ಜೀವಜಲ ರಕ್ಷಣೆಗೆ ‘ಸಂಕಲ್ಪ’

ಮಂಗಳವಾರ, ಜೂನ್ 18, 2019
27 °C

ಜೀವಜಲ ರಕ್ಷಣೆಗೆ ‘ಸಂಕಲ್ಪ’

Published:
Updated:
Prajavani

‘ಮೂರು ವರ್ಷಗಳ ಹಿಂದೆ ಕೊಳವೆಬಾವಿ ಕೊರೆಸಿದ್ದೆ. ಒಂದೂವರೆ ಎಕರೆಗೂ ಸ್ವಲ್ಪ ಹೆಚ್ಚಿರುವ ಭೂಮಿಯಲ್ಲಿ ಬೆಳೆ ತೆಗೆಯಲು ಮುಂದಾದೆ. ಕ್ರಮೇಣ ನೀರು ಕಡಿಮೆಯಾಯಿತು. ನೀರನ್ನೇ ನಂಬಿಕೊಂಡಿದ್ದ ಕೃಷಿಗೆ ಹೊಡೆತ ಬಿತ್ತು. ಎರಡು ವರ್ಷಗಳ ಹಿಂದೆ ಕೊಳವೆಬಾವಿಗೆ ಮಳೆ ನೀರು ಇಂಗಿಸುವ ವಿಧಾನ ಅಳವಡಿಸಿದೆ (ರಿಚಾರ್ಜ್‌). ಎರಡು ವರ್ಷಗಳಲ್ಲಿ ಸುರಿದ ಮಳೆ ನೀರು, ಕೊಳವೆಬಾವಿಯಲ್ಲಿ ಇಂಗಿದೆ. ಈಗ ನಮ್ಮ ಜಮೀನಿನ ಜತೆಗೆ, ಪಕ್ಕದ ಒಂದು ಎಕರೆಯನ್ನು ಲೀಸ್‌ ಮೇಲೆ ಪಡೆದುಕೊಂಡು ಕೃಷಿ ಮಾಡುತ್ತಿದ್ದೇನೆ.’ ಕುನ್ನೂರಿನ ರೈತ ಶಂಕರ್‌ ತುಂಬಾ ಸಂತಸದೊಂದಿಗೆ ಹೇಳಿಕೊಂಡರು.

ಚೇತನ ಕಾಲೇಜಿನ ಆಡಳಿತಾಧಿಕಾರಿ ಎನ್‌.ಎಚ್‌. ಹಿರೇಗೌಡರದ್ದು ಇಂಥದ್ದೇ ನೀರು ಇಂಗಿಸಿದ ಸಂಭ್ರಮದ ಕಥೆ. ‘ಹೊಸದಾಗಿ ಕೊಳವೆಬಾವಿ ಕೊರೆಸಿದಾಗಲೇ, ಅದಕ್ಕೆ ಇಂಗು ಗುಂಡಿ ಮಾಡಿಸಿಬಿಟ್ಟೆವು. ಕಾಲೇಜು, ವಸತಿ ನಿಲಯದ ಕಟ್ಟಡದ ಚಾವಣಿಗಳ ನೀರನ್ನು ತುಂಬಿಟ್ಟುಕೊಳ್ಳಲು ದೊಡ್ಡ ಟ್ಯಾಂಕ್ ಮಾಡಿಸಿದೆವು. ಹೆಚ್ಚಾದ ನೀರು ಕೊಳವೆ ಬಾವಿಯಲ್ಲಿ ಇಂಗುವಂತೆ ಮಾಡಿಸಿದೆವು. ನಮಗೀಗ ನೀರಿನ ಕೊರತೆ ಕಾಣಿಸುತ್ತಿಲ್ಲ’. ಹಿರೇಗೌಡರ ಮಾತಲ್ಲಿ ಇನ್ನಷ್ಟು ಖುಷಿಯಿತ್ತು.

***

ಹುಬ್ಬಳ್ಳಿ–ಧಾರವಾಡ ಸೇರಿದಂತೆ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಮಳೆ ನೀರು ಇಂಗಿಸುತ್ತಿದ್ದ  ಕೆರೆ, ಕಟ್ಟೆಗಳು ನಗರೀಕರಣದ ಪ್ರಹಾರಕ್ಕೆ ಸಿಲುಕಿ ನಾಶವಾಗಿವೆ. ಕೆಲವು ಕೆರೆಗಳು ಕೊಳಕು ತುಂಬುವ ತಾಣಗಳಾಗಿವೆ. ಗ್ರಾಮೀಣ ಪ್ರದೇಶಗಳಲ್ಲಿನ ಮನೆಗಳಿಗೆ ನಲ್ಲಿಗಳು ಬಂದ ಮೇಲೆ ಬಾವಿಗಳು ಬಳಕೆಯಾಗದೇ ಪಾಳು ಬಿದ್ದಿವೆ. ದಾರಿಗಳೆಲ್ಲ ಕಾಂಕ್ರೀಟ್‌, ಡಾಂಬಾರು ಹೊದ್ದುಕೊಂಡ ಮೇಲೆ ಮಳೆ ನೀರು ಭೂಮಿಗೆ ಇಂಗಿ, ಹರಿಯುವ ಪ್ರಕ್ರಿಯೆಯೇ ಇಲ್ಲದಾಗಿದೆ. ಇವೆಲ್ಲದರ ಪರಿಣಾಮ ಅಂತರ್ಜಲ ಪಾತಾಳ ಹುಬ್ಬಳ್ಳಿ, ಗದಗ, ವಿಜಾಪುರ ಮತ್ತಿತರ ಜಿಲ್ಲೆಗಳಲ್ಲಿ 300 ಅಡಿಯಿಂದ 800 ಅಡಿಗಳವರೆಗೂ ಕೊರೆದರೂ ನೀರು ಸಿಗುತ್ತಿಲ್ಲ.

ಉತ್ತರ ಕರ್ನಾಟಕದಲ್ಲಿ ತಲೆದೋರಿರುವ ನೀರಿನ ಸಮಸ್ಯೆ ಅರಿತ ಹುಬ್ಬಳ್ಳಿಯ ಸಂಕಲ್ಪ ಸಂಸ್ಥೆ ಕೊಳವೆ ಬಾವಿಗೆ ಜಲಮರುಪೂರಣ ವಿಧಾನ ಅಳವಡಿಸುವ ಕುರಿತು ಜನರಲ್ಲಿ ಜಾಗೃತಿ ಮೂಡಿಸುತ್ತಾ, ಕೊಳವೆಬಾವಿಗಳಿಗೆ ಇಂಗು ಗುಂಡಿ ಅಳವಡಿಸುವ ಕಾರ್ಯಕ್ಕೂ ಮುಂದಾಗಿದೆ.

ಈ ಸಂಸ್ಥೆಯ ಪ್ರಯತ್ನದ ಫಲವಾಗಿಯೇ ಕುನ್ನೂರಿನ ರೈತ ಶಂಕ್ರಪ್ಪ ಅವರ ಕೊಳವೆಬಾವಿ, ಚೇತನ ಕಾಲೇಜಿನ ಕೊಳವೆಬಾವಿಗಳು ಈ ಬೇಸಿಗೆಯಲ್ಲೂ ಸುಸ್ಥಿರವಾಗಿ ನೀರು ಪೂರೈಸಲು ಸಾಧ್ಯವಾಗಿದೆ.

ದಶಕದ ಪ್ರಯತ್ನ
ಹುಬ್ಬಳ್ಳಿಯ ಸಂಕಲ್ಪ ರೂರಲ್‌ ಡೆವಲಪ್‌ಮೆಂಟ್‌ ಸೊಸೈಟಿ 2008 ರಿಂದ ಕೊಳವೆಬಾವಿಗಳಿಗೆ ಜಲಮರುಪೂರಣ ವಿಧಾನ ಅಳವಡಿಸುವ ಕಾರ್ಯವನ್ನು ಕೈಗೊಂಡಿದೆ. ಇಲ್ಲಿವರೆಗೂ ಕರ್ನಾಟಕ, ತೆಲಂಗಾಣ, ಆಂಧ್ರ, ಮಹಾರಾಷ್ಟ್ರ ಸೇರಿದಂತೆ ಹತ್ತಕ್ಕೂ ಹೆಚ್ಚು ರಾಜ್ಯಗಳಲ್ಲಿ 1500ಕ್ಕೂ ಹೆಚ್ಚು ಕೊಳವೆಬಾವಿಗಳಿಗೆ ಈ ಜಲಮರುಪೂರಣ ವಿಧಾನವನ್ನು ಅಳವಡಿಸಿದೆ.

ಕೊಳವೆಬಾವಿಗಳಷ್ಟೇ ಅಲ್ಲ, ವಸತಿ ಸಮುಚ್ಚಯ, ಕೈಗಾರಿಕಾ ಕಟ್ಟಡ, ಶಾಲಾ, ಕಾಲೇಜುಗಳಿಗೆ ಮಳೆ ನೀರು ಕೊಯ್ಲು ಅಳವಡಿ ಸಿದೆ. ಈ ಸಂಸ್ಥೆಯ ಕಾರ್ಯಕ್ಕೆ ದೇಶಪಾಂಡೆ ಫೌಂಡೇಷನ್‌, ಸೇವ್‌ ಇಂಡಿಯನ್ ಫಾರ್ಮರ್ಸ್, ಐಸಿಐಸಿಐ ಬ್ಯಾಂಕ್‌, ನಬಾರ್ಡ್‌, ಇನ್ಫೊಸಿಸ್ ಫೌಂಡೇಷನ್‌, ಕಾಕತೀಯ ಸ್ಯಾಂಡ್‌ಬಾಕ್ಸ್ ಸೇರಿದಂತೆ ಹಲವು ಸಂಸ್ಥೆಗಳು ಸಾಥ್ ನೀಡಿವೆ.

‘ವಿವಿಧ ಸಂಸ್ಥೆಗಳ ಆರ್ಥಿಕ ನೆರವಿನಿಂದಲೂ ಕೊಳವೆಬಾವಿಗಳ ಮರುಪೂರಣ ಮಾಡುತ್ತೇವೆ. ಸಂಸ್ಥೆ ನಿಗದಿ ಪಡಿಸಿದ್ದಕ್ಕಿಂತ ಹೆಚ್ಚಿನ ಸಂಖ್ಯೆಯ ಕೊಳವೆಬಾವಿಗಳಿಗೆ ಜಲಮರುಪೂರಣ ವಿಧಾನ ಅಳವಡಿಸುತ್ತಿದ್ದೇವೆ. ಉಚಿತ ಸೇವೆಗೆ ಮಹತ್ವವಿರುವುದಿಲ್ಲ. ಹಾಗಾಗಿ, ಈ ಕಾರ್ಯಕ್ಕೆ ಸೇವಾ ಶುಲ್ಕ ಪಡೆಯುತ್ತೇವೆ’ ಎನ್ನುತ್ತಾರೆ ಸೊಸೈಟಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿಖಂದರ್‌ ಮೀರಾನಾಯಕ.

ಹೀಗಿದೆ ಜಲಮರುಪೂರಣ ವಿಧಾನ
ಡಬಲ್‌ ರಿಂಗ್‌ ಪದ್ಧತಿಯಲ್ಲಿ ಕೊಳವೆಬಾವಿಗೆ ಜಲಮರುಪೂರಣ ಮಾಡಲಾಗುತ್ತದೆ. ಕೊಳವೆಬಾವಿ ಸುತ್ತ ನಾಲ್ಕು ಅಡಿ ಅಗಲ, ಆರು ಅಡಿ ಉದ್ದ, ಎಂಟು ಅಡಿ ಆಳ ಗುಂಡಿ ತೆಗೆಯುತ್ತಾರೆ. ಮೂರು ಅಡಿ ಸುತ್ತಳತೆಯ ರಿಂಗ್‌ಗಳನ್ನು ಆ ಗುಂಡಿಗೆ ಜೋಡಿಸುತ್ತಾರೆ. ಅದರೊಳಗೆ ವಿವಿಧ ಗಾತ್ರದ ಕಲ್ಲು– ಜಲ್ಲಿಗಳನ್ನು ತುಂಬುತ್ತಾರೆ. ಕೊಳವೆಬಾವಿ ಪಕ್ಕದಲ್ಲೇ ಅದೇ ಮಾದರಿಯ ಇನ್ನೊಂದು ಗುಂಡಿ ತೋಡಿ, ಅದಕ್ಕೂ ಇಷ್ಟೇ ಅಳತೆಯ ಸಿಮೆಂಟ್‌ ರಿಂಗ್‌ಗಳನ್ನು ಜೋಡಿಸುತ್ತಾರೆ.

ಈ ಕೊಳವೆಬಾವಿಯಿಂದ ಸ್ವಲ್ಪ ದೂರದಲ್ಲಿ 15 ಅಡಿ ಉದ್ದ, 20 ಅಡಿ ಅಗಲ ಹಾಗೂ ಆರು ಅಡಿ ಆಳದ ಕೃಷಿ ಹೊಂಡವನ್ನು ಮಾಡುತ್ತಾರೆ(ಜಮೀನಿನ ವಿಸ್ತೀರ್ಣ ಹೆಚ್ಚಿದ್ದರೆ, ಹೊಂಡದ ಗಾತ್ರ ದೊಡ್ಡದಾಗುತ್ತದೆ). ಈ ಹೊಂಡಕ್ಕೂ ಕೊಳವೆಬಾವಿ ಪಕ್ಕ ತೆಗೆದಿರುವ ಇಂಗು ಗುಂಡಿ ಹಾಗೂ ಕೊಳವೆಬಾವಿಗೆ ಅಳವಡಿಸಿರುವ ಇಂಗು ಗುಂಡಿಗೂ ಅಂತರ ಸಂಪರ್ಕವಿರುವಂತೆ ಪೈಪ್ ಜೋಡಣೆ ಮಾಡಿರುತ್ತಾರೆ.

ಹೆಚ್ಚು ಮಳೆ ಬಂದಾಗ ಮಳೆ ನೀರು ಮೊದಲು ಕೃಷಿ ಹೊಂಡದಲ್ಲಿ ಸಂಗ್ರಹವಾಗಿ, ನಂತರ ಮೊದಲ ಇಂಗು ಬಾವಿಗೆ ಬರುತ್ತದೆ. ಇಲ್ಲಿ ಕಸ ಕಡ್ಡಿಗಳೆಲ್ಲ ಫಿಲ್ಟರ್‌ ಆಗಿ, ಆ ಹೆಚ್ಚುವರಿ ನೀರು ಕೊಳವೆಬಾವಿಗೆ ಜೋಡಿಸಿರುವ ಇಂಗು ಗುಂಡಿ ಸೇರುತ್ತದೆ. ಇಂಗು ಗುಂಡಿಯಲ್ಲಿ ವಿವಿಧ ಗಾತ್ರಗಳ ಕಲ್ಲುಗಳನ್ನು ತುಂಬಿರುವುದರಿಂದ ನೀರು ಶುದ್ಧವಾಗಿ ಕೊಳವೆಬಾವಿ ಸೇರುತ್ತದೆ.

ಕಟ್ಟಡಗಳಿಗೆ ‘ಮಳೆ ನೀರು ಸಂಗ್ರಹ’
ಕೃಷಿ ಜಮೀನಿನ ಕೊಳವೆಬಾವಿಗಳಿಗೆ ಇಂಗು ಗುಂಡಿಗಳನ್ನು ಅಳವಡಿಸುವ ಜತೆಗೆ, ಹುಬ್ಬಳ್ಳಿ, ಬೆಂಗಳೂರಿನಂತಹ ಮಹಾನಗರಗ ಳಲ್ಲಿರುವ ಕಟ್ಟಡಗಳು, ವಾಣಿಜ್ಯ ಸಂಕೀರ್ಣಗಳು, ಮನೆಗಳಿಗೂ ಮಳೆ ನೀರು ಸಂಗ್ರಹ ವಿಧಾನವನ್ನು ಅಳವಡಿಸಿದ್ದಾರೆ ಸಿಖಂದರ್. ‘ಕಟ್ಟಡಗಳ ವಿಸ್ತೀರ್ಣಕ್ಕೆ ತಕ್ಕಂತೆ ಇಂಗು ಗುಂಡಿಗೆ ರಿಂಗ್‌ಗಳ ಅಳವಡಿಕೆಯಲ್ಲೂ ವ್ಯತ್ಯಾಸವಾಗುತ್ತದೆ’ ಎಂದು ಸ್ಪಷ್ಟಡಿಸುವ ಅವರು, ಮನೆಗಳಿಗೆ ಅಳವಡಿಸುವ ಮಳೆ ನೀರು ಸಂಗ್ರಹ ವಿಧಾನದ ಶೋಧಕಗಳು ತುಸು ವಿಭಿನ್ನವಾಗಿರುತ್ತವೆ’ ಎಂದು ಉಲ್ಲೇಖಿಸುತ್ತಾರೆ. ಈಗಾಗಲೇ ಹುಬ್ಬಳ್ಳಿ, ಬೆಂಗಳೂರು ಸೇರಿದಂತೆ ಹಲವು ಕಡೆ ಕಟ್ಟಡಗಳಿಗೆ ಮಳೆ ನೀರು ಕೊಯ್ಲು ಅಳವಡಿಸುವ ಜತೆಗೆ, ಕೊಳವೆಬಾವಿಗಳಿಗೆ ಇಂಗು ಗುಂಡಿಗಳನ್ನೂ ಮಾಡಿಕೊಟ್ಟಿದ್ದಾರೆ.

ಮಳೆ ನೀರು ಸಂಗ್ರಹ ವಿಧಾನ ಅಳವಡಿಸುವಲ್ಲಿ ಮುತುವರ್ಜಿ ವಹಿಸುತ್ತಿರುವ ಸಂಕಲ್ಪ ಸಂಸ್ಥೆಗೆ, ದೇಶಪಾಂಡೆ ಫೌಂಡೇಷನ್‌ ಫೆಲೋಶಿಪ್‌ ಪ್ರಶಸ್ತಿ, ನಬಾರ್ಡ್‌ ರೂರಲ್‌ ಇನೊವೇಷನ್‌ ಪ್ರಶಸ್ತಿ, ದೆಹಲಿಯ ವಾಟರ್‌ ಡೈಜೆಸ್ಟ್‌ ಪ್ರೈವೇಟ್‌ ಲಿಮಿಟೆಡ್‌ ವತಿಯಿಂದ ಬೆಸ್ಟ್‌ ವಾಟರ್‌ ಹಾರ್ವೆಸ್ಟಿಂಗ್‌ ಎನ್‌ಜಿಒ, ಮಹಾರಾಷ್ಟ್ರದ ಸತ್ಯಸಾಯಿ ಸೇವಾ ಸಂಘಟನೆ ವತಿಯಿಂದ ಕರ್ಮವೀರ ಪ್ರಶಸ್ತಿ, ವಿಶ್ವಮಟ್ಟದಲ್ಲಿ ಎನರ್ಜಿ ಗ್ಲೋಬಲ್‌ ವರ್ಲ್ಡ್ ಪ್ರಶಸ್ತಿಗಳು ಸಂದಿವೆ. ಸಿಖಂದರ್ ಸಂಪರ್ಕ್ ಸಂಖ್ಯೆ: 9986840730

ಮಳೆ ನೀರು ಸಂಗ್ರಹ ಅನಿವಾರ್ಯ, ಅಗತ್ಯ
ಧಾರವಾಡ ಜಿಲ್ಲೆಯಲ್ಲಿ ವಾರ್ಷಿಕ 972 ಮಿ.ಮೀ. ಮಳೆಯಾಗುತ್ತದೆ. ಇಲ್ಲಿ ಒಂದು ಎಕರೆ ಪ್ರದೇಶದಲ್ಲಿ ಅಂದಾಜು 39 ಲಕ್ಷ ಲೀಟರ್‌ನಷ್ಟು ಮಳೆ ನೀಡು ಹಿಡಿದಿಡಬಹುದು. ಆದರೆ, ಮಳೆ ನೀರು ಹಿಡಿದಿಡುವಂತಹ ಈ ಕಾರ್ಯ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿಲ್ಲ. ಹೀಗೆ ಬಿಟ್ಟರೆ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಮತ್ತಷ್ಟು ಉಲ್ಬಣವಾಗಲಿದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಸಿಖಂದರ್‌.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !