ಶುಕ್ರವಾರ, ಜೂನ್ 5, 2020
27 °C

ಮಹಿಳೆಯರಲ್ಲಿ ಸಲಿಂಗಕಾಮ

ವಿನೋದ ಛಬ್ಬಿ Updated:

ಅಕ್ಷರ ಗಾತ್ರ : | |

ಗಂಡಿಗಿರುವಂತೆ ಹೆಣ್ಣಿನ ಕಾಮುಕತೆಯೂ ಗಂಡಿನಿಂದ ಪ್ರತ್ಯೇಕವಾಗಿದ್ದು ವೈಯಕ್ತಿಕವಾಗಿದೆ, ಹಾಗೂ ಇದು ಸಂಗಾತಿಯನ್ನು ಬಿಟ್ಟು ಬೇರೆಡೆಗೆ ಹರಿಯದಂತೆ ಸಮಾಜದ ನೀತಿನಿಯಮಗಳು ಕಡಿವಾಣ ಹಾಕುತ್ತವೆ ಎಂದು ಈ ಹಿಂದೆ ಹೇಳುತ್ತಿದ್ದೆ.

ಹೋದಸಲದ ದೃಷ್ಟಾಂತದಲ್ಲಿ ಗಂಡನು ಹೆಂಡತಿಗೆ ಬದ್ಧನಾಗಿದ್ದೂ ತನ್ನ ಕಾಮುಕತೆಯ ಬಗೆಗೆ ನಾನಾ ಪ್ರಯೋಗಗಳಲ್ಲಿ ತೊಡಗಿಸಿಕೊಂಡಿದ್ದು ಹೇಳಿದ್ದೆ. ಅವನದು ದಾಂಪತ್ಯಕ್ಕೆ ದ್ರೋಹ ಎನ್ನುವುದರಲ್ಲಿ ಎರಡು ಮಾತಿಲ್ಲ. ಒಂದುವೇಳೆ ಅವನು ಅವಿವಾಹಿತನಾಗಿದ್ದರೆ? ಆಗ ಅವನ ವರ್ತನೆಗೆ ಸರಿ-ತಪ್ಪುಗಳ ಅಳತೆಗೋಲು ಅನ್ವಯವಾಗುವುದಿಲ್ಲ. ಏಕೆಂದರೆ ಈ ಅಳತೆಗೋಲು ಹುಟ್ಟಿಕೊಂಡಿದ್ದೇ ವಿವಾಹದ ಜೊತೆಗಿನ ಬದ್ಧತೆಯಿಂದ! ಇದನ್ನೇ ಹೆಣ್ಣಿಗೆ ಅನ್ವಯಿಸೋಣ. ಸ್ವಲ್ಪಹೊತ್ತು ಹೆಣ್ಣನ್ನು ಆಕೆಯ ಬದ್ಧತೆಯ ಹಾಗೂ ಅದಕ್ಕಂಟಿರುವ ನೀತಿನಿಯಮಗಳ ಚೌಕಟ್ಟಿನ ಹೊರತಾಗಿ ಯೋಚಿಸೋಣ. ಒಂದು ಹೆಣ್ಣು ಮದುವೆಯಾಗಲಿ ಆಗದಿರಲಿ ತನ್ನ ಕಾಮುಕತೆಯನ್ನು ಸ್ವಚ್ಛಂದತೆಯಿಂದ ಪ್ರಕಟಪಡಿಸುತ್ತಿದ್ದರೆ ಹೇಗಿರುತ್ತದೆ?

ಮೂರು ದಶಕಗಳ ಹಿಂದಿನ ಮಾತು. ಹಾಸ್ಟೆಲ್‌ನಲ್ಲಿರುವ ಹುಡುಗ-ಹುಡುಗಿಯರ ಲೈಂಗಿಕ ಅಭಿವ್ಯಕ್ತಿಯ ಕುರಿತು ನಡೆಸಿದ ಸರ್ವೇಕ್ಷಣೆಯ ವರದಿ ನೋಡಿದ್ದೆ: ಹಾಸ್ಟೆಲ್‌ನ ಹುಡುಗರು ಕಾಮುಕತೆಯನ್ನು ಎಗ್ಗಿಲ್ಲದೆ ಬಹಿರಂಗವಾಗಿ ಪ್ರಕಟಪಡಿಸುತ್ತಾರೆ. ಆದರೆ ಹುಡುಗಿಯರು ಪ್ರೀತಿ-ಪ್ರೇಮಗಳ ಬಗೆಗೆ ಬಹಿರಂಗವಾಗಿ ಮಾತಾಡುತ್ತಾರೆ. ಕಾಮುಕತೆಯನ್ನು ಅಂತರಂಗದ ಗೆಳತಿಯೊಂದಿಗೆ ಮಾತ್ರ ಹಂಚಿಕೊಳ್ಳುತ್ತಾರೆ. ಈ ಸರ್ವೇಕ್ಷಣೆಯನ್ನು ಬುಡಮೇಲು ಮಾಡುವಂಥ ಸಂಗತಿಗಳು ಒಂದೊಂದಾಗಿ ಕಂಡವು.

ಇವಳು ಹದಿನೆಂಟು ವರ್ಷದವಳು. ಹುಡುಗರನ್ನು ಕಾಮಿಸುವ ಆಕೆಗೆ ಸಲಿಂಗಕಾಮದ ವಿಚಾರ ಕಾಡುತ್ತ ಅಸಹನೀಯ ಆಗಿ ನನ್ನಲ್ಲಿ ಬಂದಿದ್ದಾಳೆ. ಅವಳು ಹೇಳಿಕೊಂಡಿದ್ದು ಹೀಗೆ: ಇತ್ತೀಚೆಗೆ ಯಾವುದೇ ಹೆಣ್ಣನ್ನು ನೋಡಲಿ, ಆಕೆಯ ದೃಷ್ಟಿಯು ಅವಳ ಖಾಸಗಿ ಭಾಗಗಳ ಕಡೆಗೆ ಹೋಗುತ್ತದೆ. ಅದರೊಡನೆ ತನ್ನ ಬಗೆಗೆ ಹೀನಭಾವ ಉಂಟಾಗುತ್ತದೆ. ಸಲಿಂಗಕಾಮ ಸಹಜವೆಂದು ಒತ್ತಿಹೇಳಿದಾಗ ಸ್ಪಷ್ಟೀಕರಿಸಿದಳು. ಆಕೆಗೆ ಸಲಿಂಗಕಾಮ ಸಂಪೂರ್ಣ ಸ್ವೀಕೃತ. ಅದರ ಬಗೆಗೆ ಜಿಗುಪ್ಸೆಯಾಗಲೀ ಒಲ್ಲದ ಅನಿಸಿಕೆಯಾಗಲೀ ಇಲ್ಲ. (ಹಾಗೆ ಹೇಳಬೇಕೆಂದರೆ ಆಕೆಗೆ ಹಲವರು ಕಟ್ಟಾ ಸಲಿಂಗಕಾಮಿ ಗೆಳತಿಯರಿದ್ದು, ಅವರೊಂದಿಗೆ ಆರಾಮವಾಗಿದ್ದಾಳೆ.) ಸಮಸ್ಯೆ ಅದಲ್ಲ. ಆಕೆಗೆ ಐದಾರು (ಸಲಿಂಗಿ ಅಲ್ಲದ) ಗೆಳತಿಯರಿದ್ದಾರೆ. ಅವರು ಆಗಾಗ ಕಲೆತು ಆಟ ಆಡುತ್ತಾರೆ. -ಇಬ್ಬರು ಪರಸ್ಪರ ತುಟಿಗೆ ತುಟಿಹಚ್ಚಿ ಮುತ್ತಿಡುವುದು. ಹೆಚ್ಚು ಹೊತ್ತು ಮುತ್ತಿನಲ್ಲಿ ಇದ್ದವರು ಗೆದ್ದಂತೆ. ಇನ್ನು, ಕೆಲವೊಮ್ಮೆ ಅರೆಬೆತ್ತಲೆಯಾಗಿ ಒಟ್ಟಿಗೆ ಮಲಗುತ್ತಾರೆ. ಆಗ ಒಬ್ಬರು ಇನ್ನೊಬ್ಬರ ಮೈಯನ್ನು ತಬ್ಬಿರುತ್ತಾರೆ. ಹಗುರವಾಗಿ ಮುತ್ತಿಡುವುದೂ ಉಂಟು. ಈ ಹುಡುಗಿ ಒಂದುರಾತ್ರಿ ಅವರೊಡನೆ ಉಳಿದುಕೊಂಡಾಗ, ಅವರು ಹೀಗೆ ವರ್ತಿಸುವುದನ್ನು ನೋಡಿ, ಅವರೊಡನೆ ಗುರುತಿಸಿಕೊಂಡು, ತಾನೂ ಅವರಂತೆ ಸಲಿಂಗಕಾಮಿ ಆಗಿಬಿಡುತ್ತೇನೋ ಎಂದು ಹೆದರಿಕೊಂಡಿದ್ದಾಳೆ. ಅದನ್ನು ಗಮನಿಸಿದರು ಭರವಸೆ ಕೊಟ್ಟಿದ್ದಾರೆ. ‘ಕಮಾನ್, ರಿಲ್ಯಾಕ್ಸ್. ನಾವು ಯಾರೂ ಲೆಸ್ಬಿಯನ್ ಅಲ್ಲ. ನಮಗೆಲ್ಲರಿಗೂ ಬಾಯ್‌ಫ್ರೆಂಡ್ಸ್ ಇದ್ದಾರೆ. ಅವರೊಂದಿಗೆ ಸೆಕ್ಸ್‌ನಲ್ಲಿ ಸುಖವಾಗಿದ್ದೇವೆ. ಆದರೆ ನಮ್ಮನಮ್ಮಲ್ಲಿ ಕಾಮೋದ್ರೇಕ ಆಗುವುದಿಲ್ಲ.’ ಅವರಲ್ಲೊಬ್ಬಳು ಮಾತಿನ ಭರದಲ್ಲಿ ಮುಖವನ್ನು ಈಕೆಯ ಮುಖದ ತೀರ ಹತ್ತಿರ ತಂದಾಗ ಈಕೆ ದೂರ ಸರಿದಳಂತೆ. ಆಗಾಕೆ ಹೇಳಿದ್ದು: ‘ಭಯಪಡಬೇಡ, ನಾವಿಬ್ಬರೂ ಲೆಸ್ಬಿಯನ್ ಅಲ್ಲ ಎಂದು ನನಗೆ ಗೊತ್ತು!’

ಈ ಹುಡುಗಿಯರು ಗಂಡಿನೊಂದಿಗೆ ಬೆರೆಯುತ್ತಿದ್ದರೂ ಹೆಣ್ಣಿನೊಂದಿಗೆ ಮುತ್ತಿಡುವ, ತಬ್ಬಿ ಮಲಗುವುದರ ಹಿನ್ನೆಲೆ ಏನು? ಅವರ ಅನುಭವದ ಪ್ರಕಾರ ಗಂಡಿನ ಶರೀರದಿಂದ ಸಿಗುವ ಸುಖವೇ ಬೇರೆ, ಹೆಣ್ಣಿನ ಶರೀರದಿಂದ ಸಿಗುವ ಸುಖವೇ ಬೇರೆ. ಗಂಡಿನೊಡನೆ ಕಾಮಕೂಟ ನಡೆಸುವಾಗ ಭೋರ್ಗರೆಯುವ ಹಸಿಕಾಮಕ್ಕೆ ಸಿಗುವ ಭಾವಪ್ರಾಪ್ತಿಯು ಒಂದು ಬಗೆಯಾದರೆ, ಹೆಣ್ಣಿನ ಮೃದು ಶರೀರದಿಂದ ಸಿಗುವ ಸಂತಸವಾದ ಬೆಚ್ಚಗಿನ ನಂಟು- ಪ್ರೀತಿ ಇನ್ನೊಂದು ಬಗೆ. ಇದಕ್ಕೆ ವಿಶೇಷ ಮಹತ್ವ ಹಾಗೂ ಇತಿಹಾಸವಿದೆ. ಮಾನವರಲ್ಲಿ ಒಂದು ಭಾಷೆಯು ದೇಶಕಾಲಗಳನ್ನು ಮೀರಿ ಎಲ್ಲ ಜನಾಂಗಗಳಲ್ಲೂ ಬಳಕೆಯಲ್ಲಿದೆ. ಅದುವೆ ದೇಹಭಾಷೆ. ಮೃದುವಾದ ಬೆಚ್ಚಗಿನ ಸ್ಪರ್ಶದಲ್ಲಿ ನಿರಂತರ ಪ್ರೀತಿಯಿದೆ. ಅಳುತ್ತಿರುವ ಅಮೆರಿಕನ್ ಬಿಳಿಯ ಶಿಶುವನ್ನು ಆಫ್ರಿಕನ್ ಹೆಂಗಸು ತಬ್ಬಿಕೊಂಡಾಗ ಸುಮ್ಮನಾಗುವುದು ಇದೇ ಕಾರಣಕ್ಕೆ. ಈ ದೇಹಭಾಷೆಯನ್ನು ನಾವೆಲ್ಲರೂ ಹುಟ್ಟಾ ಕಲಿತಿರುತ್ತೇವೆ. ನೂರು ಪ್ರೀತಿಯ ಮಾತುಗಳಿಗಿಂತ ಒಂದು ಅಪ್ಪುಗೆಯು ಹೆಚ್ಚು ಭದ್ರಬಾಂಧವ್ಯದ ಅನುಭವ ಕೊಡುತ್ತದೆ. ಗಂಡಿನ ಸ್ಪರ್ಶ-ಕೂಟಗಳು ಈ ಹುಡುಗಿಯರಿಗೆ ಇಂಥ ಪ್ರೀತಿಯನ್ನು ಕೊಡಲಾರವು. ಅದಕ್ಕೆಂದೇ ಒಂದು ಹೆಣ್ಣು ಇನ್ನೊಂದು ಹೆಣ್ಣಿನಿಂದ ಬಯಸುತ್ತಾಳೆ.

ಮೃದುಸ್ಪರ್ಶದ ಹಿತ ಬಯಸುವುದಕ್ಕೆ ಆಧಾರಗಳು ಎಲ್ಲೆಲ್ಲೂ ಕಂಡುಬರುತ್ತವೆ. ಯಾವುದೇ ಮದುವೆ ಅಥವಾ ಪಾರ್ಟಿಯಲ್ಲಿ ನೋಡಿ. ಅಲ್ಲಿ ಆತ್ಮೀಯ ಗಂಡಸರು ಹೆಚ್ಚಿನಂಶ ಪರಸ್ಪರ ಕೈ ಕುಲುಕುತ್ತಾರೆ ಹಾಗೂ ಎದುರೆದುರು ಕುಳಿತು ಮಾತಾಡುತ್ತಾರೆ. ಆದರೆ, ಆತ್ಮೀಯ ಹೆಂಗಸರು ಹೆಚ್ಚಿನಂಶ ತಬ್ಬಿಕೊಳ್ಳುತ್ತಾರೆ ಹಾಗೂ ಅಕ್ಕಪಕ್ಕದಲ್ಲಿ ಕುಳಿತು ಮಾತಾಡುತ್ತ, ಆಗಾಗ ಪರಸ್ಪರ ಹಿತವಾಗಿ ಸ್ಪರ್ಶಿಸುತ್ತ ಇರುತ್ತಾರೆ – ವ್ಯತಿರಿಕ್ತ ಸಾಂದರ್ಭಿಕ ಕಾರಣಗಳು ಇಲ್ಲದಿದ್ದರೆ.

ಇಲ್ಲೊಂದು ಪ್ರಶ್ನೆ: ಗಂಡು ಹೆಣ್ಣನ್ನು ಪ್ರೀತಿಯ ಭಾವನೆ ಇಲ್ಲದೆ ಭೋಗಿಸಬಲ್ಲ ಎನ್ನುವುದು ಸಾಮಾನ್ಯ ಸಂಗತಿ. ಆದರೆ ಹೆಣ್ಣು ಒಂದು ಗಂಡನ್ನು ಭಾವನೆಗಳಿಲ್ಲದೆ ಕೇವಲ ಕಾಮಕ್ಕಾಗಿ ಬಯಸಬಲ್ಲಳೆ? ಸಾಧ್ಯವಿಲ್ಲವೆಂದು ಮೊದಲಿನಿಂದಲೂ ಅಂದುಕೊಂಡಿದ್ದೆ. ಇದನ್ನು ಸುಳ್ಳುಮಾಡುವ ಸಂಗತಿ ಹದಿನೈದು ವರ್ಷಗಳ ಹಿಂದೆ ನಡೆಯಿತು. ಮಹಿಳಾ ಕಾಲೇಜಿನಲ್ಲಿ ಓದುತ್ತಿರುವ ಹುಡುಗಿಯಿಂದ ಈಮೈಲ್ ಬಂತು.

ಆಕೆಯ ಪ್ರಶ್ನೆ: ಗುದಸಂಭೋಗ ನಡೆಸುವುದು ಹೇಗೆ? ವಿವರ ಕೇಳಿದಾಗ ತಿಳಿದಿದ್ದು ಇದು: ಆಕೆಯ ಗೆಳತಿಯರದು ಗುಂಪಿದೆ. ಅವರೆಲ್ಲರಿಗೂ ಸಮಯಕ್ಕೆ ತಕ್ಕಂತೆ ಒದಗುವ ಗಂಡು ಸ್ನೇಹಿತರಿದ್ದಾರೆ. ಅವರೆಲ್ಲ ಆಗಾಗ ದೂರದ ರಿಸಾರ್ಟ್‌ಗೆ ಹೋಗುತ್ತಾರೆ. ಅಲ್ಲಿ ತಮ್ಮಿಷ್ಟವಾದ ಸಂಗಾತಿಯನ್ನು ಆರಿಸಿಕೊಂಡು ಅವನೊಂದಿಗೆ ಯಥೇಷ್ಟ ಕಾಮಕೇಳಿ ನಡೆಸುತ್ತಾರೆ. ಅಂಥ ಒಂದು ಸಂದರ್ಭದಲ್ಲಿ ಒಬ್ಬನು ಇವಳೊಡನೆ ಕೂಡುವಾಗ ಈಕೆಯ ಯೋನಿ ಸಡಿಲವಾಗಿದೆ ಎಂದೆನ್ನಿಸಿ ಗುದಸಂಭೋಗಕ್ಕೆ ಇಷ್ಟಪಟ್ಟನಂತೆ. ಅದೇನೆಂದು ಈಕೆಗೆ ಗೊತ್ತಿಲ್ಲ. ಅದಕ್ಕೆಂದೇ ನನ್ನನ್ನು ಸಂಪರ್ಕಿಸಿದ್ದು. ಗುದಸಂಭೋಗದ ಕೌಶಲ್ಯವನ್ನು ಕಲಿಯಲು ಸಂಗಾತಿಗಳಿಬ್ಬರೂ ಬೇಕು, ಹಾಗಾಗಿ ಇಬ್ಬರನ್ನೂ ಭೇಟಿಮಾಡಲು ಕರೆದಾಗ ಆಕೆ ಹೇಳಿದ್ದೇನು? ‘ಓಹ್, ಅವನೊಬ್ಬ ಅದ್ಭುತವಾಗಿ ಕಾಮಕೇಳಿ ನಡೆಸುತ್ತಾನೆ. ಆದರೆ ಅವನ ಹೆಸರು ನೆನಪಿಲ್ಲ. ಅವನು ಇನ್ನೊಂದು ಸಲ ಸಿಗುತ್ತಾನೆ ಎಂಬ ಭರವಸೆ ಇಲ್ಲ. ಆದರೂ ಮುಂದೆ ಯಾರಾದರೂ ಬಯಸಿದರೆ ನಾನು ತಯಾರಿರಬೇಕಲ್ಲವೆ? ಅದಕ್ಕಾಗಿ ಕೇಳುತ್ತಿದ್ದೇನೆ, ಅಷ್ಟೆ.’

ಇಲ್ಲೇನು ಅರ್ಥವಾಗುತ್ತಿದೆ? ಸ್ವಚ್ಛಂದ ಹೆಣ್ಣು ಪ್ರೇಮವಿಲ್ಲದೆ ಕೇವಲ ಕಾಮಕ್ಕಾಗಿ ಗಂಡನ್ನು ಕೂಡಬಲ್ಲಳು. ಹಾಗೂ ಪ್ರೇಮದಿಂದ ಕಾಮವನ್ನು ಪ್ರತ್ಯೇಕಿಸಿ ಕೇವಲ ಪ್ರೇಮ ಸಂಬಂಧವನ್ನೂ ಹೊಂದಬಲ್ಲಳು. ನಿಷ್ಕಾಮ ಪ್ರೀತಿ ಬದ್ಧ ಗಂಡಿನಿಂದ ಸಿಗದಿದ್ದರೆ ಇತರ ಗಂಡು/ ಹೆಣ್ಣು ಸ್ನೇಹಿತರಿಂದ ಪಡೆಯುವ ಯತ್ನವನ್ನೂ ಮಾಡಬಲ್ಲಳು. ಹಾಗೆಯೇ, ಬಾಂಧವ್ಯ ಇಲ್ಲದ ಕಾಮಕೂಟ ಮಾತ್ರ ಬೇಕೆಂದರೆ ಅದಕ್ಕೂ ಸೈ.

ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.