ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಿಮೆಯಾದ ‘ಬಾಡಿ ಶೇಮಿಂಗ್‌’; ಝೀರೋದಿಂದ ಪ್ಲಸ್‌ ಸೈಝ್‌ವರೆಗೆ..

Last Updated 15 ಅಕ್ಟೋಬರ್ 2021, 19:31 IST
ಅಕ್ಷರ ಗಾತ್ರ

ಸಣ್ಣ ಪಟ್ಟಣದಿಂದ ಉದ್ಯೋಗದ ಸಲುವಾಗಿ ಬೆಂಗಳೂರಿಗೆ ಬಂದ ನಿವೇದಿತಾಗೆ ತನ್ನ ಸೈಝ್‌ನ ಸಿದ್ಧ ಉಡುಪು ಸಿಕ್ಕಾಗ ಆದ ಖುಷಿ ಅಷ್ಟಿಷ್ಟಲ್ಲ. ‘ಬುಟಿಕ್‌ಗೆ ಹೋದಾಗ ಗ್ರಾಹಕರ ಸೈಜ್‌ನ ಉಡುಪು ಸಿಕ್ಕಿಬಿಟ್ಟರೆ ಯಾರಿಗೆ ಖುಷಿಯಾಗಲ್ಲ ಹೇಳಿ’ ಎನ್ನುವ ನಿವೇದಿತಾ ಮಾತಿನ ಹಿಂದೆ ಕಾರಣಗಳೂ ಇಲ್ಲದಿಲ್ಲ.

ತೀರಾ ದಪ್ಪ ಇರುವ 26ರ ಹರೆಯದ ನಿವೇದಿತಾಗೆ ಹೊಸ ಫ್ಯಾಷನ್‌ನ ಉಡುಪು ಧರಿಸುವ ಆಸೆ ಸಹಜವಾಗಿದ್ದರೂ, ತನ್ನ ಊರಿನಲ್ಲಿ ‘ಪ್ಲಸ್‌ ಸೈಜ್‌’ ಉಡುಪು ಸಿಗದೇ ನಿರಾಶೆ ಅನುಭವಿಸಬೇಕಾಗಿತ್ತು. ಟೈಲರ್‌ಗೋ ಈಗ ಟ್ರೆಂಡ್‌ ಇರುವ ಹೊಸ ಫ್ಯಾಷನ್‌ನ ಉಡುಪುಗಳನ್ನು ಸಿದ್ಧಪಡಿಸುವಷ್ಟು ಪರಿಣತಿ ಇಲ್ಲ. ಹಾರ್ಮೋನ್‌ ಸಮಸ್ಯೆ ಇರುವ ಆಕೆಗೆ ತೂಕ ಇಳಿಸಿಕೊಳ್ಳುವುದು ಸುಲಭದ ಮಾತಲ್ಲ. ಅಂಗಡಿಗೆ ಹೋದರೆ ಸಾಕು, ಕೌಂಟರ್‌ನಲ್ಲಿರುವ ಹುಡುಗಿಯರು ‘ನಿಮ್ಮ ಸೈಝ್‌ ಡ್ರೆಸ್‌ ಸಿಗುವುದಿಲ್ಲ ಬಿಡಿ’ ಎಂದು ಕೊಂಕು ನಗೆಯೊಂದಿಗೆ ಹೇಳುವ ಮಾತಿನಿಂದ ಅವಮಾನವಾಗುತ್ತಿತ್ತು.

ಜಾಹೀರಾತಿನಲ್ಲೂ ಅಷ್ಟೆ, ತೆಳ್ಳಗಿರುವ ರೂಪದರ್ಶಿಗಳನ್ನು ಹಾಕಿಕೊಂಡು ‘ಝೀರೋ ಸೈಜ್‌’ ಅನ್ನು ಜನಪ್ರಿಯ ಮಾಡಲು ಹೊರಟಿದ್ದವು ಜಾಹೀರಾತು ಕಂಪನಿಗಳು. ಭಾರತದಲ್ಲಿ ಪ್ಲಸ್‌ ಸೈಝ್‌ನವರ ಸಂಖ್ಯೆ ಜಾಸ್ತಿ. ಇಂಥವರಿಗೆ ತಮಗೆ ಬೇಕಾದ ಉಡುಪುಗಳನ್ನು ಹುಡುಕುವುದೆಂದರೆ ಕಷ್ಟದಾಯಕವೇ. ಹೆಚ್ಚಿನ ಮಳಿಗೆಗಳಲ್ಲಿ ಎಕ್ಸ್‌ಎಲ್‌ ಸೈಜ್‌ನ ಉಡುಪಿಗೂ ಹುಡುಕಾಡಬೇಕು, ಇನ್ನು ಡಬಲ್‌ ಎಕ್ಸ್‌ಎಲ್‌, ತ್ರಿಬಲ್‌ ಎಕ್ಸ್‌ಎಲ್‌... ಎಲ್ಲಿ ಸಿಗಬೇಕು ಹೇಳಿ.

ಪ್ಲಸ್‌ ಸೈಝ್‌ ಆಂದೋಲನ
ಆದರೆ ಕಳೆದ ಒಂದೆರಡು ವರ್ಷಗಳಿಂದ ‘ನಿಮ್ಮ ದೇಹವನ್ನು ನೀವು ಪ್ರೀತಿಸಿ’, ‘ದಪ್ಪ ಇದ್ದರೂ ಚೆಂದವೇ’, ‘ಬಾಡಿ ಪಾಸಿಟಿವಿಟಿ’ ಮೊದಲಾದ ಆಂದೋಲನಗಳು ಸಾಮಾಜಿಕ ಜಾಲತಾಣಗಳಲ್ಲೂ ಹೆಚ್ಚಾಗಿ ನಡೆಯುತ್ತಿವೆ. ಇದು ಮುಖ್ಯ ವಾಹಿನಿಯ ಸಂಸ್ಕೃತಿಯ ಮೇಲೆ ಪ್ರಭಾವ ಬೀರಿದ್ದಂತೂ ನಿಜ.

‘ಸೆಲೆಬ್ರಿಟಿಗಳು ಮತ್ತು ಫ್ಯಾಷನ್‌ ವಲಯ ದಲ್ಲಿ ಪ್ಲಸ್‌ ಸೈಜ್‌ ರೂಪದರ್ಶಿಗಳಿಗೆ ಒತ್ತು ನೀಡುತ್ತಿದ್ದು, ಮಾರಾಟ ಪ್ರಚಾರವೂ ದಪ್ಪ ಇರುವವರ ಮೇಲೆ ಕೆಂದ್ರೀಕೃತವಾಗಿದೆ’ ಎನ್ನುತ್ತಾರೆ ಬೆಂಗಳೂರಿನ ಫ್ಯಾಷನ್‌ ಡಿಸೈನರ್‌ ರೂಪಾ ಕಾರ್ನಿಕ್‌.

ನಮ್ಮ ದೇಹದ ಬಗ್ಗೆ ಸಕಾರಾತ್ಮಕ ನಿಲುವು ತಾಳುವುದಕ್ಕೆ ಪ್ರೋತ್ಸಾಹ ನೀಡುವುದರಿಂದ ಪ್ಲಸ್‌ ಸೈಜ್‌ ಇರುವ ಮಹಿಳೆಯರು ಮಾತ್ರವಲ್ಲ, ಪುರುಷರೂ ಕೂಡ ತಮ್ಮ ದೇಹದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಆರಂಭವಾಗಿದೆ ಎಂಬುದರ ಅವರ ಅಭಿಪ್ರಾಯ.

ಇದರಿಂದಾದ ಪರಿಣಾಮವೆಂದರೆ ದೇಶೀಯ ಫ್ಯಾಷನ್‌ ಬ್ರ್ಯಾಂಡ್‌ಗಳು ಹಾಗೂ ಬಹುರಾಷ್ಟ್ರೀಯ ಕಂಪನಿಗಳು ತಮ್ಮ ಉತ್ಪನ್ನಗಳಲ್ಲಿ ಪ್ಲಸ್‌ ಸೈಜ್‌ ಸೇರಿಸಿಕೊಂಡು ಮಾರುಕಟ್ಟೆಗೆ ಬಿಡುತ್ತಿವೆ. ಆನ್‌ಲೈನ್‌ನಲ್ಲೂ ಅಷ್ಟೇ, 4ಎಲ್‌, 5ಎಲ್‌ ಸೈಜ್‌ಗಳೂ ಲಭ್ಯ. ಒಂದು ವರದಿಯ ಪ್ರಕಾರ ಭಾರತದಲ್ಲಿ ಫ್ಯಾಷನ್‌ ಉದ್ಯಮದಲ್ಲಿ ಈ ಶಾಖೆ ಅತ್ಯಂತ ವೇಗವಾಗಿ ಬೆಳವಣಿಗೆ ಸಾಧಿಸುತ್ತಿದೆ. ಈ ಕೋವಿಡ್‌ ಸಂದರ್ಭದಲ್ಲಿ ಕೂಡ ಪ್ಲಸ್‌ ಸೈಝ್‌ ಉಡುಪುಗಳ ಮಾರುಕಟ್ಟೆ ಒಂದೇ ಸಮನೆ ಬೆಳೆಯುತ್ತಿದೆ ಎನ್ನುತ್ತದೆ ವರದಿ.

ಇದರ ಪರಿಣಾಮವೆಂದರೆ ಕೇವಲ ‘ಸ್ಟ್ರೇಟ್‌ ಸೈಝ್‌’ ಅಥವಾ ‘ನ್ಯಾರೊ ಫಿಟ್‌’ ಉಡುಪುಗಳನ್ನು ಮಾರುವ ರಿಟೇಲ್‌ ಮಳಿಗೆಗಳು ಕೂಡ ಪ್ಲಸ್‌ ಸೈಝ್‌ ಉಡುಪುಗಳ ಮಾರಾಟ ಆರಂಭಿಸಿವೆ. ಮಹಿಳೆಯರ ಎಥ್ನಿಕ್‌ ಸಿದ್ಧ ಉಡುಪುಗಳನ್ನು ಮಾರುವ ‘ಡಬ್ಲ್ಯು’ನಂತಹ ಬ್ರ್ಯಾಂಡ್‌ ಪ್ಲಸ್‌ ಸೈಝ್‌ ಮಳಿಗೆಗಳನ್ನು ಪ್ರತ್ಯೇಕವಾಗಿ ತೆರೆದಿದೆ.

ಎಲ್ಲಾ ಸೈಝ್‌ನ ಉಡುಪುಗಳು ಲಭ್ಯ ಎಂದರೆ ಫ್ಯಾಷನ್‌ನಲ್ಲಿ ಎಲ್ಲಾ ಬಗೆಯ ದೇಹವುಳ್ಳವರನ್ನು ಸೇರಿಸಿಕೊಂಡಂತೆಯೇ. ಆದರೆ ಕೆಲವು ಬ್ರ್ಯಾಂಡ್‌ಗಳು ಸೈಝ್‌ ಜಾಸ್ತಿಯಾದಂತೆ ದರವನ್ನೂ ಹೆಚ್ಚು ನಿಗದಿಪಡಿಸುತ್ತಿದ್ದು, ಇದು ಹಲವರಲ್ಲಿ ಅಸಮಾಧಾನ ಮೂಡಿಸಿದೆ.

ಏನೇ ಆಗಲಿ, ಕನಿಷ್ಠ ‘ಬಾಡಿ ಶೇಮಿಂಗ್‌’ ಅಥವಾ ದಪ್ಪ, ಗಿಡ್ಡ, ಕಪ್ಪು ಎಂದೆಲ್ಲ ಟೀಕಿಸುವವರನ್ನು ಈ ಪ್ಲಸ್‌ ಸೈಝ್‌ ಆಂದೋಲನ ಬಾಯಿ ಮುಚ್ಚಿಸುವಂತಿದೆ. ದಪ್ಪ ಇರುವವರಿಗೂ ಧರಿಸಲು ಉಡುಪು ಬೇಕಲ್ಲವೇ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT