ಹೊಸ ಸಂಶೋಧನೆಗಳ ಹಾದಿಯಲ್ಲಿ...

7

ಹೊಸ ಸಂಶೋಧನೆಗಳ ಹಾದಿಯಲ್ಲಿ...

Published:
Updated:

ಲೈಂಗಿಕ ಹಾಗೂ ಸಂತಾನಶಕ್ತಿ ಸಮಸ್ಯೆಗಳ ಪ್ರಮಾಣದಲ್ಲಿ ಏರಿಕೆಯಾಗಿರುವುದು, ಆತಂಕಕ್ಕೆ ಎಡೆಮಾಡಿಕೊಟ್ಟಿದೆ ಮಾತ್ರವಲ್ಲ, ಅವುಗಳ ನಿಯಂತ್ರಣದ ತುರ್ತನ್ನೂ ಒತ್ತಿಹೇಳುತ್ತಿದೆ. ಇದಕ್ಕೆ ಅನುವಾಗುವಂತೆ 2019ರಲ್ಲಿ ಲೈಂಗಿಕ ಆರೋಗ್ಯಕ್ಕೆ ಸಂಬಂಧಿಸದಂತೆ ಯಾವ ಯಾವ ಅನ್ವೇಷಣೆಗಳು ನಡೆಯಲಿವೆ, ಯಾವ ಆಯ್ಕೆಗಳು ಇರಲಿವೆ, ಯಾವ ವಿಷಯದಲ್ಲಿ ಇನ್ನಷ್ಟು ಸಂಶೋಧನೆಗಳು ನಡೆಯಬೇಕಿವೆ, ಯಾವ ಹೊಸ ಸಾಧ್ಯತೆಗಳು ತೆರೆದುಕೊಳ್ಳಲಿವೆ ಎಂಬುದನ್ನು ಎದುರು ನೋಡುವ ಸಮಯವೂ ಇದಾಗಿದೆ. ಹಾಗೆಯೇ 2019ರಲ್ಲಿ ಚಾಲ್ತಿಗೆ ಬರುವ ನಿರೀಕ್ಷೆಯಲ್ಲಿದ್ದ, ಆದರೆ ಫಲನೀಡದ ಸಂಶೋಧನೆ, ಚಿಕಿತ್ಸೆಗಳ ಕುರಿತ ಮಾಹಿತಿಯೂ ಇಲ್ಲಿದೆ. ಈ ವರ್ಷ ಚಿಕಿತ್ಸೆಯಲ್ಲಿ ಏನನ್ನು ನಿರೀಕ್ಷಿಸಬಹುದು, ಏನನ್ನು ನಿರ್ಲಕ್ಷಿಸಬಹುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಬಹುದು.

ಪ್ರಿಇಂಪ್ಲಾಂಟೇಷನ್ ಜೆನೆಟಿಕ್ ಸ್ಕ್ರೀನಿಂಗ್ (ಪಿಜಿಎಸ್) ಭ್ರೂಣ/ವಂಶವಾಹಿ ಪರೀಕ್ಷೆ: ಗರ್ಭಧಾರಣೆಯಲ್ಲಿ ನಿರಂತರ ವಿಫಲತೆಯನ್ನು ಕಂಡು, ಕೃತಕ ಗರ್ಭಧಾರಣೆಗೆ (ಐವಿಎಫ್) ಮೊರೆ ಹೋಗುವ ಮಂದಿ ಹೆಚ್ಚುತ್ತಿದ್ದಾರೆ. ಆದರೆ ಅದರಲ್ಲೂ ಸಫಲರಾಗಿ ಆರೋಗ್ಯವಂತ ಶಿಶುವನ್ನು ಪಡೆಯಲು ಸೋಲುವವರ ಸಂಖ್ಯೆಯೂ ಕಡಿಮೆಯಿಲ್ಲ. ಇದನ್ನು ತಪ್ಪಿಸಲು ಬಂದಿರುವ ತಂತ್ರಜ್ಞಾನ ಪಿ.ಜಿ.ಎಸ್. ಭ್ರೂಣವನ್ನು ಗರ್ಭಕೋಶಕ್ಕೆ ಸೇರಿಸುವ ಮುನ್ನ ವಂಶವಾಹಿ ಸಂಬಂಧಿ ಪರೀಕ್ಷೆ ನಡೆಯುತ್ತದೆ. ಈ ಸಮಯದಲ್ಲಿ ಭ್ರೂಣದ ಗುಣಮಟ್ಟವನ್ನು ಸ್ಕ್ರೀನಿಂಗ್ ನಡೆಸಿ ಪರೀಕ್ಷಿಸಲಾಗುತ್ತದೆ. ಇದು ಹೊಸ ಚಿಕಿತ್ಸೆಯಲ್ಲದಿದ್ದರೂ ಇದರ ಬಗ್ಗೆ ಜನಕ್ಕೆ ತಿಳಿದಿರುವುದು ಕಡಿಮೆ.

ಈ ಸ್ಕ್ರೀನಿಂಗ್ ಮೂಲಕ ಅಸಹಜ ಭ್ರೂಣ ಗರ್ಭಕೋಶ ಸೇರುವುದನ್ನು ತಪ್ಪಿಸಬಹುದು. ಈ ಮೂಲಕ ಗರ್ಭಧಾರಣೆಯಲ್ಲಿ ಯಶಸ್ಸನ್ನೂ ಪಡೆಯಬಹುದು. ಈ ಸ್ಕ್ರೀನಿಂಗ್‍ನ ಪ್ರಕ್ರಿಯೆಯು ಪ್ರಿಇಂಪ್ಲಾಂಟೇಷನ್ ಜೆನೆಟಿಕ್ ಡಯಾಗ್ನಸಿಸ್‍ನಂತೆಯೇ ಇದೆ. ಪಿಜಿಎಸ್ ಪ್ರಕ್ರಿಯೆಯಲ್ಲಿ ತಜ್ಞರು ಭ್ರೂಣದಲ್ಲಿನ ಕ್ರೋಮೋಸೋಮ್‍ಗಳ ಪರೀಕ್ಷೆ ನಡೆಸುತ್ತಾರೆ. ಪಿಜಿಡಿಯಲ್ಲಿ ನಿರ್ದಿಷ್ಟ ವಂಶವಾಹಿ ಸಮಸ್ಯೆ ಅಥವಾ ಕ್ರೋಮೋಸೋಮ್‍ಗಳಲ್ಲಿನ ಅಸಹಜತೆಯನ್ನು ಕಂಡುಕೊಳ್ಳಲಾಗುತ್ತದೆ.

ವೀರ್ಯ ಉತ್ಪತ್ತಿ: 2016ರಲ್ಲಿ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಚೈಲ್ಡ್ ಹೆಲ್ತ್ ಅಂಡ್ ಹ್ಯೂಮನ್ ಡೆವಲಪ್‍ಮೆಂಟ್‍ನ ಸಂಶೋಧಕರು ವೀರ್ಯದ ಅಭಿವೃದ್ಧಿ ಕುರಿತು ಹೊಸ ಹೊಳಹು, ಕಾರ್ಯಸಾಧ್ಯತೆಗಳನ್ನು ಸೂಚಿಸಿದ್ದರು. ಆ ಸಂಶೋಧನೆಯಲ್ಲಿನ ಫಲಿತಾಂಶ ಹಲವು ಭರವಸೆಗಳನ್ನೂ ಹುಟ್ಟಿಹಾಕಿತ್ತು. ಅದರಲ್ಲೂ ಪುರುಷಕೇಂದ್ರಿತ ಸಂತಾನಹೀನತೆ ಸಮಸ್ಯೆಗೆ ಒಳಗಾದ ಶೇ.40ರಷ್ಟು ದಂಪತಿಗಳಿಗೆ ಇದು ಅನುಕೂಲವಾಗಲಿದೆ ಎಂಬುದನ್ನು ತಿಳಿಸಿತ್ತು. ಆದರೆ ಸಂಶೋಧನೆ ಲ್ಯಾಬೊರೇಟರಿಯಲ್ಲಿ ಯಶಸ್ವಿಯಾಯಿತೇ ಹೊರತು, ಪ್ರಾಯೋಗಿಕವಾಗಿ ಫಲ ಕಂಡಿಲ್ಲ.

ದೇಹದ ಹೊರಗೆ, ಕೃತಕವಾಗಿ ವೀರ್ಯ ಉತ್ಪತ್ತಿ ಮಾಡುವ ಈ ತಂತ್ರ ಮಾರುಕಟ್ಟೆಗೆ ಬರುತ್ತಿಲ್ಲ. ಹಾಗೆಯೇ ಪುರುಷಕೇಂದ್ರಿತ ಲೈಂಗಿಕ ಸಮಸ್ಯೆಗೆ ಇದು ಉತ್ತಮ ಪರಿಹಾರವಾಗಬಲ್ಲದು ಎಂಬ ಭರವಸೆಯೂ ನಿಜವಲ್ಲ.

ಮಿನಿ ಐವಿಎಫ್: ಮಗುವನ್ನು ಪಡೆಯಲು ಐವಿಎಫ್ ತಂತ್ರಜ್ಞಾನದ ಮೊರೆ ಹೋಗುವವರು ಹೆಚ್ಚಿದ್ದಾರೆ. ಇದು ಅತಿ ಪರಿಣಾಮಕಾರಿ ತಂತ್ರಜ್ಞಾನವೂ ಹೌದು. ಆದರೆ ಈ ಪ್ರಕ್ರಿಯೆ ದುಬಾರಿಯಾಗಿದ್ದು, ಸರಣಿ ಚುಚ್ಚುಮದ್ದನ್ನು ತೆಗೆದುಕೊಳ್ಳುವುದು ಅನಿವಾರ್ಯ. ಇದಕ್ಕೆಂದೇ ಮಿನಿ ಐವಿಎಫ್ ಬದಲಿ ತಂತ್ರಜ್ಞಾನವಾಗಿ ಹೆಸರು ಮಾಡಿದೆ. ಇದರಿಂದ ಖರ್ಚು ಕಡಿಮೆ ಆಗುವುದು ಮಾತ್ರವಲ್ಲದೇ ಚುಚ್ಚುಮದ್ದಿನ ಪ್ರಮಾಣವನ್ನು ಕಡಿಮೆ ಮಾಡಬಹುದಾಗಿದೆ.

ಮಿನಿ ಐವಿಎಫ್ ಪ್ರಕ್ರಿಯೆಯಲ್ಲಿ ಮಹಿಳೆಗೆ ಕಡಿಮೆ ಪ್ರಮಾಣದಲ್ಲಿ ಔಷಧಿಗಳನ್ನು ನೀಡುವುದರಿಂದ ಐವಿಎಫ್ ಆವರ್ತಕ್ಕೆ ತಕ್ಕಂತೆ ಕೆಲವೇ ಪ್ರಮಾಣದ ಅಂಡಾಣು ಬಿಡುಗಡೆ ಸಾಧ್ಯವಾಗುತ್ತದೆ. ಮಗುವನ್ನು ಪಡೆಯಲು ಅವಶ್ಯಕವಾದಷ್ಟು ಅಂಡಾಣು ಪ್ರಮಾಣವನ್ನು ಹೊರತೆಗೆಯಲು ಅನುಕೂಲಕರವಾಗಿದೆ.

ಆದರೆ ಎಲ್ಲಾ ಮಹಿಳೆಯರಿಗೂ ಈ ತಂತ್ರಜ್ಞಾನ ಸೂಕ್ತವಲ್ಲ. ಎಷ್ಟೇ ಪ್ರಮಾಣದ ಔಷಧ ನೀಡಿದರೂ, ಅಂದರೆ ಔಷಧಗಳನ್ನು ಕಡಿಮೆ ನೀಡಿದರೂ, ಹೆಚ್ಚು ನೀಡಿದರೂ, ಒಂದೇ ಮಟ್ಟದಲ್ಲಿ ಅಂಡಾಣು ಬಿಡುಗಡೆ ಮಾಡುವ ಮಹಿಳೆಯರಿಗೆ ಈ ತಂತ್ರಜ್ಞಾನ ಅನುಕೂಲ. ಯಾವ ಪ್ರಮಾಣದಲ್ಲಿ ಔಷಧಿ ನೀಡಿದರೂ ಅಂಡಾಣು ಬಿಡುಗಡೆಯಲ್ಲಿ ಅಷ್ಟೇನೂ ವ್ಯತ್ಯಾಸ ಕಾಣದ ಮಹಿಳೆಯರಿಗೆ ಇದು ನೆರವಾಗಬಲ್ಲದು.

ಉತ್ತೇಜಕ ಅಂಡಾಣು ಉತ್ಪತ್ತಿ ಅಥವಾ ಅಭಿವೃದ್ಧಿ: ಹಲವು ದಂಪತಿಗಳಿಗೆ ಮಗುವನ್ನು ಪಡೆಯುವ ಹಂಬಲ, ಕನಸಿಗೆ ಅಂಡಾಣುವಿನ ಗುಣಮಟ್ಟ ತಡೆಯಾಗುತ್ತದೆ. ಅಂಡಾಣು ದಾನ ಪಡೆಯುವುದು ಈ ಸಮಸ್ಯೆಗೆ ಪರಿಹಾರವಾಗಬಲ್ಲದು. ಆದರೆ ಕೆಲವು ತಜ್ಞರು ಈ ಸಮಸ್ಯೆ ನಿವಾರಣೆಗೆ ಇನ್ನೊಂದು ಆಯ್ಕೆಯನ್ನು ಸೃಷ್ಟಿಸಲು ಮುಂದಾಗಿದ್ದರು.

ವಯಸ್ಸಾದ ಮಹಿಳೆಯರಲ್ಲಿ ಸಮರ್ಥ ರೀತಿಯಲ್ಲಿ ಅಂಡಾಣು ಉತ್ಪತ್ತಿ ಅಥವಾ ವಯಸ್ಸಾಗುತ್ತಿರುವ ಅಂಡಾಣುಗಳ ಗುಣಮಟ್ಟ ವೃದ್ಧಿಸಲು ಇರುವ ಪ್ರಕ್ರಿಯೆಗಳ ಕುರಿತ ಸಂಶೋಧನೆಗೆ ತಮ್ಮ ಸಮಯ ಮೀಸಲಿಟ್ಟಿದ್ದರು. ದುರದೃಷ್ಟವೆಂದರೆ, ಈ ಸಾಧ್ಯತೆಯನ್ನು ತೆರೆದಿಟ್ಟ ಒಂದೇ ಒಂದು ಧನಾತ್ಮಕ ಉದಾಹರಣೆ ದೊರೆತಿಲ್ಲ. ಉತ್ತೇಜಕ ವೀರ್ಯ ಉತ್ಪತ್ತಿ ಸಾಧ್ಯವಾದಂತೆ ಅಂಡಾಣು ಉತ್ಪತ್ತಿ ಅಥವಾ ಅಭಿವೃದ್ಧಿಯೂ ಸಾಧ್ಯವಿದೆ ಎಂಬುದು ಪ್ರಾಯೋಗಿಕವಾಗಿ ಬಲು ದೂರವೇ ಉಳಿಯಿತು.

ಮುಂದುವರಿಯುವುದು...

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !