ನಿಜವಾದ ಖುಷಿಯ ಹಾದಿಯಲಿ..

ಮಂಗಳವಾರ, ಏಪ್ರಿಲ್ 23, 2019
31 °C

ನಿಜವಾದ ಖುಷಿಯ ಹಾದಿಯಲಿ..

Published:
Updated:
Prajavani

‘ಮೊನ್ನೆ ಒಂದು ಹೊಸಾ ಮೊಬೈಲ್ ತೊಗೊಂಡೆ ಕಣೆ, ಎರಡು ದಿನ ಖುಷಿಯಾಗಿದ್ದೆ. ಇವತ್ತು ಆಗ್ಲೆ ಹೊಸ ಮಾಡೆಲ್ ಬಿಟ್ಟಿದಾನೆ ನೋಡು. ಬೇಜಾರಾಗೋಯ್ತು’

‘ಹೌದು ಕಣೆ, ನಂದೂ ಅದೇ ಕತೆ. ಲೇಟೆಸ್ಟ್ ಮಾಡೆಲ್ ಅಂತ ಒಂದು ಟೀಶರ್ಟ್ ತೊಗೊಂಡು ವಾರ ಆಗಿಲ್ಲ, ಇವತ್ತು ಹೋಗಿ ನೋಡಿದ್ರೆ ಇನ್ನೂ ಸಖತ್ತಾಗಿರೋದು ಬಂದಿದೆ ಅಂಗಡೀಲಿ’.

‘ಮಚ್ಚಾ, ಹೊಸಾ ಮಾಡೆಲ್ ಅಂತ ನಾನು ಮೂರು ತಿಂಗಳ ಹಿಂದೆ ಬೈಕ್ ತೊಗೊಂಡ್ರೆ ಈಗಾಗ್ಲೆ ಬೇರೆ ಕಂಪನೀದು ಇನ್ನೂ ಲೇಟೆಸ್ಟ್ ಮಾಡೆಲ್ ಕಡಿಮೆ ಬೆಲೆಗೆ ಸಿಗ್ತಾ ಇದೆ. ನನ್ನ ಬೈಕ್ ಡಬ್ಬಾ ಅನಿಸ್ತಾ ಇದೆ’

‘ನಂದು ಇನ್ನೊಂದು ಥರ ಫ್ರೆಂಡ್ಸ್‌, ಲವ್ವುಡವ್ವು ಅಂತೆಲ್ಲಾ ನಂಜೊತೆಗೆ ಆರು ತಿಂಗಳಿಂದ ಓಡಾಡ್ತಿದ್ದೋಳು ಈಗ ಬ್ರೇಕ್‌ಅಪ್ ಅಂತ್ಹೇಳಿ ಮತ್ತೊಬ್ಬನ ಹಿಂದೆಬಿದ್ದಿದ್ದಾಳೆ. ತಲೇನೆ ಕೆಟ್ಟೊಗಿದೆ ಕಣ್ರೋ. ನಾನೊಂತರಾ ಹಳೆ ಪಾತ್ರೆ ಹಳೆ ಕಬ್ಣಾ ಅನಿಸ್ತಾ ಇದೆ’

ಈ ಮೇಲಿನ ಸಂಭಾಷಣೆಗಳನ್ನು ಗಮನಿಸಿದರೆ ಇಂದಿನ ಡಿಜಿಟಲ್‌ ಯುಗದಲ್ಲಿ ಖುಷಿ ಅನ್ನೋದು ತನ್ನ ಅರ್ಥವನ್ನೇ ಕಳೆದುಕೊಂಡು ಬಿಟ್ಟಿದೆ ಎನಿಸುತ್ತದೆ. ಎಲ್ಲಾ ತರಹದ ಗ್ಯಾಜೆಟ್‌ಗಳು, ಬೆರಳ ತುದಿಯಲ್ಲಿ ಪ್ರಪಂಚ ತೋರಿಸುವ ಅಂತರ್ಜಾಲ, ಬೇಕೆಂದಾಗ ದೊರೆಯುವ ಸ್ನೇಹಿತರು- ಎಲ್ಲಾ ಇದ್ರೂ ಹೇಗೆ ಅತೃಪ್ತಿ ಅಸಮಾಧಾನಗಳಲ್ಲೇ ಇರ್ತಾರಲ್ವಾ? ಈ ರೀತಿಯ ಬೇಸರ, ಹಪಾಹಪಿಗಳೇ ಉದ್ಯಮಿಗಳಿಗೆ ದೊಡ್ಡ ಮಾರುಕಟ್ಟೆ ಒದಗಿಸುತ್ತದೆ. ತಮ್ಮ ವ್ಯಾಪಾರವನ್ನು ನಿರಂತರವಾಗಿ ಬೆಳೆಸುತ್ತಾ ಇರಲು ದಿನನಿತ್ಯ ಹೊಸ ಮಾದರಿಗಳ ನಶೆ ಅಂಟಿಸಿದ್ದಾರೆ. ಸ್ನೇಹಿತರ ಮಧ್ಯೆ ಘನತೆ ಗೌರವಗಳನ್ನು ಹೆಚ್ಚಿಸಿಕೊಳ್ಳುವ ಹಂಬಲದಲ್ಲಿ ಅದರ ಹಿಂದೆ ಬೀಳುವುದು ಅನಿವಾರ್ಯವಾಗಿದೆಯಲ್ಲವೇ?

ಇಷ್ಟೆಲ್ಲಾ ಇದ್ದರೂ ಸಂತಸ, ಖುಷಿಯ ಕ್ಷಣಗಳೆಲ್ಲಿ ಅಡಗಿ ಕುಳಿತಿವೆ? ಅರಿಸ್ಟಾಟಲ್‌ ಹೇಳಿದ ಸಂತಸದ ಬದುಕು, ಒಳ್ಳೆಯ ಮಾರ್ಗದಲ್ಲಿ ಒಬ್ಬ ಮನುಷ್ಯ ತನ್ನ ಕರ್ತವ್ಯಗಳನ್ನು ನಿಭಾಯಿಸಿದಾಗ ಒಳಗಿಂದ ಎದ್ದು ಬರುವ ಆ ಖುಷಿ ಈಗೇಕೆ ಕಾಣೆಯಾಗಿದೆ?

ಎಲ್ಲಾ ಮನುಷ್ಯರಿಗೂ ತಮ್ಮದೇ ಆದ ಒಂದು ಸ್ವಂತ ವ್ಯಕ್ತಿತ್ವ ಇರಬೇಕು ಅಂತ ಆಸೆ ಇರೋದು ಸಹಜ. ಆದರೆ ಅಂತಹ ಸ್ವಂತಿಕೆ ಬೆಳೆಸಿಕೊಳ್ಳೋದು ಸುಲಭವಲ್ಲ. ಅದಕ್ಕೆ ಪರಿಶ್ರಮ, ಸಮಯ, ಸಹನೆ ಎಲ್ಲವೂ ಇರಬೇಕು. ನಮ್ಮ ವ್ಯಕ್ತಿತ್ವಕ್ಕೆ ಒಳಗಿನಿಂದ ಗಟ್ಟಿತನ ಸಿಗುವುದು ಕಷ್ಟ ಎನ್ನಿಸಿದಾಗ ಹೊರಗಿನಿಂದ ತೇಪೆ ಹಚ್ಚಿ ಅದನ್ನು ಆಕರ್ಷಕವಾಗಿ ಮಾಡಲು ಯೋಚಿಸುತ್ತೇವೆ. ಇಂತಹ ಪ್ರಯತ್ನದಲ್ಲಿರುವಾಗಲೇ ಯಾವಾಗಲೂ ನನ್ನ ಹತ್ತಿರ ಮಾತ್ರ ಇರಬಹುದಾದ ಹೊಸಮಾದರಿಯ ವಸ್ತುಗಳು ಬೇಕು ಎನ್ನಿಸುವುದು.

ನಿಮ್ಮ ಹಣದ ಮಿತಿಯಲ್ಲಿ ನಿಮಗೆ ಅಗತ್ಯವಿರುವಷ್ಟು ಗ್ಯಾಜೆಟ್‌ಗಳನ್ನು ಕೊಳ್ಳುವುದು ಸಹಜವೇ. ಆದರೆ ನಿಮ್ಮ ಇಡಿ ವ್ಯಕ್ತಿತ್ವದ ಗುರುತನ್ನು ಅವುಗಳ ಮೂಲಕ ಪಡೆದುಕೊಳ್ಳಲು ಹೊರಟಾಗ ನೀವು ಒಳಗಡೆಯಿಂದ ಖಾಲಿಯಾಗಿ ಉಳಿಯುತ್ತೀರಿ. ಇಂತಹ ಖಾಲಿತನ ನಿಮ್ಮಲ್ಲಿ ಅತೃಪ್ತಿಯನ್ನು ಹುಟ್ಟುಹಾಕುತ್ತದೆ. ತಕ್ಷಣದ ಸಂತೋಷವನ್ನು ಹುಡುಕುವ ಪ್ರಯತ್ನವೇ ಅತೃಪ್ತಿಗೆ ಕಾರಣವಾಗುವುದು ಎಂತಹ ವಿಪರ್ಯಾಸವಲ್ಲವೇ? ಹಾಗಾಗಿ ಮೊದಲು ಸಂತೋಷ ಮತ್ತು ತೃಪ್ತಿಗಳಲ್ಲಿರುವ ವ್ಯತ್ಯಾಸವನ್ನು ಗುರುತಿಸಿಕೊಳ್ಳುವ ಅಗತ್ಯವಿರುತ್ತದೆ.

ಸಂತೋಷ ಹೊರಗಡೆಯ ವಸ್ತುಗಳಿಂದ ಬಂದಾಗ ಅದು ತಾತ್ಕಾಲಿಕ. ಆದರೆ ತೃಪ್ತಿ ನಿಮ್ಮೊಳಗಿನ ಅನುಭವ. ಹಾಗಾಗಿ ಅದನ್ನು ಯಾರೂ ಕಸಿದುಕೊಳ್ಳಲಾಗದು. ಹೊಸ ಮಾದರಿಯ ಮೊಬೈಲ್ ಖುಷಿ ನೀಡಬಹುದು. ಆದು ನಿಮ್ಮ ಸ್ವಂತ ಗಳಿಕೆಯ ಹಣದಿಂದ ಕೊಂಡದ್ದಾಗಿದ್ದರೆ ತೃಪ್ತಿಯೂ ಸಿಗುತ್ತದೆ.

ಸಂತೋಷವನ್ನು ತಕ್ಷಣ ಬೇಕೆಂದಾಗ ಕೊಳ್ಳಬಹುದು. ಆದರೆ ತೃಪ್ತಿಯನ್ನು ನಿಧಾನವಾಗಿ ನಿರಂತರ ಪ್ರಯತ್ನದಿಂದ ಗಳಿಸಬೇಕು. ಒಂದು ಕಷ್ಟದ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಅಥವಾ ಉತ್ತಮ ಉದ್ಯೋಗ ಪಡೆಯುವ ತೃಪ್ತಿ ಬೇಕಿದ್ದರೆ ಶ್ರಮ ಸಮಯ ಎಲ್ಲವನ್ನೂ ಬಂಡವಾಳವಾಗಿ ಹೂಡಲೇಬೇಕು.

ತೃಪ್ತಿಯ ಜೊತೆ ಸಂತೋಷವಿದ್ದೇ ಇರುತ್ತದೆ. ಆದರೆ ಎಲ್ಲಾ ಸಂತೋಷದ ಜೊತೆಗೆ ತೃಪ್ತಿ ಇರಲೇಬೇಕೆಂದಿಲ್ಲ. ಕಷ್ಟಪಟ್ಟು ಗಳಿಸಿದ ಅಂಕ ಅಥವಾ ನೌಕರಿಗಳಲ್ಲಿ ಸಂತೋಷ ಮತ್ತು ತೃಪ್ತಿ ಎರಡೂ ಇದ್ದರೆ ಮೊಬೈಲ್ ಗೇಮ್‌ಗಳು ಆ ಕ್ಷಣದ ಸಂತೋಷವನ್ನು ಮಾತ್ರ ನೀಡಬಹುದು, ಅಂತಹ ಸಂತೋಷವನ್ನು ಉಳಿಸಿಕೊಳ್ಳಲು ನಿರಂತರವಾಗಿ ಆಡುತ್ತಲೇ ಇರಬೇಕಾಗುತ್ತದೆ. ಇದು ಅಸಾಧ್ಯ ಎಂದು ನಿಮಗೆಲ್ಲಾ ಗೊತ್ತೇ ಇದೆ.

ಮಾರುಕಟ್ಟೆಯಲ್ಲಿ ದೊರೆಯುವ ಗ್ಯಾಜೆಟ್‌ಗಳು ಹಲವಾರು ರೀತಿಯಲ್ಲಿ ನಿಮಗೆ ಸಹಾಯ ಮಾಡುತ್ತವೆ. ಆದರೆ ಅವುಗಳು ತೋರಿಸುವ ಭ್ರಮಾಲೋಕದಲ್ಲಿ ಕೊಚ್ಚಿಹೋದರೆ ತೃಪ್ತಿ ನಿಮ್ಮಿಂದ ನುಣುಚಿಕೊಳ್ಳುತ್ತದೆ. ಈ ಎಚ್ಚರದೊಂದಿಗೆ ಖುಷಿಯನ್ನು ಹುಡುಕಲು ನಿಮ್ಮ ಯೋಜನೆ ಮತ್ತು ಯೋಚನೆಗಳಿಗೊಪ್ಪುವ ಮಾನದಂಡಗಳನ್ನು ಹಾಕಿಕೊಳ್ಳಬೇಕು. ನಿಮ್ಮ ಸಂತೋಷ ಮತ್ತು ತೃಪ್ತಿಯ ಜಂಟಿ ಹುಡುಕಾಟಕ್ಕೆ ಈ ಕೆಳಗಿನ ಅಂಶಗಳೂ ಸಹಾಯ ಮಾಡಬಹುದು.

ಮಾರುಕಟ್ಟೆಯಲ್ಲಿ ದೊರೆಯುವ ವಸ್ತುಗಳು ವ್ಯಾಪಾರದ ದೃಷ್ಟಿಯಿಂದ ಸೃಷ್ಟಿಯಾದದ್ದು. ಅವುಗಳನ್ನು ಹೊಂದುವುದೇ ನಿಮ್ಮ ಸಂತೋಷ, ತೃಪ್ತಿಗಳ ಮಾನದಂಡವಾಗಬಾರದು. ನಿಮ್ಮಲ್ಲಿ ಪ್ರತಿಯೊಬ್ಬರೂ ವಿಭಿನ್ನ ಮತ್ತು ವಿಶಿಷ್ಟ. ನಿಮ್ಮ ಸ್ವಂತಿಕೆಗಾಗಿ ಹುಡುಕಾಡಬೇಕು. ನಿಧಾನವಾಗಿಯಾದರೂ ಅದರ ಅರಿವು ನಿಮಗೆ ಆಗಲೇಬೇಕು. ಆದರೆ ಹುಡುಕಾಟದ ಹಾದಿಯಲ್ಲಿನ ಆತಂಕವನ್ನು ಮರೆಯಲು ಮಾರುಕಟ್ಟೆಯ ವಸ್ತುಗಳಿಗೆ ಮೊರೆ ಹೋದಿರೋ ನಿಮಗೆ ಅವುಗಳ ನಶೆ ಅಂಟಿಕೊಳ್ಳುವ ಸಾಧ್ಯತೆಗಳಿರುತ್ತವೆ.

ಸ್ನೇಹ ಸಂಬಂಧಗಳಲ್ಲಿನ ಸಂತೋಷ ಕಾಯಮ್ಮಾಗಿ ಇರುವಂತಹದು. ಗ್ಯಾಜೆಟ್‌ಗಳಿಂದ ಸಿಗುವ ಖುಷಿಗಿಂತ ಇವುಗಳಿಗೆ ಆದ್ಯತೆ ನೀಡಿ.

ಏಕಾಂಗಿತನವನ್ನು ಹೊಡೆದೋಡಿಸಲು ಯಾವಾಗಲೂ ಹೊರಗಡೆಯ ವಸ್ತು ಅಥವಾ ವ್ಯಕ್ತಿಗಳ ಮೊರೆಹೋಗಬೇಡಿ. ಒಂಟಿತನವನ್ನು ಅಂತರಂಗ ಶೋಧನೆಗಾಗಿ ಬಳಸಿಕೊಳ್ಳಬಹುದು. ಆಗಲೇ ನಿಮ್ಮ ಆಸಕ್ತಿ, ಆದ್ಯತೆಗಳನ್ನು ಗುರುತಿಸಲು ಮತ್ತು ನಿಮ್ಮನ್ನು ನೀವು ಹೆಚ್ಚು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ಈ ಕ್ಷಣದ ಸಂತೋಷ ಸುಖಗಳ ಆಕರ್ಷಣೆ ಸಹಜವಾದದ್ದು. ನಿಮ್ಮದೇ ಆಸಕ್ತಿ ಸ್ವಂತಿಕೆಗಳು ನಿಮ್ಮ ಅರಿವಿಗೆ ಬರುತ್ತಾ ಹೋದಂತೆ ಇಂತಹ ಸೆಳೆತಗಳು ತನ್ನಿಂದ ತಾನೇ ಹಿಂದೆ ಸರಿಯುತ್ತವೆ.

***
ಕೇವಲ ಸಂತೋಷಪಡಲು ಮಾತ್ರ ಪ್ರಕೃತಿ ಮನುಷ್ಯನನ್ನು ಸೃಷ್ಟಿಮಾಡಿದ್ದರೆ ದುಗುಡ, ಬೇಸರ, ಹತಾಶೆಗಳಂತಹ ಅನುಭವಗಳಿಗೆ ಮೆದುಳಿನಲ್ಲಿ ಅವಕಾಶವೇ ಇರಬೇಕಾಗಿರಲಿಲ್ಲ. ಪ್ರಕೃತಿ ಅಹಿತಕರ ಅನುಭವಗಳನ್ನೂ ಕೂಡ ಒಂದು ಉದ್ದೇಶದಿಂದ ನಮ್ಮೊಳಗೆ ತುರುಕಿದೆ. ಹಾಗಾಗಿ ಮನುಷ್ಯರಿಗೂ ಇಂತಹ ಪ್ರಯತ್ನದಲ್ಲಿ ಯಶಸ್ಸು ಸಿಗುವುದಿಲ್ಲ. ನಿರಂತರ ಸುಖದ ಹುಡುಕಾಟವೇ ನಮ್ಮಲ್ಲಿ ಹೆಚ್ಚುಹೆಚ್ಚು ಬೇಸರವನ್ನು ತುಂಬುತ್ತದೆ. ಸುಖ– ಸಮಾಧಾನಗಳನ್ನು ಹುಡುಕುತ್ತ ಸಮಯ ಕಳೆಯದೆ ಇರುವುದನ್ನು ಅನುಭವಿಸುವ ಮನಸ್ಥಿತಿಯನ್ನೂ ಬೆಳೆಸಿಕೊಂಡಾಗ ನಿಮ್ಮೊಳಗಿನ ಸಂತೋಷವನ್ನು ಇತರರಿಗೂ ಹಂಚಲು ಸಾಧ್ಯವಾಗುತ್ತದೆ.

(ಲೇಖಕರು ಶಿವಮೊಗ್ಗದಲ್ಲಿ ಆಪ್ತ ಸಮಾಲೋಚಕರು)

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !