ಬುಧವಾರ, ಜನವರಿ 22, 2020
22 °C

ಹೊಸ ವರ್ಷ.. ಹೊಸ ನಿರೀಕ್ಷೆ!

ನಡಹಳ್ಳಿ ವಸಂತ್ Updated:

ಅಕ್ಷರ ಗಾತ್ರ : | |

Prajavani

ಇಪ್ಪತ್ತೊಂದನೇ ಶತಮಾನದ ಹೊಸ ದಶಕದಲ್ಲಿ ಸ್ತ್ರೀಯರ ಆತ್ಮಗೌರವದ ಬದುಕಿನ ಹೋರಾಟವನ್ನು ಬೆಂಬಲಿಸಲೇಬೇಕಾಗಿದೆ. ಆರ್ಥಿಕವಾಗಿ ಸಬಲಳಾಗಿರುವ ಹೆಣ್ಣು, ಮಾನಸಿಕವಾಗಿಯೂ ಪ್ರಬಲಳಾಗಬೇಕಾದ ಅನಿವಾರ್ಯತೆ ಈಗ ಹೆಚ್ಚಾಗಿದೆ. ಮಹಿಳೆ ಕೌಟುಂಬಿಕ ಸಮಸ್ಯೆ ಮೆಟ್ಟಿ ನಿಂತು ತಲೆಯೆತ್ತಿ ನಿಲ್ಲುವುದು ಹೇಗೆ?

40 ವರ್ಷದ ರಮಾಗೆ 14 ವರ್ಷದ ಮಗನಿದ್ದಾನೆ. ಗಂಡ ಹಲವಾರು ಉದ್ಯೋಗಗಳಲ್ಲಿ ಹಣ ಕಳೆದುಕೊಂಡು ಈಗ ನಿರೋದ್ಯೋಗಿಯಾಗಿ ಹೆಂಡತಿಯ ದುಡಿಮೆಯ ಮೇಲೆ ಅವಲಂಬಿಸಿದ್ದರೂ ಅವಳ ಮೇಲೆ ಹಕ್ಕು ಚಲಾಯಿಸುತ್ತಾನೆ. ಮಗನನ್ನು ಹೆಂಡತಿಯ ವಿರುದ್ಧ ತಿರುಗಿಸುವುದಕ್ಕಾಗಿ ಉಡಾಫೆ ಆಶ್ವಾಸನೆಗಳಿಂದ ಸೆಳೆಯಲು ನೋಡುತ್ತಿದ್ದಾನೆ. ಮಗನ ಬೇಡಿಕೆಗಳನ್ನು ಪೂರೈಸಲಾಗದ ರಮಾ ಕಂಗಾಲಾಗಿ ಸಹಾಯ ಕೇಳಿದ್ದಾಳೆ.

***

50 ವರ್ಷದ ರಂಜನಾ ಶಾಲೆಯ ಮುಖ್ಯೋಪಾಧ್ಯಾಯಿನಿ. ಎರಡು ಮಕ್ಕಳನ್ನು ತನ್ನ ದುಡಿಮೆಯಲ್ಲಿ ಓದಿಸಿದ್ದಾಳೆ. ಪದೇಪದೇ ವ್ಯಾಪಾರದಲ್ಲಿ ಹಣ ಕಳೆಯುವ ಪತಿಗೆ 10 ಲಕ್ಷಕ್ಕೂ ಮಿಕ್ಕಿ ಹಣ ನೀಡಿ ದಣಿದಿದ್ದಾಳೆ. ಜೊತೆಗೆ ಪತಿಯ ಕುಡಿತ, ಹಿಂಸೆ, ಹೊರಸಂಬಂಧಗಳಿಂದ ರೋಸಿಹೋಗಿದ್ದಾಳೆ. ವಿದ್ಯಾರ್ಥಿಯೊಬ್ಬನ ಬಗ್ಗೆ ವಿವರಣೆ ನೀಡಲು ಬಂದವಳು ಎರಡು ಗಂಟೆ ನನ್ನೆದುರು ಅಂತರಂಗವನ್ನು ತೆರೆದಿಟ್ಟಿದ್ದಾಳೆ.

***

ಎಂಜಿನಿಯರ್ ಆಗಿ ಹೊರದೇಶದಲ್ಲಿರುವ 30 ವರ್ಷದ ರೋಹಿಣಿ ದೂರವಾಣಿಯಲ್ಲಿ ಸಹಾಯ ಕೇಳಿದ್ದಳು. ಪ್ರೀತಿಸಿ ಮದುವೆಯಾಗಿದ್ದ ಅವಳಿಗೆ 2 ವರ್ಷದ ಮಗಳಿದ್ದಾಳೆ. ಕ್ಷಣಕ್ಷಣಕ್ಕೂ ಕೋಪ, ದೂಷಣೆ, ಚುಚ್ಚುಮಾತು, ಮೌನಗಳಿಂದ ಮಾನಸಿಕ ಹಿಂಸೆ ನೀಡುವ ಪತಿಯ ವರ್ತನೆಯನ್ನು ಅರ್ಥ ಮಾಡಿಕೊಳ್ಳಲಾಗದೆ ಹತಾಶಳಾಗಿದ್ದಾಳೆ. ತೌರುಮನೆಯವರು ಇವಳ ಯಾವುದೇ ನಿರ್ಧಾರವನ್ನು ಬೆಂಬಲಿಸುವ ಭರವಸೆ ನೀಡಿದ್ದರೂ ಇವಳಿಗೆ ಗೊಂದಲವಾಗುತ್ತಿದೆ.

ಇಂತಹ ದುರಂತಕಥೆಗಳನ್ನು ಹೇಳಿಕೊಂಡು ಹಲವಾರು ಮಹಿಳೆಯರು ಸಹಾಯ ಕೇಳುತ್ತಾರೆ. ಮಾತುಕತೆ ಮುಂದುವರೆದಂತೆ ಇವರಿಗೆ ನನ್ನ ಪ್ರಶ್ನೆ- ಇಂತಹ ವೈವಾಹಿಕ ಸಂಬಂಧವನ್ನು ಇನ್ನೂ ಉಳಿಸಿಕೊಳ್ಳಲು ನಿಮಗಿರುವ ಅನಿವಾರ್ಯತೆಗಳೇನು? ಹೆಚ್ಚಿನವರು ಸಾಮಾಜಿಕ ಕಳಂಕ, ಕುಟುಂಬದವರ ಒತ್ತಡ ಮತ್ತು ಮಕ್ಕಳನ್ನು ತಂದೆಯಿಲ್ಲದೆ ಅನಾಥರನ್ನಾಗಿಸುವ ಭಯ ಎನ್ನುವ ಕಾರಣಗಳನ್ನು ನೀಡುತ್ತಾರೆ. ‘ನಿಮ್ಮ ಅಂತರಂಗದಲ್ಲಿ ಅತೃಪ್ತಿ, ಅಸಮಾಧಾನ, ಸಿಟ್ಟುಗಳಿರುವಾಗ ಮತ್ತು ಮನೆಯಲ್ಲಿ ಅಶಾಂತಿಯಿರುವಾಗ ಮಕ್ಕಳಿಗೆ ಹೇಗೆ ನ್ಯಾಯ ಒದಗಿಸುತ್ತೀರಿ?’ ಎಂದು ಕೇಳಿದರೆ ‘ಖಂಡಿತವಾಗಿ ಕೊಡಲಾಗುತ್ತಿಲ್ಲ’ ಎಂದು ಒಪ್ಪಿಕೊಳ್ಳುತ್ತಾರೆ. ಮುಂದೊಂದು ದಿನ ನಿಮ್ಮ ಮಕ್ಕಳು ಇಂತಹುದೇ ಪರಿಸ್ಥಿತಿಯಲ್ಲಿದ್ದರೆ..(?) ಎನ್ನುವ ಪ್ರಶ್ನೆಯನ್ನಿಟ್ಟರೆ, ಅಂತಹ ಸಂಬಂಧವನ್ನು ಕಳಚಿ ಹೊರಬರುವುದಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದೂ ಥಟ್ಟನೆ ಉತ್ತರಿಸುತ್ತಾರೆ. ಹಾಗಿದ್ದರೆ ಅಂತಹ ಮಾದರಿಯನ್ನು ಮಕ್ಕಳಿಗೆ ನೀವೇಕೆ ತೋರಿಸುತ್ತಿಲ್ಲ ಎನ್ನುವುದಕ್ಕೆ ಮತ್ತೆ ಸಮಾಜ ಮುಂತಾದ ಕಾರಣಗಳಿಗೇ ಅಂಟಿಕೊಳ್ಳುತ್ತಾರೆ.

ಬದಲಾಗುತ್ತಿರುವುದು ಬಾಹ್ಯಪ್ರಪಂಚ ಮಾತ್ರ

‘ಸ್ತ್ರೀಯರಿಗೆ ಸಮಾನ ಅವಕಾಶಗಳು, ವಿದ್ಯಾಭ್ಯಾಸ, ಆರ್ಥಿಕ ಸ್ವಾವಲಂಬನೆಗಳೆಲ್ಲಾ ಸಿಕ್ಕರೆ ಅವರ ಮೇಲಿನ ಶೋಷಣೆಗಳು ಕಡಿಮೆಯಾಗುತ್ತವೆ’ ಎಂದು ಸಮಾಜಶಾಸ್ತ್ರಜ್ಞರು ಹೇಳುವುದು ಸುಳ್ಳೇನಲ್ಲ. ಇವತ್ತು ಸಾಕಷ್ಟು ಪೋಷಕರು ಹೆಣ್ಣುಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಲು ಉತ್ಸುಕರಾಗಿರುತ್ತಾರೆ. ಗ್ರಾಮೀಣ ಪ್ರದೇಶಗಳಲ್ಲಿಯೂ ಅಕ್ಷರಸ್ಥ ಹೆಣ್ಣುಮಕ್ಕಳು ಮದುವೆಯಾಗುವುದನ್ನೇ ಜೀವನದ ಉದ್ದೇಶವನ್ನಾಗಿಟ್ಟುಕೊಳ್ಳದೆ ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಪ್ರಯತ್ನಿಸುತ್ತಾರೆ. ರಾಜಕಾರಣಿಗಳ, ನೌಕರರ ಭ್ರಷ್ಟತೆ, ಬೇಜವಾಬ್ದಾರಿಗಳಿಂದಾಗಿ ಸರಿಯಾಗಿ ಜಾರಿಯಾಗದಿದ್ದರೂ ಸ್ತ್ರೀಯರ ಹಕ್ಕು, ಸಮಾನತೆಗಾಗಿ ಸಾಕಷ್ಟು ಕಾನೂನುಗಳಿವೆ ಮತ್ತು ಸರ್ಕಾರಿ ಯೋಜನೆಗಳಿವೆ. ಸಾಮಾಜಿಕವಾಗಿ ಮಹಿಳೆಯರಿಗೆ ಬೆಂಬಲ ನೀಡಲು ಅವರ ಹಕ್ಕುಗಳಿಗಾಗಿ ಹೋರಾಟ ಮಾಡಲು ಸಾಕಷ್ಟು ಜನರಿದ್ದಾರೆ, ಸರ್ಕಾರೇತರ ಸಂಘಸಂಸ್ಥೆಗಳಿವೆ. ಹೊರಜಗತ್ತಿಗೆ ತೆರೆದುಕೊಳ್ಳಲು ಟಿ.ವಿ., ಅಂತರ್ಜಾಲಗಳಿವೆ. ಆದರೆ ಇವೆಲ್ಲವೂ ಮಹಿಳೆಯರ ಮನಸ್ಸಿನಲ್ಲಿಯೇ ಬೇರೂರಿ ಕುಳಿತು ಅವರನ್ನು ಅಸಹಾಯಕರನ್ನಾಗಿಸುವ ನಂಬಿಕೆಗಳನ್ನು, ಚಿಂತನೆಗಳನ್ನು ಮಾತ್ರ ಬದಲಿಸುತ್ತಿಲ್ಲವಲ್ಲಾ! ಅದಕ್ಕೇನು ಮಾಡುವುದು?

ಪುರುಷನೊಬ್ಬನೇ ಕುಟುಂಬಕ್ಕಾಗಿ ದುಡಿಯುವ ಸಂದರ್ಭಗಳಲ್ಲಿ ಅವನ ಮೇಲಿದ್ದ ಹೆಚ್ಚಿನ ನಿರೀಕ್ಷೆ, ಜವಾಬ್ದಾರಿಗಳನ್ನು ಹೊರುವ ಅನಿವಾರ್ಯತೆಯನ್ನು ಸೃಷ್ಟಿಸುತ್ತಿದ್ದಿರಬಹುದು. ಆರ್ಥಿಕವಾಗಿ ಸಬಲಳಾಗಿ ಕುಟುಂಬವನ್ನು ಒಬ್ಬಳೇ ನಿರ್ವಹಿಸಬಲ್ಲ ಮಹಿಳೆಯ ಬೆಳವಣಿಗೆಯೇ ಪುರುಷರ ಬೇಜವಾಬ್ದಾರಿ ನಡವಳಿಕೆಗಳನ್ನು ಹೆಚ್ಚಿಸುತ್ತಿದೆಯೇ? ಕಾರಣಗಳೇನಿದ್ದರೂ ಸ್ವಾವಲಂಬಿ ಮಹಿಳೆಯರ ಕಷ್ಟಗಳು ಮಾತ್ರ ಹೆಚ್ಚುತ್ತಲೇ ಇವೆ. ಕುಟುಂಬವನ್ನು ನಿರ್ವಹಿಸುವ ಅವಳ ಜವಾಬ್ದಾರಿಗಳೇನೂ ಕಡಿಮೆಯಾಗಿಲ್ಲದಿದ್ದರೂ ಈಗ ಅವಳಿಂದ ದುಡಿಮೆಯನ್ನೂ ನಿರೀಕ್ಷಿಸಲಾಗುತ್ತಿದೆ. ಇವತ್ತಿನ ಬದುಕಿನ ಅಗತ್ಯಗಳಿಗೆ ಇಬ್ಬರ ದುಡಿಮೆಯ ಅನಿವಾರ್ಯತೆಗಳಿವೆ ನಿಜ. ಆದರೆ ಅದಕ್ಕೆ ಸಹಾಯವಾಗುವಂತೆ ಮಹಿಳೆಯರ ಕೌಟುಂಬಿಕ ಜವಾಬ್ದಾರಿ ಕಡಿಮೆಯಾಗಬೇಕಲ್ಲವೇ?

ಉದ್ಯೋಗಸ್ಥ ಪತ್ನಿಯ ಬಗ್ಗೆ ಉದ್ದದ ತಕರಾರು ಪಟ್ಟಿ ನೀಡಿದ ಪತಿಯನ್ನು ಕೇಳಿದೆ, ‘ಸ್ನೇಹಿತರ ಜೊತೆ ಖುಷಿಯಾಗಿರಲು ಅಥವಾ ಪ್ರವಾಸಕ್ಕಾಗಿ ಮನೆಯ ಎಲ್ಲಾ ಜವಾಬ್ದಾರಿಗಳಿಂದ ಕಳಚಿಕೊಂಡು ನಿಶ್ಚಿಂತೆಯಿಂದ ಹೋಗಲು ನಿಮಗೆ ಸಾಧ್ಯವಿರುವಂತೆ ನಿಮ್ಮ ಪತ್ನಿಗೂ ಅವಕಾಶ ಕೊಡುತ್ತೀರಾ?’ ಉತ್ತರಿಸಲಾಗದ ಪತಿ ಚಡಪಡಿಸುತ್ತಿದ್ದ. ಪ್ರೀತಿಸುವ ಕುಟುಂಬಕ್ಕಾದರೂ ಸರಿ, ತನ್ನ ಅಸ್ತಿತ್ವವನ್ನೇ ಕಳೆದುಕೊಂಡು ನಿರಂತರವಾಗಿ ತ್ಯಾಗ ಮಾಡುತ್ತಾ ಬದುಕುವುದು ಯಾರಿಗಾದರೂ ಹೇಗೆ ಸಾಧ್ಯ?

ಅಹಿತಕರ ವೈವಾಹಿಕ ಸಂಬಂಧಗಳಿರುವವರೆಲ್ಲಾ ವಿಚ್ಛೇದನ ಪಡೆಯಬೇಕು ಎನ್ನುವುದು ಇಲ್ಲಿನ ವಾದವಲ್ಲ. ಸ್ವಾತಂತ್ರ್ಯಕ್ಕೂ, ಸ್ವೇಚ್ಛೆಗೂ ಇರುವ ನವಿರಾದ ವ್ಯತ್ಯಾಸವನ್ನು ಗುರುತಿಸಬೇಕು. ಆದರೆ ತನ್ನನ್ನು ಸಂಪೂರ್ಣವಾಗಿ ಕಳೆದುಕೊಂಡು ಕುಟುಂಬವನ್ನು ಉಳಿಸುವ ಪ್ರಯತ್ನದಲ್ಲಿರುವ ಪತ್ನಿಯರಿದ್ದಾಗ ಪತಿಯಂದಿರಿಗೆ ಬದಲಾಗುವ ಅಗತ್ಯವಾದರೂ ಏನಿದೆ? ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಚಿಂತನೆಗಳೆಲ್ಲಾ ಪುರುಷರನ್ನೇ ಬೆಂಬಲಿಸುವಾಗ ಸ್ತ್ರೀಯರು ಬದಲಾವಣೆಗೆ ಪ್ರಯತ್ನಿಸುವುದಾದರೂ ಹೇಗೆ?

ಆತ್ಮವಿಶ್ವಾಸ– ಆತ್ಮಗೌರವ

ಹೆಣ್ಣುಮಕ್ಕಳಿಗೆ ಧೈರ್ಯವನ್ನು ಕಲಿಸಬೇಕು ಎನ್ನುವುದು ಎಲ್ಲರಿಗೂ ಗೊತ್ತಿರುವುದೇ! ಧೈರ್ಯವಾಗಿರುವುದು ಹೇಗೆ ಸಾಧ್ಯವಾಗುತ್ತದೆ? ಆತ್ಮವಿಶ್ವಾಸ ಮತ್ತು ಆತ್ಮಗೌರವವನ್ನು ಉಳಿಸಿಕೊಳ್ಳುವುದು ಸಾಧ್ಯವಾದಾಗ ಮಾತ್ರ. ರಮಾ ಪತಿಯ ಆರ್ಥಿಕ ಅವಲಂಬನೆಯ ಬಗೆಗೆ ಮಗನ ಜೊತೆ ಮಾತನಾಡಿದರೆ ಅವನ ಕಣ್ಣಿನಲ್ಲಿ ತಂದೆಯ ಸ್ಥಾನ ಕುಸಿಯುತ್ತದೆ ಎಂದುಕೊಂಡು ತನ್ನ ಕಷ್ಟಗಳನ್ನು ಹೆಚ್ಚಿಸಿಕೊಂಡಿದ್ದಳು. ಪ್ರೌಢಶಾಲೆ ಓದುತ್ತಿದ್ದ ಮಗನಿಗೆ ಮನೆಯ ಸ್ಥಿತಿಗತಿಗಳ ಅರಿವನ್ನು ಮೂಡಿಸಿದಾಗ ಅವನು ತನ್ನ ಹಣದ ಬೇಡಿಕೆಗಳನ್ನು ನಿಲ್ಲಿಸಿ ಅಮ್ಮನ ಜೊತೆ ಸಹಕರಿಸತೊಡಗಿದ. ನಿಶ್ಚಿಂತಳಾದ ರಮಾ ಹೇಳಿದಳು ‘ಕುಟುಂಬದ ಮರ್ಯಾದೆಯನ್ನು ಕಾಪಾಡುವ ಭ್ರಮೆಯಿಂದ ಹೊರಬಂದಿದ್ದೇನೆ. ಇನ್ನು ನನ್ನ ಮತ್ತು ಮಗನ ಬದುಕು ಮಾತ್ರ ನನಗೆ ಮುಖ್ಯ’. ರಂಜನಾ ವಿಚ್ಛೇದನದ ಬಗೆಗೆ ಯೋಚಿಸುತ್ತಿಲ್ಲವಾದರೂ ಪತಿಯಿಂದ ಬೇರೆಯಾಗಿ ಬದುಕುತ್ತಾ ತನ್ನ ಆರೋಗ್ಯದ ಕಾಳಜಿಯನ್ನು ವಹಿಸುತ್ತಿದ್ದಾಳೆ. ರೋಹಿಣಿ ವಿದೇಶದಲ್ಲಿಯೇ ಉದ್ಯೋಗವೊಂದನ್ನು ಹುಡುಕಿಕೊಂಡು ದಾಂಪತ್ಯವನ್ನು ಉಳಿಸಿಕೊಳ್ಳುವುದು ತನ್ನ ಜವಾಬ್ದಾರಿ ಮಾತ್ರವಲ್ಲ ಎನ್ನುವ ಗುಪ್ತಸೂಚನೆ ನೀಡಿದಂದಿನಿಂದ ಪತಿಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಗಮನಿಸಿದ್ದಾಳೆ. ಇವರೆಲ್ಲರ ವರ್ತನೆಯಲ್ಲಿ ಸ್ವಾರ್ಥದ ಲವಲೇಶವೂ ಇರಲಿಲ್ಲ. ತಮ್ಮ ಅಸ್ತಿತ್ವವನ್ನು ಸ್ಥಾಪಿಸಿಕೊಳ್ಳತೊಡಗಿದಂತೆ ಅವರಲ್ಲಿ ಆತ್ಮಗೌರವ ಹೆಚ್ಚಿ ಆತ್ಮವಿಶ್ವಾಸ ತನ್ನಿಂದ ತಾನೇ ಮೂಡಿತ್ತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು