ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಗ ನಿರೋಧಕ ಶಕ್ತಿಹೆಚ್ಚಿಸುವ ಅಗಸೆ

Last Updated 21 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಊಟದಲ್ಲಿ ಎಲ್ಲಾ ರೀತಿಯ ಪೋಷಕಾಂಶಗಳು ಸಮನಾಗಿ, ಸಮಯಕ್ಕೆ ಸರಿಯಾಗಿ ದೇಹದಲ್ಲಿ ಬೆರೆತರೆ ಮನುಷ್ಯ ಆರೋಗ್ಯವಾಗಿರಲು ಸಾಧ್ಯ. ಆದರೆ ಈಗಿನ ಒತ್ತಡದ ಬದುಕಿನಲ್ಲಿ ಪೌಷ್ಟಿಕ ಆಹಾರವನ್ನು ಮರೆತಿದ್ದೇವೆ. ನಮ್ಮ ಪೂರ್ವಜರು ‘ಮೆಂತ್ಯೆ ತಿಂತಿಂದ್ರೆ, ರೋಗಕ್ಕೆ ಅಂತ್ಯ’ ಎನ್ನುತ್ತಿದ್ದರು. ಮೆಂತ್ಯೆಯಂತಹ ಪೌಷ್ಟಿಕಾಂಶವಿರುವ, ಆರೋಗ್ಯ ಸುಧಾರಿಸುವ ಧಾನ್ಯ, ಕಾಳುಗಳು, ಬೀಜಗಳು ನಮ್ಮ ಸುತ್ತಮುತ್ತಲಿವೆ.

ಅವುಗಳ ಸಮರ್ಪಕ ಬಳಕೆ ಗೊತ್ತಿರಬೇಕು ಅಷ್ಟೆ. ಆಧುನಿಕ ಸಿದ್ಧ ಆಹಾರ, ಜಂಕ್‌ ತಿನಿಸಿನ ಹಾವಳಿಯಲ್ಲಿ ಮೂಲೆ ಗುಂಪಾಗಿರುವ ಹಲವಾರು ಪೌಷ್ಟಿಕಾಂಶಯುಕ್ತ ಕಾಳುಗಳಲ್ಲಿ ಅಗಸೆಯೂ ಒಂದು ಎನ್ನಬಹುದು. ಭೂಮಿಯಲ್ಲಿರುವ ತೃಣಧಾನ್ಯಗಳಲ್ಲಿ ಮೊದಲ ಸ್ಥಾನ ಮೆಂತ್ಯೆಯಾದರೆ, 2ನೇ ಸ್ಥಾನ ಅಗಸೆ ಬೀಜದ್ದು.

ಅಗಸೆ ಲೈನಸಿಯೆ ಸಸ್ಯ ಕುಲಕ್ಕೆ ಸೇರಿದೆ. ಅಗಸೆ, ಚೊಗಚೆ, ಬಕಪುಷ್ಪ ಮುಂತಾದ ಹೆಸರುಗಳಿಂದ ಕರೆಯಲಾಗುವ ಇದು ಸುಮಾರು 25– 30 ಅಡಿಗಳಷ್ಟು ಬೆಳೆಯುತ್ತದೆ. ಸಸ್ಯವು ಬರ ನಿರೋಧಕವಾಗಿದ್ದು ಅಲ್ಪ ನೀರಿನಲ್ಲೂ ಹುಲುಸಾಗಿ ಬೆಳೆಯಬಲ್ಲದು. ನೆಟ್ಟ ಮೊದಲ ಐದಾರು ತಿಂಗಳು ಚೆನ್ನಾಗಿ ಆರೈಕೆ ಮಾಡಬೇಕು. ಮಳೆಯ ಏರಿಳಿತಗಳಿಗೆ ಹೊಂದಿಕೊಂಡು, ಕಡು ಬೇಸಿಗೆಯಲ್ಲೂ ಬೆಳೆಯುವ ಸಸ್ಯವಿದು. ಒಮ್ಮೆ ಬೆಳೆದರೆ ಬಹಳ ವರ್ಷಗಳವರೆಗೂ ಫಲವನ್ನು ನೀಡುತ್ತದೆ. ಮಧ್ಯಮ ಗಾತ್ರದ ಪೊದೆಯಂತೆ ಬೆಳೆಯುವ ಈ ಸಸ್ಯವು ಚಿಕ್ಕ ಎಲೆಗಳನ್ನು ಹೊಂದಿದ್ದು ನೀಲಿ ಬಣ್ಣದ ಹೂವುಗಳನ್ನು ಬಿಡುತ್ತದೆ. ಇದರ ಕಾಂಡದಿಂದ ನಾರನ್ನು ತೆಗೆದು ಬಟ್ಟೆ (ಲಿನನ್‌ ಬಟ್ಟೆ) ಹಾಗೂ ಹಗ್ಗಗಳ ತಯಾರಿಕೆಯಲ್ಲಿ ಬಳಕೆ ಮಾಡುತ್ತಾರೆ.

ಊಟದಲ್ಲಿ ಎಲೆ, ಹೂವು ಬಳಕೆ

ಅಗಸೆ ಹೂ, ಎಲೆ ಮತ್ತು ಕಾಯಿಗಳನ್ನು ದಿನನಿತ್ಯದ ಆಹಾರವಾಗಿ ಬಳಸಬಹುದು. ಅಗಸೆ ಸೊಪ್ಪು ಮತ್ತು ಹುರುಳಿಕಾಳಿನ ಬಸ್ಸಾರು ಬಯಲುಸೀಮೆಯಲ್ಲಿ ಬಹಳ ಜನಪ್ರಿಯ. ಅಗಸೆ ಹೂವುಗಳಿಂದ ಸಾರು, ಪಲ್ಯ ಮಾಡುವುದರ ಜೊತೆಗೆ ಪರೋಟ ಕೂಡ ಮಾಡಬಹುದು. ಸೊಪ್ಪು ಮತ್ತು ಹೂಗಳಲ್ಲಿ ಪ್ರೊಟೀನ್, ಜೀವಸತ್ವ ಎ, ಶರ್ಕರ– ಪಿಷ್ಟ ಹಾಗೂ ಕಬ್ಬಿಣದ ಅಂಶಗಳಿದ್ದು, ಉತ್ತಮ ಆರೋಗ್ಯ ಕಾಪಾಡುವಲ್ಲಿ ಸಹಕಾರಿ.

ಮಹಿಳೆಯರು ಋತುಸ್ರಾವ ನಿಲ್ಲುವ ಹಂತದಲ್ಲಿ ಅಗಸೆ ಬೀಜವನ್ನು ಸೇವಿಸುವುದರಿಂದ ದೇಹಕ್ಕೆ ಆ ಸಮಯದಲ್ಲಿ ಅವಶ್ಯವಿರುವ ಪೋಷಕಾಂಶಗಳು ದೊರೆಯುತ್ತವೆ. ಈ ಸಸ್ಯದ ಬೀಜ ಮತ್ತು ಸೊಪ್ಪಿನಲ್ಲಿ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುವ ಆ್ಯಂಟಿ ಆಕ್ಸಿಡೆಂಟ್‌ಗಳಿದ್ದು, ನಿಯಮಿತವಾಗಿ ಸೇವಿಸುವುದರಿಂದ ರೋಗಗಳು ಬಾರದಂತೆ ತಡೆಗಟ್ಟಬಹುದು. ಜೀರ್ಣಶಕ್ತಿಯನ್ನು ವೃದ್ಧಿಸುವುದಲ್ಲದೇ ಮಲಬದ್ಧತೆಯನ್ನು ನಿವಾರಿಸಬಹುದು. ಒಂದು ಚಮಚ ಅಗಸೆ ಬೀಜದಲ್ಲಿ 1.8 ಗ್ರಾಂ ಒಮೆಗಾ-3 ಕೊಬ್ಬಿನಾಮ್ಲವಿದ್ದು, ಇದು ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅಗಸೆ ಬೀಜದಲ್ಲಿ ಕ್ಯಾಲ್ಸಿಯಂ ಕೂಡ ಹೇರಳವಾಗಿದೆ.

ವಿವಿಧ ಕಾಯಿಲೆಗಳಿಗೆ..

ಕ್ಯಾನ್ಸರ್‌ಗೆ: ಇದರಲ್ಲಿ ರೋಗ ನಿರೋಧಕ ಗುಣವಿರುವುದರಿಂದ ಸ್ತನ ಕ್ಯಾನ್ಸರ್, ಜನನಾಂಗ ಕ್ಯಾನ್ಸರ್ ಮತ್ತು ಕರುಳಿನ ಕ್ಯಾನ್ಸರ್ ವಿರುದ್ಧ ಕೆಲವುಮಟ್ಟಿಗೆ ರಕ್ಷಣೆ ಪಡೆಯಬಹುದು. ಬೀಜದಲ್ಲಿರುವ ಲಿಗ್ನನಸ್‌ ಎಂಬ ರಾಸಾಯನಿಕಕ್ಕೆ ಸ್ತನ ಕ್ಯಾನರ್‌ ವಿರುದ್ಧ ಹೋರಾಡುವ ಗುಣವಿದೆ.

ಆರೋಗ್ಯಕರ ಹೃದಯಕ್ಕೆ: ಉರಿಯೂತವನ್ನು ಕಡಿಮೆ ಮಾಡುವ ಮತ್ತು ಹೃದಯ ಬಡಿತವನ್ನು ಸಾಮಾನ್ಯ ಮಾಡುವ ಮೂಲಕ ಹೃದಯದ ರಕ್ತನಾಳಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುವಂತೆ ಮಾಡುತ್ತದೆ. ಅಧ್ಯಯನದ ಪ್ರಕಾರ ಇದರಲ್ಲಿರುವ ಒಮೆಗಾ-3 ರಕ್ತನಾಳ ಗಟ್ಟಿಯಾಗುವುದನ್ನು ತಡೆಯಲು ನೆರವಾಗುತ್ತದೆ.

ಮಧುಮೇಹಕ್ಕೆ: ಸಕ್ಕರೆ ಕಾಯಿಲೆ ಇರುವವರು, ದಿನಾ ಅಗಸೆ ಬೀಜ ತಿನ್ನುವುದರಿಂದ ಅದರಲ್ಲಿನ ಲಿಗ್ನನಸ್ ಅಂಶ ರಕ್ತದ ಸಕ್ಕರೆ ಮಟ್ಟವನ್ನು ಸುಧಾರಿಸುತ್ತವೆ. ಅಗಸೆ ಬೀಜದಲ್ಲಿರುವ ಅಲಾ ಮತ್ತು ಲಿಗ್ನನಸ್ ಕೆಲವೊಂದು ಊರಿಯೂತಕಾರಿ ಅಂಶಗಳು ದೇಹದಲ್ಲಿ ಬಿಡುಗಡೆಯಾಗದಂತೆ ತಡೆಯುತ್ತವೆ. ರಕ್ತನಾಳದಲ್ಲೂ ಉರಿಯೂತ ಕಡಿಮೆ ಮಾಡುವ ಮೂಲಕ ಹೃದಯಾಘಾತ ಮತ್ತು ಪಾರ್ಶ್ವವಾಯು ಸಂಭವಿಸುವುದನ್ನು ತಡೆಯುತ್ತದೆ.

ತ್ವಚೆಗೆ: ಬೀಜದಲ್ಲಿನ ಎಣ್ಣೆ ಅಂಶವು ಚರ್ಮ ಕೆಂಪಾಗುವುದು, ಉರಿ- ತುರಿಕೆಯಾಗುವುದನ್ನು ತಪ್ಪಿಸುತ್ತದೆ. ಮೈ ಚರ್ಮ ಮೃದುವಾಗಿ ಆರೋಗ್ಯಕರವಾಗಿರುವಂತೆ ಮಾಡುತ್ತದೆ. ಚರ್ಮಕ್ಕೆ ಸೂರ್ಯನ ತಾಪದಿಂದ ಆಗುವ ತೊಂದರೆಯನ್ನು ತಪ್ಪಿಸುತ್ತದೆ. ದಿನಾ ಒಂದೆರಡು ಚಮಚ ಅಗಸೆ ಬೀಜ ತಿನ್ನುವುದರಿಂದ ಮುಖದ ಮೇಲೆ ಮೊಡವೆಗಳಾಗುವುದಿಲ್ಲ. ಕೂದಲುದುರುವುದು ನಿಲ್ಲುತ್ತದೆ. ಅಗಸೆ ಎಣ್ಣೆ ತಲೆಗೆ ಹಚ್ಚುವುದರಿಂದ ಹೊಟ್ಟು ಕಡಿಮೆಯಾಗುತ್ತದೆ.

‘ಚರ್ಮವ್ಯಾಧಿ, ಮೂಲವ್ಯಾಧಿ, ಮಧುಮೇಹ, ಬೊಜ್ಜಿಗೆ ಇದನ್ನು ಬಳಸಬಹುದು. ಅಗಸೆ ಬೀಜದ ತೈಲವನ್ನು ಲೇಪಿಸುವುದರಿಂದ ಗಾಯಗಳು ಬೇಗ ಗುಣವಾಗುತ್ತವೆ’ ಎನ್ನುತ್ತಾರೆ ಆಯುಷ್ ವೈದ್ಯಾಧಿಕಾರಿ ಡಾ. ಶಿವಕುಮಾರ್.

ಆಯುರ್ವೇದದಲ್ಲಿ..

ಐದು ಸಾವಿರ ವರ್ಷಗಳಿಗೂ ಹೆಚ್ಚು ಇತಿಹಾಸವಿರುವ ಆಯುರ್ವೇದದ ಗ್ರಂಥಗಳಲ್ಲೂ ಅತಸಿ ಎಂದು ಈ ಸಸ್ಯದ ಉಲ್ಲೇಖ ದೊರೆಯುತ್ತದೆ. ಆಯುರ್ವೇದದ ಮೂಲಗ್ರಂಥಗಳಾದ ಚರಕ ಸಂಹಿತೆ, ಸುಶ್ರುತ ಸಂಹಿತೆ ಹಾಗೂ ಭಾವಪ್ರಕಾಶ ನಿಘಂಟುಗಳಲ್ಲಿ ಇದರ ಔಷಧೀಯ ಗುಣಗಳನ್ನು ವಿವರಿಸಲಾಗಿದೆ.ಮನುಷ್ಯರಿಗಷ್ಟೇ ಅಲ್ಲದೆ ಇದರ ಸೊಪ್ಪು ಹಾಗೂ ಬೀಜವನ್ನು ರಾಸುಗಳಿಗೆ ಮೇವಿನ ರೂಪದಲ್ಲಿ ನೀಡಲಾಗುತ್ತದೆ.

(ಲೇಖಕಿ ಆಹಾರ ತಜ್ಞೆ)

ಹೇಗೆ ಸೇವಿಸಬೇಕು?

ಅಗಸೆ ಬೀಜ ಜೀರ್ಣವಾಗುವುದು ಕಷ್ಟ. ಹೀಗಾಗಿ ಇದನ್ನು ಬಿಸಿಲಿಗೆ ಒಣಗಿಸಿ, ಚೆನ್ನಾಗಿ ನೆನೆಸಿ ಬಳಸಬೇಕು. ಸೇವಿಸುವಾಗಲೂ ಚೆನ್ನಾಗಿ ಅಗಿದು ನುಂಗಬೇಕು. ಇದನ್ನು ಪುಡಿ ಮಾಡಿಟ್ಟುಕೊಂಡು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ತಿಂದು ನೀರು ಕುಡಿಯಬಹುದು. ಅಗಸೆ ಚಟ್ನಿಪುಡಿ ಮಾಡಿಕೊಂಡು ಸೇವಿಸಬಹುದು. ಪುಡಿಯನ್ನು 15 ದಿನಗಳಿಗಾಗುವಷ್ಟು ಮಾತ್ರ ತಯಾರಿಸಿಕೊಳ್ಳಿ. ಇಲ್ಲದಿದ್ದರೆ ಹುಳಿ ಬಂದಂತಾಗಿ ಔಷಧೀಯ ಗುಣ ಕಡಿಮೆಯಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT