‘ಮತ್ತು ಮನೆಯವರು’ ಎಂಬಷ್ಟಕ್ಕೇ ಸೀಮಿತವಾಗದೆ

7

‘ಮತ್ತು ಮನೆಯವರು’ ಎಂಬಷ್ಟಕ್ಕೇ ಸೀಮಿತವಾಗದೆ

Published:
Updated:

ನನ್ನ ಅಜ್ಜಿ ಒಂದನೇ ತರಗತಿಯ ವಿದ್ಯಾಭ್ಯಾಸವನ್ನು ಮಂಗಳೂರಿನ ಶಾಲೆಯಲ್ಲಿ ಮಾಡಿದರು. ಅನಂತರ ಅವರ ತಂದೆ ಮಂಗಳೂರು ಬಿಟ್ಟು ಉಪ್ಪಿನಂಗಡಿಯ ಬಳಿ ತೋಟ ಮಾಡಿದ ಕಾರಣ ಅಜ್ಜಿಯ ವಿದ್ಯಾಭ್ಯಾಸ ಒಂದನೇ ತರಗತಿಗೆ ನಿಂತಿತು. ಆದರೆ ಆ ಒಂದು ವರ್ಷ ಕಲಿತದ್ದನ್ನು ಅವರು ತುಂಬಾ ಅಭಿಮಾನದಿಂದ, ತುಸು ತಮಾಷೆಯಿಂದ ಈಗಲೂ ಹೇಳಿಕೊಳ್ಳುತ್ತಾರೆ.

ಅವರು ನನಗೆ ನಾನು ಕಾಲೇಜಿನಲ್ಲಿ ಓದುತ್ತಿದ್ದಾಗ ಹಲವು ಪತ್ರಗಳನ್ನು ಬರೆದದ್ದು ನನ್ನಲ್ಲಿ ಇನ್ನೂ ಜೋಪಾನವಾಗಿವೆ. ನನ್ನ ಇನ್ನೊಬ್ಬರು ಅಜ್ಜಿ ಶಾಲೆಗೆ ಹೋಗಿರಲಿಕ್ಕಿಲ್ಲ. ಆದರೆ ಓದುವುದು ಅವರ ಬಹು ಪ್ರೀತಿಯ ಹವ್ಯಾಸ. ಪ್ರತಿದಿನ ಬೆಳಗ್ಗಿನ ಕೆಲಸ ಮುಗಿಸಿ 12 ಗಂಟೆ ಸುಮಾರಿಗೆ ಸ್ವಲ್ಪಹೊತ್ತು ಕೂತು ಓದುತ್ತಿದ್ದರು. ತೋಟದ ಮಧ್ಯೆ ಇರುವ ಸುಮಾರಷ್ಟು ಕತ್ತಲೇ ಎನ್ನಬಹುದಾದ ಮನೆಯ ಮುಂದಿನ ಕೋಣೆಯ ಬಾಗಿಲ ಬಳಿಯಲ್ಲಿ ಬೆಳಕಿನಲ್ಲಿ ಕೂತು, ಕಣ್ಣು ಕಿರಿದು ಮಾಡಿ ಅವರು ಓದುವ ಚಿತ್ರ ಅಚ್ಚಳಿಯದೆ ನನ್ನ ನೆನಪಲ್ಲಿ ಉಳಿದಿದೆ. ಅವರಿಗೆಂದೇ ಮಾಡುತ್ತಿದ್ದ ಒಂದೆರಡೇ ವಿಷಯಗಳಲ್ಲಿ ಇದು ಮುಖ್ಯವಾದ್ದು. ಆರು ವರ್ಷದ ನಾನು ಒಮ್ಮೆ ಕೈಮೂಳೆ ಮುರಿದು ಆಸ್ಪತ್ರೆಯಲ್ಲಿದ್ದಾಗ, ನನ್ನ ಶುಶ್ರೂಷೆಗೆ ಬಂದ ಅಜ್ಜಿ ನನ್ನ ಮತ್ತು ಅವರ ಸಮಯವನ್ನು ಕಳೆಯಲು ಕಥೆಗಳನ್ನು ಓದಿ ಹೇಳುತ್ತಾ ಅಕ್ಷರಗಳ ಲೋಕವನ್ನು ನನಗೆ ಕಟ್ಟಿಕೊಟ್ಟರು. ಓದುವ, ಬರೆಯುವ ಈ ಪ್ರೀತಿ ನನಗೆ ನನ್ನ ಅಜ್ಜಿಯರಿಂದಲೇ ಬಂದ ಬಳುವಳಿ.

ನನ್ನ ತಾಯಿ ಹತ್ತನೆಯ ತರಗತಿಯವರೆಗೆ ಮಾತ್ರ ಕಲಿತದ್ದು. ಅವರನ್ನು ಹತ್ತಿರದಿಂದ ಕಂಡವರೆಲ್ಲರೂ, ‘ಈಕೆ ಹೆಚ್ಚು ಕಲಿತಿದ್ದಿದ್ದರೆ ದೊಡ್ಡ ಆಫೀಸರ್ ಆಗುತ್ತಿದ್ದಳು’ ಎನ್ನುವ ಕ್ಷಮತೆಯನ್ನು ಆಕೆ ತೋರಿದವರು. ‘ಕಲಿಯುವಂತಿದ್ದರೆ ಕಲಿಯುತ್ತಿದ್ದೆ’ ಅನ್ನುವ ಅವರ ಅಪೂರ್ಣ ಕನಸಿನ ಕಿಚ್ಚನ್ನು ಅವರು ನನಗೂ, ನನ್ನ ಇಬ್ಬರು ತಂಗಿಯರಿಗೂ ರವಾನಿಸಿದರು. ತಮ್ಮ ಕನಸು ನಮ್ಮ ಕನಸಾಗಿ ನನಸಾಗುವುದನ್ನು ನೋಡಿದರೂ ಆ ಕಿಚ್ಚು ತಣಿದಿರಲಿಕ್ಕಿಲ್ಲ. ಆರು ವರ್ಷದ ನಾನು ನನ್ನ ಬಲಕೈ ಮೂಳೆ ಮುರಿದುಕೊಂಡಾಗ, ಅಮ್ಮನನ್ನು ಕೇಳಿದ ಮೊದಲನೇ ಪ್ರಶ್ನೆ, ‘ನಾನು ಇನ್ನು ಬರೆಯುವುದು ಹೇಗಮ್ಮಾ?’

ನನ್ನ ವಿದ್ಯಾಭ್ಯಾಸ ಒಂದನೇ ತರಗತಿಗೋ, ಹತ್ತನೇ ತರಗತಿಗೋ ನಿಂತಿದ್ದರೆ ನಾನು ಏನಾಗುತ್ತಿದ್ದೆ ಎಂಬ ಊಹೆಯನ್ನೂ ಮಾಡಲಾರದಂಥ ಅಗಾಧ ಜಗತ್ತನ್ನು ತೆರೆದಿಟ್ಟಿದೆ ಈ ವಿದ್ಯೆ. ಆದರೆ, ಹಾಗೇ ನನ್ನ ಅಜ್ಜಿಯರು, ನನ್ನ ತಾಯಿ, ಅವರ ಹಾಗೇ ಎಲ್ಲ ಹೆಣ್ಣುಮಕ್ಕಳು ವಿದ್ಯಾಭ್ಯಾಸ ಪಡೆಯದೇ ಈ ಜಗತ್ತು ಕಳಕೊಂಡದ್ದು ಎಷ್ಟು ಎಂಬ ನಿಜದ ಕಲ್ಪನೆ ನನ್ನನ್ನು ಬಹಳ ತಲ್ಲಣಗೊಳಿಸುತ್ತದೆ! ಈ ಕಾಲದಲ್ಲೂ ಅದೆಷ್ಟೆಷ್ಟೋ ಹೆಣ್ಣುಮಕ್ಕಳಿಗೆ ವಿದ್ಯಾಭ್ಯಾಸ ಸಿಗುವುದಿಲ್ಲ. ಚೆನ್ನಾಗಿ ವಿದ್ಯಾಭ್ಯಾಸ ಪಡೆದವರೂ ಹೊರಗೆ ಕೆಲಸ ಮಾಡುವುದಿಲ್ಲ. ನನ್ನನ್ನು ಬಹುವಾಗಿ ಕಾಡುವ ಸಂಗತಿ ಇದು.

ನಾವು ನಮ್ಮ ತಂದೆ-ತಾಯಿಗೆ ಮೂರು ಜನ ಹೆಣ್ಣುಮಕ್ಕಳು. ನಮ್ಮ ತಂದೆ ನ್ಯಾಯಾಧೀಶರಾಗಿ ಬಹು ನಿಷ್ಠೆಯಿಂದ ಕೆಲಸಮಾಡಿದವರು. ತಾವು ಕಂಡ - ಆ ವಿದ್ಯೆಯ ಜಗತ್ತನ್ನು ತಮ್ಮ ಮಕ್ಕಳೂ ಕಾಣಬೇಕೆಂಬ ಪ್ರೀತಿಯಿಂದ ನಮ್ಮನ್ನು ಬೆಳೆಸಿದರು. ಕೇಳುವ ಯಾವುದೇ ಪ್ರಶ್ನೆಗಳನ್ನು ಎಂದೂ ಮೊಟಕುಗೊಳಿಸಿದವರಲ್ಲ, ಸುಮ್ಮನಿರಿಸಿದವರಲ್ಲ. ಸ್ನೇಹಿತನಂತೆ ವಾದಮಾಡುತ್ತಾರೆ, ಇಲ್ಲವೇ ಜೊತೆಗೂಡುತ್ತಾರೆ, ನನಗಾಗದ್ದನ್ನು ಎದುರಿಸುವಲ್ಲಿ, ಪ್ರಶ್ನಿಸುವಲ್ಲಿ, ನನ್ನ ಜೀವನ ರೂಪಿಸುತ್ತಾ ನನ್ನ ಸುತ್ತಲಿನ ಸಮಾಜ ಕಟ್ಟುವಲ್ಲಿ - ನನ್ನ ತಾಯಿ ಬಿತ್ತಿದ ಕನಸೆಂಬ ಕಿಚ್ಚು, ತಂದೆ ಪೋಷಿಸಿದ ಜ್ಞಾನದ ಮೇಲಿನ ಪ್ರೀತಿ, ನಾನು ಗಳಿಸಿದ ವಿದ್ಯಾಭ್ಯಾಸ - ಇವುಗಳ ಪಾತ್ರ ಎಷ್ಟು ದೊಡ್ಡದೋ, ಅಷ್ಟೇ ನಾನು ಹೊಂದಿರುವ ಕೆಲಸ, ಅದನ್ನು ನಾನು ಎಣಿಸಿದಂತೆ ಮಾಡುವ ನನಗಿರುವ ಸ್ವಾತಂತ್ರ್ಯದ್ದೂ. ನನ್ನ ಸ್ವಂತ ಕೆಲಸವಿರುವುದರಿಂದ ನನ್ನದೇ ಅನ್ನಬಹುದಾದ ಹಣ, ಅದು ಕೊಡುವ ಸ್ವಾತಂತ್ರ್ಯ ಒಂದೆಡೆಯಾದರೆ, ವಿದ್ಯೆ-ನನ್ನ ಕೆಲಸ ತರುವ ಸಾಮಾಜಿಕ, ರಾಜಕೀಯ ಅರಿವು - ಅದು ತರುವ ಮನಃಸ್ಥೈರ್ಯ ಇನ್ನೊಂದೆಡೆ. ನನ್ನ ವಿದ್ಯೆ - ಕೆಲಸದ ಮೂಲಕ, ಸಮಾಜಕ್ಕೆ, ಅದರ ಬೆಳವಣಿಗೆಗೆ ನಾನೂ ಕಾರಣಳಾಗಿದ್ದೇನೆನ್ನುವ ಭಾವ ನನ್ನನ್ನು ಎಂದಿಗೂ ಇನ್ನಷ್ಟು ಸಮಾಜಮುಖಿ ಕೆಲಸಮಾಡುವಲ್ಲಿ ಪ್ರೋತ್ಸಾಹಿಸುತ್ತದೆ. ಹೆಣ್ಣುಮಕ್ಕಳು ವಿದ್ಯಾಭ್ಯಾಸ ಪಡೆಯಬೇಕು ಮಾತ್ರವಲ್ಲ, ಕೆಲಸದಲ್ಲೂ ತೊಡಗಬೇಕು. ನನ್ನ ಪಾತ್ರ ನನ್ನ ಮನೆಯವಳಾಗಿ, ಮನೆಯವರಿಗೆ ಒದಗಿಸುವವಳಾಗಿ ಎಷ್ಟಿದೆಯೋ, ಅಷ್ಟೇ, ನ್ಯಾಯವಾದಿಯಾಗಿ, ಸಮಾಜದ ಒಂದು ಭಾಗವಾಗಿ, ಸಮಾಜವನ್ನು ರೂಪಿಸುವಲ್ಲಿಯೂ ಇದೆ ಅನ್ನುವುದು ನನ್ನ ಶಕ್ತಿ. ಹಾಗೇ ಗಂಡುಮಕ್ಕಳಿಗೆ ವಿದ್ಯೆ ಕಲಿಸುವುದರ ಜೊತೆಗೆ, ಮನೆಗೆಲಸ ಮಾಡಿ, ಮನೆಯವರಿಗೆ ಒದಗಿಸುವಂತೆ ಅವರನ್ನು ರೂಪಿಸಿದಲ್ಲಿ, ಪುರುಷ-ಪ್ರಕೃತಿ ಎರಡೂ ದೃಷ್ಟಿಗಳ ಸಮತೋಲನವನ್ನು ಸಮಾಜ ಕಾಣಬಹುದು ಎಂಬ ಕನಸು ನನ್ನದು.   


ಸೌಮ್ಯಲಕ್ಷ್ಮೀ ಭಟ್

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !