ಮಂಗಳವಾರ, ನವೆಂಬರ್ 19, 2019
22 °C
ಕಂಪನಿಗಳು–ಸರ್ಕಾರಿ ಸಂಸ್ಥೆಗಳಿಗೆ ಜಲಮಂಡಳಿಯಿಂದ ಪೂರೈಕೆ l ಖಾಸಗಿಯವರಿಗೂ ಅವಕಾಶ

ಶುದ್ಧೀಕರಿಸಿದ ತ್ಯಾಜ್ಯನೀರು ಮಾರಾಟ

Published:
Updated:
Prajavani

ಬೆಂಗಳೂರು: ತ್ಯಾಜ್ಯ ನೀರು ಸಂಸ್ಕರಣ ಘಟಕಗಳಲ್ಲಿ (ಎಸ್‌ಟಿಪಿ) ಶುದ್ಧೀಕರಿಸಿದ ನೀರನ್ನು ಮಾರಾಟ ಮಾಡಲು ಜಲಮಂಡಳಿ ಮುಂದಾಗಿದೆ. ಕೊಳವೆಬಾವಿ ನೀರಿಗಿಂತ ಅತಿ ಕಡಿಮೆ ದರದಲ್ಲಿ ಈ ನೀರನ್ನು ಮಂಡಳಿಯು ಸರಬರಾಜು ಮಾಡಲಿದೆ. 

ಮಂಡಳಿಯು ವಿವಿಧೆಡೆ 25 ಎಸ್‌ಟಿಪಿಗಳನ್ನು ನಿರ್ಮಾಣ ಮಾಡಿದ್ದು, ಈ ಘಟಕಗಳಲ್ಲಿ ದಿನಕ್ಕೆ 106 ಕೋಟಿ ಲೀಟರ್‌ ನೀರನ್ನು ಸಂಸ್ಕರಿಸಲಾಗುತ್ತಿದೆ. ಈ ಪೈಕಿ, ಸರ್ಕಾರಿ ಸಂಸ್ಥೆಗಳು ಹಾಗೂ ಬೃಹತ್‌ ಕಂಪನಿಗಳಿಗೆ 31 ಕೋಟಿ ಲೀಟರ್‌ ನೀರನ್ನು ಪೂರೈಸಲಾಗುತ್ತಿದೆ. ಇದಕ್ಕೆ, ಪ್ರತಿ 6 ಸಾವಿರ ಲೀಟರ್‌ಗಳಿಗೆ ₹360 ದರ ನಿಗದಿ ಮಾಡಲಾಗಿದೆ.

ಲಾಲ್‌ಬಾಗ್‌, ಕಬ್ಬನ್‌ ಪಾರ್ಕ್‌, ಯಲಹಂಕ ಹಾಗೂ ವಿ.ವ್ಯಾಲಿ ಘಟಕಗಳಿಂದ ತೃತೀಯ ಹಂತದ ತ್ಯಾಜ್ಯ ನೀರು ಪೂರೈಸಲಾಗುತ್ತಿದೆ. ಘಟಕಗಳಿಂದ ನೀರು ಪೂರೈಸಲು ಮಂಡಳಿಯು ಟ್ಯಾಂಕರ್‌ ವ್ಯವಸ್ಥೆಯನ್ನು ಕಲ್ಪಿಸಲಿದೆ.

‘ಶುದ್ಧೀಕರಿಸಿದ ನೀರು ಕುಡಿಯುವ ನೀರಿಗೆ ಸಮಾನವಾದ ಮಟ್ಟದಲ್ಲಿರುತ್ತದೆ. ಉದ್ಯಾನಗಳಿಗೆ, ಶೌಚಕ್ಕೆ ಹಾಗೂ ಕಟ್ಟಡ ನಿರ್ಮಾಣಕ್ಕೆ ಬಳಸಬಹುದು’ ಎಂದು ಮಂಡಳಿ ತ್ಯಾಜ್ಯ ನೀರು ನಿರ್ವಹಣಾ ವಿಭಾಗದ ಮುಖ್ಯ ಎಂಜಿನಿಯರ್‌ ನಿತ್ಯಾನಂದ ‘ಪ್ರಜಾವಾಣಿ’ಗೆ ತಿಳಿಸಿದರು. 

‘ದ್ವಿತೀಯ ಹಂತದಲ್ಲಿ ಶುದ್ಧೀಕರಿಸಿದ ನೀರನ್ನು ಉದ್ಯಾನಗಳ ನಿರ್ವಹಣೆಗೆ ಮಾತ್ರ ಬಳಸಬಹುದಾಗಿದೆ. ಆದರೆ, ತೃತೀಯ ಹಂತದಲ್ಲಿ ಈ ನೀರನ್ನು ಪ್ರಮುಖವಾಗಿ ಕಟ್ಟಡ ನಿರ್ಮಾಣ ಕಾರ್ಯಕ್ಕೂ ಬಳಸಬಹುದಾಗಿದೆ’ ಎಂದು ಹೇಳಿದರು. 

ಕೊಳವೆಬಾವಿ ನೀರಿಗಿಂತ ಕಡಿಮೆ ದರ: 

‘ಕೊಳವೆಬಾವಿಗಳ ಮೂಲಕ ಸಾವಿರ, ಒಂದೂವರೆ ಸಾವಿರ ಅಡಿಗಿಂತಲೂ ಆಳದಿಂದ ನೀರನ್ನು ಮೇಲೆತ್ತಬೇಕಾಗುತ್ತದೆ.

ಇದಕ್ಕೆ ಹೆಚ್ಚು ವಿದ್ಯುತ್‌ ವ್ಯಯವಾಗುತ್ತದೆ. ಇದಕ್ಕೆ ಹೋಲಿಸಿದರೆ, ಶುದ್ಧೀಕರಿಸಿದ ನೀರಿನ ಬೆಲೆ ತುಂಬಾ ಕಡಿಮೆಯಾಗುತ್ತದೆ. ಖಾಸಗಿ ಸಂಸ್ಥೆಗಳು ಕೂಡ ಈ ನೀರನ್ನು ಬಳಸಲು ಮುಂದಾಗಬೇಕು’ ಎಂದು ನಿತ್ಯಾನಂದ ಸಲಹೆ ನೀಡುತ್ತಾರೆ. 

ಷತೃತೀಯ ಹಂತದ ಎಸ್‌ಟಿಪಿಗಳಿಂದ ಸಾರ್ವಜನಿಕರು ಅವರ ಸ್ವಂತ ಟ್ಯಾಂಕರ್‌ಗಳಿಂದಲೂ ನೀರು ತರಿಸಿಕೊಳ್ಳಬಹುದು. ಇದಕ್ಕೆ ಪ್ರತಿ ಸಾವಿರ ಲೀಟರ್‌ಗೆ ₹15 ದರ ನಿಗದಿ ಪಡಿಸಲಾಗಿದೆ.

ನೀರಿಗಾಗಿ ಸಂಪರ್ಕಿಸಬೇಕಾದ ಸಂಖ್ಯೆ: ಸಹಾಯಕ ಮಾರಾಟ ಅಧಿಕಾರಿ, 98451–97012.

ಪ್ರತಿಕ್ರಿಯಿಸಿ (+)