ಹರಿದು ಬಾ ಗಂಗೆಯೇ ನಗರದೊಳಗೂ...

ಬುಧವಾರ, ಮಾರ್ಚ್ 27, 2019
26 °C
‘ಕೊಳಾಯಿಯಲ್ಲಿ ನೀರು ಯಾವಾಗ ಬರುತ್ತದೆ ಎಂದು ದೇವರೇ ಬಲ್ಲ’

ಹರಿದು ಬಾ ಗಂಗೆಯೇ ನಗರದೊಳಗೂ...

Published:
Updated:
Prajavani

ಬೆಂಗಳೂರು: ‘ನಗರದೊಳಗೆ ನೀರು ಪೂರೈಕೆ ಚೆನ್ನಾಗಿದೆ ಎಂದು ಎಲ್ಲರೂ ಭಾವಿಸಿದ್ದಾರೆ. ನಮ್ಮ ಮನೆಯ ನೀರಿನ ಸ್ಥಿತಿ ಹೀಗಿದೆ ನೋಡಿ’ ಎಂದು ಚಾಮರಾಜಪೇಟೆಯ ಗೃಹಿಣಿಯೊಬ್ಬರು ಮನೆಯ ಮುಂದಿನ ಖಾಲಿ ಸಂಪನ್ನು ತೆರೆದು ತೋರಿಸಿದರು.

ನಗರದ ಜನ ಹನಿ ನೀರಿಗಾಗಿಯೂ ತತ್ವಾರ ಅನುಭವಿಸುತ್ತಿರುವುದು ‘ಪ್ರಜಾವಾಣಿ’ ಬಡಾವಣೆಗಳಿಗೆ ಭೇಟಿ ನೀಡಿದಾಗ ಕಂಡು ಬಂದಿತು.

ಪೈಪ್‌ಲೈನ್‌ ಅಳವಡಿಸಿ, ಕೊಳವೆ ಬಾವಿ ತೋಡಿ ಎಂಬ ಬೇಡಿಕೆಗಳಿಗೆ ಜಲಮಂಡಳಿ ಅಧಿಕಾರಿಗಳು, ‘ಚುನಾವಣೆಯ ಬಳಿಕವಷ್ಟೇ ಸಾಧ್ಯ. ನೀತಿ ಸಂಹಿತೆಯ ಕಾರಣದಿಂದ ಈಗೇನೂ ಮಾಡಲಾಗದು ಎಂದು ಹೇಳುತ್ತಿದ್ದಾರೆ. ಅಲ್ಲಿವರೆಗೆ ನಾವು ನೀರು ಎಲ್ಲಿಂದ ತರಬೇಕು’ ಎಂದು ಪ್ರಶ್ನಿಸುತ್ತಾರೆ ನಾಗರಿಕರು

ಚಾಮರಾಜಪೇಟೆ: ‘ಕೊಳಾಯಿಯಲ್ಲಿ  ನೀರು ಯಾವಾಗ ಬರುತ್ತದೆ ಎಂದು ದೇವರೇ ಬಲ್ಲ. ಬಂದರೂ ಕೆಲವೆಡೆಗೆ ಉಂಟು ಕೆಲವೆಡೆ ಇಲ್ಲ. ನೀರು ಪೂರೈಕೆಯಾದ ಮೊದಲ ಹಂತದಲ್ಲಿ ಮಹಡಿ ಮನೆಗಳಿಗೆ ಸ್ವಲ್ಪವಾದರೂ ಸಿಗುತ್ತದೆ. ಒತ್ತಡ ಕಡಿಮೆಯಾಗುತ್ತಿದ್ದಂತೆ ಅದೂ ಇಲ್ಲ’ ಎಂದು ಚಾಮರಾಜಪೇಟೆಯ ಗೃಹಿಣಿ ದೂರಿದರು.

‘ನಮ್ಮ ಪ್ರದೇಶದಲ್ಲಿ ಮುಖ್ಯ ಕೊಳವೆಮಾರ್ಗ ಹಾದುಹೋಗುವ ಭಾಗದಲ್ಲೇ ರಸ್ತೆ ಅಗೆದಿದ್ದಾರೆ. ಹಾಗಾಗಿ ಅಲ್ಲಲ್ಲಿ ಪೈಪ್‌ಲೈನ್‌ಗೆ ಹಾನಿಯಾಗಿದೆ. ನೀರು ಪೂರೈಕೆ ವ್ಯತ್ಯಯ ತೀವ್ರಗೊಳ್ಳಲು ಇದೂ ಒಂದು ಕಾರಣ. ಕೆಲವರು ಕೊಳವೆ ಬಾವಿ ಹೊಂದಿದ್ದಾರೆ. ನಾವೂ ಹೇಗೋ ನಿಭಾಯಿಸುತ್ತಿದ್ದೇವೆ’ ಎಂದು ಸ್ಥಳೀಯರಾದ ವಿಶ್ವೇಶ್ವರ ಗಾಯತ್ರಿ ಅವರು ನಿಟ್ಟುಸಿರುಬಿಟ್ಟರು. 

ಬಸವನಗುಡಿ: ‘ಮೊದಲೆಲ್ಲಾ ಬೆಳಿಗ್ಗೆ 5.30ರಿಂದ 6.45ರ ವೇಳೆಗೆ ನೀರು ಬರುತ್ತಿತ್ತು. ಒಂದೂವರೆ ವರ್ಷದಿಂದ ನೀರು ಪೂರೈಕೆಯಲ್ಲಿ ತೀರಾ ಅನಿಶ್ಚಿತತೆ ಉಂಟಾಗಿದೆ. ಮೊದಲ ಮಹಡಿ ಹಾಗೂ ಅದರ ಮೇಲಿರುವ ಮನೆಗಳಿಗೆ ನೀರೇ ಬರುವುದಿಲ್ಲ. ಬಿಲ್‌ ಕಟ್ಟಲು ಹೋಗುವಾಗಲೆಲ್ಲಾ ಜಲಮಂಡಳಿಯವರಿಗೆ ಸಮಸ್ಯೆ ವಿವರಿಸುತ್ತೇವೆ. ಅವರೇನೋ ಸುಮ್ಮನೆ ತಲೆಯಾಡಿಸುತ್ತಾರೆ. ಕ್ರಮ ಜರುಗಿಸಿದ ಯಾವ ಉದಾಹರಣೆಯೂ ಇಲ್ಲ’ ಎಂದು ಇಲ್ಲಿನ ನಿವಾಸಿ ಸತ್ಯನಾರಾಯಣರಾವ್‌ ತಿಳಿಸಿದರು.

ಜಯನಗರ: ‘ಈ ಮೊದಲು ನೀರು ಪೂರೈಕೆಗೆ ವೇಳಾಪಟ್ಟಿ ಇತ್ತು. ಈಗ ಅದರ ಪ್ರಕಾರ ನೀರುಪೂರೈಕೆ ಇಲ್ಲವಾಗಿದೆ. ಒಮ್ಮೊಮ್ಮೆ ಬೆಳಿಗ್ಗೆ 11 ಗಂಟೆಗೆ ನೀರು ಬರುತ್ತದೆ ಎಂದು ಹೇಳುತ್ತಾರೆ. ಬಂದ ಮೇಲಷ್ಟೇ ಖಾತ್ರಿ. ನೀರು ಬಂದಾಗ ಹಿಡಿದಿಟ್ಟುಕೊಳ್ಳಬೇಕು’ ಎಂದು ಅಶೋಕ ಸ್ತಂಭ ಸಮೀಪದ ಗೃಹಿಣಿ ಶಿಲ್ಪಾ ತಿಳಿಸಿದರು. 

ಕತ್ರಿಗುಪ್ಪೆ: ‘ಪಂಪ್‌ಹೌಸ್‌ ದುರಸ್ತಿಗಾಗಿ 15 ದಿನಗಳ ಕಾಲ ನೀರು ಪೂರೈಕೆಯನ್ನು ಜಲಮಂಡಳಿಯವರು ಇತ್ತೀಚೆಗೆ ಸಂಪೂರ್ಣ ಸ್ಥಗಿತಗೊಳಿಸಿದ್ದರು. ಮಾರ್ಚ್‌ 5ರಂದು ನೀರು ಪೂರೈಕೆ ಆರಂಭವಾಯಿತು. ಪೂರ್ಣ ಒತ್ತಡದಿಂದ ಪೂರೈಕೆಯಾಗಲು ನಾಲ್ಕು ದಿನ ಬೇಕಾಯಿತು. ಇನ್ನೇನು ಎಲ್ಲವೂ ಬಗೆಹರಿಯಿತು ಎಂದಾದಾಗ ಭಾನುವಾರ (ಮಾರ್ಚ್‌ 10) ಸ್ಥಗಿತಗೊಂಡ ಕಾವೇರಿ ನೀರು ಮತ್ತೆ ಬರಲೇ ಇಲ್ಲ. ಒಂದು ದಿನ ಜಲಮಂಡಳಿಯವರು ಟ್ಯಾಂಕರ್‌ ಮೂಲಕ ನೀರು ಪೂರೈಸಿದರು. ಮತ್ತೆ ಪತ್ತೆಯೇ ಇಲ್ಲ’ ಎಂದು ಇಲ್ಲಿನ ಪೂರ್ಣಪ್ರಜ್ಞ ಲೇಔಟ್‌ ನಿವಾಸಿ ಸಂಡೂರು ಸುಬ್ರಹ್ಮಣ್ಯ ವಿವರಿಸಿದರು.

‘ಈ ಭಾಗದಲ್ಲಿನ ಬೋರ್‌ವೆಲ್‌ಗಳು ಸುಮಾರು 150ರಿಂದ 160 ಅಡಿಗಳವರೆಗೆ ಮಾತ್ರ ಇವೆ. ಅವೂ ಪೂರ್ಣ ಬತ್ತಿವೆ. ಮುಖ್ಯ ರಸ್ತೆಯ ಸಮೀಪ ಎರಡು ಬಡಾವಣೆಗಳಿಗೆ ಅನುಕೂಲವಾಗುವಂತೆ ಒಂದಾದರೂ ಕೊಳವೆಬಾವಿ ತೋಡಬೇಕು ಎಂದು ಜಲಮಂಡಳಿಗೆ ಮನವಿ ಮಾಡಿದ್ದೇವೆ. ಆದರೆ, ಚುನಾವಣಾ ನೀತಿ ಸಂಹಿತೆ ಕಾರಣದಿಂದ ಆ ಕಾಮಗಾರಿ ಮೂರು ತಿಂಗಳ ಬಳಿಕ ಆರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ’ ಎಂದು ಅವರು ಹೇಳಿದರು.

ಬನಶಂಕರಿ, ಕುಮಾರಸ್ವಾಮಿ ಬಡಾವಣೆ ಪ್ರದೇಶದಲ್ಲೂ ಇದೇ ಸ್ಥಿತಿ ಇದೆ. 

ಕನಕಪುರ ರಸ್ತೆ: ಇಲ್ಲಿನ ಬಡಾವಣೆ ಹಾಗೂ ಅಪಾರ್ಟ್‌ಮೆಂಟ್‌ ಸಮುಚ್ಚಯದ ನಿವಾಸಿಗಳು ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಟ್ಯಾಂಕರ್‌ ಲಾಬಿಯೂ ಇಲ್ಲಿ ಸಕ್ರಿಯವಾಗಿದೆ ಎಂದು ಸ್ಥಳೀಯರು ದೂರಿದರು. 

ಚುಂಚಘಟ್ಟ: ‘ನೀರಿನ ಬೇಡಿಕೆ ಈಡೇರಿಸಿಕೊಳ್ಳಲು ಶೇ 50ರಷ್ಟು ಕಾವೇರಿ ನೀರಿನಿಂದ ಶೇ 50ರಷ್ಟು ಕೊಳವೆಬಾವಿಯನ್ನು ಅವಲಂಬಿಸಿದ್ದೇವೆ. ಸದ್ಯ ಯಾವುದೇ ಸಮಸ್ಯೆ ಇಲ್ಲ’ ಎಂದು ಇಲ್ಲಿನ ನಿವಾಸಿ ಲಿಂಗರಾಜು ತಿಳಿಸಿದರು. 

ಆಸ್ಟಿನ್‌ ಟೌನ್‌, ವೈ.ಜಿ.ಪಾಳ್ಯ, ನೀಲಸಂದ್ರ:  ‘ಬೀದಿಬದಿಯ ನಳ್ಳಿ ಸಂಪರ್ಕವನ್ನು ಕಿತ್ತುಹಾಕಲಾಗಿದೆ. ಅಧಿಕೃತ ಸಂಪರ್ಕ ಪಡೆದವರಿಗೆ ಮಾತ್ರ ಎರಡು ದಿನಗಳಿಗೊಮ್ಮೆ ನೀರು ಪೂರೈಸಲಾಗುತ್ತದೆ. ಮೊದಲ ಅರ್ಧ ಘಂಟೆ ಕಾಲ ಬರುವ ನೀರು ದುರ್ವಾಸನೆಯಿಂದ ಕೂಡಿರುತ್ತದೆ. ಮತ್ತೆ ಸರಿಹೋಗುತ್ತದೆ. ಇದೇ ನೀರನ್ನು ಕುದಿಸಿ ಆರಿಸಿ ಕುಡಿಯುತ್ತೇವೆ’ ಎಂದು ರಿಕ್ಷಾ ಚಾಲಕ ಸುಂದರ ಹಾಗೂ ಬಿಡಿಎ ಕ್ವಾರ್ಟರ್ಸ್‌ ನಿವಾಸಿ ಗೀತಾ ವಿವರಿಸಿದರು.

ಕೋರಮಂಗಲದಲ್ಲಿ ಸದ್ಯ ಸಮಸ್ಯೆ ಇಲ್ಲ ಎಂದು ರಾಹುಲ್‌ ಮಾಹಿತಿ ನೀಡಿದರು.

 

ಶುದ್ಧೀಕರಣ ಘಟಕದ ನೀರಿಗೆ ಭಾರಿ ಬೇಡಿಕೆ

ನಗರದ ಅಲ್ಲಲ್ಲಿ ಸ್ಥಾಪಿಸಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಪ್ರತಿ ಘಟಕದಿಂದ ಸುಮಾರು 2 ಸಾವಿರದಿಂದ 6ಸಾವಿರ ಲೀಟರ್‌ವರೆಗೆ ಜನರು ನೀರು ಒಯ್ಯುತ್ತಾರೆ.

‘ಆಸ್ಟಿನ್‌ ಟೌನ್‌ ಘಟಕದ ಶುದ್ಧೀಕರಣ ಘಟಕ ಪದೇ ಪದೇ ಹದಗೆಡುತ್ತಿದೆ. ಹೆಚ್ಚುತ್ತಿರುವ ಬೇಡಿಕೆಗೆ ತಕ್ಕಷ್ಟು ನೀರು ಪೂರೈಸಲಾಗುತ್ತಿಲ್ಲ’ ಎಂದು ಘಟಕದ ನಿರ್ವಾಹಕರು ಹೇಳಿದರು.ಶುದ್ಧೀಕರಿಸಿದ ನೀರು ಪೂರೈಸುವ ಉದ್ಯಮವೂ ಭರ್ಜರಿ ಲಾಭ ಗಳಿಸುತ್ತಿದೆ. ವಿಕ್ಟೋರಿಯಾ ಲೇಔಟ್‌, ಬಸವೇಶ್ವರ ನಗರ ಸೇರಿದಂತೆ ಅಲ್ಲಲ್ಲಿ ಪ್ಯಾಕೇಜ್‌ ನೀರನ್ನು ಪೂರೈಸುವ ಘಟಕ ಗಳಿಂದ ಸಾವಿರಾರು ಕ್ಯಾನ್‌ಗಳಷ್ಟು ನೀರು ಅಂಗಡಿ, ಹೋಟೆಲ್‌, ಕಂಪನಿ ಗಳಿಗೆ ಪೂರೈಕೆಯಾಗುತ್ತಿದೆ. 20 ಲೀಟರ್‌ ಕ್ಯಾನ್‌ ನೀರಿನ ಬೆಲೆ ₹ 60 ಇದೆ.

 

ಶುದ್ಧೀಕರಣ ಯಂತ್ರ ನಿರ್ವಾಹಕರಿಗೆ ಪುರುಸೊತ್ತಿಲ್ಲ

‘ಮನೆ, ಹೋಟೆಲ್‌ಗಳಲ್ಲಿ ನೀರು ಶುದ್ಧೀಕರಣ ಯಂತ್ರಗಳು (ಅಲ್ಟ್ರಾವಾಯ್ಲೆಟ್‌, ರಿವರ್ಸ್‌ ಆಸ್ಮೋಸಿಸ್‌ ಘಟಕಗಳು) ಬೇಸಿಗೆಯಲ್ಲಿ ಹೆಚ್ಚು ಒತ್ತಡದಿಂದ ಕಾರ್ಯನಿರ್ವಹಿಸುತ್ತಿವೆ. ಅದಕ್ಕೆ ತಕ್ಕಂತೆ ನಿರ್ವಹಣೆ ಮಾಡಲೇಬೇಕು. ಫಿಲ್ಟರ್‌ ಬದಲಾವಣೆ, ತಾಂತ್ರಿಕ ದೋಷ ನಿವಾರಣೆಗಾಗಿ ಅವುಗಳ ಪರಿಣಿತರಿಗೆ ಭಾರಿ ಬೇಡಿಕೆ ಬಂದಿದೆ. ಪ್ರತಿದಿನ ಕನಿಷ್ಠ 10 ಯಂತ್ರಗಳನ್ನಾದರೂ ನಿರ್ವಹಿಸಬೇಕು. ನಮಗೂ ಒತ್ತಡ ಹೆಚ್ಚಾಗಿದೆ’ ಎಂದು ತಂತ್ರಜ್ಞ ರಾಜು ಹೇಳಿದರು.

ಪೈಪ್ ಲೈನ್ ಇದ್ದರೂ ಹರಿಯದ ಕಾವೇರಿ

ಪ್ರಸನ್ನ ಕುಮಾರ್‌

ಪೀಣ್ಯದಾಸರಹಳ್ಳಿ: ಬಾಗಲಗುಂಟೆ ಹಾಗೂ ಶೆಟ್ಟಿಹಳ್ಳಿ ವಾರ್ಡ್‌ನ ಕೆಲವು ಬಡಾವಣೆಗಳಲ್ಲಿ ಪೈಪ್‌ಲೈನ್‌ ಅಳವಡಿಸಿದ್ದರೂ ಕಾವೇರಿ ನೀರು ಇನ್ನೂ ಹರಿದಿಲ್ಲ. ಕೊಳವೆ ಬಾವಿಗಳೂ ಬತ್ತಿ ಹೋಗಿವೆ. 

ಸಿದ್ದೇಶ್ವರ ಬಡಾವಣೆಯ ನಿವಾಸಿ ಸರಸ್ವತಿ, 'ಕೊಳವೆ ಬಾವಿಯಲ್ಲಿ ನೀರಿಲ್ಲದೆ ಟ್ಯಾಂಕರ್ ಮೂಲಕ ತರಿಸಿಕೊಳ್ಳುತ್ತಿದ್ದೇವೆ. ಒಂದು ಟ್ಯಾಂಕರ್ ನೀರಿಗೆ ₹ 600 ರಿಂದ ₹ 800ವರೆಗೆ ಕೊಡಬೇಕು. ಐದು ದಿನ ಮುಂಚೆ ಹೇಳಿದರಷ್ಟೇ ನೀರು. ಇಲ್ಲದಿದ್ದರೆ ಇಲ್ಲ, ಅಷ್ಟು ಬೇಡಿಕೆ ಇದೆ' ಎಂದು ಅಳಲು ತೋಡಿಕೊಂಡರು.

ಹಾವನೂರು ಬಡಾವಣೆಯ ನಿವಾಸಿ ನಜ್ಮಾ, 'ವಾರಕ್ಕೆ ಎರಡು ಬಾರಿ ಕಾವೇರಿ ನೀರು ಬಿಡುತ್ತಿದ್ದರು. ಈಗ 20 ದಿನಗಳಿಂದ ವಾರಕ್ಕೆ ಎರಡು ಗಂಟೆ ಮಾತ್ರ ನೀರು ಬಿಡುತ್ತಿದ್ದಾರೆ. ಆ ನೀರು ವಾರಪೂರ್ತಿ ಸಾಕಾಗುವುದಿಲ್ಲ. ನೀರು ಬಿಡುವವರಿಗೆ ಕೇಳಿದರೆ ನೀರು ಬರುತ್ತಿಲ್ಲ ಎಂದು ಉದಾಸೀನ ತೋರುತ್ತಾರೆ' ಎಂದು ಬೇಸರ ವ್ಯಕ್ತಪಡಿಸಿದರು.
ಚಿಕ್ಕಸಂದ್ರ ನಿವಾಸಿ ಶಾರದಮ್ಮ, 'ಕೊಳಾಯಿಯಲ್ಲಿ ಆರು ತಿಂಗಳಿನಿಂದ ಸರಿಯಾಗಿ ನೀರೇ ಬರುತ್ತಿಲ್ಲ. ನೀರಿಗಾಗಿ ಅಲೆದಾಡುತ್ತಿದ್ದೇವೆ. ಜನಪ್ರತಿನಿಧಿಗಳ್ಯಾರೂ ಸ್ಪಂದಿಸುತ್ತಿಲ್ಲ' ಎಂದು ಸಮಸ್ಯೆ ಹೇಳಿಕೊಂಡರು.

‘ನೀರು ಪೂರೈಕೆಗೆ ನೀತಿ ಸಂಹಿತೆ ಅಡ್ಡಿ ಇಲ್ಲ’

ನೀರು ಪೂರೈಕೆಗೂ ಚುನಾವಣಾ ನೀತಿ ಸಂಹಿತೆಗೂ ಸಂಬಂಧವಿಲ್ಲ. ತುರ್ತು ಸಂದರ್ಭದಲ್ಲಿ ನೀರು ಪೂರೈಕೆಗೆ ಆಯಾ ಪ್ರದೇಶದ ಮೇಲ್ವಿಚಾರಣಾ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ದೊಡ್ಡ ಪ್ರಮಾಣದ ಹೊಸ ಕಾಮಗಾರಿಗಳಿಗೆ ಟೆಂಡರ್‌ ಕರೆಯುವುದು ನೀತಿ ಸಂಹಿತೆಯ ಕಾರಣಕ್ಕಾಗಿ ಸಾಧ್ಯವಿಲ್ಲ. ಕೊಳವೆ ಬಾವಿಗಳನ್ನು ಜಲಮಂಡಳಿ ಕೊರೆಯುವುದಿಲ್ಲ. ಬಿಬಿಎಂಪಿ ಕೊರೆದ ಬಾವಿಗಳನ್ನು ಜಲಮಂಡಳಿಗೆ ಹಸ್ತಾಂತರಿಸಿದರೆ ನಾವು ನಿರ್ವಹಿಸುತ್ತೇವೆ

ತುಷಾರ್‌ ಗಿರಿನಾಥ್‌, ಅಧ್ಯಕ್ಷ, ಜಲಮಂಡಳಿ

***

 ವರ್ತೂರು

ನೀರಿಗಾಗಿ ತಿಂಗಳಿನಿಂದ ಪರದಾಡುತ್ತಿದ್ದೇವೆ. ಬೋರ್‌ವೆಲ್‌ ಕೆಟ್ಟರೂ ಗುತ್ತಿಗೆದಾರರು ಅದರ ನಿರ್ವಹಣೆಗೆ ಗಮನ ಹರಿಸುತ್ತಿಲ್ಲ. ಆದರೆ, ಬೋರ್‌ವೆಲ್‌ನಲ್ಲಿ ನೀರಿಲ್ಲ ಎಂದು ಅಧಿಕಾರಿಗಳು ಸುಳ್ಳು ಹೇಳುತ್ತಿದ್ದಾರೆ.

 -ಲಚ್ಚಪ್ಪ

ಬೈರವೇಶ್ವರ ನಗರ

ನೀರು ಪೂರೈಸುವಂತೆ ಪಾಲಿಕೆ ಅಧಿಕಾರಿಗಳಿಗೆ ದೂರು ಕೊಟ್ಟಿದ್ದೇವೆ. ತಕ್ಷಣವೇ ಒದಗಿಸುವಂತೆ ವಾಲ್ವ್‌ಮ್ಯಾನ್‌ಗೆ ತಿಳಿಸುತ್ತೇವೆ ಎಂದು ಹೇಳಿದ್ದ ಅವರು, ಈವರೆಗೂ ಯಾವ ಕ್ರಮವನ್ನೂ ಕೈಗೊಂಡಿಲ್ಲ.

-ಎನ್‌.ಗಣೇಶ್‌

 ಜನ್ನತ್ತ ಕಾಲೊನಿ‌

ಎರಡು ವಾರಗಳಿಂದ ನೀರಿಲ್ಲದೆ ವಿಪರೀತ ತೊಂದರೆ ಉಂಟಾಗಿದೆ.‌ ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರು ಪೂರೈಸಿಕೊಳ್ಳುತ್ತಿದ್ದೇವೆ. ಕೆಲಸಕ್ಕೆ ಹೋಗುವ ಧಾವಂತದಲ್ಲಿ ಸ್ವಲ್ಪವೇ ಹಿಡಿದಿಡುವಂತಾಗಿದೆ.

 
-ಆರ್‌.ಜಿ.ಶಶಿಶ್ರೀ

ಅಯ್ಯಪ್ಪ ಬಡಾವಣೆ, ಮಾರತ್ತಹಳ್ಳಿ

ಪ್ರತಿ ಟ್ಯಾಂಕರ್‌ ನೀರಿಗೆ ₹ 800 ಕೊಟ್ಟು ಖರೀದಿಸುತ್ತಿದ್ದೇವೆ. ಜಲಮಂಡಳಿ ನೀರು ಬಿಡದ ಕುರಿತು ಸಚಿವರಿಗೆ ದೂರು ಕೊಟ್ಟರೂ ಪ್ರಯೋಜನವಾಗಿಲ್ಲ.

-ಶಶಿ

 ಸಂಜಯನಗರ

ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿಸಿಕೊಳ್ಳುತ್ತಿದ್ದೇವೆ. ಅಧಿಕಾರಿಗಳ ಬೇಜವಾಬ್ದಾರಿಗಳಿಂದ ಜನರು ತುಂಬಾ ತೊಂದರೆ ಅನುಭವಿಸುಂತಾಗಿದೆ.

-ತುಳಸಿರಾಮ್

**

ಬೇಸಿಗೆ ಆರಂಭದಲ್ಲೇ ನಗರದ ಹಲವು ಬಡಾವಣೆಗಳಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿದೆ, ಜನರ ಈ ಬವಣೆ. ಮೇಲೆ 'ಪ್ರಜಾವಾಣಿ' ಬೆಳಕು ಚೆಲ್ಲುತ್ತಿದೆ, ನಿಮ್ಮ ಬಡಾವಣೆಯಲ್ಲೂ ನೀರಿನ ಸಮಸ್ಯೆಯಿದ್ದರೆ ವಾಟ್ಸ್ಆ್ಯಪ್ ಮಾಡಿ
9513322930

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !