ಕವಿತೆ ಆಲಿಸುವ ಮುನ್ನವೇ ಕದಲಿದ ಸಹೃದಯ ಮನಸುಗಳು

7

ಕವಿತೆ ಆಲಿಸುವ ಮುನ್ನವೇ ಕದಲಿದ ಸಹೃದಯ ಮನಸುಗಳು

Published:
Updated:

ಧಾರವಾಡ: ರಾಷ್ಟ್ರೀಯತೆ ಕುರಿತ ಕಾವೇರಿದ ಸಂವಾದದ ಬಳಿಕ ನವೋದಯ ಕವಿತೆಗಳ ವಾಚನವೂ ಪ್ರಶಾಂತವಾಗಿ ಹರಿಯವ ನದಿಯಂತೆ ಮನಕೆ ಮುದನೀಡಲಿದೆ ಎಂಬ ನಿರೀಕ್ಷೆ ಹುಸಿಯಾಯಿತು.

ನವೋದಯ ಕವಿಗಳು ಬದುಕನ್ನು ಬಣ್ಣಿಸಿದ ಬಗೆಯನ್ನು ಆಂತರ್ಯದೊಳಗೆ ಇಳಿಸಿಕೊಳ್ಳಲು ಸಜ್ಜಾಗುತ್ತಿದ್ದ ‘ಸಹೃದಯ’ ಸಭಿಕರು ಏಕಾಏಕಿ ‘ರಸಭಂಗ’ವನ್ನು ಅನುಭವಿಸಿದರು. ಸಿಟ್ಟು, ವಾಗ್ವಾದ ನಡುವೆ ಕದಲಿದ ಮನಸ್ಥಿತಿಯಲ್ಲಿ ಕವಿತೆಗಳಿಗೆ ಕಿವಿಯಾಗಬೇಕಾದ ಅನಿವಾರ್ಯ ಧಾರವಾಡ ಸಾಹಿತ್ಯ ಸಂಭ್ರಮದಲ್ಲಿ ಶನಿವಾರ ಸೃಷ್ಟಿಯಾಯಿತು. 

ಈ ಗೋಷ್ಠಿಯ ನಿರ್ದೇಶಕರಾಗಿದ್ದ ವಿಮರ್ಶಕ ಓ.ಎಲ್‌.ನಾಗಭೂಷಣ ಅವರು, ‘ನವೋದಯ ಕವಿಗಳ ಬೆರಗುಗಣ್ಣಿನಲ್ಲಿ ಬದುಕು ಹೇಗೆ ಕವಿತೆಯ ರೂಪ ಪಡೆದಿದೆ’ ಎಂಬುದನ್ನು ವಿವರಿಸುತ್ತಿದ್ದಂತೆಯೇ ಧ್ವನಿವರ್ಧಕ ವ್ಯವಸ್ಥೆ ಕೈಕೊಟ್ಟಿತು. ಅದನ್ನು ಸರಿಪಡಿಸುವುದಕ್ಕೇ ಸುಮಾರು 20 ನಿಮಿಷ ಬೇಕಾಯಿತು. ಅದು ಸರಿಯಾದ ಬಳಿಕ ನಾಗಭೂಷಣಸ್ವಾಮಿ ಅವರು ಗಂಗಾಧರ ಚಿತ್ತಾಲರ ‘ಹರಿವ ನೀರಿನ ಕವಿತೆ’ಯ ಮಹತ್ವ ವರ್ಣಿಸಲು ಆರಂಭಿಸಿದರು.

ಆಗ ಸಭಿಕರೊಬ್ಬರು, ‘ನಿಮ್ಮ ಪೀಠಿಕೆ ಸಾಕು. ಪದ್ಯ ಓದಿ’ ಎಂದು ಜೋರಾಗಿಯೇ ಹೇಳಿದ್ದು ಓ.ಎಲ್‌.ಎನ್‌ ಸಿಟ್ಟಿಗೇಳುವಂತೆ ಮಾಡಿತು. ‘ನಾನು ಪದ್ಯ ಓದಿ ಆಯಿತು. ಕ್ಷಮಿಸಿ’ ಎಂದು ಏರುಧ್ವನಿಯಲ್ಲೇ ಹೇಳಿದ ಓ.ಎಲ್‌.ಎನ್‌ ತಮ್ಮ ಆಸನಕ್ಕೆ ಮರಳಿದರು. ‘ಕವಿತೆ ಬಗ್ಗೆ ಆಸಕ್ತಿ ಇಲ್ಲದವರು ಜಸ್ಟ್‌ ಗೆಟ್‌ ಔಟ್‌’ ಎಂದು ಅವರು ಹೇಳಿದ್ದು ಸಭಿಕರನ್ನೂ ಕೆರಳಿಸಿತು.

‘ಸಭಿಕರು ಶಾಂತತೆ ಕಾಪಾಡಬೇಕು. ಸಭೆಗೆ ಮರ್ಯಾದೆ ಕೊಡಬೇಕು’ ಎಂದು ಸಂಘಟಕರು ಪದೇ ಪದೇ ವಿನಂತಿಸಿದರು. ಅಷ್ಟರಲ್ಲಿ ಸಭಿಕರ ಕಡೆಯಿಂದಲೂ, ‘ಹಾಗಾದರೆ ಸಭಿಕರಿಗೆ ಮರ್ಯಾದೆ ಇಲ್ಲವೇ’ ಎಂಬ ಪ್ರತಿಧ್ವನಿಯೂ ಕೇಳಿಬಂತು.

ಸಂಘಟಕರು ಮನವೊಲಿಸಿದ ಬಳಿಕ ಓ.ಎಲ್‌.ಎನ್‌, ‘ಕವಿತೆ ಓದುವುದಕ್ಕೆ ಪೂರಕವಾದ ಮನಸ್ಥಿತಿ ನಿರ್ಮಾಣವಾಗಬೇಕು. ಅದಕ್ಕೆ ಪೀಠಿಕೆಯಾಗಿ ನಾಲ್ಕು ಮಾತು ಹೇಳಿದೆ. ಪ್ರೇಕ್ಷಕರನ್ನು ತಪ್ಪಾಗಿ ಅಂದಾಜಿಸಿದೆ’ ಎಂದು ಕ್ಷಮೆ ಕೋರಿ ಕವಿತೆ ವಾಚಿಸಿದರು. ಈ ಬೆಳವಣಿಗೆಳ ನಡುವೆ ಕೆಲವು ಪ್ರೇಕ್ಷಕರು ಆಸನದಿಂದ ಎದ್ದು ಹೋಗಿದ್ದರು.

ಚನ್ನವೀರ ಕಣವಿ ಅವರ ‘ಭೂಮಿ ಬದುಕು’ ಕವಿತೆಯನ್ನು ನೀತಾ ಇನಾಂದಾರ್‌, ಪು.ತಿನ ಅವರ ‘ಎಂಭತ್ತರ ನಲುಗು’ ಕವಿತೆಯನ್ನು ಹೇಮಾ ಪಟ್ಟಣಶೆಟ್ಟಿ ವಾಚಿಸಿದರು. ದ.ರಾ.ಬೇಂದ್ರೆ ಅವರ ’ಶಿವ ಕರುಣೆ’ ಕವಿತೆಯನ್ನು ಅನಿತಾ ಭಟ್ಟ, ಕುವೆಂಪು ಅವರ, ‘ತೇನವಿನಾ  ತೃಣಮಪಿ ನ ಚಲತಿ’ ಪದ್ಯವನ್ನು ಸವಿತಾ ನುಗಡೋಣಿ ಹಾಡಿದರು.

ಡಿ.ವಿ.ಗುಂಡಪ್ಪ ಅವರ ‘ಮಂಕುತಿಮ್ಮನ ಕಗ್ಗ’ದ ಸಾಲುಗಳಿಗೆ ಸಿ.ಕೆ.ನಾವಲಗಿ ಧ್ವನಿಯಾದರು. ಆನಂದಕಂದ ಅವರ ‘ನೋಡು ಬಾ ಸುಗ್ಗಿಯಾಟ’ ಕವಿತೆಯನ್ನು ಮಾಯಾ ಚಿಕ್ಕೆರೂರ, ವಿ.ಕೃ.ಗೋಕಾಕ್‌ ಅವರ ‘ಊರ್ಣನಾಭಾವತಾರ’ ಕವಿತೆಯನ್ನು ಲಕ್ಷ್ಮೀಕಾಂತ ಇಟ್ನಾಳ ಹಾಗೂ ವಿ.ಸೀತಾರಾಮಯ್ಯ ಅವರ ‘ಅಭಿಃ’ ಕವನವನ್ನು ಗೀತಾ ವಸಂತ ಹಾಡಿದರು.

ಡಿ.ಎಸ್‌.ಕರ್ಕಿ ಅವರ ‘ಬಾಳನಡೆಸು’ ಹಾಡು ಎಲ್‌.ಎಸ್‌.ಶಾಸ್ತ್ರಿ ಅವರ ಕಂಠದಿಂದ ಹಾಗೂ ಗೋಪಾಲಕೃಷ್ಣ ಅಡಿಗರ ‘ಇದು ಬಾಳು ನೋಡು’ ಬಿ.ಆರ್‌.ಲಕ್ಷ್ಮಣರಾವ್ ಅವರ ಕಂಠದಿಂದ ಮೂಡಿಬಂತು. ಕೆ.ಎಸ್‌.ನರಸಿಂಹ ಸ್ವಾಮಿ ಅವರ ‘ಇವನು ಹುಟ್ಟಿದ ಹಬ್ಬ’ ಕವನವನ್ನು ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ,  ಸು.ರಂ. ಎಕ್ಕುಂಡಿಯವರ ‘ಮೀನು ಪೇಟೆ’ ಪದ್ಯವನ್ನು ಕಟಗಿಹಳ್ಳಿಮಠ ವಿಜಕುಮಾರ ಹಾಗೂ ಜಿ.ಎಸ್‌.ಶಿವರುದ್ರಪ್ಪ ಅವರ ‘ಅವಸ್ಥೆ’ ಕವನವನ್ನು ಎ.ಎ.ದರ್ಗಾ ವಾಚಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !