ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀರೆಯ ‘ಭಾಗ್ಯ’ನಗರ...

Published 3 ನವೆಂಬರ್ 2023, 23:47 IST
Last Updated 3 ನವೆಂಬರ್ 2023, 23:47 IST
ಅಕ್ಷರ ಗಾತ್ರ

ನಮಸ್ಕಾರ್‍ರಿ,

 ಕೊಪ್ಪಳದ ಭಾಗ್ಯನಗರದ ಓಣಿಗಳಲ್ಲಿ ಒಮ್ಮೆ ಸುತ್ತಾಡಿ ಬಂದರೆ ‘ಡಗ್‌, ಡಗ್‌, ಡಗ್‌...’ ಎನ್ನುವ ಜೋರಾಗಿ ಬಡಿದುಕೊಳ್ಳುವ ಮಗ್ಗಗಳ ಶಬ್ಧವೇ ನನ್ನ ಕುರುಹಿಗೆ ಸಾಕ್ಷಿಯಂತಿವೆ. ನಾನು ಹೀಗೆ ಶಬ್ದ ಮಾಡಲು ಶುರುಮಾಡಿ ನೂರಾರು ವರ್ಷಗಳೇ ಉರುಳಿವೆ.

ಮೊದಮೊದಲು ಹಿರಿಯರು ಹಾಗೂ ಮಧ್ಯಮ ವಯಸ್ಕ ಹೆಣ್ಣುಮಕ್ಕಳು ಹೆಚ್ಚಾಗಿ ಇಷ್ಟಪಡುತ್ತಿದ್ದ ನನ್ನೂರಿನ ಸೀರೆಗಳು ಈಗ ಯುವತಿಯರ ಅಚ್ಚುಮೆಚ್ಚಿನ ಬ್ರ್ಯಾಂಡ್‌ ಆಗಿ ಬದಲಾಗಿವೆ. ದಡಿಸೀರೆ, ಮೂರ ಗಾಡಿದಡಿ, ನಾಲ್ಕು ಗಾಡಿದಡಿ ಸೀರೆ, ಮಸರಾಯಿ ಸೀರೆ, ಬಾಳೆ ಪಟ್ಟಿಯ ಸೀರೆ, ಕೆಂಪು ಅಂಜುರದ ಸೀರೆ ಹೀಗೆ ಅನೇಕ ವೈವಿಧ್ಯಮಯ ಭಾಗ್ಯನಗರದ ಸೀರೆಗಳನ್ನು ಹಳೆಯ ತಲೆಮಾರಿನ ಹೆಣ್ಣುಮಕ್ಕಳು ಇಷ್ಟಪಡುತ್ತಿದ್ದರು.

ನನ್ನಳಿವು ಹಾಗೂ ಉಳಿವಿನ ಪ್ರಶ್ನೆ ಬಂದಾಗ ನಾನೂ ಬದಲಾಗಬೇಕಾಗಿತ್ತು. ಬದಲಾಗಿದ್ದೇನೆ; ಹೊಸ ತಲೆಮಾರಿನ ಹೆಣ್ಣುಮಕ್ಕಳು ಇಷ್ಟಪಡುವ ರೀತಿಯಲ್ಲಿ ಹೊಸ ವಿನ್ಯಾಸಗಳನ್ನು ರೂಢಿಸಿಕೊಂಡಿದ್ದೇನೆ. ಭಾಗ್ಯನಗರ ಎನ್ನುವ ಬ್ರ್ಯಾಂಡ್‌ ಉಳಿಸಿಕೊಂಡು ಸಣ್ಣಕಣ್ಣಿನ ಸೀರೆ, ಚಂದರಗಿ ಚಿಕ್ಕಿ ಸೀರೆ, ರಾಸ್ತಾ ಸೀರೆ, ಬಾಂಡ್‌ ಸೀರೆಗಳು, ರೇಷ್ಮೆ ಸೀರೆ, ಕಾಂಚೀವರಂ ಹೀಗೆ ಅನೇಕ ವಿಶೇಷ ವಿನ್ಯಾಸಗಳು ಮತ್ತು ಈಗಿನ ಕಾಲದ ಜನ ಒಪ್ಪುವ ರೀತಿಯಲ್ಲಿ ನನ್ನೂರಿನಲ್ಲಿ ಸೀರೆಗಳನ್ನು ತಯಾರು ಮಾಡಲಾಗುತ್ತಿದೆ. ಪ್ರಿಂಟೆಡ್‌ ಪತ್ತಲಗಳು, ನೂಲಿನ ಸೀರೆ, ಫ್ಯಾಷನ್‌ ಸಲುವಾಗಿಯೇ ಕಸೂತಿ ಹಾಕಿದ ಭಾಗ್ಯನಗರದ ಸೀರೆಗಳನ್ನು ತೊಡುತ್ತಿದ್ದಾರೆ.

ಅನೆ, ಒಂಟೆ, ಎಲೆ, ಕೇದಿಗೆ, ಗಾಡಿ, ಗಾಜಿ, ಗುಂಡು, ಗೊಡ್ಡುಪರಾಸ, ಚಿಕ್ಕಿ ಚಂದ್ರಕಾಳಿ, ನವಿಲು, ಗಿಳಿ ಬಂಗುಡಿ, ಮಾವಿನಕಾಯಿ, ಮುತ್ತು, ಎಲೆಬಳ್ಳಿ, ಹೂವು ಹೀಗೆ ಅನೇಕ ವಿನ್ಯಾಸಗಳಲ್ಲಿ ಸೀರೆಗಳನ್ನು ವಿನ್ಯಾಸ ಮಾಡಲಾಗುತ್ತಿದೆ. ನೂಲು ತೊಡುವುದು, ಕಂಡಿಕೆ ಸುತ್ತುವುದು, ಹಣಗೆ ಹಚ್ಚುವುದು, ಕಚ್ಚಾ ವಸ್ತುಗಳನ್ನು ತಂದು ಮಗ್ಗದ ಮೇಲೆ ಕುಳಿತು ನೇಯ್ಯುವುದು ಸೇರಿದಂತೆ ಅನೇಕ ಕೆಲಸಗಳು ನಡೆಯುತ್ತವೆ. ಮಗ್ಗಗಳಲ್ಲಿ ಕೆಲಸ ಮಾಡುವವರು ಬಹುತೇಕ ಪುರುಷರೇ. ಆದರೂ ಅವರು ಮಹಿಳೆಯರ ಅಭಿರುಚಿಗೆ ತಕ್ಕಂತೆ ಸೀರೆ ತಯಾರು ಮಾಡುತ್ತಾರೆ. ಆಧುನಿಕ ಭರಾಟೆಯಲ್ಲಿ ಕೆಲವರು ಯಂತ್ರಗಳ ಮೊರೆ ಹೋದರೆ ಇನ್ನೂ ಕೆಲವರು ಸಾಂಪ್ರದಾಯಿಕ ಶೈಲಿಯಲ್ಲಿಯೇ ನನ್ನನ್ನು ನೇಯುತ್ತಿದ್ದಾರೆ. ಈ ಮೂಲಕ ಭಾಗ್ಯನಗರ ಶೈಲಿನ ಮೂಲ ಸೊಬಗು ಉಳಿಸಿಕೊಂಡಿದ್ದಾರೆ. 

ನಾರಿ ಮೈಮೇಲೆ ನನ್ನನ್ನು ಹೊದ್ದರೆ ನನ್ನ ಅಂದಕೆ ಯಾರೂ ಸಾಟಿಯಲ್ಲ, ಅಷ್ಟೊಂದು ಸುಂದರ ನಾನು. ಆದರೆ, ನನ್ನೊಳಗೆ ನನಗೇ ಆದ ನೋವುಗಳಿವೆ. ಹೇಳಿಕೊಂಡರೂ ಪರಿಹಾರವಾಗದ ಸಮಸ್ಯೆಗಳಿವೆ. ಕೇಳಿಸಿಕೊಂಡವರು ‘ಆಯಿತು’ ಎನ್ನುವ ಸಮಾಧಾನದ ಮಾತುಗಳನ್ನಷ್ಟೇ ಆಡಿದ್ದಾರೆ.

ನೂರಾರು ವರ್ಷಗಳಿಂದ ಸಾಕಷ್ಟು ಹೆಣ್ಣುಮಕ್ಕಳಿಗೆ ನಾನು ಅಚ್ಚುಮೆಚ್ಚಾಗಿದ್ದರೂ ಕೆಲಸ ಮಾಡುವ ಕಾರ್ಮಿಕರ ಕೊರತೆ ಮತ್ತು ಆಧುನೀಕರಣದ ಭರಾಟೆಯಲ್ಲಿ ನನ್ನುಳಿವಿನ ಆತಂಕ ನನ್ನನ್ನು ಕಾಡುತ್ತಿದೆ. ಅದರಲ್ಲಿಯೂ ಕೋವಿಡ್‌ ಬಳಿಕ ನನ್ನ ಪರಿಸ್ಥಿತಿ ಗಂಭೀರವಾಗಿದೆ.

ಸೀರೆ ನೇಯ್ಯವ ಸಮಯದಲ್ಲಿ ನಿಮಗೆಲ್ಲರಿಗೂ ಕೇಳುವ ‘ಡಗ್‌, ಡಗ್‌, ಡಗ್‌...’ ಎನ್ನುವ ನನ್ನ ಹೃದಯ ಬಡಿತದ ಸದ್ದು ಮುಂದಿನ ದಿನಗಳಲ್ಲಿ ಕಾಯಂ ಆಗಿ ನಿಂತು ಬಿಡುತ್ತದೆಯೇ? ಎನ್ನುವ ಭಯ ಶುರುವಾಗಿದೆ. ಹಿಂದೆ ನೀವೆಲ್ಲ ಪೊರೆದಂತೆ, ಸೀರೆ ಖರೀದಿಸಿ ಪೋಷಿಸಿದಂತೆ ಈಗಲೂ ಮಗ್ಗದಿಂದ ನೇಯ್ದ ಸೀರೆಗಳನ್ನೇ ಖರೀದಿಸಿ. ನನ್ನಲ್ಲಿನ ಆತಂಕ ದೂರ ಮಾಡಿ. ಒಮ್ಮೆ ನನ್ನೂರು ಭಾಗ್ಯನಗರಕ್ಕೂ ಬನ್ನಿ. ಸೀರೆಯ ಅಂದ ಕಣ್ತುಂಬಿಕೊಳ್ಳಿ. ಪ್ರತಿ ನೇಯ್ಗೆ ಹಾಗೂ ಸೀರೆಯ ಹಿಂದೆ ಒಂದೊಂದು ಕಥೆಯಿದೆ. ಆ ಕಥೆಯ ಕೇಳ ಬನ್ನಿ. 

ಬರ್ತೀರಲ್ಲ?

ಇಂತಿ ನಿಮ್ಮ ಭಾಗ್ಯನಗರದ ಸೀರೆಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT