ವಿಜಯಪುರ ಎಪಿಎಂಸಿಗಳಲ್ಲಿ ವರ್ಷವಿಡಿ ಚಟುವಟಿಕೆ

7

ವಿಜಯಪುರ ಎಪಿಎಂಸಿಗಳಲ್ಲಿ ವರ್ಷವಿಡಿ ಚಟುವಟಿಕೆ

Published:
Updated:
Deccan Herald

ವಿಜಯಪುರ: ವಿಜಯಪುರ, ಸಿಂದಗಿ, ಇಂಡಿ, ತಾಳಿಕೋಟೆ ಪಟ್ಟಣಗಳಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆಗಳಿದ್ದು, ವಿಜಯಪುರ ಎಪಿಎಂಸಿ ಮಾರ್ಕೆಟ್‌ ವರ್ಷವಿಡಿ ಚಟುವಟಿಕೆಯ ತಾಣವಾಗಿದೆ.

ತಾಳಿಕೋಟೆ ಎಪಿಎಂಸಿ ತೊಗರಿ ಖರೀದಿಗಷ್ಟೇ ಸೀಮಿತವಾಗಿದೆ. ಉಳಿದಂತೆ ಸಿಂದಗಿ, ಇಂಡಿ ಎಪಿಎಂಸಿಗಳಲ್ಲಿ ಹೇಳಿಕೊಳ್ಳುವಂತಹ ವಹಿವಾಟು ನಡೆಯಲ್ಲ. ಇಲ್ಲಿನ ಚುನಾಯಿತ ಜನಪ್ರತಿನಿಧಿಗಳ ಆಡಳಿತ ಮಂಡಳಿ ಸಹ ಶಾಸಕರು, ರಾಜಕೀಯ ಮುಖಂಡರ ಬೆಂಬಲಿಗರ ಅಧಿಕಾರ ಸ್ಥಾನಕ್ಕಾಗಿ ಮೀಸಲಾಗಿವೆ. ನೆಪಮಾತ್ರಕ್ಕೆ, ಹೆಸರಿಗಷ್ಟೇ ಇವೆ. ಆ ಭಾಗದ ರೈತರಿಗೆ ಇವುಗಳಿಂದ ಯಾವುದೇ ಪ್ರಯೋಜನ ಸಿಗದಾಗಿದೆ ಎಂಬ ದೂರು ವ್ಯಾಪಕವಾಗಿದೆ.

ವಿಜಯಪುರ ಎಪಿಎಂಸಿಯಲ್ಲಷ್ಟೇ ಹೆಚ್ಚಿನ ಪ್ರಮಾಣದ ವಹಿವಾಟು ನಡೆಯಲಿದೆ. ಇಲ್ಲಿಗೆ ಜಿಲ್ಲೆಯ ಎಲ್ಲಾ ಭಾಗದ ರೈತರ ಜತೆ ನೆರೆಹೊರೆಯ ಜಿಲ್ಲೆಗಳ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟಕ್ಕಾಗಿ ತರುವುದು ವಿಶೇಷ. ಇಲ್ಲಿನ ಎಪಿಎಂಸಿಯಲ್ಲಿ ಬೇರೆಡೆಗಿಂತ ತುಸು ಹೆಚ್ಚಿನ ಧಾರಣೆ ಸಿಗಲಿದೆ ಎಂಬುದು ರೈತರ ನಂಬಿಕೆ.

ಸೀಝನ್‌ ಮಾರ್ಕೆಟ್‌:
ವಿಜಯಪುರ ಎಪಿಎಂಸಿ ಸೀಝನ್‌ ಮಾರ್ಕೆಟ್‌. ವರ್ಷವಿಡಿ ಚಟುವಟಿಕೆ ನಡೆದಿದ್ದರೂ; ಆಯಾ ಉತ್ಪನ್ನಗಳ ಸುಗ್ಗಿ ಸಮಯ ರೈತರಿಂದ ಕಿಕ್ಕಿರಿದು ತುಂಬಿರುತ್ತದೆ. ಎತ್ತ ನೋಡಿದರೂ ರಾಶಿ ರಾಶಿ ಚೀಲಗಳೇ ಗೋಚರಿಸಲಿವೆ.

ಅಕ್ಟೋಬರ್‌ನಿಂದ ಜನವರಿಯವರೆಗೆ ಜಿಲ್ಲೆಯೂ ಸೇರಿದಂತೆ, ನೆರೆಹೊರೆ ಜಿಲ್ಲೆಯ ರೈತರು ತಾವು ಬೆಳೆದ ಉತ್ಪನ್ನಗಳನ್ನು ಮಾರಾಟಕ್ಕಾಗಿ ಹೆಚ್ಚಿನ ಪ್ರಮಾಣದಲ್ಲಿ ತರಲಿದ್ದಾರೆ. ಈ ಅವಧಿಯಲ್ಲಿ ಹತ್ತಿ, ತೊಗರಿ, ಕಡಲೆ, ಜೋಳ, ಶೇಂಗಾ ಸೇರಿದಂತೆ ಇನ್ನಿತರೆ ಉತ್ಪನ್ನಗಳ ವಹಿವಾಟು ಬಿರುಸಿನಿಂದ ನಡೆಯಲಿದೆ ಎಂದು ವಿಜಯಪುರ ಎಪಿಎಂಸಿ ಕಾರ್ಯದರ್ಶಿ ವಿ.ರಮೇಶ್‌ ತಿಳಿಸಿದರು.

ಜನವರಿಯಿಂದ ಏಪ್ರಿಲ್‌–ಮೇ ವರೆಗೂ ನಿಂಬೆಯ ಸೀಝನ್‌. ಈ ಅವಧಿ ಇಲ್ಲಿಂದ ವಿದೇಶಕ್ಕೂ ನಿಂಬೆ ರಫ್ತಾಗಲಿದೆ. ಏಪ್ರಿಲ್‌ನಿಂದ ಮೇ–ಜೂನ್‌ವರೆಗೂ ಒಣದ್ರಾಕ್ಷಿಯ ಹಂಗಾಮು. ಈ ಅವಧಿಯಲ್ಲಿ ಧಾರಣೆ ಚಲೋ ಇದ್ದರೇ ಮಾತ್ರ ವಹಿವಾಟು ನಡೆಯಲಿದೆ. ಇಲ್ಲದಿದ್ದರೇ ರೈತರು ಶೈತ್ಯಾಗಾರಗಳಲ್ಲಿ ತಮ್ಮ ಉತ್ಪನ್ನ ಕಾಪಿಟ್ಟು, ಮಾರುಕಟ್ಟೆಯಲ್ಲಿ ದರ ದೊರೆತಾಗ ಮಾರಲಿದ್ದಾರೆ ಎಂದು ಹೇಳಿದರು.

ವಿಜಯಪುರ ಎಪಿಎಂಸಿಯಲ್ಲಿ ಇದೀಗ ಬೆಲ್ಲದ ಮಾರುಕಟ್ಟೆಯೂ ಆರಂಭವಾಗಿದೆ. ಜಿಲ್ಲೆಯಲ್ಲಿ ಬೆಲ್ಲ ತಯಾರಕರ ಸಂಖ್ಯೆ ಬೆರಳಷ್ಟಿಲ್ಲದಿದ್ದರೂ; ಜಮಖಂಡಿ, ಮಹಾಲಿಂಗಪುರ ಭಾಗದ ರೈತರು ಹೆಚ್ಚಿನ ಧಾರಣೆ ನಿರೀಕ್ಷೆಯಿಂದ ಇಲ್ಲಿಗೆ ಬರುತ್ತಾರೆ. ಬುಧವಾರ ಹೊರತುಪಡಿಸಿ ವಾರದ ಎಲ್ಲಾ ದಿನವೂ ಬೆಲ್ಲದ ವಹಿವಾಟು ನಡೆಯಲಿದೆ ಎಂದು ಕಾರ್ಯದರ್ಶಿ ಮಾಹಿತಿ ನೀಡಿದರು.

ಆನ್‌ಲೈನ್‌...
‘ವಿಜಯಪುರ ಎಪಿಎಂಸಿ ಸಂಪೂರ್ಣ ಆನ್‌ಲೈನ್‌ ವಹಿವಾಟು ನಡೆಸುತ್ತಿದೆ. ಹತ್ತು ವರ್ಷದ ಅವಧಿಗೆ 726 ವ್ಯಾಪಾರಿಗಳು ನೋಂದಾಯಿಸಿಕೊಂಡಿದ್ದರು. ಇದೀಗ ಇದರಲ್ಲಿ ಕೇವಲ 236 ವ್ಯಾಪಾರಿಗಳು ಮಾತ್ರ ಮತ್ತೆ ತಮ್ಮ ಪರವಾನಗಿ ನವೀಕರಣಗೊಳಿಸಿಕೊಂಡಿದ್ದು, 390 ಮಂದಿ ನವೀಕರಣಗೊಳಿಸಿಕೊಳ್ಳಬೇಕಿದೆ’ ಎಂದು ವಿ.ರಮೇಶ್‌ ತಿಳಿಸಿದರು.

ಹತ್ತಿ ವಹಿವಾಟು ಬಿರುಸಿನಿಂದ ನಡೆಯಲಿದೆ. ಹಿಂದಿನ ವರ್ಷದಲ್ಲಿ 4.75 ಲಕ್ಷ ಕ್ವಿಂಟಲ್ ಹತ್ತಿ ಆವಕವಾಗಿದ್ದು, ಇದರ ಒಟ್ಟು ಮೌಲ್ಯ ₹ 380 ಕೋಟಿ. ಜೇವರ್ಗಿ, ಶಹಾಪುರ, ಸಿಂದಗಿ ಭಾಗದಿಂದ ಹತ್ತಿ ವ್ಯಾಪಕ ಪ್ರಮಾಣದಲ್ಲಿ ಮಾರುಕಟ್ಟೆಗೆ ಆವಕವಾಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !