಉತ್ತರಾಭಿಮುಖವಾಗಿ ವೇಣುಗೋಪಾಲ ದರ್ಶನ ನೀಡುತ್ತಾನೆ. ಹಿನ್ನೀರ ತೀರದಲ್ಲಿ ಕಬ್ಬಿಣದ ಬೇಲಿ ನಿರ್ಮಿಲಾಗಿದೆ. ಪ್ರಕೃತಿ ಸೌಂದರ್ಯ ಸವಿಯಲು ಕಲ್ಲು ಬೆಂಚು ಹಾಕಲಾಗಿದೆ. ದೇವಾಲಯದ ಬಲ, ಹಾಗೂ ಹಿಂಭಾಗದಲ್ಲಿ ಸುಂದರ ಉದ್ಯಾನವಿದೆ. ಸೂರ್ಯೋದಯ, ಸೂರ್ಯಾಸ್ತ ಕಣ್ತುಂಬಿಕೊಳ್ಳಲು ಹೇಳಿ ಮಾಡಿಸಿದಂತಿದೆ. ದೇವಾಲಯದ ಎಡಭಾಗದಲ್ಲಿ ವಿಶಾಲ ಪಾರ್ಕಿಂಗ್‌ ವ್ಯವಸ್ಥೆ ಇದೆ. ಶೌಚಾಲಯ, ಕುಡಿಯುವ ನೀರು, ಕ್ಯಾಂಟೀನ್‌ ವ್ಯವಸ್ಥೆ ಕಲ್ಪಿಸಲಾಗಿದೆ.

ಹೊಸಕನ್ನಂಬಾಡಿ ಗ್ರಾಮದಿಂದ ದೇವಾಲಯದವರೆಗೆ ಒಂದು ಕಿ.ಮೀ ರಸ್ತೆ ದುರಸ್ತಿ ಕಂಡಿಲ್ಲ. ರಸ್ತೆ ತುಂಬೆಲ್ಲ ಗುಂಡಿಗಳು ಬಿದ್ದಿದ್ದು ವಾಹನ ಸಂಚಾರಕ್ಕೆ ಹರಸಾಹಸ ಪಡಬೇಕಾಗಿದೆ. ಈ ಬಗ್ಗೆ ಸ್ಥಳೀಯರು ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ರಸ್ತೆ ರಿಪೇರಿಯಾಗಿಲ್ಲ. ರಸ್ತೆ ದುರಸ್ತಿಯಾದರೆ ಈ ಸ್ಥಳ ರಾಜ್ಯದ ಪ್ರಮುಖ ಪ್ರವಾಸಿ ತಾಣವಾಗಿ ಜನರನ್ನು ಆಕರ್ಷಿಸಲಿದೆ.ಬಾಕ್ಸ್ 

ಹುಂಡಿ ಇಲ್ಲ, ಕಾಣಿಕೆ ಹಾಕುವಂತಿಲ್ಲ

ಮುಖ್ಯ ಅರ್ಚಕ ಶೃಂಗೇಶ್ವರ ಭಟ್‌ ಸೇರಿ ಅರ್ಚಕರ ತಂಡ ನಿತ್ಯ ದೇವರಿಗೆ ಪೂಜಾ ಕೈಂಕರ್ಯ ನೆರವೇರಿಸುತ್ತದೆ. ದೇವಾಲಯದ ಯಾವುದೇ ಭಾಗದಲ್ಲೂ ಹುಂಡಿ ಇಲ್ಲ. ಮಂಗಳಾರತಿ ತಟ್ಟೆಗೂ ಕಾಣಿಕೆ ಹಾಕುವಂತಿಲ್ಲ. ಭದ್ರತಾ ಸಿಬ್ಬಂದಿ ಮೋದಲೇ ಭಕ್ತರಿಗೆ ಈ ವಿಚಾರ ತಿಳಿಸುತ್ತಾರೆ. ಖೋಡೆ ಫೌಂಡೇಷನ್‌ ಅತ್ಯಂತ ಶಿಸ್ತಿನಿಂದ ದೇವಾಲಯ ನಿರ್ವಹಣೆ ಮಾಡುತ್ತಿದೆ.

‘ಇದು ಕೇವಲ ಪ್ರವಾಸಿ ತಾಣ ಮಾತ್ರವೇ ಆಗಿರದೆ ಅಧ್ಯಾತ್ಮ ಕ್ಷೇತ್ರವೂ ಆಗಿದೆ. ತಿಂಡಿ, ತಿನಿಸು ತರುವುದು, ಇಲ್ಲಿ ಪಾರ್ಟಿ ಮಾಡುವುದು, ಕ್ಯಾಮೆರಾ ಬಳಕೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪ್ಲಾಸ್ಟಿಕ್‌ ಮುಕ್ತವಲಯವಾಗಿದೆ. ಜನರು ಇದನ್ನು ಅರ್ಥಮಾಡಿಕೊಳ್ಳಬೇಕು’ ಎಂದು ದೇವಾಲಯದ ಆಡಳಿತಾಧಿಕಾರಿ ಎಂ.ಎ.ಯೋಗೇಂದ್ರ ಹೇಳಿದರು.

**

ತಲುಪುವುದು ಹೇಗೆ?

ಹಿನ್ನೀರ ತೀರದ ಶ್ರೀವೇಣುಗೋಪಾಲ ಸ್ವಾಮಿ ದೇವಾಲಯ ಬೆಂಗಳೂರಿನಿಂದ 135 ಕಿ.ಮೀ ಇದೆ. ಮಂಡ್ಯ ಮಾರ್ಗವಾಗಿ ಪಾಂಡವಪುರ, ಎಲೆಕೆರೆ ಹ್ಯಾಂಡ್‌ಪೋಸ್ಟ್‌, ಕಟ್ಟೇರಿ, ಹೊಸ ಕನ್ನಂಬಾಡಿ ಗ್ರಾಮದ ಮೂಲಕ ದೇವಾಲಯ ತಲುಪಬೇಕು. ಮಂಡ್ಯದಿಂದ 40 ಕಿ.ಮೀ ದೂರದಲ್ಲಿದೆ.

ಶ್ರೀರಂಗಪಟ್ಟಣದಿಂದ ಪಾಂಡವಪುರ ರೈಲು ನಿಲ್ದಾಣ ಮಾರ್ಗದಲ್ಲೂ ಬರಬಹುದು. ಮೈಸೂರಿನಿಂದ ದೇವಾಲಯ 25 ಕಿ.ಮೀ ದೂರಲ್ಲಿದೆ. ಕೆಆರ್‌ಎಸ್‌ ಉತ್ತರ ತೀರದಿಂದ ಹೊಸಕನ್ನಂಬಾಡಿ ಮಾರ್ಗದಲ್ಲಿ ಬರಬೇಕು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !