ಶನಿವಾರ, ಫೆಬ್ರವರಿ 27, 2021
19 °C

ನೀರ ರಸಮಂಜರಿ ದಬ್ಬೇಸಾಲ!

ಸುಮಾ ಕಂಚೀಪಾಲ್ Updated:

ಅಕ್ಷರ ಗಾತ್ರ : | |

ಕರಿಯ ಕಲ್ಲುಗಳ ಮೇಲೆ ಆಕಾಶಕ್ಕೆ ಕನ್ನಡಿ ಹಿಡಿದಂತೆ ಹರಿಯುವ ತಿಳಿನೀರು. ಹಳ್ಳದ ಆಚೀಚೆಗೆ ಹಳದಿ ಬಿದಿರು. ಅಲ್ಲಲ್ಲಿ ಎದ್ದು ಕಾಣುವ ಮರಳು ದಿಬ್ಬ. ಹರಿದು ಕಾಳಿ ಹೊಳೆ‌ ಸೇರುವ ಹಳ್ಳ, ಹೊಳೆ ಸೇರುವ ತವಕದಲ್ಲಿ ಹಳ್ಳದ ತುದಿಗೆ ಭೋರ್ಗರೆಯುವ ಜಲಧಾರೆ. ಅದೇ ದಬ್ಬೇಸಾಲ ಜಲಪಾತ!

ಉತ್ತರ ಕನ್ನಡದಲ್ಲಿ ಹಲವು ಜಲಪಾತಗಳು, ದೇಗುಲಗಳು, ಪ್ರವಾಸಿ ತಾಣಗಳೂ ಪ್ರಸಿದ್ಧವಾಗಿವೆ. ಆದರೆ ಇನ್ನೂ ಅನಾಮಧೇಯವಾಗಿಯೇ ಉಳಿದ ರೋಚಕ ಕಥೆ ಹೇಳುವ ಕಣಿವೆಗಳಿವೆ; ಬಿಸಿಲಿನ ಉಸಿರೇ ಹಾಯದ ಕಗ್ಗತ್ತಲ ಕಾನುಗಳಿವೆ; ಪೂರ್ವಜರು ಉಪಯೋಗಿಸುತ್ತಿದ್ದ ದುರ್ಗಮ ಕಾಲುಹಾದಿಗಳಿವೆ; ಗದ್ದೆಯಂಚಿನಲ್ಲಿ ಹುಟ್ಟಿ ಸಮುದ್ರ ಸೇರುವ ಝರಿಗಳಿವೆ. ಧುಮುಧುಮುನೆ ಬೀಳುವ ನಮ್ಮೂರ ನಿಮ್ಮೂರ ‘ಜೋಗ’ಗಳಿವೆ. ಹೀಗೆ ಅನಾಮಿಕವಾಗಿಯೇ ಧುಮ್ಮಿಕ್ಕುವ ಅದ್ಭುತ ನೀರ ಉತ್ಸವಗಳಲ್ಲಿ‌ ಒಂದು ದಬ್ಬೇಸಾಲದಲ್ಲಿ ಧುಮುಕುವ ಜಲಪಾತ.

ಸುತ್ತ ನಿತ್ಯಹರಿದ್ವರ್ಣ ಕಾಡು. ಮಧ್ಯೆ ಮಲ್ಲಿಗೆ ಹೂವಿನ ಬಣ್ಣದಲ್ಲಿ ಧುಮ್ಮಿಕ್ಕುವ ಜಲಪಾತ. ಎರಡು ನೂರು ಮೀಟರ್ ದೂರ ಸಾಗಿದರೂ ಬಿಡದೇ ಹಿಂಬಾಲಿಸುವ ಜಲಪಾತದ ಕೇಕೆ. ಒಂದರ ಹಿಂದೊಂದರಂತೆ ಸತತ ಎಂಟು ಹಂತಗಳಲ್ಲಿ ಜಿಗಿಯುವ ಜಲಧಾರೆಗಳನ್ನು ನೋಡಲು ಮನಸ್ಸಿಗೆ ಮುದ. ಅಲ್ಲಲ್ಲಿ ಬಾಗಿ ಬಂದ ಮರದ ಕೊಂಬೆಗಳು ನೀರಿಗೆ ತಾಗುತ್ತವೆ. ಹೊಳೆಯ ಸುತ್ತ ಹಣ್ಣುಬಿಡುವ ಮರಗಳು. ಹಣ್ಣುಗಳು ನೀರಿಗೆ ಉದುರಿದರೆ ಮೀನುಗಳಿಗೆ ಹಬ್ಬವೋ ಹಬ್ಬ. ಗುಂಪು ಗುಂಪಾಗಿ ಮರದ ತಂಪಿನಡಿ ಈಜುತ್ತ ಹಣ್ಣುಗಳ ಸ್ವಾದವನ್ನು ಪುಷ್ಕಳವಾಗಿ ಸವಿಯುತ್ತವೆ.

ಎತ್ತೆತ್ತರದ ಬೇರೆ ಬೇರೆ ಆಕಾರದಲ್ಲಿರುವ ಚೂಪಾದ ಕಲ್ಲುಗಳ ಕಚ್ಚಿನಲ್ಲಿ ಸಾಹಸದಿಂದ ಕಾಲಿಟ್ಟು ಕೆಳಗಿಳಿದರೆ ಗುಹೆಯಂಥ ಜಾಗ ಸಿಗುತ್ತದೆ. ಸ್ವಲ್ಪ ಜಾಸ್ತಿಯೇ ಕತ್ತಲಿನಿಂದ ಕೂಡಿದ ಅಲ್ಲಿ ಕಪ್ಪೆ, ಹಾವು, ಏಡಿ,ಚೇಳು ಇಂತಹ ಜೀವಿಗಳನ್ನು ಕಾಣಬಹುದು. ಈ ಗುಹೆಯೊಳಗೆ ಹೊಕ್ಕುವ ಸಾಹಸ ಮಾಡುವವರು ಕಡಿಮೆ. ಆದರೂ ಉಮೇದು ಹೊಂದಿರುವವರು ಒಳಗೇನಿದೆ ಎಂದು ಕುತೂಹಲದಿಂದ ಇಣುಕುತ್ತಾರೆ. ಒಳಗೆ ತಂಪಾದ ಕತ್ತಲಿನ ಜಾಗ, ಕಿರಿದಾದ ಇಕ್ಕಟ್ಟಿನ ಪ್ರದೇಶ. ಕಲ್ಲುಗಳು ಈಗ ನಮ್ಮ ಮೇಲೇ ಬೀಳುತ್ತವೇನೋ ಎಂಬಂಥ ರೊಮಾಂಚಕ ಅನುಭವವನ್ನು ನೀಡುತ್ತವೆ.

ಕಲ್ಲುಗಳನ್ನು ಇಳಿಯುತ್ತಾ ಹೋಗುವಾಗ ಬೇರೆ ಬೇರೆ ರೀತಿಯಲ್ಲಿ ಬೇರೆ ಬೇರೆ ಎತ್ತರದಿಂದ ಹರಿಯುವ ನೀರಿನ ಜಲಪಾತಗಳನ್ನು ಕಾಣುವ ಅವಕಾಶ ಲಭಿಸುತ್ತದೆ. ಬೇಸಿಗೆ ಮತ್ತು ಚಳಿಗಾಲದಲ್ಲಿ ಚಾರಣ ಚಿತ್ರಣಗಳಿಗೆ ಅಚ್ಚುಮೆಚ್ಚೆನಿಸುವ ಜಾಗ ಈತ ಮಳೆಗಾಲದಲ್ಲಿ ಅದೆಲ್ಲಿಂದಲೋ ಧಾವಿಸುವ ಕಡುಕೆಂಪು ನೀರನ್ನು ಕೂಡಿ ರೌದ್ರಾವತಾರ ತಾಳುತ್ತದೆ. ಆಗ ಕೆಂಪು ನೀರಾಗಿ ಸುತ್ತಲಿನ ಪ್ರದೇಶವನ್ನು ನುಂಗಿಕೊಂಡು ಸಾಗುವುದನ್ನು ನೋಡಿದರೆ ಭಯವಾಗುತ್ತದೆ.

ಮೇಲಿನ ಊರಿನ ಭಾರಿ ತೂಕದ ಮರಗಳು ಎಲ್ಲಿಗೋ ಹೋಗುವ ಯಾತ್ರಿಕರಂತೆ ತೇಲಿ ಬರುವುದನ್ನು ಕಾಣಬಹುದು. ಪ್ರಯತ್ನಪಟ್ಟರೆ, ಸ್ಥಳೀಯರ ಸಹಕಾರ ಪಡೆದು ಪಂಚೇಂದ್ರಿಯಗಳಲ್ಲಿ ಹೊಳೆಯ ಈ ಅವತಾರವನ್ನು ಇಳಿಸಿಕೊಳ್ಳಬಹುದು, ಆದರೆ ಹೆಚ್ಚು ಸಾಹಸಗಳಿಗೆ ಮುಂದಾಗಬಾರದಷ್ಟೆ.

ನೆನಪಿಡಿ; ಈ ಪರಿಸರದಲ್ಲಿ ಮದ್ಯಸೇವನೆ ಮತ್ತು ಪ್ಲಾಸ್ಟಿಕ್‌ ಬಳಕೆಗೆ ಸಂಪೂರ್ಣ ನಿಷೇಧವಿದೆ. ನಿತ್ಯದ ಜಂಜಾಟಗಳಿಂದ ಕಳೆದುಹೋಗಲು ಹಸಿರಿನ ಬಗ್ಗೆ ಒಲವು ಬೆಳೆಸಿಕೊಳ್ಳಲು ಭೇಟಿ ನೀಡಲೇಬೇಕಾದ ತಾಣ.


ಚಿತ್ರಗಳು: ಲೇಖಕರವು

ಹೋಗುವುದು ಹೇಗೆ ?
ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ–ಕಾರವಾರ ಗುಂಟ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಹೋಗುವಾಗ ಸಿಗುವ ಸ್ನೇಹಸಾಗರ ಶಾಲೆಯ ಅಡ್ಡರಸ್ತೆಯಿಂದ 20 ಕಿ.ಮೀ ಸಾಗಿದರೆ ಬಳಗಾರ.‌ ದಬ್ಬೇಸಾಲ ಜಲಪಾತ ಅಲ್ಲಿಂದ ಕೇವಲ‌ ಮೂರೇ ಮೂರು ಕಿಲೋಮೀಟರು. ಯಲ್ಲಾಪುರದಿಂದ ನೇರ ಬಳಗಾರಿಗೆ ಬಸ್ ಸೌಲಭ್ಯವಿದೆಯಾದರೂ ಆರಾಮಾಗಿ ತಲುಪಲು ಸ್ಥಳೀಯರ ಸಹಕಾರ ಅತ್ಯಗತ್ಯ. 

ಇದೇ ಸೂಕ್ತ ಸಮಯ
ಮಳೆಗಾಲದಲ್ಲಿ ಜಲಪಾತ ಇನ್ನೂ ರೌದ್ರವಾಗಿರುತ್ತದೆ. ಆದರೆ, ಮಳೆಗಾಲದಲ್ಲಿ ಅಲ್ಲಿಗೆ ತಲುಪುವುದೇ ಕಷ್ಟ. ಹಾಗಾಗಿ ಚಳಿ ಮತ್ತು ಬೇಸಿಗೆ ನಡುವಿನ ಸಮಯವೇ (ಜನವರಿಯಿಂದ ಮಾರ್ಚ್‌ ಆರಂಭದೊಳಗೆ) ಸೂಕ್ತ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು